ಗುರುವಾರ , ಜೂನ್ 4, 2020
27 °C

ಹುಂಬತನ ಬೇಡ; ಅಪಪ್ರಚಾರ ನಿಲ್ಲಲಿ | ಮುಸ್ಲಿಂ ಚಿಂತಕರ ಚಾವಡಿ ಪತ್ರ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದ ವಿಚಾರಗಳನ್ನು ತಿರುಚಿ, ಬಹುಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆದು, ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಮುಸ್ಲಿಂ ಚಿಂತಕರ ಚಾವಡಿಯು ಆಗ್ರಹಿಸುತ್ತದೆ. ಈ ಪತ್ರವು 'ವಾಚಕರವಾಣಿ'ಯಲ್ಲಿ ಏಪ್ರಿಲ್ 6ರಂದು ಪ್ರಕಟವಾಗಿತ್ತು.

---

ಕೊರೊನಾ ವೈರಸ್ ಕಾರಣದಿಂದ ಇಡೀ ದೇಶ ನಲುಗುತ್ತಿದೆ. ಅದರಿಂದ ಪಾರಾಗಲು ದೇಶದ ಜನ ತಮ್ಮ ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಭೇದವನ್ನು ಬದಿಗಿಟ್ಟು, ವೈದ್ಯರು ಮತ್ತು ಸರ್ಕಾರದ ಅಗತ್ಯ ಕ್ರಮಗಳಿಗೆ ಸಹಕರಿಸಬೇಕಿದೆ. ಈ ಹೊತ್ತಿನಲ್ಲಿ, ಅತಿಯಾದ ಧಾರ್ಮಿಕ ಶ್ರದ್ಧೆಯುಳ್ಳ ಕೆಲವು ಜನ ಮತ್ತು ಮೂಲಭೂತವಾದಿಗಳು ಹುಂಬತನದಿಂದ ವರ್ತಿಸುತ್ತಾ, ಕೊರೊನಾ ವಿರುದ್ಧದ ಹೋರಾಟಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದಾರೆ.

ಈ ಬಗೆಯ ಹುಂಬತನ, ಉಡಾಫೆ ತೋರುವವರು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇದ್ದಾರೆ. ಇದಕ್ಕೆ ಕಳೆದ 25 ದಿನಗಳಿಂದ ದೇಶದಲ್ಲಿ ನಡೆದಿರುವ ಘಟನೆಗಳು ಸಾಕ್ಷಿ. ಇದನ್ನು ಎಲ್ಲ ಪ್ರಜ್ಞಾವಂತರು ಖಂಡಿಸಬೇಕಿದೆ.

ಇದೇ ಹೊತ್ತಿನಲ್ಲಿ, ಕೆಲವು ಹುಂಬರು ಮತ್ತು ಮೂಲಭೂತವಾದಿಗಳ ಮಾತು ಹಾಗೂ ಕ್ರಿಯೆಗಳನ್ನು ಇಡಿಯಾಗಿ ಒಂದು ಸಮುದಾಯದ ತಲೆಗೆ ಕಟ್ಟುವ, ಅದರ ವಿರುದ್ಧ ವ್ಯವಸ್ಥಿತವಾಗಿ ದ್ವೇಷವನ್ನು ಹಬ್ಬಿಸುವ ಕೆಲಸದಲ್ಲಿ ಕೆಲವರು ತೊಡಗಿದ್ದಾರೆ. ಕೆಲವು ಮಾಧ್ಯಮಗಳು ಸಹ ಈ ಕೆಲಸವನ್ನು ಮಾಡುತ್ತಿವೆ. ಇದು ತಪ್ಪು ಮತ್ತು ಅಪಾಯಕರ. ವ್ಯಕ್ತಿ ಅಥವಾ ಗುಂಪಿನವರು ಯಾವುದೇ ಧಾರ್ಮಿಕ ಸಮುದಾಯಕ್ಕೆ ಸೇರಿರಲಿ, ಅವರು ಮಾಡುವ ತಪ್ಪುಗಳನ್ನು ಎಲ್ಲರೂ ಖಂಡಿಸಬೇಕಿದೆ. ಜಾತಿ ಮತಾತೀತವಾಗಿ ಈ ಬಿಕ್ಕಟ್ಟಿನ ಸನ್ನಿವೇಶವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ. ಭಾರತವು ಕಷ್ಟಕರವಾದ ಈ ಯುದ್ಧದಲ್ಲಿ ಗೆಲುವನ್ನು ಸಾಧಿಸುತ್ತದೆ ಎಂದು ನಾವು ನಂಬಿದ್ದೇವೆ.

ಈ ವಿಷಯದಲ್ಲಿ ಮುಸ್ಲಿಂ ಚಿಂತಕರ ಚಾವಡಿಯು ಸರ್ಕಾರವು ಕೈಗೊಳ್ಳುವ ಎಲ್ಲ ಉಪಯುಕ್ತ ಕ್ರಮಗಳನ್ನು ಬೆಂಬಲಿಸುತ್ತದೆ. ಸಹನೆಯಿಂದ, ವಿವೇಕದಿಂದ ಈ ಸನ್ನಿವೇಶವನ್ನು ಎದುರಿಸಬೇಕೆಂದು ಮುಸ್ಲಿಂ ಸಮುದಾಯಕ್ಕೆ ವಿನಂತಿಸುತ್ತದೆ. ಕೊರೊನಾ ವೈರಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದ ವಿಚಾರಗಳನ್ನು ತಿರುಚಿ, ಬಹುಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆದು, ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ.

ಡಾ. ರಹಮತ್ ತರೀಕೆರೆ, ಡಾ. ಮುಜಾಪ್ಫರ್‌ ಅಸ್ಸಾದಿ, ರಂಜಾನ್ ದರ್ಗಾ, ಅಬ್ದುಸ್ಸಲಾಂ ಪುತ್ತಿಗೆ,  ಬಾನು ಮುಷ್ತಾಕ್, ಬಿ.ಪೀರ್‍ಬಾಷ, ಮುನೀರ್ ಕಾಟಿಪಳ್ಳ, ಅನೀಸ್ ಪಾಶಾ, ಜೆ.ಕಲೀಂಬಾಷಾ, ಡಾ. ಸಿರಾಜ್ ಅಹಮ್ಮದ್, ಡಾ. ರಜಾಕ್ ಉಸ್ತಾದ್, ಇಮಾಮ್ ಗೋಡೆಕಾರ, ಡಾ. ಶಾಕಿರಾ ಖಾನಂ

(ನೀವೂ ಪ್ರತಿಕ್ರಿಯಿಸಿ: editpage@prajavani.co.in)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು