ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಆಚರಣೆ ಅರ್ಥಪೂರ್ಣವಾಗಿರಬೇಕು

Published 1 ಜನವರಿ 2024, 23:40 IST
Last Updated 1 ಜನವರಿ 2024, 23:40 IST
ಅಕ್ಷರ ಗಾತ್ರ

ಕನ್ನಡ ಮಾಧ್ಯಮ: ಇದೆ ತೊಡಕು

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ. ಹಾಗೂ ಹೀಗೂ ಕನ್ನಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಪಡೆದ ಜ್ಞಾನಿಗಳಿಗೆ ಹಿಂದಿ, ಇಂಗ್ಲಿಷ್ ಭಾಷಿಕರಿಗೆ ಇರುವ ಅನುಕೂಲ ಮತ್ತು ಅವಕಾಶಗಳು ಇಲ್ಲ. ಕೇಂದ್ರ ಸರ್ಕಾರವು ನಡೆಸುವ ಬಹುತೇಕ ಉದ್ಯೋಗ ನೇಮಕಾತಿ ಪರೀಕ್ಷೆಗಳು ಹಿಂದಿ ಜೊತೆಗೆ ಇಂಗ್ಲಿಷ್‌ನಲ್ಲಷ್ಟೇ ಇರುತ್ತವೆ. ವಿಜ್ಞಾನ, ತಂತ್ರಜ್ಞಾನದ ಉನ್ನತ ಶಿಕ್ಷಣವನ್ನು ನಮಗೆ ಇಂದಿಗೂ ಕನ್ನಡ ಮಾಧ್ಯಮದಲ್ಲಿ ಕೊಡಲು ಸಾಧ್ಯವಾಗಿಲ್ಲ. ಅಲ್ಲದೆ ಶಾಲಾ ಹಂತದಲ್ಲಿ ಕೊಡುತ್ತಿರುವ ಕನ್ನಡ ಮಾಧ್ಯಮದ ವಿಜ್ಞಾನ ಶಿಕ್ಷಣದ ಭಾಷೆಯೂ ಕಬ್ಬಿಣದ ಕಡಲೆಯಾಗಿದೆ. ಸರಳವಾದ ಭಾಷೆಯಲ್ಲಿಲ್ಲ.

ಇಂತಹ ಹತ್ತಾರು ತೊಡಕುಗಳಿವೆ. ಇವುಗಳನ್ನು ನಿವಾರಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟರೆ ಮಾತ್ರ ಕನ್ನಡ ಮಾಧ್ಯಮದ ಶಿಕ್ಷಣ ಸಹಜವಾಗಿ ಆಕರ್ಷಣೆ ಪಡೆಯುತ್ತದೆ. ಅಲ್ಲಿಯತನಕ ಕನ್ನಡ ಮಾಧ್ಯಮದ ಶಿಕ್ಷಣದ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ಹೆಚ್ಚಿನ ಪ್ರಯೋಜನ ಸಿಗಲಾರದು. ಈ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಬಲ ತುಂಬಬೇಕಾಗಿರುವುದು ಇಂದಿನ ಅಗತ್ಯ. 

-ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

ಆಚರಣೆ ಅರ್ಥಪೂರ್ಣವಾಗಿರಬೇಕು 

ಪ್ರತಿವರ್ಷ ಡಿಸೆಂಬರ್ 31ರ ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ವಿಶೇಷವಾಗಿ ಯುವಕ–ಯುವತಿಯರು ಉತ್ಸಾಹದಿಂದ ಸಕ್ರಿಯರಾಗಿಬಿಡುತ್ತಾರೆ. ಅರ್ಥಪೂರ್ಣ ಆಚರಣೆಗೆ ಯಾರದೂ ತಕರಾರಿಲ್ಲ. ಆದರೆ, ನಗರಗಳಿಂದ ಹಿಡಿದು ಸಣ್ಣಪುಟ್ಟ ಹಳ್ಳಿಗಳವರೆಗೂ ಬಾರ್, ಪಬ್, ರೆಸ್ಟೋರೆಂಟ್‌ಗಳ ಮುಂದೆ ಉದ್ದನೆಯ ಸರತಿಸಾಲುಗಳ ದೃಶ್ಯ, ನೂಕುನುಗ್ಗಲು ಚಿಂತೆಗೆ ಹಚ್ಚುವಂತಹ ಸಂಗತಿ.

ಮದ್ಯಸೇವನೆಯು ಕೆಲವೆಡೆ ಗಲಾಟೆ, ಘರ್ಷಣೆಗಳಿಗೆ, ಅಪಘಾತಗಳಿಗೂ ಕಾರಣವಾಗುವುದುಂಟು. ಪೊಲೀಸರು ಇದನ್ನೆಲ್ಲಾ ಹತೋಟಿಗೆ ತರಲು ಹರಸಾಹಸ ಮಾಡಬೇಕಾಗುತ್ತದೆ. ಯುವಪೀಳಿಗೆಯು ಸ್ವಯಂನಿಯಂತ್ರಣ ಮಂತ್ರ ಮರೆತಿರುವುದು ಸರಿಯಲ್ಲ. ಹಿಂದಿನ ವರ್ಷದ ತಮ್ಮ ತಪ್ಪು ವರ್ತನೆಗಳನ್ನು ಗುರುತಿಸಿಕೊಂಡು, ಹೊಸ ವರ್ಷದಲ್ಲಿ ಅವು ಮರುಕಳಿಸದಂತೆ ಪಣ ತೊಡುವುದು, ಗೆಳೆಯರು ಒಂದೆಡೆ ಸೇರಿ ಒಳ್ಳೆಯ ಸಂಗೀತ ಆಲಿಸುವುದು, ಸಿನಿಮಾ ನೋಡುವುದು, ಒಟ್ಟಿಗೆ ಊಟ ಮಾಡುವುದು, ಹರಟುವುದು ಇವೆಲ್ಲ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಬಲ್ಲವು.

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ನಾಮಫಲಕ: ಕನ್ನಡಕ್ಕೆ ಇರಲಿ ಪ್ರಾಧಾನ್ಯ

ಅಂಗಡಿ, ಮಳಿಗೆಯಂತಹ ವ್ಯಾಪಾರ ಸಂಸ್ಥೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಇದ್ದರಷ್ಟೇ ಸಾಲದು. ಇನ್ನುಳಿದ ಶೇಕಡ 40ರಷ್ಟಿರುವ ಅನ್ಯಭಾಷೆಯ ಅಕ್ಷರಗಳ ಗಾತ್ರಕ್ಕೆ ಹೋಲಿಸಿದಾಗ ಕನ್ನಡ ಅಕ್ಷರಗಳ ಗಾತ್ರವು ದೊಡ್ಡದಾಗಿ, ಪ್ರಧಾನವಾಗಿ ಇರಬೇಕು. ಈ ದಿಸೆಯಲ್ಲಿ ನಿಯಮಗಳನ್ನು ರೂಪಿಸಬೇಕು. ಆಗಲೇ ಸರ್ಕಾರವು ಕನ್ನಡಕ್ಕೆ ಮಾನ್ಯತೆಯನ್ನು ನೀಡಿದಂತೆ ಆಗುತ್ತದೆ.

-ಸಾಮಗ ದತ್ತಾತ್ರಿ, ಬೆಂಗಳೂರು

ಮರುವಾವತಿ ಇಲ್ಲವೆಂದರೆ ಅಧಿಕಾರವೂ ಇರದು!

ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಯು ಸಚಿವರಂತೆಯೇ ಸರ್ಕಾರದ ಅಧಿಕೃತ ಪ್ರವಾಸ ಕಾರ್ಯಕ್ರಮದ (ಟಿ.ಪಿ) ವೇಳಾಪಟ್ಟಿ ಹಾಕಿಕೊಂಡು ಪ್ರವಾಸ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕಾರ್ಯದರ್ಶಿ, ‘ಈ ಪ್ರಯಾಣದ ವೆಚ್ಚವನ್ನು ಸ್ವಂತ ಹಣದಿಂದಲೇ ಭರಿಸಿದ್ದೇನೆ’ ಎಂದು ಹೇಳಿದ್ದಾರೆ. ಸಚಿವರ ಆಪ್ತ ಕಾರ್ಯದರ್ಶಿಗೆ ಪ್ರಯಾಣ ಭತ್ಯೆಯನ್ನು ಸರ್ಕಾರದಿಂದ ಮರುಪಾವತಿ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದೂ ಹೇಳಿದ್ದಾರೆ. ಅಂದರೆ ಇದನ್ನು ಸರಳವಾಗಿ ಅರ್ಥೈಸುವುದಾದರೆ, ಅವರಿಗೆ ಸ್ವತಂತ್ರವಾಗಿ ಪ್ರಯಾಣ ಮಾಡಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸುವುದಕ್ಕಾಗಲೀ ಅಥವಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸುವುದಕ್ಕಾಗಲೀ ಅವಕಾಶ ಇಲ್ಲ ಎಂದಾಗುತ್ತದೆ. ಒಂದು ವೇಳೆ ಇದಕ್ಕೆ ಅವಕಾಶ ಇದ್ದಲ್ಲಿ ಸರ್ಕಾರಿ ಕೆಲಸದ ಪ್ರಯಾಣದ ವೆಚ್ಚಕ್ಕೆ ಏಕೆ ಮರುಪಾವತಿಗೆ ಅವಕಾಶವಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ.

-ಕೆ.ಎಂ.ನಾಗರಾಜು, ಮೈಸೂರು

ದುಡ್ಡಿಗೆ ಬೆಲೆ ಇಲ್ಲವೇ?

ದಿನಬೆಳಗಾದರೆ ಪತ್ರಿಕೆಗಳಲ್ಲಿ ಕೋಟಿ, ನೂರು ಕೋಟಿ, ಸಾವಿರ ಕೋಟಿ, ನಾಲ್ಕು ಸಾವಿರ ಕೋಟಿ, ನಲವತ್ತು ಸಾವಿರ ಕೋಟಿ ರೂಪಾಯಿ ಮೊತ್ತದ ಹಗರಣಗಳ ವಿಚಾರವೇ ಇರುತ್ತದೆ. ದುಡ್ಡಿಗೆ ಬೆಲೆ ಇಲ್ಲವೇ?

-ಎಸ್‌.ಎನ್‌. ಕೃಷ್ಣಮೂರ್ತಿ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT