ಫಲಪುಷ್ಪ ಪ್ರದರ್ಶನ: ಪ್ರವೇಶ ದರ ಹೊರೆ

ಬೆಂಗಳೂರಿನ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ತೇಜಸ್ವಿ ವಿಸ್ಮಯ ಲೋಕ ಅರಳಿದೆ. ಆದರೆ, ರಜಾ ದಿನಗಳಲ್ಲಿ ಪ್ರವೇಶ ದರವನ್ನು ₹100ಕ್ಕೆ ಏರಿಸಲಾಗಿದೆ. ರಜಾ ದಿನಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು, ದಿನಗೂಲಿಗಳು, ಮಧ್ಯಮ ವರ್ಗದವರು ಕುಟುಂಬ ಸಮೇತ ಸಸ್ಯಕಾಶಿಗೆ ಹೋಗುತ್ತಾರೆ. ನಾಲ್ಕೈದು ಜನರ ಕುಟುಂಬವೊಂದು ಪ್ರದರ್ಶನ ವೀಕ್ಷಿಸಲು ₹500 ವ್ಯಯಿಸಬೇಕಾಗುತ್ತದೆ. ಸಸ್ಯಕಾಶಿಯ ಸೊಬಗನ್ನು ಸವಿಯಲು ಬರುವ ಜನರಿಂದ ಹೀಗೆ ಹೆಚ್ಚಿನ ದರವನ್ನು ವಸೂಲಿ ಮಾಡುವುದು ನ್ಯಾಯಸಮ್ಮತವಲ್ಲ.

-ನಾಗರಾಜ್ ಕೆ. ಕಲ್ಲಹಳ್ಳಿ, ತುಮಕೂರು

ಕನ್ನಡದ ಅಸ್ಮಿತೆ ಇಲ್ಲದೆ ಅಸ್ತಿತ್ವ ಉಂಟೆ?

ಕನ್ನಡ ಚಿತ್ರರಂಗ ಆಯಾಸ, ಅಶಕ್ತತೆಯಿಂದ ನರಳುತ್ತಿದೆ. ಹೆಚ್ಚಿನ ಹಣಗಳಿಸುವ ಭರದಲ್ಲಿ ನಾಯಕರ, ದೈವಗಳ ವೈಭವೀಕರಣದಂಥ ಸಿದ್ಧಸೂತ್ರಗಳ ಬೆಂಬತ್ತಿರುವ ಸಿನಿಮಾ ನಿರ್ಮಾತೃಗಳು ರೇಜಿಗೆ ಹುಟ್ಟಿಸುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಉತ್ತಮ ಚಿತ್ರ ಅವತರಿಸಿದರೂ, ಅದನ್ನು ಆಸ್ವಾದಿಸುವ ಅಭಿರುಚಿ ಕನ್ನಡದ ಪ್ರೇಕ್ಷಕರಲ್ಲಿ ಉಳಿದಿಲ್ಲ. ಅಚ್ಚುಕಟ್ಟಾಗಿ ಚಿತ್ರಿಸಲ್ಪಟ್ಟ ಇತ್ತೀಚಿನ ಕೆಲ ಸಿನಿಮಾಗಳೂ ಗುರುತು ಮಾಡದೇ ಹೋದದ್ದು ಒಳ್ಳೆಯ ಲಕ್ಷಣವಲ್ಲ. ಉದಾಹರಣೆಗೆ, ‘ಏಳುಮಲೆ’, ಹಾಗೂ ‘ಲವ್ ಯೂ ಮುದ್ದು’. ‘ತೀರ್ಥರೂಪ ತಂದೆಯವರಿಗೆ’ ಹೆಸರಿನ ಸಿನಿಮಾಕ್ಕೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗಲಿಲ್ಲ. ರೀಮೇಕ್, ಡಬ್ಬಿಂಗ್ಗೆ ಒಗ್ಗಿಕೊಂಡ ಉದ್ಯಮ ಹೊಸ ಸಾಹಸವನ್ನು ಇಷ್ಟಪಡುವುದಿಲ್ಲ. ಒಂದು ವೇಳೆ ಹೊಸ ಪ್ರಯೋಗ ಮಾಡಿದರೂ ಜನ ಸ್ವೀಕರಿಸಲು ತಯಾರಿಲ್ಲ. ಪ್ರೇಕ್ಷಕರ ಅಭಿರುಚಿ ಕೆಡಿಸಿದವರೇ ಈಗ ಬಲಿಪಶುವಾಗುತ್ತಿದ್ದಾರೆ.

-ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ಶಿಕ್ಷಕರಿಗೆ ಸ್ಪರ್ಧೆ: ಬದಲಾವಣೆ ಮರೀಚಿಕೆ

ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಾಮಾನ್ಯಜ್ಞಾನ ರಸಪ್ರಶ್ನೆ, ರಸಪ್ರಶ್ನೆ ವಿಜ್ಞಾನ, ಪ್ರಬಂಧ, ಚಿತ್ರಕಲೆ, ಸ್ಥಳದಲ್ಲಿ ಪಾಠೋಪಕರಣ ತಯಾರಿಕೆ ಮತ್ತು ಆಶುಭಾಷಣ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಗಳು ತಾಲ್ಲೂಕು ಹಂತದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೆ ಸಾಗುತ್ತವೆ. ಸ್ಪರ್ಧೆಗಳ ಬಹುಮಾನದ ಮೊತ್ತ ಕಳೆದ ಹತ್ತು ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ಶಿಕ್ಷಕರ ಜ್ಞಾನವನ್ನು ಓರೆಗೆ ಹಚ್ಚುವ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ, ಪಠ್ಯ ವಿಚಾರಗಳಿಂದ ಒಂಚೂರು ಆಚೆತಂದು ನವೋಲ್ಲಾಸ ತರುವ ಆಶಯದೊಂದಿಗೆ ಈ ಸ್ಪರ್ಧೆ ನಡೆಯುತ್ತಿದೆ. ಆದರೆ, ಪ್ರಶಸ್ತಿಯ ಮೊತ್ತ ಮತ್ತು ಸ್ಪರ್ಧೆಗಳ ಆಯೋಜನೆಯಲ್ಲಿ ಸಾಕಷ್ಟು ಬದಲಾವಣೆ ತರದಿರುವುದು ದುರದೃಷ್ಟಕರ.

-ಮೇಘನಾ ಮಲ್ಲಪ್ಪ ಕರೇಣ್ಣನವರ, ಹಾವೇರಿ

ವಂದೇ ಭಾರತ್ ರೈಲು: ಹಳಿ ತಪ್ಪಿದ ಆದ್ಯತೆ

ಮುಂದಿನ ನಾಲ್ಕು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಈ ರೈಲುಗಳ ಸಂಚಾರವು ಭಾರತದ ಪ್ರಗತಿ ಹೊಂದುತ್ತಿರುವುದರ ಸಂಕೇತವೆಂದು ಅನೇಕರು ಭಾವಿಸಿದಂತಿದೆ. ಆದರೆ, ದೇಶದಲ್ಲಿ ‘ಅಗ್ಗ’ವಾದ ವಿಮಾನಯಾನವು ಆರಂಭವಾಗಿ ಎರಡು ದಶಕಗಳಾಗಿವೆ. ವಂದೇ ಭಾರತ್ ರೈಲುಗಳು ನೆಲದ ಮೇಲೆ ಸಾಗುವ ವಿಮಾನದಂತಾಗಿ ಆರಾಮದಾಯಕ ಪ್ರಯಾಣಕ್ಕೆ ಒತ್ತು ಕೊಡುತ್ತಿರುವುದು ಮೇಲ್ಮಧ್ಯಮ ವರ್ಗಕ್ಕೆ ಹಿತವೆನಿಸಬಹುದು. ಆದರೆ, ಕರ್ನಾಟಕವೂ ಸೇರಿ ಅನೇಕ ರಾಜ್ಯಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣಿಸುವುದಕ್ಕೆ ಬೇಕಿರುವುದು ಸೂಪರ್ ಫಾಸ್ಟ್ ರೈಲುಗಳಾಗಿವೆ. ವಂದೇ ಭಾರತ್ ರೈಲುಗಳಿಗೆ ಅನುಕೂಲಕರ ವೇಳಾಪಟ್ಟಿ ಒದಗಿಸಲು ಹೋಗಿ, ಇಂಟರ್ಸಿಟಿ ಎಕ್ಸ್ಪ್ರೆಸ್, ಜನಶತಾಬ್ದಿಯಂತಹ ಜನಸ್ನೇಹಿ ರೈಲುಗಳನ್ನು ಆದ್ಯತೆಯ ಪಟ್ಟಿಯಲ್ಲಿ ಕೆಳಗೆ ತಳ್ಳುವುದು ಪ್ರಗತಿಯ ಸಂಕೇತವಲ್ಲ. ಸಾಮಾನ್ಯ ರೈಲುಗಳ ಸಂಖ್ಯೆ ಹೆಚ್ಚಿಸಬೇಕಾಗಿರುವುದು ಇಂದಿನ ತುರ್ತು.

-ಶ್ರೀಕಂಠ, ಬೆಂಗಳೂರು

ಪ್ರಮಾಣಪತ್ರಗಳ ಅಡ್ಡಾದಿಡ್ಡಿ ಪರಿಶೀಲನೆ

ಸರ್ಕಾರಿ ಪದವಿ ಕಾಲೇಜುಗಳಿಗೆ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಶೈಕ್ಷಣಿಕ ದಾಖಲೆಗಳಿಗೆ ನೈಜತೆಯ ಪ್ರಮಾಣಪತ್ರ ನೀಡಬೇಕೆಂದು ಆದೇಶಿಸಲಾಗಿದೆ. ಅದರಂತೆ ಉಪನ್ಯಾಸಕರು ಸಲ್ಲಿಸಿರುವ ಸ್ನಾತಕೋತ್ತರ ಪದವಿ, ಎಂ.ಫಿಲ್., ಪಿಎಚ್.ಡಿ, ಕೆ–ಸೆಟ್ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಅದರ ನೈಜತೆ ಪ್ರಮಾಣಪತ್ರ ಒದಗಿಸುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾಲಯಗಳಿಗೆ ಕೋರಿದ್ದಾರೆ. ಆದರೆ, ವಿ.ವಿಗಳು ಪ್ರಾಂಶುಪಾಲರು ಕಳುಹಿಸಿರುವ ಜೆರಾಕ್ಸ್ ಪ್ರತಿಗಳ ಮೇಲೆಯೇ ‘ನೈಜತೆ’ಯೆಂದು ದೃಢೀಕರಿಸಿ ವಾಪಸ್ ಕಳುಹಿಸುತ್ತಿವೆ. ಇದು ಅಕ್ರಮಕ್ಕೆ ಎಡೆಮಾಡಿಕೊಡಲಿದೆ. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಿದೆ.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

ರೈಲಿನಲ್ಲಿ ಕನ್ನಡ ಧ್ವನಿಮುದ್ರಿಕೆ ಲೋಪ

ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಕನ್ನಡೇತರರಿಂದ ಧ್ವನಿಮುದ್ರಿತಗೊಂಡ ಉದ್ಘೋಷಣೆಗಳು ತಪ್ಪು ಉಚ್ಚಾರದಿಂದ ಕೂಡಿರುತ್ತವೆ. ಪ್ರಮುಖವಾಗಿ ರೈಲು ನಿಲ್ದಾಣಗಳ ಹೆಸರನ್ನು ತಪ್ಪಾಗಿ ಉಚ್ಚರಿಸಲಾಗುತ್ತಿದೆ. ರೈಲ್ವೆ ಇಲಾಖೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ ಎಂಬ ಅಧಿಕಾರಸ್ಥ ಮನೋಭಾವದ ವ್ಯಸನದಿಂದಾಗಿ ಕನ್ನಡೇತರರಿಂದ ಧ್ವನಿಮುದ್ರಣ ಮಾಡಿಸುವುದು ಒಪ್ಪುವಂಥದ್ದಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರು ಕರ್ನಾಟಕ ದವರೇ ಆಗಿದ್ದಾರೆ. ಸಂಸದರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಆಸ್ಥೆವಹಿಸಿ ರೈಲ್ವೆ ಇಲಾಖೆಯ ಗಮನಕ್ಕೆ ತರಬೇಕಿದೆ.

-ಜಿ. ಬೈರೇಗೌಡ ಕೊಡಿಗೇಹಳ್ಳಿ, ನೆಲಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.