ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

Published 9 ಜೂನ್ 2024, 0:44 IST
Last Updated 9 ಜೂನ್ 2024, 0:44 IST
ಅಕ್ಷರ ಗಾತ್ರ

ರಿಮ್‌ಝಿಮ್‌ ಗಿರೆ ಸಾವನ್‌... ಸುಲಗ್‌ ಸುಲಗ್‌ ಜಾಯೆ ಮನ್‌... ಹಾಡು ಹಿನ್ನೆಲೆಯಲ್ಲಿ ಬರ್ತಿತ್ತು. ಸಣ್ಣನೆಯ ಸೋನೆ ಮಳೆ ತಣ್ಣನೆಯ ತಂಗಾಳಿ ಬೀಸುವಾಗ ಒಂದು ಚಹಾ ಬೇಕಿತ್ತು. ಅದೇ ಇರಾನಿ ಚಾಯ್‌... 

ಅಲೀಮ್‌ ಭಾಯ್‌.. ಏಕ್‌ಚಾಯ್‌ ಪಿಲಾತೆ...? (ಅಲೀಮ್‌ ಭಾಯ್‌ ಒಂದು ಚಹಾ ಕುಡಿಸ್ತೀರಾ) ಕೇಳಿದ ತಕ್ಷಣ.. 

ಬೆಳ್ಳನೆಯ ಬೆಳ್ಮುಗಿಲ ಬಣ್ಣದ ಕಪ್ಪುಬಸಿಯಲ್ಲಿ ಬಿಸಿಬಿಸಿ ಚಹಾ ಸೋಸಿದವರೇ ಮಲೈ ದೂಂ.. (ಕೆನೆ ಕೊಡಲೇ?) ಎಂದು ಕೇಳಿದರು..

ಬೇಡ ಅಂತ ತಲೆ ಅಲ್ಲಾಡಿಸಿದೆ...

‘ಅಬ್‌ ವೋ ಜಮಾನಾ ಗಯಾ’ (ಈಗ ಆ ಕಾಲ ಹೋಯ್ತು) ಅಂದವರೇ ತಾವೂ ಒಂದು ಚಹಾ ಹಿಡಿದು ಕುಳಿತರು. ಹಾಗಿದ್ದರೆ ಯಾವುದು ಆ ಜಮಾನಾ?

ಅದೇ ಇರಾನಿ ಚಾಯ್‌ ಕುಡಿಯುವ ಜಮಾನಾ.. ಒಂದು ಕಾಲ ಇತ್ತು. ಹೈದರಾಬಾದ್‌ನಲ್ಲಿ ಹಲವು ಇರಾನಿ ಕೆಫೆಗಳಿದ್ದವು. ಮಸ್ಕಾಬನ್‌, ಉಸ್ಮಾನಿಯಾ ಬಿಸ್ಕೂಟ್‌ ಜೊತೆಗೆ ಬಿಸಿಬಿಸಿ ಚಹಾ ಸೇವಿಸುವ ಮಜವೇ ಬೇರೆ ಇತ್ತು. ಈಗ ಆ ಕಾಲವೂ ಇಲ್ಲ, ಕೆಫೆಗಳೂ ಇಲ್ಲ.. ಆದರೆ ಚಹಾ ಮಾತ್ರ ಬದಲಾಗಿಲ್ಲ.

ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ರಾಯಚೂರಿನಲ್ಲಿ ಈಗಲೂ ಕೆಲವು ಕೆಫೆಗಳಲ್ಲಿ  ಇರಾನಿ ಚಹಾ ಸಿಗುತ್ತದೆ. ಈ ಭಾಗಕ್ಕೆ ಇರಾನಿ ಚಹಾದ ಯಾನವೇ ಆಸಕ್ತಿಕರ. ಪಾರ್ಸಿಗಳು ‘ಬಂದರು ಪ್ರದೇಶ’ವಾದ ಮುಂಬೈಗೆ ವಲಸೆ ಬಂದರು. ಮಹಾನಗರ ನಿರ್ಮಾಣವಾಗುತ್ತಿದ್ದ ಆ ಕಾಲದಲ್ಲಿ ಕಾರ್ಮಿಕರಿಗೆ ಚೈತನ್ಯ ನೀಡುವ ಚಹಾ ಮತ್ತು ಡಬಲ್‌ ರೋಟಿ, ಮಸ್ಕಾಬನ್‌, ಮಟನ್‌ ಪಾವ್‌ ನೀಡಲಾಗುತ್ತಿತ್ತು. ಇಂಥ ಸುಮಾರು 200 ಕೆಫೆಗಳು ಸ್ವಾತಂತ್ರ್ಯಪೂರ್ವ ಭಾರತದ ಮುಂಬೈನಲ್ಲಿದ್ದವು. ಪಾರ್ಸಿ ಜನಾಂಗದ ಅತಿಮುಖ್ಯ ಖಾದ್ಯಗಳಾದ ಮಟನ್‌ ಖೀಮಾ, ಚಿಕನ್‌ ಖೀಮಾಗಳನ್ನು ತಮ್ಮದೇ ಬೇಕರಿಯಲ್ಲಿ ತಯಾರಿಸುತ್ತಿದ್ದ ಡಬಲ್‌ರೋಟಿ ಎಂದು ಕರೆಯಲಾಗುವ ಬನ್‌ಗಳು, ಪಾವ್‌ಗಳ ಜೊತೆಗೆ ನೀಡುತ್ತಿದ್ದರು. 

ಮುಂಬೈನಿಂದ ನಿಜಾಮ್‌ ಪ್ರದೇಶವಾದ ಹೈದರಾಬಾದ್‌ಗೆ ಪಾರ್ಸಿಗಳು ವಲಸೆ ಬಂದಾಗಲೇ ಡೆಕ್ಕನ್‌ ಪ್ರದೇಶಕ್ಕೆ ಇರಾನಿ ಚಹಾದ ಪರಿಚಯವಾಯಿತು. ಇರಾನಿ ಚಹಾ ಅಂದರೆ ಸಾಕು, ಈಗಲೂ ಮೂಗಿನ ಹೊರಳೆಗಳು ಒಂದಕ್ಕೊಂದು ಸಂತೋಷದಿಂದ ಅಪ್ಪಿಕೊಳ್ಳುತ್ತವೆ. ಹಂಗೆ ಅಪ್ಪಿಕೊಂಡು ಆ ಚಹಾದ ಘಮವನ್ನು ಮೊದಲು ಹೀರುತ್ತವೆ. ಹದವಾದ ಶುಂಠಿ ಮತ್ತು ಏಲಕ್ಕಿಯ ಸುವಾಸನೆಯೊಂದಿಗೆ ಹಾಲಿನ ಪರಿಮಳವೂ ಬೆರೆತಿರುತ್ತದೆ. ಇದಕ್ಕೆ ಚಹಾದ ಕಮಟು ಬರುವಂತೆ ಮಾಡಲು ಬರೋಬ್ಬರಿ 45 ನಿಮಿಷ ಚಹಾದ ಪುಡಿಯನ್ನು ಕುದಿಸಲಾಗುತ್ತದೆ. ನೀರಿನಲ್ಲಿ ಚಹಾದ ಪುಡಿ ಹಾಕಿದಾಗಲೇ ಶುಂಠಿ, ಏಲಕ್ಕಿ ಜೊತೆಗೆ ಚೂರು ಚಕ್ಕೆಯನ್ನು ಬೆರೆಸುತ್ತಿದ್ದರಂತೆ. ಇದೀಗ ಕೇವಲ ಶುಂಠಿ ಮತ್ತು ಏಲಕ್ಕಿ ಬಳಸಲಾಗುತ್ತದೆ. ಚಹಾದ ಪುಡಿಯಿದ್ದರೆ ವಿಶೇಷ ಸ್ವಾದ ಮತ್ತು ಬಣ್ಣ ಬಾರದು. ನೀಲಗಿರಿಯ ವಿಶೇಷ ಚಹಾ ಪುಡಿಯೇ ಆಗಬೇಕು. ಕೆಟಲ್‌ನಲ್ಲಿ ನಲ್ವತ್ತೈದು ನಿಮಿಷ ಕುದ್ದ ಈ ಡಿಕಾಕ್ಷನ್‌ಗೆ ಹಾಲು ಬೆರೆಸುತ್ತಾರೆ...

‘ಅಯ್ಯೋ, ಇಷ್ಟು ಸರಳವಾ’ ಅನ್ನಬೇಡಿ.. ಚಹಾ ಡಿಕಾಕ್ಷನ್‌ ಕುದಿಸಿದಂತೆಯೇ ಹಾಲನ್ನೂ ಕುದಿಸಲಾಗುತ್ತದೆ. ಹತ್ತು ಲೀಟರ್‌ ಹಾಲನ್ನು ಕಾಯಿಸಿ.. ಕಾಯಿಸಿ, ಕೆನೆಪದರವನ್ನು ತೆಗೆಯುತ್ತ, ತಳ ಹತ್ತದಂತೆ ಒಲೆಯ ಮೇಲೆ ವರ್ತುಲಾಕಾರದಲ್ಲಿ ಕೈ ಆಡಿಸುತ್ತಲೇ ಇರುತ್ತಾರೆ. ಹಾಲುಕಾಯಿಸಲೆಂದೇ ಒಂದಾಳು ಬೇಕು. ಹೀಗೆ ಕಾದ ಹಾಲು ಏಳು ಲೀಟರ್‌ಗೆ ಇಳಿದಾಗ, ಅದು ಚಹಾಕ್ಕೆ ಸಿದ್ಧವಾದಂತೆ.  

ಆ ಜಮಾನಾದ ಮಾತು ಬಂತಲ್ಲ.. ಅದಕ್ಕೂ ಕಾರಣ ಇದೆ. ನಿಜಾಮ್‌ ಪ್ರದೇಶದಲ್ಲಿ ಚಹಾ ಕುಡಿಸ್ತೀರಾ ಅಂತಲೇ ಕೇಳ್ತಾರೆ. ಆತಿಥ್ಯವಹಿಸಿಕೊಳ್ಳಲು ವಿನೀತರಾಗಿ ಕೇಳಿಕೊಳ್ಳುವ ಪರಿ ಅದು. ಚಹಾ ಕುಡಿಸ್ತೀನಿ ಅನ್ನೋದು ಅಹಂಕಾರದ ಆಹ್ವಾನವದು ಎಂಬ ನಂಬಿಕೆ. ಒಮ್ಮೆ ಒಪ್ಪಿ ಟೇಬಲ್‌ಗೆ ಹೋಗಿ ಚಹಾ ಕಪ್ ಎದುರಿಗೆ ಬಂದರೆ ಇನ್ನೊಂದು ಆಹ್ವಾನ.. ಪೆಹಲೆ ಆಪ್‌ (ಮೊದಲು ನೀವು).. ನಂತರ ಚಹಾ ಕುಡಿಯುವವರ ಆತಿಥ್ಯ ಅದು. ಮೊದಲು ಕುಡಿದವರು ಅತಿಥಿಯಾಗಿ ಅದನ್ನು ಸ್ವೀಕರಿಸಬೇಕು ಎಂಬ ಒತ್ತಾಸೆ. ಹೀಗಾಗಿ ಪೆಹಲೆ ಆಪ್‌.. ಪೆಹಲೆ ಆಪ್‌.. ಎನ್ನುವ ಮಾತುಗಳು.

ಇರಾನಿ ಕೆಫೆಗಳಲ್ಲಿ ಚಹಾದ ಜೊತೆಗೆ ಉಸ್ಮಾನಿಯಾ ಬಿಸ್ಕೂಟ್‌ ವಜ್ರಾಕೃತಿಯ ಸಿಹಿ ಬಿಸ್ಕೂಟುಗಳು, ವೃತ್ತಾಕಾರದ ಉಪ್ಪುಕರಿಮೆಣಸಿನ ಮಸಾಲೆಯುಕ್ತ ಬಿಸ್ಕೂಟುಗಳು ಇದ್ದೇ ಇರುತ್ತವೆ. ಬಿಸ್ಕೂಟುಗಳಿಗೆ ಕಾಯುವಾಗಲೇ ಆಲೀಮ್‌ ಭಾಯ್‌ ಮತ್ತೊಮ್ಮೆ ಕಾಳಜಿಯಿಂದ ಕೇಳಿದರು.. ಮಲೈ ನಕ್ಕೊ? (ಕೆನೆ ಬೇಡವೇ) ಬೇಡವೇ ಬೇಡ ಎಂದೆ.

ಮೊಹ್ಮದ್‌ ಅಲೀಮ್‌ ಅವರ ಚಿಕ್ಕಪ್ಪ ಹೈದರಾಬಾದ್‌ನ ಇರಾನಿ ಕೆಫೆಯೊಂದರಲ್ಲಿ ಪಾರ್ಸಿ ಕುಟುಂಬದ ಸಹಾಯಕರಾಗಿದ್ದರಂತೆ. ಚಹಾ ಮಾಡುವುದನ್ನು ಅಲ್ಲಿಂದಲೇ ಕಲಿತಿದ್ದು. ಪಾರ್ಸಿ ಕುಟುಂಬಗಳು ಒಂದೊಂದಾಗಿ ಈ ಕೆಫೆಗಳನ್ನು ಮುಚ್ಚತೊಡಗಿದಾಗ, ಇವರು ಚಹಾ ಅಂಗಡಿಯನ್ನು ತೆರೆದರಂತೆ. ಹೀಗೆ ಒಂದೊಂದೆ ಕುಟುಂಬಗಳು ಹೈದರಾಬಾದ್‌ನಿಂದ, ಪಟ್ಟಣಚೆರು, ಜಹೀರಾಬಾದ್‌ ಮೂಲಕ ಬೀದರ್‌ ಪ್ರವೇಶಿಸಿದವು. ಕಲಬುರಗಿ, ರಾಯಚೂರುಗಳಲ್ಲಿಯೂ ಇರಾನಿ ಚಹಾ ಸಿಗತೊಡಗಿತು.

ಮೊಹ್ಮದ್‌ ಅಲೀಮ್‌ ಕುಟುಂಬ ನಾಲ್ವತ್ತು ವರ್ಷಗಳಿಂದಲೂ ಈ ಭಾಗದಲ್ಲಿ ಚಹಾ ತಯಾರಿಸುತ್ತಿದ್ದಾರೆ. ಮೊದಲಿನಂತೆ ಗಟ್ಟಿಹಾಲು ಸಿಗುತ್ತಿಲ್ಲ ಎನ್ನುವುದೇ ಅವರ ದೂರು.

ತುಟಿಗಂಟುವ ಕೆನೆಯನ್ನು ಒಳಗೆಳೆದುಕೊಂಡು, ಚಪ್ಪರಿಸಿ ತಿನ್ನುತ್ತಲೇ ಮಂದವಾದ ಚಹಾ ಹೀರಿದಾಗ ಕಂಠದಿಂದ ನಾಭಿಯವರೆಗೂ ನಿಧಾನವಾಗಿ ಇಳಿಯುವುದು ಗೊತ್ತಾಗಬೇಕು. ಸವಿಯುವುದೆಂದರೆ ಅದು.. ಬಿಸ್ಕೂಟ್‌ ಅದ್ದಿ, ಚಹಾ ಹೀರಿ ತಿನ್ನಬೇಕು. ಬನ್ಸ್‌ ಮೆಲ್ಲುತ್ತ ಒಂದೊಂದೇ ಗುಟುಕು ಹೀರಬೇಕು. ಗಾಜಿನ ಗ್ಲಾಸು ಹಿಡಿಯಲು ಬಿಸಿಯಾಗಿದ್ದರೂ ಎರಡು ಬೆರಳುಗಳ ನಡುವೆ ಗ್ಲಾಸು ಹಿಡಿದು ಕುಡೀಬೇಕು. ಇಲ್ಲವೇ ಕರವಸ್ತ್ರವನ್ನು ಅಂಗೈಯಲ್ಲಿ ಮಡಿಚಿಟ್ಟು ಚಹಾದ ಗ್ಲಾಸು ಹಿಡಿದು ಕುಡೀಬೇಕು. ಪ್ರತಿ ಗುಟುಕಿನ ನಂತರವೂ ನಮ್ಮ ನಾಲಗೆ ತುಟಿ ಸವರಿಕೊಳ್ಳಬೇಕು. ಆಹ್‌... ಅನ್ನುವ ಸದ್ದು ಬರುವಂತೆ ಉದ್ಗರಿಸಿ ಸವಿಯಬೇಕು. ಅದು ಇರಾನಿ ಚಾಯ್‌... ಈಗ ಟೈಮೆಲ್ಲಿದೆ... ಅಬ್‌ ವೊ ಜಮಾನಾ ನ ರಹಾ... (ಈಗ ಆ ಕಾಲ ಉಳಿಲಿಲ್ಲ) ಎನ್ನುತ್ತ ಹಾಲಿನೊಳಗೆ ಕೈ ಆಡಿಸಲು ಹೊರಟರು.

ಉಳಿದಿದ್ದೆಲ್ಲವೂ ಬದಲಾಗಿದೆ. ‘ಪೆಹಲೆ ಆಪ್‌’ ಅನ್ನುವ ಕೋರಿಕೆಗಳಿರುವುದಿಲ್ಲ. ಬಿಸ್ಕೂಟು, ಡಬಲ್‌ರೋಟಿಗಳು ಬೇಕೇಬೇಕು ಅಂತೇನಿಲ್ಲ. ಹಾಡು ಕೇಳುವುದಿಲ್ಲ. ಧಾವಂತದಲ್ಲಿ ಬಂದು ಚಹಾ ಹೀರಿ ಹೊರಡುತ್ತಾರೆ. ಚಹಾ ಕುಡಿದು ನಿರಾಳರಾಗಿ ನಗುತ್ತ ಹೊರಹೋಗುವವರಿಲ್ಲ. ಕಾಲ ಬದಲಾಗಿದೆ.  

ಇರಾನಿ ಕೆಫೆಗಳಷ್ಟೇ ಅಲ್ಲ, ಆತಿಥ್ಯದ ಸಂಸ್ಕೃತಿಯೊಂದು ಮರೆಯಾದ ಬಗೆ ಇದು...

ಚಹಾದ ಘಮವನ್ನು ಹೀರುತ್ತಲೇ ಅದನ್ನು ಕುಡಿಯುವ ಮಜಾ ಅದ್ಭುತ!
ಚಹಾದ ಘಮವನ್ನು ಹೀರುತ್ತಲೇ ಅದನ್ನು ಕುಡಿಯುವ ಮಜಾ ಅದ್ಭುತ!

ಹಾಲಿನ ಕಥೆ–ವ್ಯಥೆ

ಎಮ್ಮೆ ಹಾಲನ್ನೆಲ್ಲ ಗೌಳಿಗರು ಡೇರಿಗೆ ನೀಡುತ್ತಾರೆ. ಹಸುವಿನ ಹಾಲಿನ ಚಹಾ ಮಾಡಲಾಗದು. ಅದಕ್ಕೆ ಕೆನೆ ಬಾರದು. ನೀರು ಸೇರಿಸಿದರೆ ಹತ್ತು ಲೀಟರ್‌ ಹಾಲು ಕಾಯಿಸಿದರೆ ಸರಿಯಾಗಿ ಐದು ಲೀಟರ್‌ ಹಾಲು ಸಹ ಬಾರದು. ಪಾಕೀಟು ಹಾಲಿನ ಚಹಾ ಮಾಡಲು ಹೋದರೆ ಅದರಲ್ಲಿ ಸ್ವಾದ ಬರುವುದಿಲ್ಲ. ಕೆನೆ ತೆಗೆದಿರುವ ಹಾಲಿನಲ್ಲಿ ಇರಾನಿ ಚಹಾಗೆ ಅಗತ್ಯ ಇರುವ ಮಂದ ಸವಿ ಬರುವುದೇ ಇಲ್ಲ ಎನ್ನುತ್ತ ಹಾಲಿನ ಕಥೆಯನ್ನು ಮೊಹ್ಮದ್‌ ಅಲೀಮ್‌ ಬಿಚ್ಚಿಟ್ಟರು. ಸೌದೆ ಒಲೆ, ಗಟ್ಟಿ ಹಾಲು, ಹಾಲಿನ ಬೆಲೆ, ಶ್ರಮಕ್ಕೆ ತಕ್ಕ ಬೆಲೆ ಸಿಗದೇ ಇರುವುದರಿಂದ ಚಹಾದ ಕಪ್ಪುಗಳೀಗ ತಮ್ಮ ಖದರು ಕಳೆದುಕೊಂಡಿವೆ. ಜನರ ಜೇಬಿಗೆ ಭಾರವಾಗದಂತೆ ಕೊಡಬೇಕೆಂದರೆ ಕಪ್ಪು ಬಸಿಯ ಗಾತ್ರ ಚಿಕ್ಕದಾಗಿದೆ. ಕುಡಿದದ್ದು ಸಾಕೆನಿಸಲಿ ಎಂದು ಸಕ್ಕರೆಯ ಪ್ರಮಾಣವೂ ಹೆಚ್ಚಾಗಿದೆ. ಸದ್ಯ ಬದಲಾಗದೇ ಇರುವುದೆಂದರೆ 45 ನಿಮಿಷಗಳಷ್ಟು ಡಿಕಾಕ್ಷನ್‌ ಕುದಿಸುವುದು ಮತ್ತು ಹದವಾಗಿ ಹಾಲು ಕಾಯಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT