ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು - ಎನ್‌ಪಿಎಸ್‌ ವಿರುದ್ಧ ಹೋರಾಟ

Last Updated 27 ನವೆಂಬರ್ 2022, 12:40 IST
ಅಕ್ಷರ ಗಾತ್ರ

‘ಇಳಿಗಾಲಕ್ಕೆ ಕಾಡುವ ಚಿಂತೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನವೆಂಬರ್ 27) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಎನ್‌ಪಿಎಸ್‌ ರದ್ದುಗೊಳಿಸಿ’

ಸರ್ಕಾರಿ ಕೆಲಸಕ್ಕೆ ಸೇರಿದಾಗಿನಿಂದ ಅವಿರತ ದುಡಿಯುವ ವ್ಯಕ್ತಿ, ಕೆಲಸಕ್ಕೆ ಸ್ಪಂದಿಸದ ದೇಹಕ್ಕೆ 60ರ ನಂತರದ ಜೀವನಕ್ಕೆ ಪಿಂಚಣಿ ಸಿಕ್ಕರೆ ಜೀವನ ನಿರ್ವಹಣೆ ಸುಲಭವಾಗುತ್ತದೆ. ಆದರೆ ಎನ್‌ಪಿಎಸ್‌ ಎಂಬ ಪಿಂಚಣಿ ಪಿಡುಗು ನೌಕರರ ಭವಿಷ್ಯ ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದೆ. ಸರ್ಕಾರಿ ನೌಕರನಾಗಿ ಸ್ವತಂತ್ರ ಜೀವನ ಮಾಡುತ್ತಿದ್ದವರು 60ರ ನಂತರ ಪರಾವಲಂಬಿ ಆಗುವಂತೆ ಮಾಡಿದ ಸರ್ಕಾರದ ದೂರದೃಷ್ಟಿ ಯೋಜನೆ ಅಸಹನೀಯ. ಆದ್ದರಿಂದ ಎನ್‌ಪಿಎಸ್‌ ತೆಗೆದು ಹಾಕಿ ಒಪಿಎಸ್‌ ಜಾರಿಗೊಳಿಸಬೇಕು.

ಧನಂಜಯ ಎಚ್., ಕಲ್ಲಹಳ್ಳಿ, ಮಂಡ್ಯ

––

‘ಸಂಧ್ಯಾ ಕಾಲದಲ್ಲಿ ಅಭದ್ರತೆ’

ಖುಷಿಯಿಂದ ಸರ್ಕಾರಿ ಕೆಲಸಕ್ಕೆ ಸೇರುವ ನೌಕರರಿಗೆ ಸಂಧ್ಯಾ ಕಾಲದಲ್ಲಿ ಅಭದ್ರತೆಯ ಚಿಂತೆ ಕಾಡುತ್ತಿದೆ. ಎನ್‌ಪಿಎಸ್‌ ತೊಲಗಿ ಒಪಿಎಸ್‌ ಜಾರಿಯಾದರೆ ಮಾತ್ರ ಆತಂಕ ಮತ್ತು ಭವಿಷ್ಯದ ಬಗ್ಗೆ ಚಿಂತೆಯಲ್ಲಿ ಕಳೆದು ಹೋಗುತ್ತಿರುವ ನೌಕರರ ಬದುಕು ಹಸನಾಗುವುದು ಯಾವಾಗ? ಗಗನಕ್ಕೆ ಏರುತ್ತಿರುವ ವಸ್ತುಗಳ ಬೆಲೆಗಳು, ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯ , ಆಸ್ಪತ್ರೆ ದುಬಾರಿ ವೆಚ್ಚಗಳು, ದಿನನಿತ್ಯ ಬರುವ ವಿವಿಧ ಖರ್ಚುಗಳು ಭರಿಸುವುದರಲ್ಲಿಯೇ ಕಳೆದುಹೋಗುತ್ತಿರುವ ಸರಕಾರಿ ನೌಕರರ ಬದುಕು ನಿವೃತ್ತಿಯ ನಂತರ ಜೀವನ ಕಷ್ಟವಾಗುತ್ತದೆ. ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬಂತೆ ಸಿಕ್ಕ ನೌಕರಿಯನ್ನು ನಿಷ್ಠೆಯಿಂದ ಮಾಡಿ, ಅದಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ಸರ್ಕಾರಿ ನೌಕರರ ಬದುಕು ಎನ್‌ಪಿಎಸ್‌ದಿಂದ ಬೀದಿಗೆ ಬೀಳುವಂತಾಗಿದೆ. ಸರ್ಕಾರ ಕೂಡಲೇ ಒಪಿಎಸ್‌ ಜಾರಿಗೊಳಿಸಬೇಕು

-ಪ್ರಕಾಶ್ ದೊಡ್ಡಮನಿ, ಹರಿಹರ

--

ಸರ್ಕಾರಿ ನೌಕರರ ಮರಣ ಶಾಸನ

ನೂತನ ಪಿಂಚಣಿ ವ್ಯವಸ್ಥೆ ಎಂಬುದು ಸರ್ಕಾರಿ ನೌಕರರ ಮರಣ ಶಾಸನ. ಕಬ್ಬಿನಲ್ಲಿರುವ ರಸವನ್ನು ಪಡೆದು ಸಿಪ್ಪೆಯನ್ನು ಕಸದ ತೊಟ್ಟಿಗೆ ಬಿಸಾಡುವ ಹಾಗೆ ಸರ್ಕಾರಿ ನೌಕರರನ್ನು 30–40 ವರ್ಷಗಳ ಕಾಲ ದುಡಿಸಿ ಅವರ ನಿವೃತ್ತಿಯ ಸಂಧ್ಯಾ ಕಾಲದಲ್ಲಿ ಸರ್ಕಾರಕ್ಕೂ ಹಾಗೂ ನೌಕರರಿಗೂ ಸಂಬಂಧವಿಲ್ಲದಂತೆ ಮಾಡಿ ಆತನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎನ್‌ಪಿಎಸ್‌ ಎಂಬ ಮರಣ ಶಾಸನ ತೊಲಗಿಸಿ, ಒಪಿಎಸ್ ಜಾರಿಗೊಳಿಸಬೇಕು.

ಅರಣ್ ಎಚ್,

--

‘ಒಪಿಎಸ್‌ ಜಾರಿಗೊಳಿಸಿ’

ಎನ್‌ಪಿಎಸ್‌ ಯೋಜನೆ ಸರ್ಕಾರಿ ನೌಕರರನ್ನು ಸಂಧ್ಯಾಕಾಲದಲ್ಲಿ ಸ್ವಾಭಿಮಾನದಿಂದ ಜೀವಿಸಲು ಬಿಡದು. ಈ ಯೋಜನೆಯಿಂದ ವೃದ್ಯಾಪದ ಜೀವನ ನೆನಸಿಕೊಂಡು ಆತ್ಮಹತ್ಯ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಭ್ರಷ್ಟರಾಗಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಬೇಕು. ಒಂದು ದೇಶ ಒಂದೇ ಕಾನೂನು ಸಮ್ಮತವಲ್ಲವೇ?ಈಗಾಗಲೇ ಪಂಜಾಬ್ ಹಾಗೂ ಇನ್ನಿತರೇ ರಾಜ್ಯಗಳಲ್ಲಿ ಒಪಿಎಸ್‌ ಪಿಂಚಣಿ ಜಾರಿಗೊಳಿಸಲಾಗಿದೆ. ಆದ್ದರಿಂದ ನಮ್ಮ ರಾಜ್ಯದಲ್ಲೂ ಒಪಿಎಸ್‌ ಜಾರಿಗೊಳಿಸಬೇಕು.

ಅನೀಲ್‌ಕುಮಾರ್ ತಿರಕಪ್ಪ, ಕಲಘಟಗಿ ಧಾರವಾಡ

––

ಎನ್‌ಪಿಎಸ್‌ ರದ್ದುಪಡಿಸಿ: ನಿವೃತ್ತರನ್ನು ಬಲಪಡಿಸಿ

ಬದುಕಿನ ಇಳಿಗಾಲದ ಕ್ಷಣದಲ್ಲಿರುವ ಜೀವಿಗಳ ಪಿಂಚಣಿಗೆ ಕೊಡಲಿ ಪೆಟ್ಟು ನೀಡಿದರೆ ಅವರ ಬದುಕು ನರಕವಾಗುತ್ತದೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿ, ನಿವೃತ್ತರ ಧ್ವನಿಗೆ ಸರ್ಕಾರ ಕೈಜೋಡಿಸಬೇಕು. ಹೊಸ ಪಿಂಚಣಿ ವ್ಯವಸ್ಥೆಗೆ ವಿರೋಧ ಪಡಿಸುತ್ತಿರುವ ಇಳಿ ಜೀವಗಳ ಉಸಿರನ್ನು ಉಳಿಸಬೇಕು. ಈ ವಿಷಯದಲ್ಲಿ ರಾಜಕೀಯ ಸಲ್ಲ.

ಶಿವರಾಜ ಯತಗಲ್, ಉಪನ್ಯಾಸಕ, ರಾಯಚೂರು ವಿಶ್ವವಿದ್ಯಾಲಯ

--

‘ತಾರತಮ್ಯ ಯೋಜನೆ ಬೇಡ’

ಹೊಸ ಪಿಂಚಣಿ ಯೋಜನೆಗೆ ಒಳಪಟ್ಟು ನಿವೃತ್ತರಾಗಿರುವ ನೌಕರರಿಗೆ ಇಡಿಗಂಟಿನಲ್ಲಿ ಶೇ 60ರಷ್ಟು ಪಾಲನ್ನು ನಿವೃತ್ತಿ ಸಮಯದಲ್ಲಿ ಒಮ್ಮೆಲೆ ಪಾವತಿಸಲಾಗುತ್ತಿದೆ. ಉಳಿದ ಶೇ 40ರಷ್ಟು ಮಾಸಿಕ ನಿವೃತ್ತಿ ವೇತನ ನಿರ್ಧರಣೆಯಾಗುತ್ತಿದೆ. ವಿಪರ್ಯಾಸವೆಂದರೆ ಇದುವರೆಗೂ ಎನ್‌ಪಿಎಸ್‌ ಯೋಜನೆಗೊಳಪಟ್ಟು ನಿವೃತ್ತಿಯಾದ ಕುಟುಂಬದವರಿಗೆ ನಿರ್ಧಾರಗೊಂಡ ಮಾಸಿಕ ಪಿಂಚಣಿ ಕನಿಷ್ಠ 3–4 ಸಾವಿರದ ಗಡಿ ದಾಟಿದ ಉದಾಹರಣೆಗಳಿಲ್ಲ. ಎಲ್ಲರಂತೆ ಸಮಾನವಾಗಿ ದುಡಿವ ಸರ್ಕಾರಿ ನೌಕರರಲ್ಲಿ ಹಳೆಪಿಂಚಣಿ ಮತ್ತು ಹೊಸ ಪಿಂಚಣಿಯೆಂಬ ತಾರತಮ್ಯದ ಯೋಜನೆಗಳನ್ನು ಅನುಷ್ಠಾನಿಸಿ ನೌಕರರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿರುವ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಉತ್ತರ ಭಾರತದ ಹಲವು ರಾಜ್ಯಗಳು ಈ ಕರಾಳ ಯೋಜನೆಯನ್ನು ರದ್ದುಪಡಿಸಿವೆ.

-ಮಾಂತೇಶ ಕುಮಾರ್ ಬಿ.ಎನ್., ತರೀಕೆರೆ, ಚಿಕ್ಕಮಗಳೂರು

---

‘ಕೆಲವರಿಗೆ ಮಾತ್ರ ಇಪಿಎಫ್’

ಎನ್‌ಪಿಎಸ್‌ ಸರ್ಕಾರಿ ನೌಕರರ ಬವಣೆಯಾಗಿದೆ. ದೇಶದಲ್ಲಿ ಸುಮಾರು 75 ಲಕ್ಷ ಇಪಿಎಫ್ ಪಿಂಚಣಿ ಸೌಲಭ್ಯವುಳ್ಳವರು ಕೆಲವರು ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದಾರೆ. ಕಳೆದ 25 ವರ್ಷಗಳಿಂದ ನರಳುತ್ತಿರುವ ಈ ನೌಕರರ ನೋವು ಸರ್ಕಾರಕ್ಕೆ ಕಾಣುಸುತ್ತಿಲ್ಲವೇ? ಸಂಸದರು, ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಅಸಂಖ್ಯಾತ ಅಹವಾಲುಗಳನ್ನು ಕಳಿಸಿದರೂ ಪ್ರಯೋಜನವಾಗಿಲ್ಲ. ಸೇವಾ ಅವಧಿಯಲ್ಲಿ ಪಿಂಚಣಿಗಾಗಿ ಕಡಿತಗೊಳಿಸಿದ್ದು, ಕೋಟ್ಯಂತರ ರೂಪಾಯಿ ಕೊಳೆಯುತ್ತಿದೆ. ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಇತ್ತೀಚಿಗೆ ಸುಪ್ರೀಂ ಕೋರ್ಟ್‌ ನೌಕರರ ಪರವಾಗಿ ತೀರ್ಪು ನೀಡಿದರು ಇದನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ.

ರಾಮಯ್ಯ ಶೆಟ್ಟಿ, ಕೆಂಗೇರಿ, ಬೆಂಗಳೂರು

--

‘ಶಾಸಕರಿಗೆ ಪಿಂಚಣಿ ಇರುವಾಗ ನೌಕರರಿಗೆ ಏಕೆ ಇಲ್ಲ’

ಐದು ವರ್ಷ ಕಾರ್ಯನಿರ್ವಹಿಸುವ ರಾಜಕಾರಣಿಗಳಿಗೆ ನಿವೃತ್ತಿ ವೇತನ ಸಿಗುತ್ತಿರುವಾಗ ಸರ್ಕಾರಿ ನೌಕರರಿಗೇಕಿಲ್ಲ? ಜೀವನಪೂರ್ತಿ ಸರ್ಕಾರಿ ಕೆಲಸ ಮಾಡಿ ಸಂಧ್ಯಾ ಕಾಲದಲ್ಲಿ ಅಭದ್ರತೆ ಕಾಡುತ್ತದೆ. ಆದ್ದರಿಂದ ಸರ್ಕಾರ ಎನ್‌ಪಿಎಸ್‌ ಯೋಜನೆ ರದ್ದುಗೊಳಿಸಿ, ಒಪಿಎಸ್‌ ಯೋಜನೆ ಜಾರಿಗೊಳಿಸಬೇಕು.

ಶ್ವೇತಾ ಎಂ., ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ ಹೆಗ್ಗೂರು ಟಿ. ನರಸೀಪುರ

––

ಸರ್ಕಾರಿ ನೌಕರರ ಭವಿಷ್ಯದ ಜೊತೆ ಚೆಲ್ಲಾಟ ಸಲ್ಲದು

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಆಡಳಿತದ ಜೀವಾಳವಾಗಿರುತ್ತಾರೆ. ದೇಶದ ಸೈನಿಕರಿಗೆ ಇರುವಷ್ಟು ಮಹತ್ವ ಸರ್ಕಾರ ನಡೆಸುವ ನೌಕರರಿಗೂ ಇದೆ. ಇವರನ್ನು ಕನಿಷ್ಠವಾಗಿ ಕಾಣಬಾರದು. ನಿಗದಿತ ಅವಧಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಶಾಸಕಾಂಗ ರೂಪಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಕಾರ್ಯಾಂಗ, ಅದುವೇ ಸರ್ಕಾರಿ ನೌಕರರ ವೃಂದ. ಆದರಿಂದ ಎನ್‌ಪಿಎಸ್‌ ರದ್ದುಗೊಳಿಸಿ ಒಪಿಎಸ್‌ ಜಾರಿಗೊಳಿಸಬೇಕು.

ವೀರಭದ್ರಪ್ಪ ಉಪ್ಪಿನ್,ಕಾರ್ಯಕಾರಿ ಸಮಿತಿ ಸದಸ್ಯ, ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT