ಮೈಸೂರೆನ್ನಿ, ಕನ್ನಡವೆನ್ನಿ,

ಮಲ್ಲಿಗೆಯೆನ್ನಿ, ಒಂದೆ!

ಕವಿ ಕೆ.ಎಸ್.ನರಸಿಂಹಸ್ವಾಮಿ ತಮ್ಮ ಮೊದಲ ಸಂಕಲನ ‘ಮೈಸೂರು ಮಲ್ಲಿಗೆ’ಯ ಆರಂಭದಲ್ಲಿ ಪ್ರವೇಶಿಕೆ ಎಂಬಂತೆ ಬರೆದ ಎಂಟು ಸಾಲಿನ ಪದ್ಯದ ಮೊದಲ ಎರಡು ಸಾಲುಗಳಿವು. ತಮ್ಮ ಹೆಸರಿನೊಂದಿಗೇ ‘ಮೈಸೂರು ಮಲ್ಲಿಗೆ’ಯನ್ನು ಸೇರಿಸಿಕೊಂಡ ಕವಿ ಕನ್ನಡದಲ್ಲಿ ಇನ್ನೊಬ್ಬರಿಲ್ಲ.

ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಾದರೂ ಅದನ್ನು ಪಕ್ಕಕ್ಕಿಟ್ಟು ಮೈಸೂರೆಂದರೆ ಕನ್ನಡ ಎಂದೇ ನಿರ್ದಿಷ್ಟವಾಗಿ ಹೇಳಿದರು. ಅದರೊಂದಿಗೆ ಮಲ್ಲಿಗೆ, ಕನ್ನಡವನ್ನೂ ಸೇರಿಸಿದರು. ಒಂದು ಊರು, ಭಾಷೆ ಮತ್ತು ಹೂವು ಏಕತೆಯ ಭಾವದಲ್ಲಿ ಮೀಯುವ ಬಗೆಯನ್ನು ಕವಿ ಕಾಣಿಸಿದ್ದು ಹೀಗೆ.
.ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!.
ನೀವು ಯಾವುದರ ಹೆಸರನ್ನೇ ಹೇಳಿದರೂ ಅದು ಒಂದು ಇನ್ನೊಂದರೊಂದಿಗೆ ಬೆಸೆದುಕೊಂಡಿದೆ. ಒಂದರ ಕನ್ನಡಿಯಲ್ಲಿ ಇನ್ನೊಂದರ ಚಿತ್ರ. ಒಂದರ ದೇಹದಲ್ಲಿ ಇನ್ನೊಂದರ ಉಸಿರು. ನೀವು ಬೇರ್ಪಡಿಸಲು ಆಗದ ಬೆಸುಗೆ. ಮೈಸೂರೆಂದರೆ ತಕ್ಷಣ ನೆನಪಾಗುವುದು ಮಲ್ಲಿಗೆಯೇ. ಅದರ ಸುವಾಸನೆಯೇ. ಮಲ್ಲಿಗೆಯ ದಂಡೆ, ಮೊಗ್ಗಿನ ಜಡೆ.

ಮಲ್ಲಿಗೆ ನಮ್ಮ ರಾಜ್ಯದ ಬಹುಮುಖ್ಯ ಅಸ್ಮಿತೆ. ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಉಳ್ಳ ನಮ್ಮ ಬೆಳೆಗಳ ಪೈಕಿ ಅದೂ ಒಂದು. ಹಡಗಲಿ ಮತ್ತು ಉಡುಪಿ ಮಲ್ಲಿಗೆಗೂ ಈ ಟ್ಯಾಗ್ ಇದೆ. ಆದರೆ ಜನರ ಮನೆ–ಮನದಲ್ಲಿ ಅಪ್ಯಾಯಮಾನ ಸ್ಥಾನ ಗಳಿಸಿರುವುದು ಮೈಸೂರು ಮಲ್ಲಿಗೆಯೇ.

ಇಷ್ಟೇ ಅಲ್ಲ, ಮೈಸೂರು ಪಾಕ್, ಅರಮನೆ, ವೀಳ್ಯದೆಲೆ, ರೇಷ್ಮೆ ಸೀರೆ, ಅಗರಬತ್ತಿ, ದಸರೆ, ಟಾಂಗಾ, ಝೂ, ಸ್ಯಾಂಡಲ್ ಸೋಪ್, ಪೇಟ, ಚಾಮುಂಡಿಬೆಟ್ಟ, ಮೈಲಾರಿ ದೋಸೆ, ಮಲ್ಲಿಗೆ ಇಡ್ಲಿ, ಬದನೆ, ಬೋಂಡಾ.. ಹೀಗೆ ಎಲ್ಲದ್ದರೊಂದಿಗೆ ಮೈಸೂರು ಬೆಸೆದುಕೊಂಡಿದೆ. ನಂಜನಗೂಡು ಬಾಳೆಹಣ್ಣು ಕೂಡ ಮೈಸೂರಿನ ಕೊಡುಗೆಯೇ. ಹೀಗೆ ಮೈಸೂರು ಬಗೆದಷ್ಟೂ ಸಿಗುವ ವರ್ಣಮಯ ಕಾರಂಜಿ. ಇವುಗಳಲ್ಲಿ ಯಾವುದರ ಮಹತ್ವ ಹೆಚ್ಚು–ಕಡಿಮೆಯಾದರೂ ಮೈಸೂರಿನ ಮಹತ್ವ ಮಾತ್ರ ಹಾಗೇ ಇರುತ್ತದೆ.
.ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ.
ಮೈಸೂರಿನ ತಂಪು ಹವೆಗೆ ಮನಸೋಲದವರುಂಟೆ? ಬೇರೆ ಊರುಗಳ ಜನರಿಗಿಂತಲೂ ಇಲ್ಲಿನ ಜನ ಸುಕೋಮಲ, ಸೌಮ್ಯಗುಣವನ್ನಪ್ಪಿಕೊಂಡವರು. ತಂಪಾದ ಇಳಿಸಂಜೆಯಲ್ಲಿ ವೃದ್ಧ ದಂಪತಿಗಳ ಮೆಲುನಡಿಗೆಯ ಸೊಗಸಿಗೆ ದಾರಿ ಬದಿಯ ಹೂವಿನ ಮರಗಳೂ ತಲೆದೂಗುವುದನ್ನು ನೋಡಲು ನೀವು ಮೈಸೂರಿಗೆ ಬರಬೇಕು. ಕೆಲವೊಮ್ಮೆ ಮೈಸೂರು ರಸ್ತೆಗಳು ಹೂವಿನ ಹಾದಿಯನ್ನೇ ನಿರ್ಮಿಸಿರುತ್ತವೆ.

ಮೈಸೂರಿಗೆ ಬಂದವರು ಚಾಮುಂಡಿ ಬೆಟ್ಟ ಹಾಗೂ ನಂಜನಗೂಡಿನ ದೇವಸ್ಥಾನಗಳಲ್ಲು ಪೂಜೆ ಸಲ್ಲಿಸಿ ಊರಿಗೆ ವಾಪಸಾಗುವಾಗ ಮೈಸೂರು ಬದನೆ, ಮಲ್ಲಿಗೆ, ವೀಳ್ಯದೆಲೆಯನ್ನು ಖರೀದಿಸಿ ಪ್ರಸಾದದೊಂದಿಗೆ ನೆಂಟರಿಷ್ಟರಿಗೆ ಕೊಟ್ಟು ಸಂಭ್ರಮಿಸುತ್ತಿದ್ದ ದಿನಗಳ ನೆನಪು ಹಿರಿಯರಲ್ಲಿದೆ.

ಮೈಸೂರೆಂದರೆ ಕನ್ನಡ ಹೇಗೆ ಎಂದು ಕೇಳಬಹುದು. ಕನ್ನಡವೆಂದರೆ ಕರ್ನಾಟಕವಲ್ಲವೇ. ಆ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು ಎಲ್ಲಿ? ಇದೇ ಮಲ್ಲಿಗೆಯ ನಗರಿಯಲ್ಲಿ!
.ಕನ್ನಡ ನಾಡಿನಲ್ಲಿ ಕನ್ನಡವು ಕನ್ನಡವ ಕನ್ನಡಿಸುತಿಹುದೆ?: ಸವಾಲುಗಳು.
53 ವರ್ಷಗಳ ಹಿಂದೆ ಎಂದರೆ ನಿಮಗೆ ತಕ್ಷಣ ಇಸವಿಯೂ ನೆನಪಾಗುತ್ತದೆ. ಹೌದು ನಿಮ್ಮ ಯೋಚನೆ ಸರಿ. ಅದು 1973. ನವೆಂಬರ್ 1. ಆಗ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಘೋಷಣೆ ಮಾಡಿದ ದಿನ. ಇದೆಲ್ಲ ನಡೆದಿದ್ದು ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ.

ಅದೇ ಸಂದರ್ಭದಲ್ಲಿ ‘ಚೆಂಬೆಳಕಿನ ಕವಿ’ ಚೆನ್ನವೀರ ಕಣವಿಯವರು ‘ಹೆಸರಾಯಿತು ಕರ್ನಾಟಕ‘ ಎಂಬ ಪದ್ಯವನ್ನೇ ಬರೆದರು. ‘ಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ; ಹಸಿಗೋಡೆಯ ಹರಳಿನಂತೆ.. ಹುಸಿ ಹೋಗದ ಕನ್ನಡ’ ಎಂಬ ಭರವಸೆಯನ್ನೂ ಬಿತ್ತಿದರು. ಅದು ಕರ್ನಾಟಕ ಏಕೀಕರಣದ ಹೋರಾಟದ ಫಲ. ಕನ್ನಡಿಗರೆಲ್ಲರೂ ಒಂದು ನಾಡಿನ ಹೆಸರಿನಲ್ಲಿ ಒಂದಾದದ್ದರ ಫಲ. ಈ ಹೋರಾಟ ಬಳ್ಳಾರಿಯಲ್ಲಿ ಶುರುವಾದರೂ ಗಟ್ಟಿಯಾಗಿದ್ದು ಮೈಸೂರು ನೆಲದಲ್ಲಿ.

ಕೆಎಸ್ನ ಪದ್ಯದ ಎರಡನೇ ಚರಣಕ್ಕೆ ಬರೋಣ.

‘ಒಡೆಯರ ಮುಕುಟದ ರತ್ನವಿದೆನ್ನಿ,

ಒಡೆಯರ ಕನ್ನಡವೆನ್ನಿ!

ಕನ್ನಡವು ಮೈಸೂರು ಅರಸರ ಕಿರೀಟದ ರತ್ನ. ಅದು ಒಡೆಯರ ಕನ್ನಡ. ಅಂದರೆ ರಾಜಭಾಷೆ. ಇಂಗ್ಲಿಷ್ ಮಾಧ್ಯಮವೇ ಪ್ರಧಾನವಾಗಿದ್ದ ಕಾಲಘಟ್ಟದಲ್ಲಿ ಮೈಸೂರು ಒಡೆಯರು ಕನ್ನಡಕ್ಕೆ ಕೊಟ್ಟ ಆದ್ಯತೆ ಬಹಳ ದೊಡ್ಡದು. ಕನ್ನಡ ಮಾಧ್ಯಮಗಳ ಶಾಲೆಗಳನ್ನು ತೆರೆದು ಎಲ್ಲ ಸಮುದಾಯದ ಮಕ್ಕಳಿಗೂ ಶಿಕ್ಷಣದ ಬೆಳಕು ತೋರಿದ್ದು ಈ ಒಡೆಯರ ಸಂತತಿ. ಸಾಮಾನ್ಯ ಜನರ ಭಾಷೆಯಾಗಿದ್ದ ಕನ್ನಡಕ್ಕೆ ಹೀಗೆ ರಾಜಭಾಷೆಯ ಮಹತ್ವದ ದೊರಕಿತು ಎಂಬುದನ್ನೇ ಕೆಎಸ್ನ ‘ಒಡೆಯರ ಕನ್ನಡ’ ಎನ್ನುತ್ತಾರೆ.

1833ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ‘ರಾಜಾ ಸ್ಕೂಲ್’ (ಇಂದಿನ ಮಹಾರಾಜ ಕಾಲೇಜು) ಸ್ಥಾಪಿಸಿದ್ದರೂ ಅಲ್ಲಿ ಕನ್ನಡಕ್ಕೆ ಆದ್ಯತೆ ಇರಲಿಲ್ಲ. ಅದಾಗಿ ಮೂರು ದಶಕಗಳ ನಂತರ ಆ ವಿಷಯ ಗಮನಕ್ಕೆ ಬಂದು, 1866ರಲ್ಲಿ ಮಲ್ಲಪ್ಪ ಎಂಬುವವರನ್ನು ಅವರು ಕನ್ನಡದ ಶಿಕ್ಷಕರಾಗಿ ನೇಮಿಸಿದ್ದರು. ಮೈಸೂರಿನಲ್ಲಿ ಹಲವು ಶಾಲೆಗಳು ಈಗ ಶತಮಾನ ಕಂಡಿವೆ.
.ನವತಾರೆಯರ ನವೋಲ್ಲಾಸ: ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ .
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಮೈಸೂರು ಮುಖ್ಯ ಪಾತ್ರ ವಹಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರಯತ್ನ ಸ್ಮರಣೀಯ.

ಹೀಗೆ ಕನ್ನಡಕ್ಕೆ ಮೈಸೂರು ಕೊಟ್ಟ ಕೊಡುಗೆ ಬಹಳ. ಈ ಪಟ್ಟಿಯನ್ನು ಇನ್ನೂ ಮುಂದುವರಿಸಬಹುದು. ಕೆಎಸ್ನ ಪದ್ಯದಲ್ಲಿ ಏಕಕಾಲಕ್ಕೆ ಮೈಸೂರಿನ ಇತಿಹಾಸವೂ ಕನ್ನಡದ ಬೆಳವಣಿಗೆಯೂ ಒಟ್ಟೊಟ್ಟಿಗೇ ಕಾಣುತ್ತವೆ.

ಇವೆಲ್ಲ ನೆನಪುಗಳು ಈಗ ಕಾಡುವ ರೂಪ ತಾಳಿವೆ. ಏಕೆಂದರೆ ಮೈಸೂರು ಮಲ್ಲಿಗೆ ಬೆಳೆಯುವವರು ಈಗ ಮೈಸೂರಿನಲ್ಲೇ ಕಡಿಮೆಯಾಗಿದ್ದಾರೆ. ಹುಡುಕಿದರೆ ಬೆರಳೆಣಿಕೆಯಷ್ಟು ಬೆಳೆಗಾರರು ಸಿಗಬಹುದಾದರೂ ಅವರಿಗೆ ಈಗ ಮರೆವು ಆವರಿಸಿದೆ. ಅವರ ಮಕ್ಕಳಿಗೆ ಕೃಷಿಯು ಬೇಡವಾದ ಕೆಲಸ. ಹೀಗಾಗಿಯೇ ಮೈಸೂರು ಮಲ್ಲಿಗೆಯ ಹೆಸರಿನಲ್ಲಿ ಬೇರೆ ಊರುಗಳ ಮಲ್ಲಿಗೆ ಹೂವು ಇಲ್ಲಿಗೆ ಬಂದು ಮಾರಾಟವಾಗುತ್ತದೆ ಎಂಬ ಮಾತೂ ಇದೆ. ಮಲ್ಲಿಗೆಯು ಬೇರೆ ಊರಿನದ್ದಾದರೂ ‘ಮೈಸೂರು’ ಹೆಸರು ಸೇರಿಸಿದರೆ ಸಾಕು. ಸದಾ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ ಮೈಸೂರು ಮಲ್ಲಿಗೆ ಎಂದಿಗೂ ಬಾಡುವುದೇ ಇಲ್ಲ. ದರವೂ ಕಡಿಮೆಯಾಗುವುದಿಲ್ಲ. ಹಬ್ಬ–ವಾರಗಳಲ್ಲಂತೂ ಒಂದು ಮೊಳ ಮಲ್ಲಿಗೆ ನೂರು ರುಪಾಯಿ ದಾಟಿರುತ್ತದೆ!

ಇನ್ನು ಕನ್ನಡ ಶಾಲೆಯತ್ತ ಬರೋಣ. ಶತಮಾನ ಕಂಡ ಶಾಲೆಗಳು ಅಲ್ಲೊಂದು ಇಲ್ಲೊಂದು ಉಸಿರಾಡುವಂತಿವೆ. ಕೆಲವು ಕಣ್ಮುಚ್ಚಿವೆ. ಕನ್ನಡ ಮಾಧ್ಯಮದ ಶಿಕ್ಷಣ ಈಗ ಅತೀ ಬಡವರ ಆಯ್ಕೆ.
.ಕನ್ನಡದ ದೀಪ: ಅನುವಾದವೂ ಸ್ವತಂತ್ರ ಪಠ್ಯ....
ಮೈಸೂರಿನಲ್ಲಿ ಕನ್ನಡ ಮಾತನಾಡುವವರೂ ಕಡಿಮೆಯಾಗುತ್ತಿದ್ದಾರೆ ಎಂಬ ಸಂಕಟ ಮೈಸೂರಿಗರದ್ದು. ಐಟಿ ಕಂಪನಿಗಳಲ್ಲಿ ಕನ್ನಡಕ್ಕೆ ಆದ್ಯತೆ ಕಡಿಮೆಯಾಗಿದೆ. ಬೀದಿಬೀದಿಯಲ್ಲೂ ತಲೆ ಎತ್ತಿರುವ ಕಾಫಿ ಕೆಫೆಗಳು, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕನ್ನಡ ಬಾರದ ಉತ್ತರ ಭಾರತದ ಕೆಲಸಗಾರರೊಂದಿಗೆ ಕನ್ನಡಕ್ಕಾಗಿ ಹೊಡೆದಾಡಬೇಕಾದ ಪರಿಸ್ಥಿತಿಯೂ ಅಲ್ಲಲ್ಲಿ ಕಾಣುತ್ತಿದೆ. ಕನ್ನಡಿಗರಿಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಹೊರಗಿನವರಿಗೆ ಕನ್ನಡ ಬರುವುದಿಲ್ಲ.

ಆದರೆ, ಇಂಥ ನೂರು ಸವಾಲುಗಳು ಎದುರಾದರೂ ಮೈಸೂರು ಪರಂಪರೆ ಮುಕ್ಕಾಗುವುದಿಲ್ಲ ಎಂಬುದೇ ವಿಶೇಷ. ಮೈಸೂರೆಂದರೆ ಮೈ–ಮನಕ್ಕಂಟುವ ಸಂಭ್ರಮ. ಬಳಲಿಕೆಯ ಮರೆಸುವ ಭಾವನೆಗಳ ಬೆಸುಗೆ.

ಕೆಎಸ್ನ ಕವನ ಹೀಗೆ ಮುಂದುವರಿಯುತ್ತದೆ; ಇರುಳನು ಕಾಣದ ಕನ್ನಡವೆನ್ನಿ; ಒಡೆಯದ ಕನ್ನಡವೆನ್ನಿ!

ಹೌದು, ಇದು ಎಲ್ಲ ಭಾಷೆಗಳ ನಡುವೆ ಗಟ್ಟಿಯಾಗಿ ನಿಂತ ನುಡಿ, ಕಾರ್ಗತ್ತಲ ನಡುವೆಯೂ ಸದಾ ಹೊಳೆಯುವ ಮಾಣಿಕ್ಯ. ಇಂಥ ಭರವಸೆಯೇ ಕನ್ನಡವನ್ನು ಉಳಿಸಿದೆ. ಮೈಸೂರು ಅದರ ಬೆನ್ನಿಗಿದೆ!
.ಶ್ರೀದೇವಿ ಕೆರೆಮನೆ ಅವರ ಕಥೆ: ಸುಪ್ತಪ್ರಜ್ಞೆಯ ಒಳಗೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.