ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಉಳಿಸಿಕೊಂಡ ಆಂಧ್ರ

ನಾಗೇಶ್‌ ಟ್ರೋಫಿ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿ
Last Updated 16 ಫೆಬ್ರುವರಿ 2021, 13:41 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕ ವೆಂಕಟೇಶ್ವರ ರಾವ್‌ (ಔಟಾಗದೆ 132) ಅವರ ಭರ್ಜರಿ ಶತಕದ ಬಲದಿಂದ ಹಾಲಿ ಚಾಂಪಿಯನ್‌ ಆಂಧ್ರಪ್ರದೇಶ ತಂಡವು ನಾಗೇಶ್‌ ಟ್ರೋಫಿ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆ ತಂಡವು80 ರನ್‌ಗಳಿಂದ ಒಡಿಶಾ ತಂಡವನ್ನು ಮಣಿಸಿತು.

ನಗರದ ಹೊರವಲಯದಲ್ಲಿರುವ ಅಲ್ಟಾಯರ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಆಂಧ್ರಪ್ರದೇಶ ಬ್ಯಾಟಿಂಗ್‌ ಆಯ್ದುಕೊಂಡಿತು. ತಂಡದ ತಾರಾ ಆಟಗಾರ ಅಜಯಕುಮಾರ್‌ ರೆಡ್ಡಿ ಬೇಗ ನಿರ್ಗಮಿಸಿದರೂ, ವೆಂಕಟೇಶ್ವರ ರಾವ್‌ ತಂಡವನ್ನು ಆಧರಿಸಿದರು. ಕೇವಲ 65 ಎಸೆತಗಳಲ್ಲಿ 23 ಬೌಂಡರಿಗಳನ್ನು ಬಾರಿಸಿದ ಅವರು, ಮೂರನೇ ವಿಕೆಟ್‌ಗೆ ಟಿ. ದುರ್ಗಾರಾವ್‌ (47) ಅವರೊಂದಿಗೆ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ನಿಗದಿತ ಓವರ್‌ಗಳಲ್ಲಿ ಆಂಧ್ರಪ್ರದೇಶ ಮೂರು ವಿಕೆಟ್‌ ಕಳೆದುಕೊಂಡು 246 ರನ್‌ ಪೇರಿಸಿತು.

ಗೆಲ್ಲಲು ಓವರ್‌ಗೆ ಸರಾಸರಿ 12 ರನ್‌ ಗಳಿಸಬೇಕಾಗಿದ್ದ ಒಡಿಶಾ ಯಾವ ಹಂತದಲ್ಲಿಯೂ ಪೈಪೋಟಿ ನೀಡಲಿಲ್ಲ. ಆಂಧ್ರದ ಕರಾರುವಾಕ್‌ ದಾಳಿಯ ಎದುರು ನಲುಗಿತು. ನಿಗದಿತ ಓವರುಗಳಲ್ಲಿ ಐದು ವಿಕೆಟ್‌ಗೆ 166 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಸುಖರಾಮ್‌ ಮಾಜಿ (52, 33 ಎಸೆತ, 8 ಬೌಂಡರಿ) ಅವರ ಅರ್ಧಶತಕ ಗಳಿಸಿದರು.

ಕಳೆದ ಆವೃತ್ತಿಯ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡವು ಕರ್ನಾಟಕವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ. ನಾರಾಯಣ ಗೌಡ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಸಂಕ್ಷಿಪ್ತ ಸ್ಕೋರು: ಆಂಧ್ರಪ್ರದೇಶ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 246 (ವೆಂಕಟೇಶ್ವರ ರಾವ್‌ ಔಟಾಗದೆ 132, ಟಿ. ದುರ್ಗಾ ರಾವ್‌ 47). ಒಡಿಶಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 166 (ಸುಖರಾಮ್‌ ಮಾಜಿ 52). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ 80 ರನ್‌ಗಳ ಗೆಲುವು ಮತ್ತು ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT