ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಗೆಲುವಿನತ್ತ ಭಾರತ; 3ನೇ ದಿನದಂತ್ಯಕ್ಕೆ ಆಸೀಸ್ 133/6

Last Updated 28 ಡಿಸೆಂಬರ್ 2020, 7:12 IST
ಅಕ್ಷರ ಗಾತ್ರ

ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಮರಣೀಯ ಗೆಲುವಿನ ಸನಿಹದಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್‌ಗಳ ಅಮೂಲ್ಯ ಮುನ್ನಡೆಯೊಂದಿಗೆ ಮೂರನೇ ದಿನದಾಟದಲ್ಲೂ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಎದುರಾಳಿ ತಂಡದ ಆರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.

ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 66 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಅಲ್ಲದೆ ಎರಡು ರನ್‌ಗಳ ಮುನ್ನಡೆ ಮಾತ್ರ ಕಾಯ್ದುಕೊಂಡಿದೆ.

ಪಂದ್ಯದಲ್ಲಿ ಸಂಪೂರ್ಣ ಅಧಿಪತ್ಯ ಸ್ಥಾಪಿಸಿರುವ ಭಾರತ, ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಪಡೆದು ಪಂದ್ಯ ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.

ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ನಿಗೆ ಆಲೌಟಾಗಿದ್ದ ಟೀಮ್ ಇಂಡಿಯಾ ಮಗದೊಮ್ಮೆ ಇದಕ್ಕೆ ಸಮಾನವಾದ ತಪ್ಪನ್ನು ಪುನರಾವರ್ತಿಸದಿದ್ದರೆ ಎಂಸಿಜಿ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದು 1-1ರ ಅಂತರದ ಸಮಬಲ ಸಾಧಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ.

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ದಾಂಡಿಗರ ಮೇಲೆ ಭಾರತೀಯ ಬೌಲರ್‌ಗಳು ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಜೋ ಬರ್ನ್ಸ್ (4) ಹೊರದಬ್ಬಿದ ಉಮೇಶ್ ಯಾದವ್ ಆತಿಥೇಯರಿಗೆ ಮೊದಲ ಆಘಾತ ನೀಡಿದರು. ಆದರೆ ಗಾಯದ ಸಮಸ್ಯೆಗೊಳಗಾದ ಉಮೇಶ್ ಮೈದಾನದಿಂದ ಹೊರನಡೆದರು.

ಈ ಹಂತದಲ್ಲಿ ಅಪಾಯಕಾರಿ ಮಾರ್ನಸ್ ಲಾಬುಷೇನ್ (28) ಹೊರದಬ್ಬಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮಗದೊಮ್ಮೆ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಸ್ಪೆಲ್ ಸಂಘಟಿಸಿದರು.

ಸ್ಟೀವನ್ ಸ್ಮಿತ್ (8) ಕ್ಲೀನ್ ಬೌಲ್ಡ್ ಮಾಡಿದ ಜಸ್‌ಪ್ರೀತ್ ಬೂಮ್ರಾ ತಮ್ಮ ಸಾಮರ್ಥ್ಯವನ್ನು ಮೆರೆದರು. ಇದರೊಂದಿಗೆ ಸ್ಮಿತ್ ಸತತ ವೈಫಲ್ಯಕ್ಕೊಳಗಾದರು.

ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ ಬಲೆಗೆ ಟ್ರಾವಿಸ್ ಹೆಡ್ (17) ಬಿದ್ದರು. ಈ ಹಂತದಲ್ಲಿ ದಾಳಿಗಿಳಿದ ರವೀಂದ್ರ ಜಡೇಜ ಸೆಟ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್‌ಗೆ (40) ಪೆವಿಲಿಯನ್ ಹಾದಿ ತೋರಿಸಿದರು.

ಇದಾದ ಬೆನ್ನಲ್ಲೇ ನಾಯಕ ಟಿಮ್ ಪೇನ್ (1) ವಿಕೆಟ್ ಪಡೆಯುವ ಮೂಲಕ ಡಬಲ್ ಆಘಾತ ನೀಡಿದರು. ಈ ಹಂತದಲ್ಲಿ 99 ರನ್ನಿಗೆ ಆರು ವಿಕೆಟ್ ಕಳೆದುಕೊಂಡ ಆಸೀಸ್ ಭಾರಿ ಹಿನ್ನಡೆಗೊಳಗಾಯಿತು.

ಆದರೆ ಮುರಿಯದ ಏಳನೇ ವಿಕೆಟ್‌ಗೆ 34 ರನ್ ಜೊತೆಯಾಟ ನೀಡಿರುವ ಕ್ಯಾಮರೂನ್ ಗ್ರೀನ್ (17*) ಹಾಗೂ ಪ್ಯಾಟ್ ಕಮಿನ್ಸ್ (15*) ದಿಟ್ಟ ಹೋರಾಟವನ್ನು ನೀಡಿದ್ದು, ಭಾರತದ ಗೆಲುವನ್ನು ವಿಳಂಬಗೊಳಿಸುವ ಪ್ರಯತ್ನ ಮಾಡಿದರು.

ಭಾರತದ ಪರ ರವೀಂದ್ರ ಜಡೇಜ ಎರಡು ಮತ್ತು ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು.

ಭಾರತ 326ಕ್ಕೆ ಆಲೌಟ್; 131 ರನ್ ಮುನ್ನಡೆ
ಈ ಮೊದಲು ಮೂರನೇ ದಿನದಾಟದ ಆರಂಭದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 115.1 ಓವರ್‌ಗಳಲ್ಲಿ 326 ರನ್‌ ಪೇರಿಸಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತ್ತು. 277ಕ್ಕೆ 5 ಎಂಬಲ್ಲಿದ್ದ ಮೂರನೇ ದಿನದಾಟ ಮುಂದುವರಿಸಿದ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜ ತಂಡದ ಮುನ್ನಡೆಯನ್ನು 100ರ ಗಡಿ ದಾಟಿಸಿದರು. ಆದರೆ ಜಡೇಜ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರಹಾನೆ ರನೌಟ್‌ಗೆ ಬಲಿಯಾದರು.

223 ಎಸೆತಗಳನ್ನು ಎದುರಿಸಿದ ರಹಾನೆ 12 ಬೌಂಡರಿಗಳ ನೆರವಿನಿಂದ 112 ರನ್ ಗಳಿಸಿದರು. ಈ ಮೂಲಕ ಆಸೀಸ್ ನೆಲದಲ್ಲಿ ಸ್ಮರಣೀಯ ಶತಕ ಬಾರಿಸಿದರು. ಅಲ್ಲದೆ ಆರನೇ ವಿಕೆಟ್‌ಗೆ ರವೀಂದ್ರ ಜಡೇಜ ಅವರೊಂದಿಗೆ 121 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಇನ್ನೊಂದೆಡೆ ಪರಿಣಾಮಕಾರಿ ಇನ್ನಿಂಗ್ಸ್ ಕಟ್ಟಿದ ರವೀಂದ್ರ ಜಡೇಜ ಅರ್ಧಶತಕ ಸಾಧನೆ ಮಾಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಜಡೇಜ ಕೂಡಾ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. 159 ಎಸೆತಗಳನ್ನು ಎದುರಿಸಿದ ಜಡೇಜ ಮೂರು ಬೌಂಡರಿಗಳಿಂದ 57 ರನ್ ಗಳಿಸಿದರು.

ಭಾರತ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಕೊಡುಗೆ ನೀಡಲಿಲ್ಲ. ಅಂತಿಮವಾಗಿ 326 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ (14), ಉಮೇಶ್ ಯಾದವ್ (9), ಜಸ್ಪ್ರೀತ್ ಬುಮ್ರಾ (0) ಹಾಗೂ ಮೊಹಮ್ಮದ್ ಸಿರಾಜ್ (0*) ನಿರಾಸೆ ಮೂಡಿಸಿದರು.

ಊಟದ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಭಾರತ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಹಾಗೂ ನಥನ್ ಲಿಯನ್ ತಲಾ ಮೂರು ಮತ್ತು ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಕಬಳಿಸಿದರು.

ಭಾರತವು ಕೊನೆಯ ಐದು ವಿಕೆಟ್‌ಗಳನ್ನು ಕೇವಲ 32 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತ್ತು.

ಜಸ್‌ಪ್ರೀತ್ ಬೂಮ್ರಾ (56ಕ್ಕೆ 4), ರವಿಚಂದ್ರನ್ ಅಶ್ವಿನ್ (35ಕ್ಕೆ 3) ಹಾಗೂ ಡೆಬ್ಯು ವೇಗದ ಬೌಲರ್ ಮೊಹಮ್ಮದ್ ಸಿರಾಜ್ (40ಕ್ಕೆ 2) ನಿಖರ ದಾಳಿಯ ನೆರವಿನಿಂದ ಟೀಮ್ ಇಂಡಿಯಾವು, ಮೊದಲ ದಿನದಾಟದಲ್ಲಿ ಎದುರಾಳಿ ತಂಡವನ್ನು 195 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT