ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಉಳಿಸುವ ನಾಯಕ ಎಲ್ಲಿದ್ದಾನೆ?

ರಾಹುಲ್: ಸೌಮ್ಯದೈತ್ಯನ ಅನುಕರಣೆ ಅಥವಾ ಸರ್ವಾಧಿಕಾರದ ಮಾರ್ಗ
Last Updated 6 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಣಿಶಂಕರ್ ಅಯ್ಯರ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನಂಬಿಕಸ್ಥ ಸ್ನೇಹಿತರಾಗಿದ್ದರು. ರಾಜೀವ್ ನೇತೃತ್ವದ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರೂ ಆಗಿದ್ದರು. ಈಗಿನ ‘ಹೈಕಮಾಂಡ್’ ಅಯ್ಯರ್ ಅವರನ್ನು ನಿರ್ಲಕ್ಷಿಸಿದೆ. ಅಯ್ಯರ್ ಅವರು ರಾಹುಲ್ ಗಾಂಧಿ ಅವರನ್ನು ಕಿಂಗ್ ಲಿಯರ್‌ಗೆ ಹೋಲಿಸಿದ್ದರು. ಈ ಕಿಂಗ್‌ ಲಿಯರ್, ತನಗೆ ಮೋಸ ಮಾಡಿದ ಮಕ್ಕಳನ್ನು ಬಹಳ ಪ್ರೀತಿಸಿದ್ದ, ತನ್ನನ್ನು ಅಪಾರವಾಗಿ ಪ್ರೀತಿಸಿದ್ದವರನ್ನು ಶಿಕ್ಷಿಸಿದ್ದ! ರಾಹುಲ್ ಅವರು ಕಿಂಗ್ ಲಿಯರ್‌ಗಿಂತಲೂ, ಯಾವಾಗಲೂ ಅನುಮಾನದಿಂದ ಇರುವ ಡೆನ್ಮಾರ್ಕ್‌ನ ಯುವರಾಜ ಹ್ಯಾಮ್ಲೆಟ್‌ನನ್ನು ಹೆಚ್ಚು ಹೋಲುತ್ತಾರೆ ಎಂದು ನಾನು ಹಿಂದೊಂದು ಬರಹದಲ್ಲಿ ವಾದಿಸಿದ್ದೆ.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ರಾಹುಲ್‌ ಅವರು ಈಗ ಕೆಲವು ಸಂದರ್ಭಗಳಲ್ಲಿ ಮಾತ್ರ ಹಿಂದೇಟು ಹಾಕುವ, ತಾತ್ವಿಕನಂತೆ ವರ್ತಿಸುವ ಹ್ಯಾಮ್ಲೆಟ್‌ನಂತೆ ಕಾಣುತ್ತಿಲ್ಲ. ಬದಲಿಗೆ, ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗದ ಹಾಗೂ ಯಾವಾಗಲೂ ಗೊಂದಲದಿಂದ ಇರುವ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ರಾಹುಲ್ ಅವರಿಗೆ ಯಾವುದೇ ದೃಢ ನಿರ್ಧಾರಗಳನ್ನು ಕೈಗೊಳ್ಳಲು ಆಗುವುದಿಲ್ಲ ಎಂದು ಅವರ ವಿರೋಧಿಗಳು ಹೇಳುತ್ತಾರೆ. ಇದು ಬಿಜೆಪಿಯ ಪಾಲಿಗೆ ವರವಾಗಿ ಪರಿಣಮಿಸಿದೆ. ಬಿಜೆಪಿಯ ಪರಮೋಚ್ಚ ನಾಯಕ ನರೇಂದ್ರ ಮೋದಿ ಅವರು ಕಾಂಗ್ರೆಸ್ಸನ್ನು ನಾಶ ಮಾಡಲು ಏಕ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ.

ಮೋದಿ ಅವರಿಗೆ ಈಗ ತೊಂದರೆ ತೆಗೆದುಕೊಳ್ಳುವ ಅಗತ್ಯ ಇರಲಿಕ್ಕಿಲ್ಲ. ಕಾಂಗ್ರೆಸ್ ಎಂಬ ಹಳೆಯ ಪಕ್ಷವು ತಾನಾಗಿಯೇ ವಿಘಟನೆ ಹೊಂದಿ, ಕುಸಿಯಬಹುದು. ತನ್ನ ಉದಾತ್ತ ಮೌಲ್ಯಗಳನ್ನು ಕೈಬಿಟ್ಟಿರುವ, ಉದಾರವಾದಿ ನಿಲುವನ್ನು ತೊರೆದಿರುವ, ಕಾರ್ಯಕರ್ತರು ಒಂದು ವಂಶಕ್ಕೆ ತಮ್ಮನ್ನು ತಾವು ಅಡ ಇರಿಸಿಕೊಂಡಿರುವ ಪಕ್ಷವೊಂದು ಉಳಿದುಕೊಳ್ಳುವ ಅರ್ಹತೆಯನ್ನು ಹೊಂದಿದೆಯೇ?

ಖ್ಯಾತ ಇತಿಹಾಸಕಾರ ಹಾಗೂ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರು ಈಚೆಗೆ ಒಂದು ಅಂಕಣ ಬರಹ ಬರೆದಿದ್ದರು. ಇದು ಪ್ರಕಟವಾಗಿದ್ದು, ಸಕ್ರಿಯ, ಪೂರ್ಣಾವಧಿಯ ಅಧ್ಯಕ್ಷರೊಬ್ಬರು ಆಯ್ಕೆಯಾಗಬೇಕು ಎಂದು ಆಗ್ರಹಿಸಿ 23 ಜನ ಕಾಂಗ್ರೆಸ್ಸಿಗರು ಪತ್ರ ಬರೆದ ನಂತರ. ರಾಜಮೋಹನ ಗಾಂಧಿ ಅವರು ತಾವು ಇತಿಹಾಸಕಾರ ರಾಮಚಂದ್ರ ಗುಹಾ ಅವರ ಅಭಿಪ್ರಾಯವನ್ನು ಒಪ್ಪುತ್ತಿಲ್ಲ ಎಂದು ಹೇಳಿದರು. ರಾಹುಲ್ ಅವರು ಏಕಾಂಗಿಯಾಗಿ ಮೋದಿ ಹಾಗೂ ಅವರ ಸರ್ವಾಧಿಕಾರಿ ನಡೆಗೆ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ರಾಜಮೋಹನ ಗಾಂಧಿ ಬರೆದಿದ್ದರು.

ಆ ಮಾತಿನಲ್ಲಿ ನಿಜ ಇದ್ದಿರಬಹುದು. ಆದರೆ ರಾಹುಲ್ ಅವರು ಸರಿಯಾದ ಯೋಜನೆ ಅಥವಾ ಕಾರ್ಯತಂತ್ರವನ್ನು ರೂಪಿಸಿಕೊಳ್ಳದೆಯೇ, ಎಲ್ಲ ಕಡೆಗಳಿಂದಲೂ ನಿಂತುಕೊಂಡು, ಮೋದಿ ಅವರ ವಿರುದ್ಧ ಒಂದಾದ ನಂತರ ಇನ್ನೊಂದರಂತೆ ಗುಂಡು ಹಾರಿಸುತ್ತ ಇದ್ದಾರೆ. ಈ ರೀತಿ ಗುಂಡಿನ ಸುರಿಮಳೆಗೈಯುವುದರಿಂದ ಯಾವ ಯುದ್ಧವನ್ನೂ ಗೆಲ್ಲಲು ಆಗುವುದಿಲ್ಲ. ರಾಹುಲ್ ಅವರು ಒಂದು ಸಾಂಸ್ಥಿಕ ವ್ಯವಸ್ಥೆಯ ಮೂಲಕ ತಮ್ಮ ಯುದ್ಧವನ್ನು ಮುನ್ನಡೆಸಬೇಕು. ಅಂದರೆ, ರಾಹುಲ್ ಅವರು ಈಗ ನಾವಿಕನಿಲ್ಲದ ದೋಣಿಯಂತೆ ಆಗಿರುವ ಕಾಂಗ್ರೆಸ್ಸಿನ ಮುಂದಾಳತ್ವ ವಹಿಸಿಕೊಂಡು ಬಿಜೆಪಿ ಹಾಗೂ ಅದರ ಬಲಶಾಲಿ, ಜನಪ್ರಿಯ ನಾಯಕ ಮೋದಿ ಅವರನ್ನು ಬಲಹೀನಗೊಳಿಸಬೇಕು. ರಾಹುಲ್ ಅವರು ಪಕ್ಷವನ್ನು ಬದ್ಧತೆಯಿಂದ, ದೃಢ ಮನಸ್ಸಿನಿಂದ ಮುನ್ನಡೆಸಬೇಕು.

ರಾಹುಲ್‌ ಅವರಿಗೆ ನೆನಪಿಸಿಕೊಡಲು ಸೂಕ್ತವಾದ ಇಟಲಿಯ ಗಾದೆಯೊಂದು ಇದೆ. ‘ಯಶಸ್ಸು ಕಾಣಬೇಕು ಎಂದಾದರೆ, ತುಂಬಾ ಒಳ್ಳೆಯವರಾಗಿರಬಾರದು’ ಎಂದು ಆ ಗಾದೆ ಹೇಳುತ್ತದೆ. ನೆಪೋಲಿಯನ್ ಜೊತೆ ಮಾತನಾಡುತ್ತಿದ್ದಾಗ ಎಮರ್ಸನ್ ಒಂದು ವಿಚಾರ ಹೇಳಿದ್ದ. ‘ಒಂದು ಮಿತಿಯೊಳಗೆ, ಒಳ್ಳೆಯ ಗುಣಗಳನ್ನು ತ್ಯಜಿಸುವುದು ಒಳ್ಳೆಯದು’ ಎಂದಿದ್ದ. ಮನುಷ್ಯನ ಗುರಿ ಸಾಧಿಸಲು ಅಡ್ಡಿಯಾಗುವ ಭಾವನೆಗಳನ್ನು ನೆಪೋಲಿಯನ್ ಪಕ್ಕಕ್ಕೆ ಇರಿಸಿದ್ದ. ನೆಪೋಲಿಯನ್ ತಾನು ಯೋಚಿಸುವಷ್ಟೇ ವೇಗವಾಗಿ ಕ್ರಿಯಾಶೀಲ ಕೂಡ ಆಗುತ್ತಿದ್ದ.

ರಾಜಕಾರಣ ಎನ್ನುವ ಕುಟಿಲ ತಂತ್ರಗಳ ಕಣದಲ್ಲಿ ಹೋರಾಟ ನಡೆಸುವಾಗ, ಕ್ಷಮಿಸಲು ಸಿದ್ಧರಿರದವರ ಜೊತೆ ಈಜುವಾಗ ರಾಹುಲ್‌ ಅವರು ಪಾರ್ಟ್‌ಟೈಮ್‌ ರಾಜಕಾರಣಿಯಂತೆ ಆರಾಮವಾಗಿ ಇರಲು ಆಗುವುದಿಲ್ಲ. ರಾಹುಲ್ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರಂತೆ ಸರ್ವಾಧಿಕಾರದ ಮಾರ್ಗವನ್ನು ಅನುಸರಿಸಬೇಕು ಅಥವಾ ಪಂಡಿತ್ ಜವಾಹರಲಾಲ್ ನೆಹರೂ ಅವರಂತೆ ಸೌಮ್ಯದೈತ್ಯನಾಗಿ ಪರಿವರ್ತನೆ ಕಂಡುಕೊಳ್ಳಬೇಕು. ಇದು ಸಾಧ್ಯವಾಗದೆ ಇದ್ದರೆ ರಾಹುಲ್ ಅವರು ತಮ್ಮ ತಾಯಿಯ ಜೊತೆ ಪಕ್ಷದಿಂದ ಹೊರ ನಡೆದು, ನೈಜ ಚುನಾವಣೆಯ ಮೂಲಕ ಪಕ್ಷಕ್ಕೆ ನಾಯಕನೊಬ್ಬ ಸಿಗುವಂತೆ ನೋಡಿಕೊಳ್ಳಬೇಕು.

ದುರ್ಬಲಗೊಂಡು, ಕೊನೆಗೆ ವಿಫಲ ಕೂಡ ಆದ ಕಾಂಗ್ರೆಸ್ಸಿನ ಒಳಗಿನ ಬಂಡಾಯದ ಕುರಿತು ಒಂದೆರಡು ಮಾತುಗಳನ್ನು ಆಡಬೇಕು. ಈ ಬಂಡಾಯವು ಅತೃಪ್ತಿಯ ರೂಪದಲ್ಲಿ ಈಗಲೂ ಹೊಗೆಯಾಡುತ್ತಿರುವಂತೆ ತೋರುತ್ತಿದೆ. ಅರಮನೆಗಳಲ್ಲಿ ನಡೆಯುವ ಕ್ರಾಂತಿಗಳು ಅರೆಬೆಂದ ರೀತಿಯಲ್ಲಿ ಇರಬಾರದು ಹಾಗೂ ಅವು ವಿಫಲಗೊಳ್ಳಲು ಕೂಡ ಅವಕಾಶ ನೀಡಬಾರದು ಎಂಬುದನ್ನು ಹೈಕಮಾಂಡ್‌ ಅನ್ನು ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದವರು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ರಾಜನನ್ನು ಮುಗಿಸಲು ಅಥವಾ ನಿರ್ದಯವಾಗಿ ಅವನನ್ನು ಸಿಂಹಾಸನದಿಂದ ಕೆಳಗೆ ಇಳಿಸಲು ಸಾಧ್ಯವಾಗದೇ ಇದ್ದರೆ, ಆತನ ಪರಮಾಧಿಕಾರ ವನ್ನು ಪ್ರಶ್ನಿಸುವ ಕೆಲಸವನ್ನು ಬಂಡಾಯ ನಾಯಕರು ಮಾಡಬಾರದು. ಕ್ರಾಂತಿ ವಿಫಲಗೊಂಡರೆ, ದಂಗೆಗೆ ಮುಂದಾದವರನ್ನು ಮುಗಿಸುವುದು ಸಾಮಾನ್ಯ. ಅಥವಾ ಅವರನ್ನು ಗಡಿಪಾರು ಮಾಡಿ, ಇತರರಿಗೆ ಒಂದು ಪಾಠ ಎಂಬಂತೆ ಅವರನ್ನು ಬಿಂಬಿಸಲಾಗುತ್ತದೆ. ಇಂತಹ ನಿದರ್ಶನಗಳು ಇತಿಹಾಸದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಬಂಡೆದ್ದವರಲ್ಲಿ ಹಲವರನ್ನು ಈಗಾಗಲೇ ಪಕ್ಕಕ್ಕೆ ತಳ್ಳಿ ಆಗಿದೆ.

ಕಾಂಗ್ರೆಸ್ ಎಂಬುದು ಒಂದು ಬಹುದೊಡ್ಡ ಪರಂಪರೆ ಹಾಗೂ ಉಳಿಸಿಕೊಳ್ಳಬೇಕಾದ ಆಸ್ತಿ. ಅದರ ಉಳಿವಿಗಾಗಿ ಹೋರಾಟ ನಡೆಸುವುದರಲ್ಲಿ ಅರ್ಥವಿದೆ. ದೇಶದಸ್ವಾತಂತ್ರ್ಯಕ್ಕಾಗಿ ಆ ಪಕ್ಷ ನಡೆಸಿದ ಸುದೀರ್ಘ ಹೋರಾಟದ ಇತಿಹಾಸ; ಗಾಂಧೀಜಿ, ಪಟೇಲ್, ಬೋಸ್, ತಿಲಕ್, ಗೋಖಲೆ ಮತ್ತು ಇತರ ಅನೇಕರು ಆ ಪಕ್ಷದ ಉಸಿರಾಗಿಸಿರುವ ಸಂಸ್ಕೃತಿ ಹಾಗೂ ಮೌಲ್ಯಗಳು ದೇಶದ ಸಾಮೂಹಿಕ ಪ್ರಜ್ಞೆಯೊಳಗೆ ಮಿಳಿತಗೊಂಡಿವೆ ಕೂಡ. ಪಕ್ಷವು ತನ್ನ ಭವ್ಯ ಇತಿಹಾಸದ ಕಡೆ ತಿರುಗಿ ನೋಡಬೇಕು. ಪಕ್ಷದಲ್ಲಿ ಇದ್ದ ನೈಜ ಹಾಗೂ ಚೈತನ್ಯಶಾಲಿ ಆಂತರಿಕ ಪ್ರಜಾತಂತ್ರವನ್ನು ನೆನಪಿಸಿಕೊಳ್ಳಬೇಕು. ಪಕ್ಷವನ್ನು ತನ್ನ ಜೊತೆ ಮುನ್ನಡೆಸುವ ಧೈರ್ಯ ಇರುವ, ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತವನ್ನು ಪಾಲಿಸುವ, ಚರ್ಚೆ ಹಾಗೂ ಸಂವಾದಗಳಲ್ಲಿ ನಂಬಿಕೆ ಇರುವ ನಾಯಕನನ್ನು ಪಕ್ಷ ಆಯ್ಕೆ ಮಾಡಿಕೊಳ್ಳಬೇಕು.

ಆದರೆ, ಸದ್ಯಕ್ಕೆ ಸಮಯ ಬಹಳ ಅಮೂಲ್ಯ. ಬಂಡಾಯಗಾರ ಅಥವಾ ವಂಶಪಾರಂಪರ್ಯ ವ್ಯವಸ್ಥೆಯ ಪ್ರತಿನಿಧಿಯೊಬ್ಬ ಪಕ್ಷದ ಮೇಲೆ ಬಲವಾದ ಹಿಡಿತ ಸಾಧಿಸಬೇಕು. ಪಕ್ಷವು ಹೋಳಾಗದಂತೆ ಅಥವಾ ಅದು ಕೊಚ್ಚಿಕೊಂಡು ಹೋಗದಂತೆ ಹಿಡಿದುಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ, ಕಾಲ ಮಿಂಚಿಹೋಗಬಹುದು.

ಅಮೆರಿಕದ ಮಾಜಿ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸ್‌ವೆಲ್ಟ್‌ ಅವರು ಒಂದು ಮಾತು ಹೇಳಿದ್ದರು: ‘ಬಂದರನ್ನು ತಲುಪಲು ನಾವು ತೇಲಿಕೊಂಡು ಮುಂದೆ ಹೋಗಬೇಕು. ತೇಲಿಕೊಂಡು ಹೋಗಬೇಕು, ಲಂಗರು ಹಾಕಿಕೊಂಡು ಕುಳಿತಿರುವುದಲ್ಲ. ತೇಲಿಕೊಂಡು ಹೋಗಬೇಕು, ಕೊಚ್ಚಿಹೋಗುವುದಲ್ಲ’. ಅದೆಲ್ಲ ಸರಿ, ಆದರೆ ಹಡಗಿನ ಕ್ಯಾಪ್ಟನ್ ಎಲ್ಲಿದ್ದಾರೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT