ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶುಕ್ರವಾರ, ಮಾರ್ಚ್ 17, 2023

Last Updated 16 ಮಾರ್ಚ್ 2023, 22:54 IST
ಅಕ್ಷರ ಗಾತ್ರ

ಹಿಂದಿನ ಬೆಂಚಿನ ಹುಡುಗರಾಡಿದಂತೆ...!
‘ಎಲ್ರೂ ಸರ್ವೀಸ್ ರಸ್ತೆಲೇ ಹೋದ್ರೆ ಟೋಲ್ ಕಟ್ಟೋರ್‍ಯಾರು?’ ಎಂದು ಕೇಳಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್. ಸ್ವಾಮಿ, ನಮ್ಮ ಕೆ.ಎಸ್‌.ನರಸಿಂಹಸ್ವಾಮಿಗಳ ಪದ್ಯದ ಶೈಲಿಯಲ್ಲಿ ಮಾತಾಡಿದ್ದೀರಲ್ಲ, ಅದನ್ನು ನಿಮಗೆ ಹೇಳಿಕೊಟ್ಟವರ್‍ಯಾರು?! ‘ಎಲ್ಲರ ಬಾಯಲಿ ಹಾಡೇ ಆದರೆ ಚಪ್ಪಾಳೆಗೆ ಜನವಿನ್ನೆಲ್ಲಿ? ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗಲು ಜನವೆಲ್ಲಿ?’ ಎಂದಿದ್ದಾರೆ ನಮ್ಮ ಕವಿ. ಆದರೆ ಹೆದ್ದಾರಿ ವಿಚಾರಕ್ಕೆ ನೀವಂದಿರುವುದು, ಹಿಂದಿನ ಬೆಂಚಿನ ಹುಡುಗರಾಡುವ ಮಾತಂತಿದೆ ಎಂಬುದು ನಿಮಗೆ ನೆನಪಿರಲಿ!
–ಜೆ.ಬಿ.ಮಂಜುನಾಥ, ಪಾಂಡವಪುರ

ಬರೀ ಬಂಡಿ ಓಡಿಸುವುದಕ್ಕೆ ಶುಲ್ಕವೇ?
ಬೆಂಗಳೂರು– ಮೈಸೂರು ದಶಪಥ ರಸ್ತೆಯಲ್ಲಿ ಕಾರು ಕೆಟ್ಟುನಿಂತು ಮೈಸೂರಿನ ದಂಪತಿ ಫಜೀತಿ ಅನುಭವಿಸಿದ್ದು (ಪ್ರ.ವಾ., ಮಾರ್ಚ್‌ 16) ಅಚ್ಚರಿಯೇ ಸರಿ. 118 ಕಿಲೊಮೀಟರುಗಳಷ್ಟು ದೊಡ್ಡದಾದ ದಶಪಥದಲ್ಲೂ ಸರಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇಲ್ಲವೆಂದರೆ ವಾಹನ ಸವಾರರು ನೀಡುವ ಟೋಲ್ ಬರೀ ಬಂಡಿ ಓಡಿಸುವುದಕ್ಕಾಗಿ ಪಡೆಯುವ ಶುಲ್ಕವೇ? ಇಷ್ಟುದೊಡ್ಡ ರಸ್ತೆಯಲ್ಲಿ ರಾತ್ರಿ ವಾಹನ ಸಂಚರಿಸುವಾಗ ಸೌಕರ್ಯಗಳ ಕೊರತೆಯಿಂದ ಜನ ರೋದಿಸುವಂತಾಗಿದೆ. ಮೂಲ ಸೌಕರ್ಯ, ತುರ್ತು ಚಿಕಿತ್ಸೆ, ರಾತ್ರಿ ಗಸ್ತು ಪಡೆಯಂತಹ ಕೊರತೆಗಳಿದ್ದಲ್ಲಿ ಟೋಲ್ ವಿಧಿಸುವುದು ಸರಿಯೇ? ಇನ್ನಾದರೂ ಹೆದ್ದಾರಿಯಲ್ಲಿ ಗಸ್ತುಪಡೆಯನ್ನು ನಿಯೋಜಿಸಿ, ದರೋಡೆಗೆ ಕಡಿವಾಣ ಹಾಕುವಂತಾಗಲಿ.
–ಬಾಲಕೃಷ್ಣ ಎಂ.ಆರ್., ಬೆಂಗಳೂರು

ಬೆಂಕಿ ಹಚ್ಚುವುದು ನಿಲ್ಲಲಿ, ಆರಿಸುವುದು ಹೆಚ್ಚಲಿ
ಕಾಳ್ಗಿಚ್ಚಿನ ಸುದ್ದಿ ಎಲ್ಲೆಲ್ಲೂ. ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗುತ್ತಾರೆ, ನಂದಿಸಲು ಸರಿಯಾದ ಉಪಕರಣಗಳ ಕೊರತೆ ಇದೆ ಎಂದೆಲ್ಲ ವರದಿಯಾಗುತ್ತಿದೆ. ಪಂಜಾಬ್‌, ಹರಿಯಾಣದ ರೈತರು ಹೊಲದ ಉಳಿಕೆಗಳಿಗೆ ಬೆಂಕಿ ಹಚ್ಚುವುದರ ಪರಿಣಾಮವಾಗಿಯೇ ದೆಹಲಿಯ ಹವೆ ಉಸಿರಾಡಲು ಲಾಯಕ್ಕಿಲ್ಲ ಎಂದು ನಿರ್ಧಾರವಾಗಿ ಅದೆಷ್ಟೋ ವರ್ಷಗಳಾದವು. ಈ ರಾಜ್ಯಗಳಲ್ಲಿನ ರೈತರಿಗೆ ಕೃಷಿ ಉಳಿಕೆಗಳನ್ನು ಸುಡದೆ ಕಾಂಪೋಸ್ಟ್ ಮಾಡಲು ತರಬೇತಿ, ವಿಶೇಷ ಪ್ಯಾಕೇಜುಗಳನ್ನೂ ನೀಡಲಾಗುತ್ತಿದೆ. ಕರ್ನಾಟಕದಲ್ಲಿ? ಇಲ್ಲಿಯೂ ಕೃಷಿ ಉಳಿಕೆಗಳನ್ನು ಅಪಾರವಾಗಿ ಸುಡಲಾಗುತ್ತಿದೆ. ಕಬ್ಬಿನ ರೌದಿಯನ್ನು ಸುಡುವುದಂತೂ ರೈತರಿಗೆ ಬಿಡಲಾರದ ಅಭ್ಯಾಸವಾಗಿ ಹೋಗಿದೆ. ಹೆಚ್ಚಿನ ರೈತರು ಹೊಲವನ್ನು ಒಮ್ಮೆ ಅಗ್ನಿಗರ್ಪಿಸಿಯೇ ಮುಂದಿನ ಉಳುಮೆ ಶುರು ಮಾಡುವುದು. ಹೊಲದ ಅಂಚಿನಲ್ಲಿ ಇರುವ ಎಲ್ಲಾ ರೀತಿಯ ಕಾಡುಗಿಡಗಳು, ಕಳೆಸಸ್ಯಗಳು ಸಂಪೂರ್ಣವಾಗಿ ಉರಿದು ನಾಶವಾಗುತ್ತವೆ. ಜಿಂಕೆ-ಮಂಗಗಳು ಬೆಂಕಿಗಾಹುತಿಯಾದರೆ
ಸುದ್ದಿಯಾಗುತ್ತದೆ. ಸೂಕ್ಷ್ಮ ಕೀಟಗಳು, ಪಾತರಗಿತ್ತಿ, ಇರುವೆ, ಗೆದ್ದಲು... ಇವೆಲ್ಲ ಸುಟ್ಟು ನಾಶವಾದರೆ ಸುದ್ದಿಯೂ ಆಗುವುದಿಲ್ಲ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೇಲಿಗುಂಟ ದೊಡ್ಡ ಪ್ರಮಾಣದಲ್ಲಿ ಬೆಂಕಿ ಇಡುತ್ತಿದ್ದರೂ ಕೇಳುವವರಿಲ್ಲ, ನಿಲ್ಲಿಸುವವರಿಲ್ಲ. ಪೇಟೆಯ ಅಂಚಿಗೆ, ರಸ್ತೆಪಕ್ಕಕ್ಕೆ ಹಸಿಕಸ, ಒಣಕಸ ಎರಡಕ್ಕೂ ಬೆಂಕಿ ತಗುಲಿದ್ದರೂ ಯಾವುದೇ ಅಧಿಕಾರಸ್ಥರು ಹಾದು ನೋಡುವುದಿಲ್ಲ. ಕಸಕ್ಕೆ ಬೆಂಕಿ ಇಡಬಾರದೆಂಬ ಕಾನೂನಿದೆ ಮತ್ತೆ!

ಎಲೆ ಉದುರುವ ಮುನ್ನ, ಬೇಸಿಗೆ ಆವರಿಸುವ ಮುನ್ನ ಜನರ ಮಧ್ಯೆ ಮಾಹಿತಿಯ ಸಂಚಾರ ಆಗಬೇಕು. ಹಳ್ಳಿ ಹಳ್ಳಿಗಳಲ್ಲಿ ಬೆಂಕಿ ಆರಿಸುವ ಪಡೆಗಳ ಸೃಷ್ಟಿ ಆಗಬೇಕು. ಆ ಪಡೆಗಳು ಹೊಲಗಳ ಸುತ್ತ ಆಗಾಗ್ಗೆ ಹಾದು, ಎಲ್ಲಿ ಬೆಂಕಿ ಇಡುವ ಸಾಧ್ಯತೆ ಇದೆಯೋ ಅಲ್ಲೆಲ್ಲ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕರಪತ್ರ, ಹಾಡು, ಬೀದಿನಾಟಕಗಳಿಂದ ಜನಜಾಗೃತಿಯ ಸಂದೇಶಗಳು ಹೋಗಬೇಕು. ಯಾರಾದರೂ ಬೆಂಕಿ ಇಟ್ಟರೆ ತಕ್ಷಣ ಆರಿಸುವ ಮತ್ತು ಸ್ಥಳೀಯ ಸರ್ಕಾರಕ್ಕೆ ತಿಳಿಸುವ ಕೆಲಸವಾಗಬೇಕು. ಬೆಂಕಿ ಹಚ್ಚುವ ಕೆಲಸ ನಿಲ್ಲಲಿ. ಬೆಂಕಿ ಆರಿಸುವ ಕೆಲಸಗಳು ಹೆಚ್ಚಲಿ. ಈ ಬಗ್ಗೆ ಸ್ಥಳೀಯ ಸರ್ಕಾರಗಳು ಕ್ರಮ ಕೈಗೊಳ್ಳಲಿ.
–ಶಾರದಾ ಗೋಪಾಲ, ಧಾರವಾಡ

ಶುಚಿ ಯೋಜನೆ: ಸಿಗಲಿ ಪುನರ್‌ಚಾಲನೆ
ಶಾಲಾ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ನೀಡುವ ಶುಚಿ ಯೋಜನೆ ಸ್ಥಗಿತಗೊಂಡಿರುವುದು ಬೇಸರದ ಸಂಗತಿ. ಈಗಂತೂ ಪರೀಕ್ಷೆಯ ಸಮಯ. ವಿದ್ಯಾರ್ಥಿನಿಯರು ಓದುವ ಒತ್ತಡದಲ್ಲಿ ಇರುತ್ತಾರೆ. ಮುಟ್ಟಾದಾಗ ಪ್ಯಾಡ್‌ಗಳು ಇಲ್ಲದಿದ್ದರೆ ಇನ್ನಷ್ಟು ಮುಜುಗರಕ್ಕೆ ಒಳಗಾಗುತ್ತಾರೆ ಮತ್ತು ಅವರಿಗೆ ಓದಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸಿ, ಸರ್ಕಾರವು ಕೂಡಲೇ ಶುಚಿ ಯೋಜನೆಗೆ ಪುನರ್‌ಚಾಲನೆ ನೀಡಲಿ.
–ಲಾವಣ್ಯ, ಪುತ್ತೂರು

ಶಿಕ್ಷಕ ವೃಂದಕ್ಕೆ ಎಚ್ಚರಿಕೆಯ ಮಾತು
ಶಿಕ್ಷಕರಿಗೆ ನೀತಿ ಸಂಹಿತೆ ಅವಶ್ಯಕ ಎಂಬುದನ್ನು ಆರತಿ ಪಟ್ರಮೆ ಅವರು ಸೂಕ್ತವಾಗಿ ವಿವರಿಸಿದ್ದಾರೆ (ಸಂಗತ, ಮಾರ್ಚ್‌ 13). ಶಿಕ್ಷಕರು ಮನಬಂದಂತೆ ವಸ್ತ್ರಗಳನ್ನು ಧರಿಸಿ ಬರುವುದರಿಂದ ವಿದ್ಯಾರ್ಥಿಗಳು ಅವರನ್ನು ನೋಡುವ ನೋಟವೇ ಬದಲಾಗುತ್ತದೆ. ಈ ಬಗ್ಗೆ ಲೇಖಕರು ನೀಡಿರುವ ಸೂಕ್ಷ್ಮವಾದ ಎಚ್ಚರಿಕೆಯ ಮಾತುಗಳನ್ನು ಶಿಕ್ಷಕ ವೃಂದ ಗಮನದಲ್ಲಿ ಇರಿಸಿಕೊಳ್ಳುವುದು ವಿಹಿತ.
–ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ

ನೆರವಿಗೆ ಮನವಿ
ನನ್ನ ಎಡಗಾಲಿಗೆ ಇತ್ತೀಚೆಗೆ ಪಾರ್ಶ್ವವಾಯು ಆಗಿದ್ದು, ಮೆದುಳಿಗೂ ತೊಂದರೆಯಾಗಿದೆ. ಹೀಗಾಗಿ, ನನಗೆ ಬೆಂಗಳೂರಿನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ 5 ಲಕ್ಷ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಮುಂದಿನ ಶಸ್ತ್ರಚಿಕಿತ್ಸೆಗೆ ₹ 14.75 ಲಕ್ಷ ರೂಪಾಯಿ ವೆಚ್ಚವಾಗುವುದೆಂದು ವೈದ್ಯರು ತಿಳಿಸಿದ್ದಾರೆ. ನನ್ನ ಮಗ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದಾನೆ, ಮಗಳು ಗೃಹಿಣಿ. ಇವರಿಬ್ಬರಿಗೂ ಅಷ್ಟೊಂದು ಹಣ ಭರಿಸಲು ತ್ರಾಣವಿಲ್ಲ. ದಾನಿಗಳು ದಯಮಾಡಿ ಸಹಾಯ ಮಾಡಬೇಕೆಂದು ಮನವಿ.

ನನ್ನ ಬ್ಯಾಂಕ್‌ ಖಾತೆ ವಿವರ: ಪಂಕಜಾಕ್ಷಿ, ಕೆನರಾ ಬ್ಯಾಂಕ್, ತುರುವೇಕೆರೆ ಶಾಖೆ, ಖಾತೆ ಸಂಖ್ಯೆ 0460101065119, IFSC: CNR0003553, ಮೊಬೈಲ್: 9141534348 ಗೂಗಲ್‌ ಪೇ: 9686513863
–ಪಂಕಜಾಕ್ಷಿ, ತುರುವೇಕೆರೆ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT