ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಉತ್ಸವ ಸಮಿತಿಗೂ ವಿಧಿಸಬೇಕಿದೆ ಕಟ್ಟಲೆ

ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಮೂರ್ತಿಕಾರರಿಗೆ ಸರ್ಕಾರ ಮುನ್ನೆಚ್ಚರಿಕೆ ನೀಡಿರುವುದು ಸಮಂಜಸವೆ. ಇದರೊಂದಿಗೆ ಇನ್ನೊಂದು ಪರಿಣಾಮಕಾರಿ ವಿಧಾನ ಎಂದರೆ, ಗಣೇಶೋತ್ಸವ ಸಮಿತಿಯವರಿಗೂ ಕಟ್ಟಲೆ ವಿಧಿಸುವುದು. ಮಂಟಪದ (ಪೆಂಡಾಲ್) ಮುಖ್ಯ ದ್ವಾರದ ಬಳಿ, ‘ಪಿಒಪಿ ಮೂರ್ತಿ ಅಳವಡಿಸಿಲ್ಲ’ ಹಾಗೂ ‘ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹಸಿರು ಪಟಾಕಿಗಳನ್ನಷ್ಟೇ ಉಪಯೋಗಿಸುತ್ತೇವೆ’ ಎಂಬ ಫಲಕವನ್ನು ದೊಡ್ಡ ಅಕ್ಷರಗಳಲ್ಲಿ, ಉತ್ಸವ ಸಮಿತಿಯ ಅಧ್ಯಕ್ಷರ ಸಹಿಯೊಂದಿಗೆ ಅಳವಡಿಸುವುದನ್ನು ಕಡ್ಡಾಯ ಮಾಡಬೇಕು. ಆಗ ಅದೊಂದು ಪರಿಸರ ಕಾಳಜಿಯ ಪ್ರಮುಖ ಹೆಜ್ಜೆಯಾದೀತು.

–ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

**

ಪರೀಕ್ಷಾರ್ಥಿಗಳ ಬಗ್ಗೆ ಅಸಡ್ಡೆಯೇ?

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಭಾನುವಾರ ನಡೆಯಿತು. ಮೊದಲ ಪರೀಕ್ಷೆ ಬೆಳಿಗ್ಗೆ 9.30ರಿಂದ 11.30ರವರೆಗೆ ಇತ್ತು. ಧಾರವಾಡದ ರಾಜೀವ್ ಗಾಂಧಿ ವಿದ್ಯಾಲಯದಲ್ಲಿ ನಾನು ಪರೀಕ್ಷೆ ಬರೆದೆ. ಈ ವಿದ್ಯಾಲಯದ ಪಕ್ಕದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವೊಂದರ ಪ್ರಯುಕ್ತ ರಥದ ಮೆರವಣಿಗೆ ನಡೆಯಿತು. ಅದರ ಅಂಗವಾಗಿ ಇದ್ದ ಡೊಳ್ಳು ಬಾರಿಸುವ ಶಬ್ದ ಮತ್ತು ಸಿನಿಮಾ ಹಾಡು ಪರೀಕ್ಷಾರ್ಥಿಗಳಿಗೆ ಬಹಳಷ್ಟು ಕಿರಿಕಿರಿ ಉಂಟುಮಾಡಿದವು.

ನಾಗರಿಕ ಸೇವಾ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರ ಪಕ್ಕದಲ್ಲಿಯೇ ಇದೆ ಎಂಬುದು ಕಾರ್ಯಕ್ರಮ ಆಯೋಜಕರ ಗಮನಕ್ಕೆ ಬರಲಿಲ್ಲವೇ ಅಥವಾ ಪರೀಕ್ಷಾರ್ಥಿಗಳ ಬಗ್ಗೆ ಅವರಿಗೆ ಅಷ್ಟೊಂದು ಅಸಡ್ಡೆಯೇ ಎಂಬುದು ತಿಳಿಯದಾಯಿತು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನ, ಅಕ್ಕಪಕ್ಕ ಯಾವುದೇ ಪರೀಕ್ಷೆ ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ತಿಳಿವಳಿಕೆ ಇನ್ನು ಮುಂದಾದರೂ ಆಯೋಜಕರಿಗೆ ಬರಲಿ.

–ಬಿ.ಎಂ.ಪಾಟೀಲ, ಹುಬ್ಬಳ್ಳಿ 

**

ಗೋಡೆ ಬರಹದ ವಿರುದ್ಧ ದಿಟ್ಟ ನಡೆ

ಶೌಚಾಲಯದ ಗೋಡೆ ಮೇಲೆ ಮಹಿಳೆಯೊಬ್ಬರ ಫೋನ್ ನಂಬರ್ ಬರೆದು ಸಿಕ್ಕಿಬಿದ್ದಿರುವ ವ್ಯಕ್ತಿಯ ಪ್ರಕರಣವನ್ನು ರದ್ದು ಮಾಡದಿರುವ ಮೂಲಕ ಹೈಕೋರ್ಟ್, ಮಹಿಳೆಯರ ಗೌರವ ಹಾಗೂ ಘನತೆಯನ್ನು ಎತ್ತಿಹಿಡಿಯುವ ಶ್ಲಾಘನೀಯ ಕೆಲಸ ಮಾಡಿದೆ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಿಕೃತ ಕೃತ್ಯ ಇದಾಗಿದ್ದು, ಬಹಳಷ್ಟು ಹೆಣ್ಣುಮಕ್ಕಳು ಅನ್ನಲಾಗದೆ, ಅನುಭವಿಸಲಾಗದೆ ಮೂಕ ವೇದನೆ ಅನುಭವಿಸಿದ್ದಾರೆ. ಶೌಚಾಲಯಗಳ ತುಂಬಾ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಬರೆದು ವಿಕೃತ ಆನಂದವನ್ನು ಪಡೆಯುವ ಶೌಚಾಲಯ ಸಾಹಿತ್ಯ ಪ್ರವೀಣರು ಖಂಡಿತ ಶಿಕ್ಷಾರ್ಹರು. ಗ್ರಾಮೀಣ ಪ್ರದೇಶದ ಹಲವು ಕಾಲೇಜುಗಳು ಹಾಗೂ ಸಾರ್ವಜನಿಕ ಶೌಚಾಲಯಗಳು ಇಂತಹ ಅಸಭ್ಯ ಬರಹಗಳಿಂದ ತುಂಬಿ ತುಳುಕುತ್ತಿರುತ್ತವೆ. ವಿಷಾದದ ಸಂಗತಿ ಎಂದರೆ, ಗಂಡಸರು ಇಂತಹ ಕೆಟ್ಟ ಬರಹಗಳನ್ನು ನೋಡಿಯೂ ತಮಗೆ ಸಂಬಂಧವೇ ಇಲ್ಲದಂತೆ ಹೋಗುವುದು.

ಹಿಂದೊಮ್ಮೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಶೌಚಾಲಯವೊಂದರಲ್ಲಿ ನಾವು ಸ್ನೇಹಿತರು, ಇಂತಹ
ಅವಾಚ್ಯ ನಿಂದನೆಗಳನ್ನು ಉಜ್ಜಿ ಅಳಿಸಿದ್ದೆವು. ಅದೇನೇ ಇರಲಿ, ಈ ಕುರಿತು ಧೈರ್ಯದಿಂದ ದೂರು ನೀಡಿರುವ ಆ ನೊಂದ ಮಹಿಳೆ ನಿಜಕ್ಕೂ ಅಭಿನಂದನಾರ್ಹರು.

–ಎಲ್.ಎನ್.ಪ್ರಸಾದ್, ತುರುವೇಕೆರೆ 

**

ಪಕ್ಷವನ್ನು ಸರಿದಾರಿಗೆ ತರಲು ಶ್ರಮಿಸಲಿ!

ಕಾಂಗ್ರೆಸ್‌ ಪಕ್ಷವನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮಂತಹವರ ಮೇಲಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್‌ 17). ಅಂದರೆ, ‘ಕಾಂಗ್ರೆಸ್ ಪಕ್ಷ ಈಗ ಸರಿದಾರಿಯಲ್ಲಿ ಇಲ್ಲ’ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರಬೇಕಾದದ್ದು ಅವರ ತಕ್ಷಣದ ಗುರಿ ಅಂದ ಮೇಲೆ ಪಕ್ಷದಲ್ಲಿ ಅದಕ್ಕೆ ಅಗತ್ಯವಾದ ಹಲವಾರು ಹುದ್ದೆಗಳು ಇವೆ. ಅವರು ಅಂತಹ ಹುದ್ದೆಯನ್ನು ಅಲಂಕರಿಸಲಿ. ಅದಕ್ಕೆ ಯಾರ ತಕರಾರೂ ಇಲ್ಲ. ಆದರೆ ಸಾಹಿತ್ಯ ಅಕಾಡೆಮಿಗೆ ಅದರದ್ದೇ ಆದ ಸಾಂಸ್ಕೃತಿಕ, ಸಾಮಾಜಿಕ ಕರ್ತವ್ಯಗಳಿವೆ. ಆ ಕರ್ತವ್ಯಗಳನ್ನು ನಿರ್ವಹಿಸಲು ಇತರ ಯೋಗ್ಯ ವ್ಯಕ್ತಿಗೆ ಬಿಟ್ಟುಕೊಟ್ಟು, ಬಳಿಕ ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರಲು ಶ್ರಮಿಸುವ ಪವಿತ್ರ ಕಾರ್ಯ ನಿರ್ವಹಿಸಲಿ.

–ಟಿ.ಸುರೇಂದ್ರ ರಾವ್, ಬೆಂಗಳೂರು

**

ಭ್ರೂಣ ಹತ್ಯೆ ಮತ್ತು ಕಾರ್ನಾಡರ ಆತ್ಮಕಥೆ!

ರಾಜ್ಯದಲ್ಲಿ ಭ್ರೂಣಹತ್ಯೆಯ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಈ ಸಂದರ್ಭದಲ್ಲಿ, ನಾಟಕಕಾರ ಗಿರೀಶ ಕಾರ್ನಾಡ ಅವರು ತಮ್ಮ ‘ಆಡಾಡತ ಆಯುಷ್ಯ’ ಕೃತಿಯನ್ನು ವೈದ್ಯೆಯೊಬ್ಬರಿಗೆ ‘ಅರ್ಪಣೆ’ ಮಾಡಿದ ಕುತೂಹಲದ ಸಂಗತಿ ನೆನಪಾಗುತ್ತದೆ.

‘ಅರ್ಪಣೆ’ ಬರಹದ ಸಂಕ್ಷಿಪ್ತ ರೂಪ ಇಷ್ಟು: ನಾನು ಪುಣೆಯ ಫಿಲ್ಮ್ ಹಾಗೂ ಟೆಲಿವಿಜನ್ ಸಂಸ್ಥೆಯ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಮನೆಯ ಒಟ್ಟು ವಾತಾವರಣ ಆನಂದದಿಂದ ಬೀಗುತ್ತಿತ್ತು. ‘ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!’ ಎಂದು ಹೇಳಿ ಸ್ವಲ್ಪ ಸಂಕೋಚಗೊಂಡ ಅಮ್ಮ ಮಾತು ನಿಲ್ಲಿಸಿದಳು. ನನ್ನ ಕುತೂಹಲ ಕೆರಳಿತು. ಕೆದಕಿ ಕೇಳಿದೆ. ‘ನೀನು ಹೊಟ್ಟೆಯಲ್ಲಿದ್ದಾಗ, ಇನ್ನು ಮಕ್ಕಳು ಸಾಕು ಅನಿಸಿತು. ಅದಕ್ಕಾಗಿ ಪುಣೆಯಲ್ಲಿಯ ಕ್ಲಿನಿಕ್ಕಿಗೆ ಹೋದೆವು. ಬಹಳ ಸಮಯ ಕಾಯ್ದರೂ ವೈದ್ಯೆ ಬರಲೇ ಇಲ್ಲ. ಬೇಸತ್ತು ಮನೆಗೆ ಬಂದುಬಿಟ್ಟೆವು. ಮತ್ತೆ ಹೊರಳಿ ಆ ಕಡೆಗೆ ಹೋಗಲೇ ಇಲ್ಲ’ ಎಂದು ಅಮ್ಮ ನಿಧಾನವಾಗಿ ಹೇಳಿದಳು. ಅಮ್ಮನ ಮಾತಿನಿಂದ ನಾನು ಗರಬಡಿದವನಂತಾದೆ. ಮಂಕಾಗಿ ಕೂತೆ. ಅಂದು ಡಾಕ್ಟರ್ ಕ್ಲಿನಿಕ್ಕಿಗೆ ಬಂದಿದ್ದರೆ ಈ ಆತ್ಮಕಥೆ ಮಾತ್ರವಲ್ಲ, ಇದರ ಉತ್ತಮ ಪುರುಷನಾದ ನಾನೇ ಇರುತ್ತಿರಲಿಲ್ಲ. ಆದ್ದರಿಂದ ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಡಾ. ಮಧುಮಾಲತಿ ಗುಣೆಯ ನೆನಪಿಗೆ ಕೃತಿ ಅರ್ಪಿಸಿದ್ದೇನೆ.

–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

**

ವೈರುಧ್ಯ...

ಸಿನಿಮಾಗಳಲ್ಲಿ ನಾಯಕನಟರು
ಕಾನೂನು ಕೈಗೆತ್ತಿಕೊಂಡರೆ
ಅಭಿಮಾನಿಗಳಿಂದ ಬೀಳುತ್ತವೆ
ಭಾರಿ ಸಿಳ್ಳೆ, ಚಪ್ಪಾಳೆ,
ನಿಜಜೀವನದಲ್ಲಿ ಹೀಗಾದರೆ
ಅದೇ ಅಭಿಮಾನಿ ದೇವರುಗಳಿಂದ
ಉದುರಲಾರಂಭಿಸುತ್ತದೆ
ಖಂಡನೆಯ ಸುರಿಮಳೆ!

–ಆನಂದ ರಾಮತೀರ್ಥ, ಜಮಖಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT