ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U19 World Cup: ಸೆಮಿಯಲ್ಲಿ ಎಡವಿದ ಪಾಕ್; ಫೈನಲ್‌ನಲ್ಲಿ ಭಾರತಕ್ಕೆ ಆಸಿಸ್ ಸವಾಲು

Published 8 ಫೆಬ್ರುವರಿ 2024, 15:54 IST
Last Updated 8 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆನೋನಿ (ದಕ್ಷಿಣ ಆಫ್ರಿಕಾ): ರೋಚಕ ಹೋರಾಟಕ್ಕೆ ಸಾಕ್ಷಿಯಾದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಐಸಿಸಿ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಈಗಾಗಲೇ ಫೈನಲ್‌ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ, ಫೆಬ್ರುವರಿ 11ರಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಇಂದು ನಡೆದ ಪಂದ್ಯದಲ್ಲಿ ಪಾಕ್‌ ನೀಡಿದ 180 ರನ್‌ ಗುರಿ ಎದುರು ಕೊನೇ ಓವರ್‌ವರೆಗೂ ಹೋರಾಟ ನಡೆಸಿದ ಆಸ್ಟ್ರೇಲಿಯಾ 5 ಎಸೆತಗಳು ಬಾಕಿ ಇರುವಂತೆ 9 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಆಸಿಸ್‌ 10 ಓವರ್‌ಗಳಲ್ಲಿ ಒಂದೂ ವಿಕೆಟ್‌ ನಷ್ಟವಿಲ್ಲದೆ 33 ರನ್‌ ಗಳಿಸಿತ್ತು. ಈ ವೇಳೆ ಬೌಲಿಂಗ್‌ ಮಾಡಿದ ಅಲಿ ರಾಜಾ, ತಮ್ಮ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 14 ರನ್‌ ಗಳಿಸಿದ್ದ ಸ್ಯಾಮ್‌ ಕಾನ್‌ಸ್ಟಾಸ್‌ ಔಟಾದ ಬಳಿಕ, ಬೆನ್ನುಬೆನ್ನಿಗೆ ಇನ್ನೂ ಮೂರು ವಿಕೆಟ್‌ ಪತನವಾದವು. ಹೀಗಾಗಿ, ಆಸಿಸ್‌ 59 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು.

ಇದರಿಂದ ಆಸಿಸ್‌ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈ ಹಂತದಲ್ಲಿ ಹ್ಯಾರಿ ಡಿಕ್ಸನ್‌ಗೆ ಜೊತೆಯಾದ ಒಲಿವರ್‌ ಪೀಕೆ ಶಾಂತ ಚಿತ್ತದಿಂದ ಬ್ಯಾಟ್‌ ಬೀಸಿದರು. ವಿಕೆಟ್‌ ಉರುಳದಂತೆ ಎಚ್ಚರಿಕೆಯ ಆಟವಾಡಿದ ಇವರು 5ನೇ ವಿಕೆಟ್‌ ಪಾಲುದಾರಿಕೆಯಲ್ಲಿ 43 ರನ್‌ ಕಲೆಹಾಕಿ ಅಲ್ಪ ಚೇತರಿಕೆ ನೀಡಿದರು.

75 ಎಸೆತಗಳಲ್ಲಿ 50 ರನ್‌ ಗಳಿಸಿ ಭರವಸೆ ಮೂಡಿಸಿದ್ದ ಡಿಕ್ಸನ್‌, ಇನ್ನೂ 78 ರನ್‌ ಬೇಕಿದ್ದಾಗ ವಿಕೆಟ್‌ ಒಪ್ಪಿಸಿದರು. ಬಳಿಕ, ಆರನೇ ವಿಕೆಟ್‌ ಜೊತೆಯಾಟದಲ್ಲಿ 44 ರನ್‌ ಕೂಡಿಸಿದ ಒಲಿವರ್‌ (49) ಮತ್ತು ಟಾಮ್‌ ಕ್ಯಾಂಪ್‌‌ಬೆಲ್‌ (25), ಕೇವಲ 9 ರನ್ ಅಂತರದಲ್ಲಿ ನಿರ್ಣಾಯಕ ಹಂತದಲ್ಲಿ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ಪಾಕ್‌ ಪಡೆಯ ಗೆಲುವಿನ ಆಸೆ ಮತ್ತೆ ಚಿಗುರಿತು.

ಬೌಲಿಂಗ್‌ನಲ್ಲಿ ಮಿಂಚಿದ್ದ ಟಾಮ್‌ ಸ್ಟ್ರಾಕರ್‌ (3) ಮತ್ತು ಮಹ್ಲಿ ಬಿಯರ್ಡ್‌ಮನ್‌ (0) ಜವಾಬ್ದಾರಿ ಅರಿತು ಆಡುವಲ್ಲಿ ವಿಫಲರಾದರು.

ಒಂದು ಹಂತದಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿದ್ದ ಆಸಿಸ್‌ ಬಳಿಕ, 164 ರನ್‌ ಆಗುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ಒತ್ತಡ ಮೆಟ್ಟಿನಿಂತ ರಾಫ್‌ ಮೆಕ್‌ಮಿಲನ್‌ (19) ಹಾಗೂ ಕಲ್ಲಮ್‌ ವಿಡ್ಲೆರ್‌ (2) ಮುರಿಯದ 10ನೇ ವಿಕೆಟ್‌ ಜೊತೆಯಾಟದಲ್ಲಿ 17 ರನ್‌ ಸೇರಿಸಿ ಪಾಕ್‌ ಪಡೆಯನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಆಸ್ಟ್ರೇಲಿಯಾ 6ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಪಾಕ್‌ ಪರ ಅಲಿ ರಝಾ 10 ಓವರ್‌ಗಳಲ್ಲಿ 34 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಅರಾಫತ್‌ ಮಿನ್ಹಾಸ್‌ 2 ವಿಕೆಟ್‌ ಕಿತ್ತರೆ, ಉಬೇದ್‌ ಶಾ ಮತ್ತು ನವೀದ್‌ ಅಹ್ಮದ್‌ ಖಾನ್‌ ಒಂದೊಂದು ವಿಕೆಟ್ ಪಡೆದರು.

ಸದ್ಯ ಫೈನಲ್‌ಗೇರಿರುವ ರಾಷ್ಟ್ರಗಳ ಸೀನಿಯರ್‌ ತಂಡಗಳೇ 2023ರಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲೂ ಮುಖಾಮುಖಿಯಾಗಿದ್ದವು. ಆಗ ಆಸ್ಟ್ರೇಲಿಯಾ ಜಯ ಗಳಿಸಿತ್ತು.

ಪಾಕ್‌ ಪರ ಎರಡಂಕಿ ಗಳಿಸಿದ್ದು ಮೂವರೇ
ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಬ್ಯಾಟರ್‌ಗಳು, ಆಸಿಸ್‌ ವೇಗಿಗಳ ಬಿರುಗಾಳಿಯಂಥ ದಾಳಿ ಎದುರು ದಿಕ್ಕೆಟ್ಟರು.

ಪಾಕ್‌ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ವೇಗಿ ಟಾಮ್‌ ಸ್ಟ್ರಾಕರ್‌, 9.5 ಓವರ್‌ಗಳಲ್ಲಿ ಒಂದು ಮೇಡನ್‌ ಸಹಿತ ಕೇವಲ 24 ರನ್‌ ಬಿಟ್ಟುಕೊಟ್ಟು ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಮಹ್ಲಿ ಬಿಯರ್ಡ್‌ಮನ್‌, ಕಲ್ಲಮ್ ವಿಡ್ಲೆರ್‌, ರಾಫ್‌ ಮೆಕ್‌ಮಿಲನ್‌ ಮತ್ತು ಟಾಮ್‌ ಕಾಂಪ್‌ಬೆಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸಾದ್‌ ಬೇಗ್‌ ನೇತೃತ್ವದ ಪಾಕ್‌ ಯುವ ಪಡೆಯ ಶಮೈಲ್‌ ಹುಸೇನ್‌ (17), ಅಜಾನ್‌ ಅವೈಸ್‌ (52) ಮತ್ತು ಅರಾಫತ್‌ ಮಿನ್ಹಾಸ್‌ (52) ಹೊರತುಪಡಿಸಿದರೆ, ಉಳಿದ ಯಾವ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ. ಹೀಗಾಗಿ, ಪಾಕ್‌ ಪಡೆ ಸಾಧಾರಣ ಮೊತ್ತಕ್ಕೆ ಕುಸಿಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT