ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್‌ ಲುವಾಂಗ್ ಗುಹೆಯ ಕಾರ್ಯಾಚರಣೆಯ ನಂತರ...

Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

ಭಾರತದ ಕೊಡುಗೆ..!
ಥಾಯ್ಲೆಂಡ್‌ನ ಥಾಮ್‌ ಲುವಾಂಗ್‌ ಗುಹೆಯೊಳಗೆ ಸಿಲುಕಿದ್ದ ‘ವೈಲ್ಡ್ ಬೋರ್’ ಫುಟ್ಪಾಲ್ ತಂಡದ 13 ಮಂದಿಯನ್ನು ರಕ್ಷಿಸಿದ್ದು, 12 ಬಾಲಕರು ಜಾಗತಿಕಮಟ್ಟದ ‘ಸೆಲಬ್ರಟಿ’ಗಳಂತಾಗಿದ್ದು ಎಲ್ಲ ಹಳೆ ಸುದ್ದಿ. ಹೊಸ ಸುದ್ದಿ ಏನೆಂದರೆ, ಈ ಕಾರ್ಯಾಚರಣೆಗೆ ಭಾರತವೂ ಕೈಜೋಡಿಸಿದೆ ಎಂಬುದು.

‌ಗುಹೆಯೊಳಗೆ ತುಂಬಿಕೊಂಡಿದ್ದ ನೀರನ್ನು ಹೊರ ಹಾಕಲು, ಥಾಯ್ ಸರ್ಕಾರ, ಪೂನಾದ ಕಿರ್ಲೋಸ್ಕರ್ ಬ್ರದರ್ಸ್ ಕಂಪೆನಿಯ ಪರಿಣತರ ಸಹಾಯ ಪಡೆದಿತ್ತಂತೆ. ಭಾರತೀಯ ರಾಯಭಾರ ಕಚೇರಿಯ ಶಿಫಾರಸ್ಸಿನ ಮೇರೆಗೆ ಕಿರ್ಲೋಸ್ಕರ್ ಕಂಪನಿ, ಭಾರತ, ಥಾಯ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿರುವ ತನ್ನ ಪರಿಣತರನ್ನು ಘಟನಾ ಸ್ಥಳಕ್ಕೆ ಕಳುಹಿಸಿತ್ತು. ಆ ತಜ್ಞರು ಗುಹೆಯಲ್ಲಿ ತುಂಬಿಕೊಂಡಿದ್ದ ನೀರು ಖಾಲಿ ಮಾಡುವ ಕುರಿತು ಸಲಹೆ ನೀಡಿದ್ದರು. ಅಷ್ಟೇ ಅಲ್ಲ, ವೇಗವಾಗಿ ನೀರೆತ್ತುವ ಅಧಿಕ ಸಾಮರ್ಥ್ಯವುಳ್ಳ ನಾಲ್ಕು ವಿಶೇಷ ಆಟೊಪ್ರೈಮ್ ಡೀವಾಟರಿಂಗ್ ಪಂಪ್‌ಗಳನ್ನು ಸಿದ್ದವಾಗಿಟ್ಟುಕೊಂಡಿತ್ತಂತೆ. ಒಟ್ಟಾರೆ, ಈ ಮೂಲಕ ಭಾರತವೂ ಥಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾದಂತಾಗಿದೆ.

ಭತ್ತ ಹೋದ್ರೆ ಹೋಯ್ತು...
ಥಾಮ್‌ಲುಂಗ್ ಗುಹೆಯಲ್ಲಿ ಕಾರ್ಯಚರಣೆ ನಡೆಸುವಾಗ ಸುತ್ತಲಿನ ಭತ್ತದ ಗದ್ದೆಗಳೆಲ್ಲ ಹಾಳಾಗಿವೆ. ಭತ್ತವಷ್ಟೇ ಅಲ್ಲ, ಬೇರೆ ಬೇರೆ ಬೆಳೆಗಳೂ ಹಾಳಾಗಿವೆ. ಗುಹೆಯಲ್ಲಿದ್ದ ನೀರನ್ನು ಗದ್ದೆಬಯಲಿಗೆ ಬಿಡುತ್ತಿದ್ದಾಗ, ಆಗಷ್ಟೇ ನಾಟಿ ಮಾಡಿದ್ದ ಬತ್ತದ ಪೈರುಗಳು ನೆಲ ಕಚ್ಚಿವೆ. ವಾಹನಗಳು ಸಂಚಾರ, ಉಪಕರಣಗಳ ದಾಸ್ತಾನು, ಜೋರಾಗಿ ನೀರು ಹಾಯಿಸುತ್ತಿದ್ದರಿಂದ ಇಲ್ಲಿನ ರೈತರ ಬಿತ್ತಿದ ಬೆಳೆ ಕಳೆದುಕೊಳ್ಳಬೇಕಾಯಿತು.
ಆದರೆ, ರೈತರು ಈ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಬದಲಿಗೆ, ‘ಬೆಳೆ ಹೋದ್ರೆ ಹೋಯ್ತು, ಮಕ್ಕಳ ಪ್ರಾಣ ಉಳಿಯಿತಲ್ಲ ಸಾಕು’ ಎಂದು ಉದಾರತೆ ಪ್ರದರ್ಶಿಸಿದರಂತೆ. ‘ಬೆಳೆದ ಭತ್ತ ನೆಲ ಕಚ್ಚಿದರೆ, ಮತ್ತೆ ಬೆಳೆಯಬಹುದು. ಆದರೆ, ಆ ಹದಿಮೂರು ಮಕ್ಕಳಿಗೆ ತೊಂದರೆಯಾಗಿದ್ದರೆ, ಅಯ್ಯೋ.. ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರಂತೆ. ಅಂದ ಹಾಗೆ, ಆಸು ಪಾಸಿನ ರೈತರು, ಸ್ವಯಂ ಸೇವಕರಾಗಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರಂತೆ. ಈಗ ಸರ್ಕಾರ ಕಾರ್ಯಚರಣೆ ವೇಳೆ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡುವುದಾಗಿ ಘೋಷಿಸಿದೆ.

ನಾಲ್ಕು ಭಾಷೆ ಬಲ್ಲ ಬಾಲಕ
ಥಾಯ್ ಗುಹೆಯೊಳಗೆ ಸಿಲುಕಿದ್ದ ಹದಿಮೂರು ಮಂದಿಯ ಪೈಕಿ ಅದುಲ್ ಎಂಬ 14 ವರ್ಷ ಬಾಲಕನಿಗೆ ಒಟ್ಟು ನಾಲ್ಕು ಭಾಷೆಗಳು ತಿಳಿದಿವೆ. ಗುಹೆಯಲ್ಲಿ ಸಿಲುಕಿದ್ದವರ ಪೈಕಿ ನಾಲ್ಕು ಭಾಷೆಗಳನ್ನು ಬಲ್ಲ ಏಕೈಕ ಬಾಲಕ ಆತ. ತಮ್ಮನ್ನು ರಕ್ಷಿಸಲು ಬಂದ ತಂಡದೊಂದಿಗೆ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವ ಮೂಲಕ ಆತ ಎಲ್ಲರಿಗೂ ನೆರವಾಗಿದ್ದ.

ಸಿನಿಮಾವಾಗುವತ್ತ...
ಗುಹೆಯಿಂದ ಗೆದ್ದು ಬಂದ ಹನ್ನೆರಡು ಮಕ್ಕಳು ದಿನೇ ದಿನೇ ಪ್ರಸಿದ್ಧಿಪಡೆಯುತ್ತಿದ್ದಾರೆ. ಈಗಾಗಲೇ ಹಾಲಿವುಡ್‌ನ ಎರಡು ದೊಡ್ಡ ಕಂಪನಿಗಳು ಕಾರ್ಯಾಚರಣೆಯನ್ನು ಆಧರಿಸಿ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿವೆ. ಹಾಲಿವುಡ್ ಸಿನಿಮಾ ತಂತ್ರಜ್ಞರು, ಕಾರ್ಯಾಚರಣೆ ನಡೆಯುವಾಗಲೇ ಥಾಮ್‌ಲುವಾಂಗ್‌ ಗುಹೆಯ ಬಳಿ ಮೊಕ್ಕಾಂ ಮಾಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

ಜೀವಂತ ಮ್ಯೂಸಿಯಂ ...
ಥಾಮ್‌ ಲುವಾಂಗ್, ಥಾಯ್ಲೆಂಡ್‌ನಲ್ಲೇ ಬಹುದೊಡ್ಡ ಗುಹಾವ್ಯವಸ್ಥೆ ಇರುವ ತಾಣ. ಉತ್ತರ ಚಿಯಾಂಗ್‌ ರೈ ಪ್ರಾಂತ್ಯದ ಬೆಟ್ಟಗುಡ್ಡಗಳ ನಡುವಿರುವ ಮಾ ಸೈ ಪಟ್ಟಣದ ವ್ಯಾಪ್ತಿಯಲ್ಲಿದೆ. ಮ್ಯಾನ್ಮಾರ್‌ನ ಗಡಿಭಾಗದ ತಾಣವಿದು. ಮಕ್ಕಳನ್ನು ಗುಹೆಯಿಂದ ರಕ್ಷಿಸುವ ಕಾರ್ಯಾಚರಣೆ ನಂತರ, ಈ ಜಾಗ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ.

ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಈ ಗುಹೆಯನ್ನು ಜೀವಂತ ಮ್ಯೂಸಿಯಂ (ಲಿವಿಂಗ್ ಮ್ಯೂಸಿಯಂ) ಆಗಿ ಪರಿವರ್ತಿಸಿ, ಅದರಲ್ಲಿ ಈಗ ನಡೆದಿರುವ ಕಾರ್ಯಾಚರಣೆಯನ್ನು ಪ್ರವಾಸಿಗರಿಗೆ ತೋರಿಸುವ ವ್ಯವಸ್ಥೆ ಮಾಡಬಹುದು ಎಂಬ ಸಲಹೆಗಳು ಕೇಳಿಬಂದಿವೆ. ಹಾಗಾಗಿ ಥಾಮ್ ಲುವಾಂಗ್ ಗುಹೆ ಮುಂದೆ ಪ್ರವಾಸೋದ್ಯಮ ತಾಣಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT