ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ACC U19 Asia Cup 2023: ಕಿರಿಯರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್‌ಗೆ ಮಣಿದ ಭಾರತ

Published 10 ಡಿಸೆಂಬರ್ 2023, 13:37 IST
Last Updated 10 ಡಿಸೆಂಬರ್ 2023, 13:37 IST
ಅಕ್ಷರ ಗಾತ್ರ

ದುಬೈ: ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲಿಗೆ ಶರಣಾಗಿದೆ.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.

ಭಾರತ ಒಡ್ಡಿದ 260 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, 47 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪಾಕಿಸ್ತಾನದ ಪರ ಅಮೋಘ ಶತಕ ಗಳಿಸಿದ ಅಜಾನ್ ಅವೈಸ್ (105*) ಗೆಲುವಿನ ರೂವಾರಿ ಎನಿಸಿದರು. ಶಹಜೇಬ್ ಖಾನ್ (63) ಹಾಗೂ ನಾಯಕ ಸಾದ್ ಬೇಗ್ (68*) ಉಪಯುಕ್ತ ಇನಿಂಗ್ಸ್ ಕಟ್ಟಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಈ ಪೈಕಿ ಅಜಾನ್ ಹಾಗೂ ನಾಯಕ ಸಾದ್ ಮುರಿಯದ ಮೂರನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟ ಕಟ್ಟಿದರು.

ಈ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮತ್ತೊಂದೆಡೆ ಭಾರತ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲು ಕಂಡಿದೆ.

ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು. ಭಾರತದ ಕಿರಿಯರ ತಂಡದ ಪರ ಆದರ್ಶ್ ಸಿಂಗ್ (62), ನಾಯಕ ಉದಯ್ ಸಹಾರನ್ (60) ಹಾಗೂ ಸಚಿನ್ ಧಾಸ್(58) ಆಕರ್ಷಕ ಅರ್ಧಶತಕಗಳನ್ನು ಗಳಿಸಿದರು. ಅರ್ಷಿನ್ ಕುಲಕರ್ಣಿ 24 ರನ್ ಗಳಿಸಿದರು.

ರುದ್ರ ಪಟೇಲ್ (1), ಮುಶೀರ್ ಖಾನ್ (2) ಬ್ಯಾಟಿಂಗ್ ವೈಫಲ್ಯ ಕಂಡರು. ಕೆಳ ಕ್ರಮಾಂಕದಲ್ಲಿ ಕೇವಲ 42 ಎಸೆತಗಳಲ್ಲಿ 58 ರನ್ ಗಳಿಸಿದ (3 ಸಿಕ್ಸರ್, 2 ಬೌಂಡರಿ) ಸಚಿನ್ ಧಾಸ್ ಭಾರತಕ್ಕೆ ಆಸರೆಯಾದರು.

ಪಾಕಿಸ್ತಾನದ ಪರ ಮೊಹಮ್ಮದ್ ಜೀಶಾನ್ ನಾಲ್ಕು ವಿಕೆಟ್ ಗಳಿಸಿದರು.

ಭಾರತದ ಕಿರಿಯರ ತಂಡವು ಅಫ್ಗಾನಿಸ್ತಾನ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಜಯ ಗಳಿಸಿತ್ತು. ಡಿಸೆಂಬರ್ 12ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡದ ಸವಾಲನ್ನು ಎದುರಿಸಲಿದೆ.

ಯುಎಇನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನ ತಲಾ ಎರಡು ತಂಡಗಳು ಸೆಮಿಪೈನಲ್‌ಗೆ ಪ್ರವೇಶಿಸಲಿವೆ.

ಡಿಸೆಂಬರ್ 15ರಂದು ಸೆಮಿಫೈನಲ್ ಪಂದ್ಯಗಳು ಮತ್ತು ಡಿ.17ರಂದು ಫೈನಲ್ ಪಂದ್ಯ ನಡೆಯಲಿದೆ. ಕಿರಿಯರ ವಿಶ್ವಕಪ್‌ನಲ್ಲಿ ಭಾರತ ಒಟ್ಟು ಎಂಟು ಬಾರಿ ಪ್ರಶಸ್ತಿ ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT