ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Emerging Asia Cup 2023: ಫೈನಲ್‌ನಲ್ಲಿ ಎಡವಿದ ಭಾರತ, ಪಾಕಿಸ್ತಾನಕ್ಕೆ ಪ್ರಶಸ್ತಿ

Published 23 ಜುಲೈ 2023, 16:02 IST
Last Updated 23 ಜುಲೈ 2023, 16:02 IST
ಅಕ್ಷರ ಗಾತ್ರ

ಕೊಲಂಬೊ: ಎಮರ್ಜಿಂಗ್‌ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿ ಗೆಲ್ಲಬೇಕೆಂಬ ಭಾರತ ‘ಎ’ ತಂಡದ ಕನಸನ್ನು ಪಾಕಿಸ್ತಾನ ‘ಎ’ ತಂಡ ಭಗ್ನಗೊಳಿಸಿತು.

ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯವನ್ನು ಪಾಕ್‌, 128 ರನ್‌ಗಳಿಂದ ಗೆದ್ದುಕೊಂಡು ಕಿರೀಟ ಮುಡಿಗೇರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡ ತಯ್ಯಬ್‌ ತಾಹಿರ್‌ (108 ರನ್‌, 71 ಎ., 4X12, 4X6) ಅವರ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 352 ರನ್‌ ಪೇರಿಸಿದರೆ, ಯಶ್‌ ಧುಲ್‌ ಬಳಗ 40 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲೌಟಾಯಿತು.

ಟಾಸ್‌ ಗೆದ್ದ ಭಾರತ, ಎದುರಾಳಿ ತಂಡವನ್ನು ಬ್ಯಾಟಿಂಗ್‌ ಕಳುಹಿಸಿದ್ದು ಮುಳುವಾಗಿ ಪರಿಣಮಿಸಿತು. ಭಾರತದ ಈ ನಿರ್ಧಾರ ಅಚ್ಚರಿಗೆ ಕಾರಣವಾಯಿತು. ಏಕೆಂದರೆ ಈ ಟೂರ್ನಿಯ ಎಂಟು ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡವೇ ಜಯಿಸಿತ್ತು.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಎಂಟು ಆಟಗಾರರನ್ನು ಒಳಗೊಂಡಿದ್ದ ಪಾಕ್‌ ತಂಡ, ಮೊದಲು ಬ್ಯಾಟ್‌ ಮಾಡುವ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಭಾರತ ತಂಡವು ಈ ಟೂರ್ನಿಯಲ್ಲಿ 23 ವರ್ಷದ ಒಳಗಿನ ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು.

ಸಯಿಮ್‌ ಅಯೂಬ್ (59) ಮತ್ತು ಸಾಹಿಬ್‌ಝಾದಾ ಫರ್ಹಾನ್‌ (65) ಅವರು ಮೊದಲ ವಿಕೆಟ್‌ಗೆ 17.2 ಓವರ್‌ಗಳಲ್ಲಿ 121 ರನ್‌ ಸೇರಿಸಿ ಪಾಕ್‌ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಯೂಬ್‌ ವಿಕೆಟ್‌ ಪಡೆದ ಮಾನವ್‌ ಸುಥಾರ್‌ ಈ ಜತೆಯಾಟ ಮುರಿದರು. ಮುಂದಿನ 11 ಓವರ್‌ಗಳಲ್ಲಿ ಪಾಕ್‌ ತಂಡ 66 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. 29ನೇ ಓವರ್‌ನಲ್ಲಿ 5 ವಿಕೆಟ್‌ಗಳಿಗೆ 187 ರನ್‌ ಗಳಿಸಿತ್ತು.

ಆದರೆ ತಾಹಿರ್‌ ಅವರು ಬಿರುಸಿನ ಹೊಡೆತಗಳ ಮೂಲಕ ಭಾರತದ ಬೌಲಿಂಗ್‌ನ ದಿಕ್ಕುತಪ್ಪಿಸಿದರು. ಮುಬಶಿರ್‌ ಖಾನ್‌ (35) ಜತೆ ಆರನೇ ವಿಕೆಟ್‌ಗೆ 16 ಓವರ್‌ಗಳಲ್ಲಿ 126 ರನ್‌ ಸೇರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.

ಸವಾಲಿನ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್‌ ಶರ್ಮಾ (61 ರನ್‌, 51 ಎ.) ಮತ್ತು ಸಾಯಿ ಸುದರ್ಶನ್‌ (29 ರನ್‌) ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 64 ರನ್‌ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ತಾನ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 352 (ಸಯಿಮ್‌ ಅಯೂಬ್ 59, ಸಾಹಿಬ್‌ಝಾದಾ ಫರ್ಹಾನ್‌ 65, ಒಮರ್‌ ಯೂಸುಫ್ 35, ತಯ್ಯಬ್‌ ತಾಹಿರ್ 108, ಮುಬಶಿರ್‌ ಖಾನ್‌ 35, ರಾಜವರ್ಧನ್‌ ಹಂಗರ್ಗೇಕರ್ 48ಕ್ಕೆ 2, ರಿಯಾನ್‌ ಪರಾಗ್‌ 24ಕ್ಕೆ 2)

ಭಾರತ ‘ಎ’: 40 ಓವರ್‌ಗಳಲ್ಲಿ 224 (ಸಾಯಿ ಸುದರ್ಶನ್‌ 29, ಅಭಿಷೇಕ್‌ ಶರ್ಮಾ 61, ಯಶ್‌ ಧುಲ್‌ 39, ರಿಯಾನ್ ಪರಾಗ್‌ 14, ಸುಫಿಯಾನ್‌ ಮುಖೀಮ್‌ 66ಕ್ಕೆ 3, ಅರ್ಶದ್‌ ಇಕ್ಬಾಲ್‌ 34ಕ್ಕೆ 2, ಮೆಹ್ರನ್‌ ಮಮ್ತಾಜ್ 30ಕ್ಕೆ 2)

ಫಲಿತಾಂಶ: ಪಾಕಿಸ್ತಾನ ‘ಎ’ ತಂಡಕ್ಕೆ 128 ರನ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT