ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸೌಹಾರ್ದ ಕಾಳಜಿಯ ಚಾಂದಪಾಷಾ ಮೇಷ್ಟ್ರು

76ನೇ ವಯಸ್ಸಿನಲ್ಲೂ ಕಾಲೇಜಿನಲ್ಲಿ ಉಪನ್ಯಾಸ; ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು
Last Updated 28 ನವೆಂಬರ್ 2020, 3:28 IST
ಅಕ್ಷರ ಗಾತ್ರ

‘ನಾನು ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಿ. ಆದರೆ, ಬೆಳೆದಿದ್ದು ಮಠ-ಮಂದಿರಗಳಲ್ಲಿ. ಬೆರೆತಿದ್ದು ಸರ್ವಧರ್ಮೀಯರ ಜೊತೆಗೆ. ಮುಸ್ಲಿಂ ಸ್ನೇಹಿತರು-ಸಂಬಂಧಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯ ಜಾತಿ-ಧರ್ಮದ ಆಪ್ತಮಿತ್ರರು ಇದ್ದಾರೆ. ಒಮ್ಮೆಯೂ ನಮ್ಮಲ್ಲಿ ವೈಮನಸ್ಸು ಮೂಡಿಲ್ಲ ಮತ್ತು ಇನ್ನೊಬ್ಬರಿಗೆ ಕೇಡು ಬಯಸಿಲ್ಲ. ಇದರಿಂದಲೇ ನಮ್ಮ ನಡುವೆ ಸಂಬಂಧ ಗಟ್ಟಿಯಾಗಿ ಉಳಿದಿದೆ’.

ಇದು ಮೇಷ್ಟ್ರು ಸೈಯದ್ ಚಾಂದ್ ಪಾಷಾ ಅವರ ಬದುಕಿನ ಸಂಕ್ಷಿಪ್ತ ವಿವರಣೆ. ವಯಸ್ಸು 76. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ವಾಸವಿರುವ ಅವರು ವೃದ್ಧಾಪ್ಯ ತಮಗೆ ಕಿಂಚಿತ್ತೂ ಬಾಧಿಸಿಯೇ ಇಲ್ಲ ಎಂಬಂತೆ ಚುರುಕಾಗಿ ಓಡಾಡುತ್ತಾರೆ. ಆಯಾಸ ತೋರಗೊಡದೇ ತಮ್ಮ ಜೀವನಗಾಥೆ ರಸವತ್ತಾಗಿ ವಿವರಿಸುತ್ತಾರೆ. ಯಾವುದೇ ಮುಚ್ಚುಮರೆಯಿಲ್ಲದೇ ತಮ್ಮ ಬದುಕನ್ನು ಕಟ್ಟಿಕೊಂಡ ಪರಿ ಹೇಳುತ್ತಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡು ಕಾಲೇಜಿನ ಉಪನ್ಯಾಸಕರಾಗುವವರಗೆ ಬಡ್ತಿ ಪಡೆದ ಪಾಷಾ ಅವರು ಸದ್ಯ ನಿವೃತ್ತಿ ಜೀವನ ನಡೆಸಿದ್ದಾರೆ. ಹಾಗಂತ ಅವರು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ‘ಶಿಕ್ಷಕರಿಗೆ ನಿವೃತ್ತಿ ಎಂಬುದು ಇಲ್ಲ. ಜೀವನಪೂರ್ತಿ ಅವರು ಕಲಿಯಬೇಕು ಮತ್ತು ಕಲಿಸಬೇಕು’ ಎಂಬ ಅಭಿಪ್ರಾಯ ಅವರದ್ದು.

ಈ ಕಾರಣ ಅವರು ಈಗಲೂ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಸಹಜ ಶೈಲಿಯ ಪಾಠ ಬೋಧನೆ ಅಲ್ಲದೇ ಆನ್‌ಲೈನ್‌ತರಗತಿಗಳನ್ನು ನಡೆಸುತ್ತಾರೆ. ವಿದ್ಯಾರ್ಥಿಗಳ ಪಾಲಿಗೆ, ಅವರು ಪ್ರೀತಿಯ ಚಾಂದ್ ಪಾಷಾ ಮೇಷ್ಟ್ರು.

ಬಸವಣ್ಣ ಸೇರಿದಂತೆ ಬಹುತೇಕ ಶರಣರ ವಚನಗಳನ್ನು ಪಟಪಟನೇ ಹೇಳುವ ಅವರು ಅವುಗಳ ಆರ್ಥ ಮತ್ತು ಸಂದೇಶಗಳನ್ನು ಸರಾಗವಾಗಿ ವಿವರಿಸುತ್ತಾರೆ. ಕುರಾನ್, ಬೈಬಲ್‌ನಲ್ಲಿನ ಅಂಶಗಳನ್ನು ಹೇಳಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರೇಪಿಸುತ್ತಾರೆ.

ಬಡ ಕುಟುಂಬದಲ್ಲಿ ಜನಿಸಿದ ನಿಮಗೆ ಈ ಎಲ್ಲಾ ಸಂಗತಿಗಳು ಹೇಗೆ ಜೊತೆಯಾದವು ಎಂದು ಪ್ರಶ್ನಿಸಿದರೆ, ‘ನನ್ನ ಬದುಕೇ ಒಂದು ಪವಾಡ’ ಎಂದು ನಗುತ್ತ ಉತ್ತರಿಸುತ್ತಾರೆ. ‘ಸದಾ ಹಸನ್ಮುಖಿಯಾಗಿ ಇರುವುದೇ ಯಶಸ್ವಿ ಜೀವನದ ರಹಸ್ಯ’ ಎನ್ನುವ ಅವರು ಸದಾ ನಗುವಿನಲ್ಲಿ ಇರಲು ಮತ್ತು ಇನ್ನೊಬ್ಬರ ಮೊಗದಲ್ಲಿ ಸಂತೋಷ ಕಾಣಲು ಬಯಸುತ್ತಾರೆ.

ಬಡತನದಲ್ಲಿ ಬದುಕು

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವಡಗೇರಿ ಗ್ರಾಮದ ಚಾಂದಸಾಬ್ ಮತ್ತು ಜೈನಭಿ ದಂಪತಿಗೆ ಜನಿಸಿದ ಸೈಯದ್ ಚಾಂದಪಾಷಾ ಅವರಿಗೆ ಮನೆಯಲ್ಲಿ ಅಲ್ಲದೇ ಸಂಬಂಧಿಕರು-ಪರಿಚಯಸ್ಥರ ಮೂಲಕ ಸೂಫಿ, ಸಂತರ ವಿಚಾರಗಳು ಪ್ರಭಾವ ಬೀರಿದವು. ಶರಣ ಸಂಸ್ಕೃತಿ, ಸೌಹಾರ್ದ ಮನೋಭಾವ, ಭಾವೈಕ್ಯದ ಪರಿಸರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾದವು.

ಕಿರಿಯ ವಯಸ್ಸಿನಲ್ಲೇ ತಂದೆ, ತಾಯಿ ಕಳೆದುಕೊಂಡ ಅವರು ವಡಗೇರಿ ಗ್ರಾಮದಲ್ಲಿ ಅಲ್ಲದೇ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಬೆಂಡರ ತಳ್ಳಳ್ಳಿ ಗ್ರಾಮ ಮತ್ತು ಇತರೆ ಊರುಗಳಲ್ಲಿ ಬೆಳೆದರು. ಗೌಡಪ್ಪಗೌಡ, ಹೂಗಾರ ಶಾಂತು, ಸಾಹುಕಾರ ಬಸಲಿಂಗ ಮುಂತಾದ ಗೆಳೆಯರು ಸಿಕ್ಕರು. ಬೆಳವಣಿಗೆ–ಪೋಷಣೆಗೆ ನೆರವಾದರು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊನ್ನಳ್ಳಿ ಮಠದ ಕಲ್ಯಾಣದಯ್ಯ ವೀರಘಂಟಯ್ಯ ಸ್ವಾಮೀಜಿಯವರ ಆಶ್ರಯದಲ್ಲಿ ಮಠದಲ್ಲೇ ಕೆಲ ವರ್ಷ ಉಳಿದರು. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರೆಸಿದರು. 10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಬಾಹ್ಯ ವಿದ್ಯಾರ್ಥಿಯಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದು ವಿಶೇಷ.

ಸ್ವಾಮೀಜಿಯವರ ಪ್ರೋತ್ಸಾಹ, ಸಹಕಾರದಿಂದ ಕನ್ನಡ ಮಾಸ್ತರರಾಗಿ ನೇಮಕಗೊಂಡು ಅವರು ವೃತ್ತಿಜೀವನ ಆರಂಭಿಸಿದರು. ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಾಗಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಬಾಲ್ಕಿ ತಾಲ್ಲೂಕಿನ ಡೊಣಗಾಪೂರ, ಬಸವಕಲ್ಯಾಣ, ಸುರಪುರ ಮುಂತಾದ ಊರುಗಳಲ್ಲಿ ಸೇವೆ ಸಲ್ಲಿಸಿದರು.

ನಿವೃತ್ತಿ ನಂತರ ಮತ್ತೆ ಉಪನ್ಯಾಸ

2005ರ ಜನವರಿ 31ರಂದು ಅವರು ಸುರಪುರ ಪಿಯು ಬಾಲಕರ ಕಾಲೇಜಿನಿಂದ ನಿವೃತ್ತರಾದ ಸಂದರ್ಭದಲ್ಲಿ ಅವರಿಗೆ ಬೀಳ್ಕೊಡಲು ವಿದ್ಯಾರ್ಥಿಗಳು 8ಕ್ಕೂ ಹೆಚ್ಚು ವಾಹನಗಳನ್ನು ಮಾಡಿಕೊಂಡು ಬಂದಿದ್ದರು. ಅವರ ಮನೆಯವರೆಗೂ ಹೋಗಿ ಬೀಳ್ಕೊಟ್ಟಿದ್ದರು.

ಚಾಂದಪಾಷಾ ಅವರ ಜೀವನಾನುಭವ ಮತ್ತು ಭಾಷಾ ಪರಿಣತಿ ಅರಿತ ಶಹಾಪುರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಕಾಲೇಜಿನ ಆಡಳಿತಾಧಿಕಾರಿ ಭೀಮನಗೌಡ ಇಟಗಿಯವರು ತಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕನ್ನಡ ವಿಷಯ ಬೋಧಿಸಲು ಕೋರಿದರು. ಅವರ ಮನವಿಗೆ ಒಪ್ಪಿ 2005 ಜೂನ್ 16ರಿಂದ ಆ ಕಾಲೇಜಿನಲ್ಲಿ ಪುನಃ ಉಪನ್ಯಾಸಕರಾಗಿ ಬೋಧಿಸತೊಡಗಿದರು.

ಉಪನ್ಯಾಸಕ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯಾದರ್ಶಿ ಮತ್ತು ಬಸವ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪಾಷಾ ಅವರಿಗೆ ಆಪ್ತರಲ್ಲಿ ಒಬ್ಬರಾದ ಶಹಾಪುರದ ಸಾಹಿತಿ ರಾಘವೇಂದ್ರ ಹಾರಣಗೇರಾ ಮತ್ತು ಕೆಲ ಶಿಷ್ಯಂದಿರು ಜೊತೆಗೂಡಿ ಪಾಷಾ ಅವರ ಕುರಿತು ‘ಸಮನ್ವಯ ಚೇತನ’ ಎಂಬ ಗ್ರಂಥ ಹೊರ ತಂದಿದ್ದಾರೆ. ಸಾಹಿತಿ ಪ್ರೊ. ಕಾಶೀನಾಥ ಅಂಬಲಗಿ ಅವರ ಮುನ್ನುಡಿ ಮತ್ತು ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಅವರ ಬೆನ್ನುಡಿ ಹೊಂದಿರುವ ಈ ಗ್ರಂಥದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ಶಿಷ್ಯಂದಿರು ಪಾಷಾ ಅವರೊಂದಿಗಿನ ಒಡನಾಟ, ನೆನಪುಗಳನ್ನು ಹಂಚಿಕೊಂಡಿದ್ದಾರೆ.

ರಾಘವೇಂದ್ರ ಹಾರಣಗೇರಾ ಅವರು ತಮ್ಮ ಸಂಪಾದಕೀಯ ನುಡಿಯಲ್ಲಿ ಈ ಗ್ರಂಥ ಯಾಕೆ ಮಹತ್ವದ್ದು ಎಂಬುದನ್ನು ವಿವರಿಸಿದ್ದಾರೆ. ಪ್ರಮುಖ ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ, ಬಂಜಗೆರೆ ಜಯಪ್ರಕಾಶ್, ರಹಮತ್ ತರೀಕೆರೆ ಅವರದ್ದು ಅಲ್ಲದೇ ನಾಡಿನ ವಿವಿಧ ಪ್ರದೇಶಗಳ ಬರಹಗಾರರ ಲೇಖನಗಳಿವೆ.

ಮಾನವೀಯ ಸಂಬಂಧ ಮುಖ್ಯ

‘ಜಾತಿ, ಮತ, ಪಂಥ, ಧರ್ಮ ಎಂಬುದಕ್ಕಿಂತ ಮಾನವೀಯ ಸಂಬಂಧ ದೊಡ್ಡದು. ಎಲ್ಲರೂ ಕಾಳಜಿ, ಕಳಕಳಿ, ಪ್ರೀತಿ, ಮಮತೆ ಮತ್ತು ಸಹಕಾರ ತೋರಿದ್ದರಿಂದಲೇ ನನಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ತಾರತಮ್ಯಕ್ಕಿಂತ ಕರುಣೆ ಮತ್ತು ನೆರವಿನ ಮನೋಭಾವ ಮುಖ್ಯವಾಗಬೇಕು’ ಎಂದು ಚಾಂದ ಪಾಷಾ ಹೇಳುತ್ತಾರೆ.

‘ಸರ್ವಧರ್ಮ ಸಹಿಷ್ಣುತೆ, ಸೌಹಾರ್ದತೆ ಮತ್ತು ಬಾಂಧವ್ಯ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಚಾಂದ ಪಾಷಾ ಅಂಥವರು ಆಪ್ತರಾಗುತ್ತಾರೆ. ಜಾತಿ, ಧರ್ಮ, ಮತ ಎಂಬ ಸಂಕುಚಿತತೆಗೆ ಒಳಗಾಗದೇ ಎಲ್ಲರೊಂದಿಗೆ ಬೆರೆತು, ಕಲಿತು ಮತ್ತು ನಲಿದು ಬದುಕುತ್ತಿರುವ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ರಾಘವೇಂದ್ರ ಹಾರಣಗೇರಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT