ಗುರುವಾರ , ಮೇ 26, 2022
30 °C

ಎಲ್ಲ ಮಾದರಿಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್ಸ್ ವಿದಾಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಮಿಸ್ಟರ್ 360 ಡಿಗ್ರಿ ಬ್ಯಾಟರ್' ಖ್ಯಾತಿಯ ಎಬಿ ಡಿವಿಲಿಯರ್ಸ್, ಎಲ್ಲ ಮಾದರಿಯ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದಾರೆ.

ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.

37 ಹರೆಯದ ವಿಲಿಯರ್ಸ್, 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಸ್ಮರಣೀಯ ಗೆಲುವಿನಲ್ಲಿ ಭಾಗಿಯಾಗಿದ್ದಾರೆ. 

ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟುವ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ವಿಲಿಯರ್ಸ್, 'ಮಿಸ್ಟರ್ 360 ಡಿಗ್ರಿ ಬ್ಯಾಟರ್' ಎಂದೇ ಖ್ಯಾತಿ ಪಡೆದಿದ್ದರು. 
 
2018ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿಲಿಯರ್ಸ್ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. 

'ಇದು ನಂಬಲು ಸಾಧ್ಯವಾಗದ ಪ್ರಯಾಣವಾಗಿದ್ದು, ಈಗ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಒಪ್ಪಿಕೊಳ್ಳಲೇಬೇಕಾದ ವಾಸ್ತವ ಇದಾಗಿದೆ. ಹಠಾತ್ತಾಗಿ ಅನಿಸಿದರೂ ಅದಕ್ಕಾಗಿಯೇ ಇಂದು ನಾನು ಈ ಘೋಷಣೆ ಮಾಡುತ್ತಿದ್ದೇನೆ. ಈ ನಿರ್ಧಾರಕ್ಕಾಗಿ ನನ್ನ ಸಮಯವನ್ನು  ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅತೀವ ಕರುಣೆಯನ್ನು ತೋರಿದೆ. ದಕ್ಷಿಣ ಆಫ್ರಿಕಾ, ಆರ್‌ಸಿಬಿ, ಟೈಟಾನ್ಸ್ ಅಥವಾ ವಿಶ್ವದಾದ್ಯಂತ ಆಡುವಾಗ ಅಗಾಧ ಅನುಭವ ಹಾಗೂ ಅವಕಾಶಗಳನ್ನು ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ' ಎಂದು ಹೇಳಿದ್ದಾರೆ. 

'ಅದೇ ಹಾದಿಯಲ್ಲಿ ಸಾಗಿದ ತಂಡದ ಪ್ರತಿಯೊಬ್ಬ ಸಹ ಆಟಗಾರ,  ಎದುರಾಳಿ, ತರಬೇತುದಾರರು, ಫಿಸಿಯೋ, ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಆಡುವಾಗ ದೊರೆತ ಬೆಂಬಲಕ್ಕೆ ವಿನಮ್ರನಾಗಿದ್ದೇನೆ' ಎಂದು ಹೇಳಿದ್ದಾರೆ. 

'ಕೊನೆಯದಾಗಿ ನನ್ನ ಕುಟುಂಬ, ಹೆತ್ತವರು, ಸಹೋದರರು, ಪತ್ನಿ ಹಾಗೂ ಮಕ್ಕಳ ತ್ಯಾಗವಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಜೀವನದಲ್ಲಿ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ' ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು