ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆಯಲ್ಲಿ ಪೋಷಕರ ಪಾತ್ರ

Published 17 ಜುಲೈ 2023, 23:30 IST
Last Updated 17 ಜುಲೈ 2023, 23:30 IST
ಅಕ್ಷರ ಗಾತ್ರ

ಇಂದಿನ ಜಗತ್ತು ಕೌಶಲವನ್ನು ಆಧರಿಸಿದೆ. ಸ್ವತಂತ್ರವಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಬದುಕಲು ವಿದ್ಯೆಯ, ನೈಪುಣ್ಯದ ಬೆಂಬಲ ಅತ್ಯಗತ್ಯ. ಹೆಚ್ಚು ಫೀಸನ್ನು ಕಟ್ಟಿ ಹೆಸರಾಂತ ಶಾಲೆಗೆ ಸೇರಿಸಿಬಿಟ್ಟರೆ ವಿದ್ಯೆ ತಾನಾಗಿಯೇ ಬಂದುಬಿಡುತ್ತದೆ ಎನ್ನುವ ಭ್ರಮೆ ಈಗ ಉಳಿದಿಲ್ಲ. ಜಗತ್ತು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಎನಿಸಿದಾಗ ಅದಕ್ಕೆ ತಮ್ಮ ಮಗುವನ್ನು ಸಜ್ಜುಗೊಳಿಸಲು ಪೋಷಕರೂ ಉತ್ಸುಕರಾಗಿರುತ್ತಾರೆ. ಅಂತೆಯೇ, ಬದಲಾಗುತ್ತಿರುವ ಪ್ರಪಂಚದಲ್ಲಿ ಮಕ್ಕಳ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕು. ಇಂತಹ ಹಲವಾರು ವಿಷಯಗಳಲ್ಲಿ ಪೋಷಕರು ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಶಾಲೆಗೆ ಹೋಗಲು ಆರಂಭಿಸಿದ ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಹೇಗೆ ಸಜ್ಜುಗೊಳಿಸಬಹುದು ಎಂಬುದರ ಬಗ್ಗೆ ಒಂದು ಜಿಜ್ಞಾಸೆ.

ಶಾಲೆಯಿಂದ ಬರುವ ಮಕ್ಕಳು ಅನುಭವಗಳ ಮೂಟೆ ಹೊತ್ತು ಮರಳುತ್ತಾರೆ. ಅವೆಲ್ಲವೂ ಅವರ ನಿರಂತರ ಮಾತುಗಳಲ್ಲಿ ಹರಿಯುತ್ತವೆ. ಕನಿಷ್ಠ ಒಬ್ಬ ಪೋಷಕರು ಆ ದನಿಗೆ ಬೇಸರವಿಲ್ಲದೆ ಕಿವಿಯಾಗಬೇಕು. ಮಗುವಿನ ಬಹುತೇಕ ಮಾತುಗಳು ನಮಗೆ ಅರ್ಥರಹಿತವಾಗಿರಬಹುದು ಅಥವಾ ಪುನರುಕ್ತಿಯಾಗಬಹುದು. ಆದರೆ ಮಗುವಿನ ಪಾಲಿಗೆ ಅವು ಮನದ ಭಾವಗಳನ್ನು ಹಂಚಿಕೊಳ್ಳುವ ಏಕೈಕ ಆರೋಗ್ಯಕರ ಮಾರ್ಗ. ನಾವು ಆಸಕ್ತಿಯಿಂದ ಅವರ ಮಾತುಗಳನ್ನು ಕೇಳುತ್ತಿದ್ದೇವೆ ಎಂದರೆ ಮಕ್ಕಳು ನಿರ್ಭೀತರಾಗುತ್ತಾರೆ. ಶಾಲೆಯ ಆಗುಹೋಗುಗಳ ಬಗೆಗಿನ ಕೆಲವೊಂದು ಸೂಕ್ಷ್ಮ ವಿಚಾರಗಳು ನಮಗೆ ತಿಳಿಯುವುದು ಹೀಗೆಯೇ. ಮಕ್ಕಳ ಜೊತೆಗೆ ಅನುಚಿತವಾಗಿ ವರ್ತಿಸಬಲ್ಲ ಪುಂಡರು, ನಿರ್ಲಕ್ಷ್ಯ ಧೋರಣೆಯ ಶಿಕ್ಷಕರು, ನೈರ್ಮಲ್ಯದ ಪರಿವೆಯಿಲ್ಲದ ಕೆಲಸಗಾರರು ಮೊದಲಾದವರ ಬಗ್ಗೆ ಮಕ್ಕಳಿಗೆ ನಿರ್ಣಾಯಕವಾಗಿ ಹೇಳಲು ಬಾರದು. ಆದರೆ, ಅವೆಲ್ಲವೂ ಅವರ ಶಕ್ತಿಯುತ ನೆನಪಿನಲ್ಲಿ ದಾಖಲಾಗುತ್ತವೆ. ಅವರ ಮಾತಿನ ನಡುವೆ ಇಂತಹ ಪ್ರಸಂಗಗಳು ಅನುಷಂಗಿಕವಾಗಿ ಹೊರಬರುತ್ತವೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರ ಮಾತುಗಳನ್ನು ಗಮನವಿಟ್ಟು ಕೇಳಬೇಕು. ಅಪಾಯಕಾರಿಯಾದ ಸಂಗತಿಗಳನ್ನು ಕೂಡಲೇ ಶಾಲೆಯ ಗಮನಕ್ಕೆ ತರಬೇಕು. ಸಣ್ಣವಯಸ್ಸಿನ ಮಕ್ಕಳಿಗೆ ತಮ್ಮ ದೇಹದ ಯಾವ ಅಂಗವನ್ನು ಅಪರಿಚಿತರು ಸ್ಪರ್ಷಿಸಬಹುದು; ಯಾವುದನ್ನು ಮುಟ್ಟಬಾರದು ಎಂಬ ವಿಷಯವನ್ನು ಆಗಾಗ ಜಾಣ್ಮೆಯಿಂದ ಹೇಳುತ್ತಿರಬೇಕು. ‘ಸುರಕ್ಷಿತ ಸ್ಪರ್ಶ; ಅಸುರಕ್ಷಿತ ಸ್ಪರ್ಶ’ಗಳ ಆಟವನ್ನು ಆಡಿಸುವ ಮೂಲಕ ಅವರಲ್ಲಿ ಇಂತಹ ಅರಿವನ್ನು ಗಟ್ಟಿಗೊಳಿಸಬೇಕು. ಯಾವುದೇ ಸಂದರ್ಭದಲ್ಲೂ ಯಾರಾದರೂ ಅಸುರಕ್ಷಿತ ಸ್ಪರ್ಶವನ್ನು ಮಾಡಿದರೆ ಪೋಷಕರಿಗೆ ತಿಳಿಸಬೇಕು ಎನ್ನುವ ಮಾತನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು.

ಅಪರಿಚಿತರ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯ. ಪೋಷಕರ ಫೋನ್ ಸಂಖ್ಯೆ ಮಕ್ಕಳಿಗೆ ಬಾಯಿಪಾಠವಾದರೆ ಒಳಿತು. ಯಾವುದಕ್ಕೂ ಮಕ್ಕಳ ಜೇಬಿನಲ್ಲಿ ಪೋಷಕರ ಹೆಸರು, ಫೋನ್ ಸಂಖ್ಯೆ ಇರುವ ಚೀಟಿಯೊಂದನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಸುರಕ್ಷಿತಗೊಳಿಸಿ ಸದಾ ಇಟ್ಟಿರಬೇಕು. ಯಾವುದೇ ಅಪರಿಚಿತರ ಜೊತೆಗೂ ಯಾವುದೇ ಕಾರಣಕ್ಕೂ ಹೋಗಬಾರದೆನ್ನುವ ನಿಯಮವನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರುವಂತೆ ಪದೇ ಪದೇ ಹೇಳುತ್ತಿರಬೇಕು. ಹಿರಿಯರ ದೈನಂದಿನ ವೇಳಾಪಟ್ಟಿಯಲ್ಲಿ ಯಾವುದಾದರೂ ವ್ಯತ್ಯಾಸ ಆಗುವುದಿದ್ದರೆ, ಅದನ್ನು ಮಕ್ಕಳಿಗೆ ನಾಜೂಕಾಗಿ ಮೊದಲೇ ತಿಳಿಸಿರಬೇಕು. ಮಕ್ಕಳ ಸುರಕ್ಷತೆಯನ್ನು ನಮ್ಮ ಜೀವನದ ಭಾಗವಾಗಿ ಪರಿಗಣಿಸುವುದು ಇಂದಿನ ಅಗತ್ಯಗಳಲ್ಲಿ ಒಂದು.

ಅಹಿತಕರ ಅನುಭವಗಳ ಬಗ್ಗೆ ಮಾತನಾಡಲು ಮಕ್ಕಳು ಹಿಂಜರಿಯುತ್ತಾರೆ. ಆ ರೀತಿಯ ಮಾತುಗಳನ್ನು ಆಡುವಾಗ ಹೆದರಿಕೆಯಿಂದಲೇ ಆರಂಭಿಸುತ್ತಾರೆ. ಮಾತಿನ ಆರಂಭದಲ್ಲಿ ಪರಸ್ಪರ ಸಂಬಂಧವಿಲ್ಲದ ವಾಕ್ಯಗಳನ್ನು ಪೋಣಿಸಬಹುದು. ಹಾಗೆಯೇ ಮುಂದುವರೆದು, ಸ್ವಲ್ಪ ವಿಶ್ವಾಸ ಬೆಳೆದ ನಂತರ ಅವರನ್ನು ಕಾಡುತ್ತಿರುವ ಭಾವಗಳಿಗೆ ಸರಿಯಾದ ಮಾತುಗಳು ಬರಬಹುದು. ಆಗಲೂ ಬಹುತೇಕ ಮಕ್ಕಳ ದನಿ ಕ್ಷೀಣವಾಗಿಯೇ ಇರುತ್ತದೆ. ಹಿರಿಯರು ಇದನ್ನು ಗುರುತಿಸಬೇಕು. ಒಂದು ವೇಳೆ ಸಂಯಮ ತಪ್ಪಿ ಮಕ್ಕಳನ್ನು ಗದರಿದರೆ, ಹೊರಬರಹುದಾದ ಸತ್ಯ ಅಲ್ಲೇ ದಮನವಾಗಬಹುದು. ಮಕ್ಕಳು ಮಾತನಾಡಲು ಬಯಸುವ ಪ್ರತಿಯೊಂದು ಸಂದರ್ಭವನ್ನೂ ಅತ್ಯಂತ ತಾಳ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಈ ವಿಷಯದಲ್ಲಿ ಹಿರಿಯರು ಎಷ್ಟು ಪ್ರಾಮಾಣಿಕ ಸಹಾನುಭೂತಿ ತೋರುತ್ತಾರೋ, ಮಕ್ಕಳ ಭೀತಿ ಅಷ್ಟು ಕಡಿಮೆಯಾಗಿ, ಅವರು ಮುಕ್ತವಾಗಿ ಮಾತನಾಡುವಂತಾಗುತ್ತದೆ. ನಾವು ಅವರ ಹೆದರಿಕೆಯನ್ನು ಪರಿಹರಿಸಬಲ್ಲವೆಂದು ಮಕ್ಕಳು ನಂಬಿದರೆ ಮಾತ್ರ ನಮ್ಮಲ್ಲಿ ವಿಷಯಗಳನ್ನು ಹಂಚಿಕೊಳ್ಳಬಲ್ಲರು. ಆ ನಂಬಿಕೆಯನ್ನು ಅವರಲ್ಲಿ ತುಂಬುವುದು ಮುಖ್ಯ.

ಅಹಿತಕರ ಘಟನೆಗಳನ್ನು ಹೇಗೆ ನಿಭಾಯಿಸಬಹುದು ಎನ್ನುವ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡುವುದು ಉಪಯುಕ್ತ. ಕೆಲವು ಕಾಲ್ಪನಿಕ ಪ್ರಸಂಗಗಳನ್ನು ಹೇಳಿ ‘ಇಂತಹ ಸಂದರ್ಭದಲ್ಲಿ ನೀನೇನು ಮಾಡುತ್ತೀಯೆ?’ ಎಂದು ಮಕ್ಕಳನ್ನು ನೇರವಾಗಿ ಕೇಳಬೇಕು. ಇಂತಹ ತರಬೇತಿ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಪರಿಚಿತರು ಏನನ್ನಾದರೂ ಕೇಳಿದರೆ ಗಟ್ಟಿಯಾಗಿ ‘ಇಲ್ಲ’ ಎನ್ನುವುದನ್ನು ಹೇಳಿಕೊಡಬೇಕು. ಅಪರಿಚಿತರು ಏಕಾಂತದಲ್ಲಿ ಮಾತನಾಡಲು ಪ್ರಯತ್ನಿಸಿದರೆ ಕೂಡಲೇ ಅಲ್ಲಿಂದ ಓಡಿಹೋಗಿ ಯಾವುದಾದರೂ ಪರಿಚಿತ ವ್ಯಕ್ತಿಗೆ ವಿಷಯ ತಿಳಿಸಬೇಕೆಂಬುದನ್ನು ಮಕ್ಕಳ ಮನಸ್ಸಿನಲ್ಲಿ ನಾಟಿಸಬೇಕು.

ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಅಸುರಕ್ಷಿತರಾಗಬಲ್ಲರು. ಪ್ರಸ್ತುತ ವಿದ್ಯಾಭ್ಯಾಸದಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಅತ್ಯಗತ್ಯವಾಗಿದೆ. ಮಕ್ಕಳಿಗೆ ಡಿಜಿಟಲ್ ಜಗತ್ತಿನಲ್ಲಿ ಮುಕ್ತವಾಗಿ ವ್ಯವಹರಿಸುವುದು ಕಡ್ಡಾಯವಾಗುತ್ತಿದೆ. ಇದರಿಂದ ಆಗಬಹುದಾದ ದುಷ್ಪರಿಣಾಮಗಳ ಸಾಧ್ಯತೆಗಳು ಕೆಲವೊಮ್ಮೆ ನಮ್ಮ ಊಹೆಗೂ ಮೀರಿದವು. ಹೀಗಾಗಿ, ಮಕ್ಕಳ ಆನ್'ಲೈನ್ ಪ್ರಪಂಚದತ್ತ ನಿಗಾ ಇಟ್ಟಿರುವುದು ಪೋಷಕರ ಜವಾಬ್ದಾರಿ. ಮಕ್ಕಳು ಕದ್ದು-ಮುಚ್ಚಿ ಕಂಪ್ಯೂಟರ್ ಬಳಸುವ ಬದಲಿಗೆ ಹಿರಿಯರ ಅನುಮತಿಯೊಡನೆ, ಅವರ ದೇಖಾರೇಖಿಯಲ್ಲಿ ಉಪಯೋಗಿಸುವುದನ್ನು ಪ್ರೋತ್ಸಾಹಿಸಬೇಕು. ಸಾಧ್ಯವಾದರೆ ಮಕ್ಕಳಿಗೆ ಪ್ರತ್ಯೇಕ ಕಂಪ್ಯೂಟರಿನ ಅನುಕೂಲ ಆಗಬೇಕು. ಅದು ಆಗದಿದ್ದರೆ, ಹಿರಿಯ ಕಂಪ್ಯೂಟರಿನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಖಾತೆ ಮಾಡಿಕೊಡಬೇಕು. ಹಿರಿಯರು ಬಳಸಬಹುದಾದ ಜಾಲತಾಣಗಳಿಗೆ ಮಕ್ಕಳು ಸೇರಲು ಆಸ್ಪದ ಇರಬಾರದು. ಮಕ್ಕಳಿಗೆ ಸುರಕ್ಷಿತ ಎನಿಸುವ ಜಾಲತಾಣಗಳನ್ನು ಮಾತ್ರ ಬಳಸುವಂತಹ ವ್ಯವಸ್ಥೆಯಾಗಬೇಕು.

ಮಕ್ಕಳ ಸುರಕ್ಷತೆ ಒಂದು ನಿರಂತರ ಪಯಣ. ಅದನ್ನು ಮಕ್ಕಳ ಜೊತೆಗಿನ ಪರ್ಯಾಪ್ತ ಸಂವಹನದ ಮೂಲಕ ಸದಾ ಚಾಲ್ತಿಯಲ್ಲಿ ಇಟ್ಟಿರಬೇಕು. ಸಣ್ಣ ವಯಸ್ಸಿನಲ್ಲಿ ಆರಂಭವಾಗುವ ಈ ಪ್ರಯತ್ನ ಮಕ್ಕಳ ಬೆಳವಣಿಗೆಯ ಆಯಾ ಹಂತಗಳಲ್ಲಿ ವಿಕಸನವಾಗುತ್ತಾ ಪಕ್ವವಾಗುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT