ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 10 ಜೂನ್ 2024

Published 10 ಜೂನ್ 2024, 0:10 IST
Last Updated 10 ಜೂನ್ 2024, 0:10 IST
ಅಕ್ಷರ ಗಾತ್ರ

ಮಂಗಗಳ ಹತ್ಯೆ ಹೇಯ ಕೃತ್ಯ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದಲ್ಲಿ ನಡೆದಿರುವ 30 ಮಂಗಗಳ ಹತ್ಯೆ ಸುದ್ದಿ ಕೇಳಿ ಆಘಾತವಾಯಿತು. ಒಂದೆಡೆ, ಮಂಗನ ಕಾಯಿಲೆ ಭೀತಿ ಮಲೆನಾಡಿನ ಜನರಲ್ಲಿದ್ದರೆ, ಮತ್ತೊಂದೆಡೆ, ಮಂಗಗಳಿಗೆ ವಿಷಪ್ರಾಷನ ಮಾಡಿಸಿ, ದೊಣ್ಣೆಯಿಂದ ಹೊಡೆದು ಸಾಯಿಸಿರಬಹುದಾದ ಸಾಧ್ಯತೆಯು ವಿಕೃತ ಮನಃಸ್ಥಿತಿಯ ದ್ಯೋತಕವೇ ಆಗಿದೆ. ಮಲೆನಾಡು ಹೇಳಿ ಕೇಳಿ ತೋಟ, ಗದ್ದೆಗಳಿರುವ ಪ್ರದೇಶ. ಇಲ್ಲಿ ವನ್ಯಜೀವಿಗಳ ಉಪಟಳ ಸಾಮಾನ್ಯ. ಹಾಗಾಗಿ, ಪ್ರಾಣಿಗಳನ್ನು ಹೆದರಿಸಲು ಪಟಾಕಿ ಸಿಡಿಸುವುದನ್ನೋ ಸದ್ದುಗದ್ದಲ ಮಾಡುವುದನ್ನೋ ಕೇಳಿರುತ್ತೇವೆ. ಆದರೆ ವಿಷ ಹಾಕಿ, ಹೊಡೆದು ಸಾಯಿಸುವುದು ಎಷ್ಟು ಸರಿ?

ಹುಲಿ ಉಗುರಿನ ವಿಷಯದಲ್ಲಿ ಇತ್ತೀಚೆಗೆ ಅಧಿಕಾರಿಗಳು ಮತ್ತು ಜನ ಉತ್ತಮವಾಗಿ ಸ್ಪಂದಿಸಿದ್ದು ನಮ್ಮ ಕಣ್ಣ ಮುಂದಿದೆ. ವನ್ಯಜೀವಿಗಳ ಪಳೆಯುಳಿಕೆಯನ್ನು ಸಂಗ್ರಹಿಸುವುದು ಅಪರಾಧ ಎಂಬ ತಿಳಿವಳಿಕೆ ಜನರಿಗೆ ಬಂದಿದೆ. ಅದೇ ರೀತಿ ಈ ಪ್ರಕರಣವನ್ನು ಸಹ ಅಷ್ಟೇ ಸೂಕ್ತವಾಗಿ ಪರಿಗಣನೆಗೆ ತೆಗೆದುಕೊಂಡು ಕಠಿಣ ಕ್ರಮ ಕೈಗೊಂಡರೆ ಪ್ರಾಣಿಗಳ ಮಾರಣಹೋಮ ತಪ್ಪುತ್ತದೆ.

– ಉಮರ್ ಫಾರುಕ್, ಕೊಪ್ಪ

ಜನರ ಹಕ್ಕಿನ ಆಯ್ಕೆ ಗೌರವಿಸಿ

ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿರುವುದರಿಂದ ಅಲ್ಲಿನ ಮತದಾರರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಸರಿಯಲ್ಲ ಎಂಬ

ಸುರೇಂದ್ರ ಪೈ ಅವರ ವಾದ (ವಾ.ವಾ., ಜೂನ್‌ 9) ಸೂಕ್ತವಾಗಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ಅವರ

ಸೋಲಿಗೂ ಇಂತಹುದೇ ಟೀಕೆಗಳು ಕೇಳಿಬರುತ್ತಿರುವುದು ಸರಿಯಲ್ಲ. ಆ ಕ್ಷೇತ್ರದ ಜನರು ಪ್ರಜಾಪ್ರಭುತ್ವದ ಅಡಿಯಲ್ಲಿ ತಮ್ಮ ಸಿದ್ಧಾಂತಕ್ಕೆ ಒಪ್ಪಿಗೆಯಾಗುವಂತಹ ಜನನಾಯಕನನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಹೀಗಿರುವಾಗ, ಅಣ್ಣಾಮಲೈ ಅವರ ಸೋಲಿನ ಕಾರಣದಿಂದ ಮತದಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ದೂಷಿಸುತ್ತಿರುವುದು, ಅದಕ್ಕೆ ಧಾರ್ಮಿಕತೆಯ ಬಣ್ಣ ಬಳಿಯುತ್ತಿರುವುದು ಮಿತಿಮೀರಿದ ನಡೆಯಾಗಿದೆ.

ಆಯಾ ಕ್ಷೇತ್ರದ ಜನರಿಗೆ ತಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಅದನ್ನು ಟೀಕಿಸುವುದು ತರವಲ್ಲ. ಯಾವುದೇ ಚುನಾವಣೆಯಿರಲಿ, ಸಂವಿಧಾನದ ಅಡಿಯಲ್ಲಿ ಜನರ ಹಕ್ಕಿನ ಆಯ್ಕೆಗೆ ನಮ್ಮ ಸಮ್ಮತಿ ಇರಬೇಕು. ಅಸಾಂವಿಧಾನಿಕವಾಗಿ ವಾದ ಮಾಡುವುದರಲ್ಲಿ ಅರ್ಥವಿಲ್ಲ.

– ಬೀರಪ್ಪ ಡಿ. ಡಂಬಳಿ, ಕೋಹಳ್ಳಿ, ಅಥಣಿ

ಅಯೋಧ್ಯೆ ನಿವಾಸಿಗಳ ‘ವನವಾಸ’!

ಲೋಕಸಭಾ ಚುನಾವಣಾ ಫಲಿತಾಂಶ ಕುರಿತಂತೆ ಅಯೋಧ್ಯೆ ಮತದಾರರ ಕುರಿತು ಅನೇಕ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಉತ್ತರಪ್ರದೇಶದ ಪ್ರವಾಸ ಕಾಲಕ್ಕೆ ನಾವು ಅಯೋಧ್ಯೆಗೆ ಭೇಟಿ ನೀಡಿದ್ದೆವು. ಆಗಿನ್ನೂ ಸುಪ್ರೀಂ ಕೋರ್ಟಿನಲ್ಲಿ ಶ್ರೀರಾಮ ಮಂದಿರ ಕುರಿತ ವ್ಯಾಜ್ಯ ಇತ್ಯರ್ಥವಾಗಿರಲಿಲ್ಲ. ವಾದ ವಿವಾದಗಳು ಜೋರಾಗಿ ನಡೆಯುತ್ತಿದ್ದವು. ನಮ್ಮ ಪ್ರವಾಸಿ ಮಾರ್ಗದರ್ಶಿಯಾಗಿದ್ದ ವ್ಯಕ್ತಿ ಅಯೋಧ್ಯೆ ಕುರಿತು ಒಂದು ಕುತೂಹಲಕರ ವಿಷಯವನ್ನು ನಮಗೆ ಹೇಳಿದ: ‘ಶ್ರೀರಾಮನನ್ನು ವರಿಸಿ ಅಯೋಧ್ಯೆಗೆ ಬಂದ ಕೆಲವೇ ದಿನಗಳಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ, ಶ್ರೀರಾಮನೊಂದಿಗೆ ಸೀತೆ 14 ವರ್ಷ ವನವಾಸಕ್ಕೆ ತೆರಳಬೇಕಾಯಿತು. ಆ ಅವಧಿಯಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಿ, ಅಗ್ನಿಪರೀಕ್ಷೆಗೆ ಒಳಗಾಗಿ, ಅಯೋಧ್ಯೆಗೆ ಹಿಂದಿರುಗಿದ ಮೇಲೆ ಇನ್ನೇನು ನೆಮ್ಮದಿಯಿಂದ ಇರಬಹುದು ಅಂದುಕೊಂಡರೆ, ಶ್ರೀರಾಮ ಜನಾಭಿಪ್ರಾಯಕ್ಕೆ ಅಂಜಿ ಮತ್ತೆ ಸೀತೆಯನ್ನು ಕಾಡಿಗೆ ಅಟ್ಟುತ್ತಾನೆ. ಹೀಗಾಗಿ, ಸೀತಾಮಾತೆಯ ಶಾಪವಿರುವುದರಿಂದ ಅಯೋಧ್ಯೆ ಮತ್ತು ಅಲ್ಲಿನ ನಿವಾಸಿಗಳಿಗೆ ಎಂದೂ ನೆಮ್ಮದಿ ಇಲ್ಲ’. ಇವೆಲ್ಲ ಅಂತೆಕಂತೆಗಳೇ ಇರಬಹುದು. ಆದರೆ ಇಂತಹ ಒಂದು ಭಾವನೆ ಅಲ್ಲಿಯ ಜನಮಾನಸದಲ್ಲಿ ಇರುವುದಾಗಿ ತಿಳಿದುಬಂತು.

ಅಯೋಧ್ಯೆ ಒಂದುಕಾಲಕ್ಕೆ ಇಡೀ ದೇಶದ ನೆಮ್ಮದಿಯನ್ನು ಕಲಕಿದ್ದು ನಮಗೆ ಗೊತ್ತಿದೆ. ವ್ಯಾಜ್ಯದಿಂದಾಗಿ ಅನೇಕ ವರ್ಷಗಳ ಕಾಲ ಅಯೋಧ್ಯೆಯಲ್ಲಿ ನೆಮ್ಮದಿ ಇರಲಿಲ್ಲ. ಇತ್ತೀಚೆಗೆ ವ್ಯಾಜ್ಯ ಇತ್ಯರ್ಥವಾದ ಮೇಲೆ, ಭೂಸ್ವಾಧೀನ ಪ್ರಕ್ರಿಯೆಯಂಥ ವಿಷಯಗಳು ಕೂಡ ಹಲವಾರು ವಿವಾದಗಳಿಗೆ ಕಾರಣವಾಗಿ ಅನೇಕರ ನೆಮ್ಮದಿಯನ್ನು ಕದಡಿದವು. ಶ್ರೀರಾಮ, ಚುನಾವಣೆ ಪ್ರಚಾರದ ವಿಷಯವಾಗಿ ವಿವಾದಕ್ಕೀಡಾದ. ಈಗ ಚುನಾವಣೆ ಫಲಿತಾಂಶದ ಪರ– ವಿರೋಧ ಅಭಿಪ್ರಾಯಗಳಿಂದಾಗಿ ಅಯೋಧ್ಯೆವಾಸಿಗಳಿಗೆ ನೆಮ್ಮದಿ ಎಂಬುದು ಮರೀಚಿಕೆಯಾಗಿಯೇ ಉಳಿಯುವಂತಾಗಿದೆ!

–ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT