ಬುಧವಾರ, ಆಗಸ್ಟ್ 10, 2022
24 °C

ದ್ರಾವಿಡ್‌ಗೂ ಮೊದಲೇ 'ಇಂದಿರಾನಗರ್ ಕಾ ಗೂಂಡಾ' ಯಾರು ಗೊತ್ತಾ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನಟನೆಯು ಈಗಾಗಲೇ ಹಲವರನ್ನು ಅಚ್ಚರಿಸಿಗೊಳಿಸಿದೆ. ಜಾಹೀರಾತುವೊಂದರಲ್ಲಿ 'ಇಂದಿರಾನಗರ್ ಕಾ ಗೂಂಡಾ' (ಇಂದಿರಾನಗರದ ಗೂಂಡಾ) ಎನ್ನುವ ಪದವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೆಂಡ್ ಆಗಿದೆ.

ಹಾಗಿರಬೇಕಾದರೆ ದ್ರಾವಿಡ್‌ಗೂ ಮೊದಲೇ ತಾವು 'ಇಂದಿರಾನಗರ್ ಕಾ ಗೂಂಡಾ' ಆಗಿದ್ದೆ ಎಂದು ಕರ್ನಾಟಕದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಆ ಸನ್ನಿವೇಶವನ್ನು ಪ್ರಸಾದ್ ಅವರು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ.

ಇದು ಬಹಳ ಹಿಂದಿನ ಕಥೆ. ಆದರೂ ಈ ಘಟನೆ ಈಗಲೂ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಮಾಸದೇ ಉಳಿದಿದೆ. 25 ವರ್ಷಗಳ ಹಿಂದೆ 1996ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ನಡೆದ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು.

ಇದನ್ನೂ ಓದಿ: 

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಎಷ್ಟೊಂದು ರೋಚಕತೆಗೆ ಸಾಕ್ಷಿಯಾಗುತ್ತದೆ ಎಂಬುದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಕಿಕ್ಕಿರಿದು ತುಂಬಿದ ಸ್ಟೇಡಿಯಂನಲ್ಲಿ ಭಾರತ ಒಡ್ಡಿದ 289 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ದಿಟ್ಟ ಪ್ರತ್ಯುತ್ತರವನ್ನೇ ನೀಡಿತ್ತು. ಭಾರತದ ಪಾಳೇಯದಲ್ಲಿ ಆತಂಕ ಮಡುಗಟ್ಟಿತ್ತು. ಪಾಕ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಆಮೀರ್ ಸೊಹೈಲ್, ಭಾರತವನ್ನು ಮಾರಕವಾಗಿ ಕಾಡಿದರು. ಪರಿಣಾಮ 14.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 113 ರನ್‌ಗಳು ಹರಿದು ಬಂದಿದ್ದವು.

 

 

 

ಅದು ಟ್ವೆಂಟಿ-20 ಯುಗ ಆಗಿರಲಿಲ್ಲ. ಆದರೂ ಭಾರತ ವಿರುದ್ಧ ಪಂದ್ಯದಲ್ಲಿ ಉದ್ರೇಕಗೊಳಗಾಗಿದ್ದ ಪಾಕ್ ಬ್ಯಾಟ್ಸ್‌ಮನ್‌ಗಳು ನೈಜ ತಾಕತ್ತು ತೋರಿಸುವ ತವಕದಲ್ಲಿದ್ದರು. ಅದೇ ಭರದಲ್ಲಿ ಮಾಡಬಾರದ ತಪ್ಪೊಂದನ್ನು ಮಾಡಿಬಿಟ್ಟರು.

 

ಸ್ಥಳೀಯ ಹೀರೊ ವೆಂಕಟೇಶ್ ಪ್ರಸಾದ್ ದಾಳಿಯಲ್ಲಿ ಚೆಂಡನ್ನು ಬೌಂಡರಿಗಟ್ಟಿದ ಸೊಹೈಲ್, ಬ್ಯಾಟನ್ನು ಅವರತ್ತ ತೋರಿಸುತ್ತಾ ಮತ್ತೆ ಅದೇ ದಿಕ್ಕಿನತ್ತ ಚೆಂಡನ್ನು ಅಟ್ಟುವುದಾಗಿ ನಿಂದನೆ ಮಾಡಿದರು. ಆಗಲೇ ಪ್ರಸಾದ್ ಎದುರಾಳಿ ಪಾಲಿಗೆ ನೈಜ 'ಗೂಂಡಾ' ಎನಿಸಿದರು. ನಂತರದ ಎಸೆತದಲ್ಲಿ ಸೊಹೈಲ್ ವಿಕೆಟ್ ಹಾರಿಸಿದ ಪ್ರಸಾದ್ ಅದೇ ಧಾಟಿಯಲ್ಲಿ ಬ್ಯಾಟ್ಸ್‌ಮನ್‌ರನ್ನು ಪೆವಿಲಿಯನ್‌ಗೆ ಮರಳಿಸಿದರು.

ಇದನ್ನೂ ಓದಿ: 

ಸಿಂಹದ ಗುಹೆಯೊಳಗೆ ಪ್ರಾಣಿಯೊಂದು ನುಗ್ಗಿದರೆ ಪರಿಸ್ಥಿತಿ ಹೇಗಿರಬಹುದು? ಇದೇ ಪರಿಸ್ಥಿತಿ ಅಮೀರ್ ಸೊಹೈಲ್ ಹಾಗೂ ಪಾಕಿಸ್ತಾನ ತಂಡಕ್ಕೆ ಎದುರಾಗಿತ್ತು. ಇಲ್ಲಿಂದ ಬಳಿಕ ಪಾಕಿಸ್ತಾನ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ ಭಾರತ 39 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ಪ್ರಸಾದ್ ಮೂರು ಮಹತ್ವದ ವಿಕೆಟ್‌ಗಳನ್ನು ಕಬಳಿಸಿದ್ದರು. ಇದೇ ಪಂದ್ಯದಲ್ಲಿ ಕರ್ನಾಟಕದ ಮಾಜಿ ಸ್ಟಾರ್‌‌ಗಳಾದ ಅನಿಲ್ ಕುಂಬ್ಳೆ ಮೂರು, ವೆಂಕಟಪತಿ ರಾಜು ಮತ್ತು ಜಾವಗಲ್ ಶ್ರೀನಾಥ್ ಸಹ ತಲಾ ಒಂದು ವಿಕೆಟನ್ನು ಹಂಚಿಕೊಂಡಿದ್ದರು.

ಈ ಘಟನೆಯನ್ನೀಗ ಟ್ವಿಟರ್‌ನಲ್ಲಿ ನೆನಪಿಸಿಕೊಳ್ಳುವ ಮೂಲಕ ವೆಂಕಟೇಶ್ ಪ್ರಸಾದ್, ತಾವು ಕೂಡಾ 'ಇಂದಿರಾನಗರದ ಗೂಂಡಾ' ಎಂದು ಹೇಳಿದ್ದಾರೆ. ಇದನ್ನು ಪಾಕಿಸ್ತಾನ ಪತ್ರಕರ್ತರೊಬ್ಬರು ಕೆಣಕಲು ಪ್ರಯತ್ನಿಸಿದ್ದಾರೆ. ನಜೀಬ್ ಉಲ್ ಹಸ್ನೈನ್ ಎಂಬವರು ಇದು ನಿಮ್ಮ ಏಕೈಕ ಸಾಧನೆಯೇ ಎಂದು ಪ್ರಸಾದ್ ಅವರನ್ನು ಕಾಲೆಳೆಯಲು ಪ್ರಯತ್ನ ಮಾಡಿದ್ದಾರೆ. ಇದಕ್ಕೂ ಉತ್ತರ ನೀಡಿರುವ ಪ್ರಸಾದ್, 'ಇಲ್ಲ ನಜೀವ್ ಭಾಯ್, ನಂತರದ ವಿಶ್ವಕಪ್‌ಗಾಗಿ ಕೆಲವು ಸಾಧನೆಗಳನ್ನು ಕಾಯ್ದಿರಿಸಿದ್ದೆ. 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 27 ರನ್ ತೆತ್ತು ಐದು ವಿಕೆಟ್‌ಗಳನ್ನು ಕಬಳಿಸಿದ್ದೆ. ಪಾಕಿಸ್ತಾನಕ್ಕೆ 228 ರನ್ ಬೆನ್ನತ್ತಲು ಸಾಧ್ಯವಾಗಲಿಲ್ಲ' ಎಂದು ಸದ್ದಡಗಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು