ಶುಕ್ರವಾರ, ಅಕ್ಟೋಬರ್ 23, 2020
22 °C
ಬಾದಾಮಿ ಸ್ಮಾರಕಗಳ ಪ್ರವಾಸದ ವೇಳೆ ಪ್ರವಾಸಿಗರಿಗೆ ಜಲಪಾತಗಳ ವೀಕ್ಷಣೆಯ ಬೋನಸ್

PV Web Exclusive | ಚಾಲುಕ್ಯ ನಾಡಿನ ವೈಯ್ಯಾರಿಯರು..

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಆಗಸ್ಟ್ ಕೊನೆಗೆ ಇಲ್ಲವೇ ಸೆಪ್ಟೆಂಬರ್, ಅಕ್ಟೋಬರ್ ಮೂರನೇ ವಾರದ ಒಳಗೆ ನೀವು ಚಾಲುಕ್ಯರ ನಾಡು ಬಾದಾಮಿ ಪರಿಸರದಲ್ಲಿ ಪ್ರವಾಸ ಕೈಗೊಳ್ಳುವಿರಾ?.. ಹಾಗಿದ್ದರೆ ಇಲ್ಲಿನ ಪುರಾತತ್ವ ಸ್ಮಾರಕಗಳು, ಶಿಲ್ಪಕಲೆಯ ವೈವಿಧ್ಯದ ಜೊತೆಗೆ ಸುತ್ತಲಿನ ಬೆಟ್ಟ ಸಾಲುಗಳಲ್ಲಿ ಮೈದಳೆವ ಮಳೆಗಾಲದ ವಯ್ಯಾರಿಯರ ಸೊಬಗು ಕಣ್ತುಂಬಿಕೊಳ್ಳಬಹುದು..

ಕೇವಲ 40 ಕಿ.ಮೀ ಅಂತರದಲ್ಲಿ ಆರು ಜಲಪಾತಗಳ ವೀಕ್ಷಣೆ ನಿಮಗೆ ಸಾಧ್ಯವಾಗುತ್ತದೆ. ಸ್ವಂತ ವಾಹನವಿದ್ದರೆ ಒಂದೇ ದಿನದಲ್ಲಿ ಅಷ್ಟೂ ಜಲಪಾತಗಳನ್ನು ನೋಡಿಕೊಂಡು ಮನೆ ಮಂದಿಯೆಲ್ಲಾ ಮನ–ಮೈದಣಿಯೇ ನೀರಾಟವಾಡಿ ಸಂಭ್ರಮಿಸಬಹುದು.


ಗುಳೇದಗುಡ್ಡದ ದಿಡುಗಿನ ನೋಟ

ಸಾಮಾನ್ಯವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಆಗಸ್ಟ್ ಕೊನೆಯಿಂದ ಹಾಗೂ ಅಕ್ಟೋಬರ್‌ವರೆಗೆ (ವಾಡಿಕೆ ಮಳೆ–337 ಮಿ.ಮೀ) ಉತ್ತಮ ಮಳೆಯಾಗುತ್ತದೆ. ಹುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಮಳೆಗಳ ಸೊಬಗು ಮೈಗೂಡುತ್ತದೆ. ಹಗಲೆಲ್ಲಾ ಬಿಸಿಲು ಮಚ್ಛೆ ಹೊದ್ದು, ರಾತ್ರಿ ಇಳೆಗೆ ಧಾರೆಯಾಗುವ ಮಳೆರಾಯ ಬೆಳಗಾಗುವುದರೊಳಗೆ ಜಲಪಾತಗಳಿಗೆ ಜೀವ ನೀಡಿರುತ್ತಾನೆ. ಸುತ್ತಲಿನ ಕುರುಚಲು ಕಾಡುಗಳಿಂದ ಹರಿದುಬರುವ ಮಳೆನೀರು ಜಲಪಾತದ ರೀತಿ ಬೆಟ್ಟ ಸಾಲುಗಳಲ್ಲಿ ವೈಯ್ಯಾರ ತೋರುತ್ತಾ, ಬಳುಕುತ್ತಾ, ಬಾಗುತ್ತಾ ಹಾಲ್ನೊರೆಯೊಂದಿಗೆ ಧುಮ್ಮಿಕ್ಕುತ್ತದೆ. ನೋಡುಗರ ಕಣ್ಮನ ಸೆಳೆಯುತ್ತವೆ. ಈ ಜಲಪಾತದ ತಾಣಗಳು ಚಾಲುಕ್ಯರ ರಾಜಧಾನಿ ಬಾದಾಮಿ ಪಟ್ಟಣದಿಂದಲೇ ಆರಂಭವಾಗುತ್ತವೆ. 


ಗುಳೇದಗುಡ್ಡ ಬಳಿಯ ಕೋಟೆಕಲ್ಲಿನ ದಿಡುಗು

ಅಕ್ಕ–ತಂಗಿ ಜಲ‍ಪಾತ:

ದೊಡ್ಡ ಮಳೆ ಸುರಿಯಿತೆಂದರೆ ಬಾದಾಮಿಯ ಅಗಸ್ತ್ಯತೀರ್ಥ ಹೊಂಡದ ಪರಿಸರದಲ್ಲಿ ಭೂತನಾಥ ಗುಡಿಯ ಹಿಂಭಾಗ ಅಕ್ಕ–ತಂಗಿ ಜಲಪಾತ ಮೈದಳೆಯುತ್ತವೆ. ಸುತ್ತಲೂ ಕೆಂಪು ಕಲ್ಲಿನ ಬೆಟ್ಟ ಶ್ರೇಣಿಯ ನಡುವೆ ಬೀಳುವ ನೀರಧಾರೆ ಅಕ್ಷರಶಃ ದೃಶ್ಯಕಾವ್ಯವೇ ಸರಿ. ಬಾದಾಮಿಯ ಮುಖ್ಯರಸ್ತೆಯಿಂದ ಮ್ಯೂಸಿಯಂ ಹಾದಿಯಲ್ಲಿ ಒಂದೂವರೆ ಕಿ.ಮೀ ಸಾಗಿದರೆ ಹೊಂಡದ ದಂಡೆಯ ಮೇಲಿರುತ್ತೇವೆ. ಅಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಭೂತನಾಥ ಗುಡಿಯ ಹಿಂಭಾಗದಿಂದ ಜಲಪಾತದ ಬಳಿಗೆ ಸಾಗಬಹುದು. ಸುತ್ತಲೂ ಕೆಂಪು ಕಲ್ಲಿನ ಬೆಟ್ಟ ಸಾಲು, ಕೋಟೆಯ ಗೋಡೆ, ಗುಹಾಂತರ ದೇವಾಲಯದ ನೋಟ 


ಬಾದಾಮಿ ಪಟ್ಟಣದ ಅಕ್ಕ–ತಂಗಿಯರ ಫಾಲ್ಸ್‌ನ ನೋಟ

ಹುಲಿಗೆಮ್ಮನ ಕೊಳ್ಳ:

ಬಾದಾಮಿಯಿಂದ ರಾಜ್ಯ ಹೆದ್ದಾರಿ 135ರಲ್ಲಿ ಪಟ್ಟದಕಲ್ಲು ದೇವಾಲಯ ಸಮುಚ್ಛಯಕ್ಕೆ ಸಾಗುವ ಹಾದಿಯಲ್ಲಿ ನಂದಿಕೇಶ್ವರ ಬಳಿ ಎಡಕ್ಕೆ ಮೂರು ಕಿ.ಮೀ ಸಾಗಿದರೆ ಹುಲಿಗೆಮ್ಮನ ಕೊಳ್ಳ ಸಿಗುತ್ತದೆ. ಹಳೆ ಶಿಲಾಯುಗದ ಕುರುಹುಗಳು ಇಲ್ಲಿ ದೊರೆತಿದ್ದು, ಚಾಲುಕ್ಯ ದೊರೆಗಳ ಸಮಾಧಿಗಳ ಸ್ಥಳವಾಗಿದೆ. ಇಲ್ಲಿ ಮಳೆಗಾಲದಲ್ಲಿ ಜಲಪಾತ ಸೃಷ್ಟಿಯಾಗುತ್ತದೆ. ವೀರ ಮದಕರಿ ಸೇರಿದಂತೆ ಕನ್ನಡದ ಹಲವು ಸಿನಿಮಾಗಳು ಇಲ್ಲಿನ ಬೆಟ್ಟ ಸಾಲಿನಲ್ಲಿ ಚಿತ್ರೀಕರಣಗೊಂಡಿವೆ. ಜಲಪಾತ ಧಾರೆಯಾಗುವ ಬೃಹತ್ ಬಂಡೆಯ ಕೆಳಗೆ ಶಿಲಾಹಾಸು ಇದ್ದು, ಅಡುಗೆ ಮಾಡಿಕೊಂಡು ಊಟ ಮಾಡಲು ಅವಕಾಶವಿದೆ. ಪುರಾತತ್ವ ಇಲಾಖೆಯ ಅನುಮತಿ ಪಡೆದು ಅಲ್ಲಿ ಉಳಿಯಬಹುದು.


ಬಾದಾಮಿ ತಾಲ್ಲೂಕು ಹುಲಿಗೆಮ್ಮನಕೊಳ್ಳದ ವಿಹಂಗಮ ನೋಟ

ಸಿದ್ಧನ ಕೊಳ್ಳ:

ಪಟ್ಟದಕಲ್ಲಿನಿಂದ ಐಹೊಳೆಗೆ ಸಾಗುವ ರಸ್ತೆಯಲ್ಲಿ ಬಲಕ್ಕೆ ಕಾಡು ಹಾದಿಯಲ್ಲಿ ಎರಡು ಕಿ.ಮೀ ಸಾಗಿದರೆ ಸಿದ್ಧನಕೊಳ್ಳ ಸಿಗುತ್ತದೆ. ಇಲ್ಲಿ ಸಿದ್ಧನಾಥ ಗುಡಿ ಇದೆ. ಶಿಲೆಯಲ್ಲಿ ಒಡಮೂಡಿದ ಲಜ್ಜೆಗೌರಿಯ ಚಿತ್ರ ಪೂಜಿಸಲ್ಪಡುತ್ತದೆ. ವರ್ಷವಡೀ ಇಲ್ಲಿ ಒರತೆಯಿಂದ ಹರಿಯುವ ನೀರು ಪ್ರವಾಸಿಗರ ದಾಹ ತೀರಿಸುತ್ತದೆ. ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುವ ಪುಟ್ಟ ಜಲಧಾರೆ ಆಕರ್ಷಿಸುತ್ತದೆ.


ಹುನಗುಂದ ತಾಲ್ಲೂಕು ಸಿದ್ದನಕೊಳ್ಳದ ದಿಡುಗಿನ ಸೊಬಗು

ಲಲಿತಾ ಕೊಳ್ಳ:

ಬಾದಾಮಿ ತಾಲ್ಲೂಕಿನ ಹಾನಾಪುರ ಗ್ರಾಮದ ಸರಹದ್ದಿನಲ್ಲಿ ಮೈದಳೆಯುವ ಜಲಪಾತ ಬ್ರಿಟಿಷ್ ಗೆಜೆಟಿಯರ್‌ನಲ್ಲಿ ಲಲಿತಾ ಕೊಳ್ಳ ಎಂದೇ ದಾಖಲಾಗಿದೆ. ಸಜ್ಜೆ ಹೊಲಗಳು, ನೆಲ್ಲು ಚೆಲ್ಲಿನ ಗದ್ದೆಗಳ ಮೂಲಕ ಹರಿದು ಬರುವ ನೀರು ಬೆಟ್ಟದ ನೆತ್ತಿಯಿಂದ ಕೆಳಗೆ ಧುಮ್ಮಿಕ್ಕುತ್ತದೆ. ಈ ವೇಳೆ ಬಿಳಿ ನೊರೆಗಳು ಒಡಮೂಡುವ ಕಾರಣ ಅದನ್ನು ಸ್ಥಳೀಯರು ಹಾಲು ಹಂಡೆ ಎಂದೇ ಕರೆಯುತ್ತಾರೆ. ಬಾದಾಮಿಯಿಂದ ರಾಘಾಪುರ ಮೂಲಕ 18 ಕಿ.ಮೀ ಸಾಗಿದರೆ ಹಾನಾಪುರ ಎಸ್‌ಪಿ ಗ್ರಾಮ ಸಿಗುತ್ತದೆ. ಊರಿನಲ್ಲಿ ಹೊಲಗಳ ನಡುವೆ ಒಂದು ಕಿ.ಮೀ ಸಾಗಿದರೆ ಲಲಿತಾಕೊಳ್ಳ ಸಿಗುತ್ತದೆ.


ಬಾದಾಮಿ ತಾಲ್ಲೂಕು ಹಾನಾಪುರ ಗ್ರಾಮದ ಲಲಿತಾ ಕೊಳ್ಳದ ನೋಟ

ಹನುಮಂತನಕೊಳ್ಳ: 

ಬಾದಾಮಿ ತಾಲ್ಲೂಕಿನ ಹಾನಾಪುರ ತಾಂಡಾ ಬಳಿಯ ಹನುಮಂತನ ಕೊಳ್ಳದಲ್ಲಿ ಈ ಜಲಪಾತ ಮೈದಳೆಯುತ್ತದೆ. ಸಮತಟ್ಟಾದ ಕಲ್ಲಿನ ಹಾಸಿನ ಮೇಲೆ ಹರಿದುಬರುವ ನೀರು ಕೊಳ್ಳದ ನಡುವೆ ಬಳುಕುತ್ತಾ ಧುಮ್ಮಿಕ್ಕುತ್ತದೆ. ಗುಳೇದಗುಡ್ಡ–ನಂದಿಕೇಶ್ವರ ಮಾರ್ಗ ಮಧ್ಯೆ ಈ ಜಲಪಾತ ಸಿಗುತ್ತದೆ. ಬಾದಾಮಿ ಪಟ್ಟಣದಿಂದ 20 ಕಿ.ಮೀ ದೂರವಿದೆ.


ಬಾದಾಮಿ ತಾಲ್ಲೂಕು ಹಾನಾಪುರ ತಾಂಡಾ ಬಳಿಯ ಹನುಮಂತನ ಕೊಳ್ಳದ ನೋಟ

ಗುಳೇದಗುಡ್ಡ ದಿಡುಗು:


ಗುಳೇದಗುಡ್ಡದ ದಿಡುಗಿನ ಮೋಹಕತೆ

ಗುಳೇದಗುಡ್ಡ ಪಟ್ಟಣದಿಂದ ನಾಲ್ಕು ಕಿ.ಮೀ ದೂರದ ಮಾಬುಸಾಬನ ಗುಡ್ಡ ಬಳಸಿಕೊಂಡು ಹೋದರೆ ಈ ಪುಟ್ಟ ದಿಡುಗು ಕಾಣಸಿಗುತ್ತದೆ. ಮಳೆಗಾಲದಲ್ಲಿ ಕಾಡುಹಾದಿಯಲ್ಲಿ ಒಂದಷ್ಟು ಸಾಹಸಪಟ್ಟು ದಿಡುಗು ತಲುಪಬೇಕಿದೆ. ಹೀಗಾಗಿ ಚಾರಣಿಗರಿಗೆ ಬಲು‍ಪ್ರಿಯವಾದ ತಾಣವಿದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು