ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕನಾಥ ಶಿಂಧೆ, ಠಾಕ್ರೆ ಗರಡಿಯಿಂದ ಸಿ.ಎಂ ಹುದ್ದೆವರೆಗೆ...

ಉದ್ಧವ್ ವಿರುದ್ಧ ದಂಗೆ ರಾಜ್ಯದ ಚುಕ್ಕಾಣಿ ಏಕನಾಥಗೆ
Last Updated 30 ಜೂನ್ 2022, 16:25 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಠಾಣೆಯಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದ ದಿನಗಳು ಹಾಗೂ ಇಂದು ಮುಖ್ಯಮಂತ್ರಿ ಗಾದಿವರೆಗಿನ ಹಾದಿಯನ್ನು ಏಕನಾಥ ಶಿಂಧೆ ಅವರು ಹಂತ ಹಂತವಾಗಿ ಏರಿಬಂದಿದ್ದಾರೆ.ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಹಾಗೂ ಠಾಣೆ ಭಾಗದಲ್ಲಿ ಪಕ್ಷದ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಆನಂದ್ ದಿಘೆ ಅವರ ಗಾಢ ಪ್ರಭಾವಕ್ಕೆ ಒಳಗಾಗಿ ಪಕ್ಷ ಸೇರಿದ್ದ ಶಿಂಧೆ ಅವರು ಠಾಕ್ರೆ ಅವರ ಪುತ್ರ ಉದ್ಧವ್ ವಿರುದ್ಧವೇ ದಂಗೆ ಎದ್ದು, ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ದಿಘೆ ಅವರ ಜೀವನ ಕುರಿತ ‘ಧರ್ಮವೀರ್–ಮುಕ್ಕಂ ಪೋಸ್ಟ್ ಠಾಣೆ’ ಹೆಸರಿನ ಚಿತ್ರವು ಬಿಡುಗಡೆಯಾಗಿ 45 ದಿನಗಳು ಕಳೆಯುವಷ್ಟರಲ್ಲಿ ಶಿಂಧೆ ಅವರ ಅಭಿಲಾಷೆ ಏನಾಗಿತ್ತು ಎಂಬುದು ಸ್ಪಷ್ಟಗೊಂಡಿದೆ. ‘ದಿಘೆ ಅವರು ಠಾಣೆಯ ಬಾಳಾ ಠಾಕ್ರೆ’ ಎಂದೇ ಹೆಸರಾಗಿದ್ದವರು. ಪಕ್ಕದ ಪಾಲ್ಘಾರ್, ರಾಯಗಡ ಜಿಲ್ಲೆಗಳಲ್ಲೂ ಅವರ ಪ್ರಭಾವಳಿ ಇತ್ತು. ಗಡ್ಡಧಾರಿಯಾಗಿ, ಹಣೆಗೆ ತಿಲಕ ಇಟ್ಟು, ಬಿಳಿ ಬಣ್ಣದ ಉಡುಪು ಧರಿಸುವ ಶಿಂಧೆ ಅವರು ದಿಘೆ ಅವರಂತೆಯೇ ಕಾಣಿಸುತ್ತಾರೆ.

ಸತಾರಾ ಜಿಲ್ಲೆಯ ಮರಾಠಿ ಮನೆತನಕ್ಕೆ ಸೇರಿದ ಶಿಂಧೆ 1964ರ ಫೆ. 9ರಂದು ಜನಿಸಿದರು. ಪದವಿ ಪಡೆಯುವ ಮುನ್ನವೇ ಶಿಕ್ಷಣಕ್ಕೆ ವಿದಾಯ ಹೇಳಿದರು.ಮರಾಠಿ ಅಸ್ಮಿತೆ ಮತ್ತು ಹಿಂದುತ್ವದ ಉದ್ದೇಶ ಹೊಂದಿದ್ದ ಶಿವಸೇನಾವನ್ನು 1980ರಲ್ಲಿ ಸೇರಿದರು. ಮುಂಬೈನ ಕಿಸಾನ್ ನಗರದ ಶಾಖಾ ಪ್ರಮುಖ ಹುದ್ದೆಗೆ ಶಿಂಧೆ ನೇಮಕವಾದರು. ಹಲವು ಚಳವಳಿಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು.

1985ರಲ್ಲಿ ಮಹಾರಾಷ್ಟ್ರ–ಕರ್ನಾಟಕ ಗಡಿ ಹೋರಾಟದಲ್ಲಿ ಭಾಗಿಯಾಗಿದ್ದರು. 1997ರಲ್ಲಿ ಠಾಣೆ ಪುರಸಭೆಗೆ ಚುನಾಯಿತರಾದರು. ಠಾಣೆಯ ಜಿಲ್ಲೆಯ ಕೋಪರಿ–ಪಾಚಪಾಖಾಡಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆರಿಸಿಬಂದರು. ಇವರ ಪುತ್ರ ಹಾಗೂ ವೈದ್ಯ ಶ್ರೀಕಾಂತ್ ಶಿಂಧೆ ಅವರು ಕಲ್ಯಾಣ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ.

2014ರಲ್ಲಿ ಕೆಲವು ಸಮಯ ವಿರೋಧ ಪಕ್ಷದ ನಾಯಕರಾಗಿದ್ದ ಶಿಂಧೆ, ಸರ್ಕಾರ ರಚನೆಯಾದಾಗ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ನೇಮಕವಾದರು. ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನೂ ನೋಡಿಕೊಳ್ಳುತ್ತಿದ್ದರು.

ಶಿಂಧೆ ಅವರು ಫಡಣವೀಸ್ ಅವರ ಕನಸಿನ ಯೋಜನೆಯಾದ ಸಮೃದ್ಧಿ ಕಾರಿಡಾರ್ (ಮುಂಬೈ–ನಾಗ್ಪುರ ಸೂಪರ್ ಕಮ್ಯುನಿಕೇಷನ್ ಹೈವೇ) ಕಾರ್ಯಗತಗೊಳಿಸುತ್ತಿದ್ದರು. ಮುಂಬೈ–ಪುಣೆ ಹೆದ್ದಾರಿ ಅಗಕಲೀಕರಣ ಕಾರ್ಯವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದರು. ನಗರಾಭಿವೃದ್ಧಿ ಸಚಿವರಾಗಿ ನೇಮಕವಾದ ಬಳಿಕ ಬಾಕಿಯಿದ್ದ ಹಲವು ಯೋಜನೆಗಳಿಗೆ ಚುರುಕು ಮುಟ್ಟಿಸಿದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT