ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 10 ಮಾರ್ಚ್ 2024, 23:42 IST
Last Updated 10 ಮಾರ್ಚ್ 2024, 23:42 IST
ಅಕ್ಷರ ಗಾತ್ರ

ಅನಾಗರಿಕ ವರ್ತನೆ, ಸುಧಾರಣೆಯ ಅಗತ್ಯ

ದೆಹಲಿಯಲ್ಲಿ ರಸ್ತೆ ಮೇಲೆ ನಮಾಜು ಮಾಡುತ್ತಿದ್ದ ವ್ಯಕ್ತಿಯನ್ನು ಕಾಲಿನಿಂದ ಒದ್ದು, ಎಬ್ಬಿಸಲು ಪ್ರಯತ್ನಿಸಿದ ಇನ್‌ಸ್ಪೆಕ್ಟರನ್ನು ಅಮಾನತುಗೊಳಿಸಿದ ಬಗ್ಗೆ ವರದಿಯಾಗಿದೆ. ಯಾವುದೇ ವ್ಯಕ್ತಿಯನ್ನು ಕಾಲಿನಿಂದ ಒದೆಯುವುದು ಅಥವಾ ವ್ಯಕ್ತಿಯೊಂದಿಗೆ ಅನಾಗರಿಕವಾಗಿ ವರ್ತಿಸುವುದು ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಭೂಷಣವಲ್ಲ. ಅದೇ ರೀತಿ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಮುಂದಾಗುವುದು ಕೂಡ ಉಚಿತವಲ್ಲ.

ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ಈ ರೀತಿ ರಸ್ತೆಗಳ ಮೇಲೆ ನಮಾಜ್ ಮಾಡಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದುದಕ್ಕೆ ಪ್ರತಿಯಾಗಿ ಶಿವಸೇನಾವು ಮಹಾ ಆರತಿಯಂತಹ ಕ್ರಮಗಳ ಮೂಲಕ ಅದನ್ನು ವಿರೋಧಿಸಲು ತೊಡಗಿದ್ದನ್ನು ಗಮನಿಸಬೇಕು. ಪ್ರಾರ್ಥನೆ ಅಥವಾ ಯಾವುದೇ ಧಾರ್ಮಿಕ ವಿಧಿವಿಧಾನಗಳು ವೈಯಕ್ತಿಕ ಸ್ವರೂಪದಲ್ಲಿ ಖಾಸಗಿಯಾಗಿ ಇರಬೇಕು. ಸಾಮೂಹಿಕವಾಗಿ ಇದ್ದರೆ ಅವು ಒಂದು ಇತಿಮಿತಿಯೊಳಗೆ ಇರಬೇಕು. ಇಲ್ಲದಿದ್ದರೆ ಇಂತಹ ಮತೀಯ ಆಚರಣೆಗಳು, ಕರ್ಮಠವಾದಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ರಾಜಕೀಯ ಬೆಳವಣಿಗೆಗಳನ್ನು ನಾವು ನೋಡುತ್ತಲೇ ಇರಬೇಕಾಗುತ್ತದೆ. ಎಲ್ಲ ಮತ ಪಂಥಗಳಲ್ಲಿ ಇಂದು ಕಾಲಕ್ಕೆ ತಕ್ಕ ಬದಲಾವಣೆ, ಸುಧಾರಣೆ ಆಗಬೇಕಾದುದು ಅತಿ ಅವಶ್ಯ. 

⇒ವೆಂಕಟೇಶ ಮಾಚಕನೂರ, ಧಾರವಾಡ

ಎಲ್‌ಪಿಜಿ: ಚುನಾವಣೆಯ ಆಮಿಷವಾಗದಿರಲಿ

ಚುನಾವಣೆ ಸಮೀಪಿಸಿದಾಗ ರಾಜಕೀಯ ಪಕ್ಷಗಳು ಮತ ಸೆಳೆಯಲು ವಿವಿಧ ಬಗೆಯ ಸರ್ಕಸ್ ಮಾಡುವುದು ರೂಢಿಗತ. ಹೀಗಿರುವಾಗ, ಈ ಬಾರಿಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಎಲ್‌ಪಿಜಿ ದರ ತಗ್ಗಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಆಮಿಷ ಒಡ್ಡಿದೆ ಎಂಬ ಅನುಮಾನ ಮೂಡುತ್ತದೆ. ಮಹಿಳೆಯರ ಪರವಾಗಿ ತಾನು ನಿಲ್ಲುತ್ತೇನೆ ಎಂಬಂತಹ ನಿಲುವುಗಳನ್ನು ಸರ್ಕಾರಗಳು ಈ ರೀತಿ ಬಿಂಬಿಸಿಕೊಳ್ಳುತ್ತವೆ.

ರಾಜಕೀಯ ತುಷ್ಟೀಕರಣಕ್ಕಾಗಿ ಹೀಗೆ ಸಮೀಕರಿಸುವುದು ಮತ್ತು ಪ್ರಚಾರ ಮಾಡುವುದು ತರವಲ್ಲ. ಮಹಿಳೆಯರ ಸಮಾಜಮುಖಿ ಕಾರ್ಯಗಳ ಜೊತೆಗೆ ಅವರ ಆದರ್ಶ, ಮೌಲ್ಯಗಳನ್ನು ಸಮಾಜಕ್ಕೆ ತೋರಿಸಿ, ತುಳಿತಕ್ಕೆ ಒಳಪಟ್ಟ ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವು ಮಹಿಳಾ ದಿನಾಚರಣೆಗೆ ಅರ್ಥ ತರುತ್ತದೆ.

ಮಲ್ಲಿಕಾರ್ಜುನ್ ತೇಲಿ, ಗೋಠೆ, ಜಮಖಂಡಿ

ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಬೇಕಿದೆ

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಹಾಗೂ 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಯು ಈ ಮೊದಲೇ ನಿಗದಿಯಾದಂತೆ ಜರುಗಲು ಅವಕಾಶವಾಗಿರುವುದು ಸ್ವಾಗತಾರ್ಹ. ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠವು ಮಧ್ಯಂತರ ತಡೆ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಇಂದು, ಕಲಿಯುವ ಮಕ್ಕಳಿಗೆ ಪರೀಕ್ಷೆಯ ಭಯವೇ ಇಲ್ಲದೆ ಕನಿಷ್ಠ ಸಾಮಾನ್ಯ ಜ್ಞಾನದಲ್ಲೂ ಅವರು ಹಿಂದುಳಿದಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಶಾಲೆಯಲ್ಲಿ ಪಾಠ, ಮನೆಯಲ್ಲಿ ಅಭ್ಯಾಸ ಕ್ರಮ ಇದ್ದರೂ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಪ್ರಾಪಂಚಿಕ ಸಾಮಾನ್ಯ ಜ್ಞಾನದ ಕನಿಷ್ಠ ಅರಿವೂ ಇಲ್ಲದಿರುವುದನ್ನು ಗಮನಿಸಬಹುದು. ಇದಕ್ಕೆ ಖಾಸಗಿ, ಸರ್ಕಾರಿ ಎನ್ನುವ ತಾರತಮ್ಯ ಇಲ್ಲ. 90ರ ದಶಕದವರೆಗೂ 7ನೇ ತರಗತಿ ಮತ್ತು 10ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇತ್ತು. ಇದರಿಂದಾಗಿ, 5ನೇ ತರಗತಿಯಿಂದಲೇ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಮಾಧ್ಯಮಿಕ ಶಾಲೆಗಳಲ್ಲಿ, 8ನೇ ತರಗತಿಯಿಂದಲೇ ಪ್ರೌಢಶಾಲೆಯ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಅಂದಿನ ಶಿಕ್ಷಕರು ತಯಾರಿ ನಡೆಸುತ್ತಿದ್ದರು. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತಿತ್ತು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ. ಸಾಮೂಹಿಕ ನಕಲು, ಕಾಪಿ, ಪ್ರಶ್ನೆಪತ್ರಿಕೆ ಬಯಲು, ಮನೆಪಾಠ, ಡೊನೇಷನ್ ಹಾವಳಿಯಂತಹ ಪಿಡುಗುಗಳು ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನು ಕುಗ್ಗಿಸಿವೆ.

⇒ಮುಳ್ಳೂರು ಪ್ರಕಾಶ್, ಮೈಸೂರು

ನೀರು ಬಳಕೆಗೆ ಮಿತಿ ಇರಲಿ

ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಸುವುದನ್ನು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿಷೇಧಿಸಿರುವುದು ಸ್ವಾಗತಾರ್ಹ. ಆದರೆ ನಾವು ಮನೆಯಲ್ಲಿ ಬೆಳೆದಿರುವ ಹೂಕುಂಡಗಳಿಗೆ ಮತ್ತು ವಾಹನ ತೊಳೆಯಲು ಬಳಸುವುದಕ್ಕೆ ಏನು ಮಾಡಬೇಕು? ನೀರಿನ ದುರುಪಯೋಗ ತಪ್ಪಿಸಲು ನೀರಿನ ಬಳಕೆಗೆ ಮಿತಿ ಹೇರಬೇಕು. ಆ ಮೂಲಕ ಅಧಿಕ ಉಪಯೋಗಕ್ಕೆ ದಂಡ ವಿಧಿಸುವುದು ಸೂಕ್ತ.

ಹಡಾಲ್ ಸಿದ್ಧಯ್ಯ ಚಂದ್ರಶೇಖರ, ಬೆಂಗಳೂರು

ಸಂತೆಯಲ್ಲವಿದು ಬಸ್‌ ನಿಲ್ದಾಣ...

ರಾಜ್ಯ ಸಾರಿಗೆ ನಿಗಮಗಳ ಬಸ್‌ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ಹೊರಡುವ ಅಂಕಣ, ವಾಹನ ಸಂಖ್ಯೆ, ಸಮಯ ಹಾಗೂ ಇತರ ಪ್ರಮುಖ ಮಾಹಿತಿಗಳನ್ನು ನೀಡಲು ರಾಜ್ಯದ ಬಹುತೇಕ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ನಿಗಮಗಳು ಲಾಭ ಗಳಿಸುವ ಉದ್ದೇಶದಿಂದ ಕೆಲವು ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ವಾಣಿಜ್ಯ ಪ್ರಕಟಣೆಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡುತ್ತಿವೆ. ವಾಣಿಜ್ಯ ಪ್ರಕಟಣೆಗಳ ಧ್ವನಿ ಪರಿಮಾಣ (ಸೌಂಡ್‌ ವಾಲ್ಯೂಮ್‌) ಹೆಚ್ಚಾಗಿರುವುದರಿಂದ  ಹಾಗೂ ಪ್ರಕಟಣೆಗಳನ್ನು ನಿರಂತರವಾಗಿ ಪ್ರಸಾರ ಮಾಡುವುದರಿಂದ, ಬಸ್‌ ನಿಲ್ದಾಣ ಸಂಪೂರ್ಣವಾಗಿ ಗದ್ದಲಮಯವಾಗಿರುತ್ತದೆ. ಇದರಿಂದಾಗಿ, ಪ್ರಸಾರವಾಗುವ ಬಸ್‌ಗಳ ಮಾಹಿತಿಯ ಕಡೆ ಗಮನ ಕೇಂದ್ರೀಕರಿಸಲು ಪ್ರಯಾಣಿಕರಿಗೆ ತೊಡಕಾಗುತ್ತಿದೆ ಹಾಗೂ ಸಹ ಪ್ರಯಾಣಿಕರ ಜೊತೆ ಮಾತನಾಡಲು ಅಡ್ಡಿ ಉಂಟಾಗುತ್ತಿದೆ. ಇದರ ನಡುವೆ ತಿಂಡಿ ತಿನಿಸು ಮಾರುವವರ ಉಪಟಳವೂ ಸೇರಿಕೊಂಡು ನೆಮ್ಮದಿಯಿಂದ ಬಸ್‌ಗಾಗಿ ಕಾಯಲಾಗುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಬಸ್‌ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುತ್ತಿರುವುದರಿಂದ ಬಸ್‌ ನಿಲ್ದಾಣಗಳು ಜಾತ್ರೆಯ ವಾತಾವರಣವನ್ನು ನೆನಪಿಸುತ್ತಿವೆ. ಆದ್ದರಿಂದ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ನೆಮ್ಮದಿಯಿಂದ ಕುಳಿತುಕೊಳ್ಳುವಂತೆ ಇರಬೇಕು ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಯಾಣಿಕರಿಗೆ ನೀಡಲಾಗುವ ಮಾಹಿತಿಗಳು ಉಪಯೋಗಕ್ಕೆ ಬರುವಂತೆ ಇರಬೇಕು. ಆದ್ದರಿಂದ ಪ್ರಯಾಣಿಕರಿಗೆ ಒದಗಿಸುವ ಮಾಹಿತಿಗಳಿಗೆ ಆದ್ಯತೆ ನೀಡಿ, ವಾಣಿಜ್ಯ ಪ್ರಕಟಣೆಗಳ ಅವಧಿಯನ್ನು ಮೊಟಕುಗೊಳಿಸುವ ಕಡೆ ಸಂಬಂಧಿಸಿದವರು ಗಮನಹರಿಸಬೇಕಾಗಿದೆ.

ಜಿ.ನಾಗೇಂದ್ರ ಕಾವೂರು, ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT