ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಮುಸ್ಸಂಜೆಗೆ ‘ಚಿನ್ನ‘ದ ಮೆರಗು

ಬೌಲರ್‌ ಎಸೆತ ಹಾಕದೇ ಪಂದ್ಯ ಆರಂಭವಾಗದು; ಪ್ರಸನ್ನ ಮಾತಿನ ಮೋಡಿ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರಿಕೆಟ್ ಬ್ಯಾಟರ್‌ಗಳ ಆಟವಿರಬಹುದು. ಆದರೆ ಬೌಲರ್ ಮೊದಲ ಎಸೆತ ಹಾಕದೆ ಯಾವ ಪಂದ್ಯವೂ ಆರಂಭವಾಗುವುದಿಲ್ಲ’–

ಸ್ಪಿನ್ ಬೌಲಿಂಗ್‌ನ ದಂತಕಥೆ ಎರ್ರಪಳ್ಳಿ ಪ್ರಸನ್ನ ಅವರ ಈ ಮಾತು ಯುಗಾದಿ ಹಬ್ಬದ ಮುಸ್ಸಂಜೆಯ ಸೊಬಗನ್ನು ನೂರ್ಮಡಿಗೊಳಿಸಿತು. ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ (ಬಿಐಸಿ) ಸಭಾಂಗಣದಲ್ಲಿ ಸೇರಿದ್ದ ಕ್ರಿಕೆಟ್‌ಪ್ರೇಮಿಗಳಲ್ಲಿ ಮಿಂಚಿನ ಸಂಚಲನ ಮೂಡಿಸಿತು. 

1974ರಲ್ಲಿ ಪ್ರಸನ್ನ ನಾಯಕತ್ವದ ಕರ್ನಾಟಕ ತಂಡವು ಮೊದಲ ಸಲ ರಣಜಿ ಟ್ರೋಫಿ ಗೆದ್ದ ಸಂಭ್ರಮಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ  ಮಂಗಳವಾರ ಸಂವಾದ ಆಯೋಜಿಸಲಾಗಿತ್ತು. ದಶಕಗಳ ಹಿಂದೆ ಪ್ರಸನ್ನ ಅವರ  ಸ್ಪಿನ್ ಮೋಡಿಗೆ ಶರಣಾಗುತ್ತಿದ್ದ ಖ್ಯಾತನಾಮ ಬ್ಯಾಟರ್‌ಗಳಂತೆಯೇ ಈ ಸಂವಾದದಲ್ಲಿ ಅವರ ಮಾತಿನ ಧಾಟಿಗೆ ಕೇಳುಗರು ‘ಕ್ಲೀನ್‌ಬೌಲ್ಡ್’ ಆದರು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ಸಂವಾದವನ್ನು ನಿರ್ವಹಿಸಿದರು. ಕ್ರಿಕೆಟ್ ಲೇಖಕ ಸುರೇಶ್ ಮೆನನ್ ಮತ್ತು ಕ್ರೀಡಾ ಪತ್ರಕರ್ತೆ ಶಾರದಾ ಉಗ್ರಾ ಸಂವಾದದಲ್ಲಿ ಭಾಗವಹಿಸಿದರು. 

ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಬಾಂಬೆ ತಂಡವನ್ನು ಸೋಲಿಸಿದ್ದು ಕರ್ನಾಟಕದ ಐತಿಹಾಸಿಕ ಸಾಧನೆಯಾಗಿತ್ತು. ಸತತ ಹದಿನೈದು ಬಾರಿ ರಣಜಿ ಟ್ರೋಫಿ ಗೆದ್ದ ಬಾಂಬೆ ತಂಡದಲ್ಲಿ ಆಗ ಸುನಿಲ್ ಗಾವಸ್ಕರ್ ಪ್ರಮುಖ ಬ್ಯಾಟರ್ ಆಗಿದ್ದರು. ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ್ದ ಪ್ರಸನ್ನ ಅವರ ಎಸೆತವು ‘ಬಾಲ್ ಆಫ್‌ ದಿ ಸೆಂಚುರಿ’ ಎಂದೇ ಬಣ್ಣಿಸಲಾಗಿದೆ. 

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನ, ‘ನಾನು ಯಾವಾಗಲೂ ಒಂದು ಗುರಿಯಿಟ್ಟುಕೊಂಡೇ ಬೌಲಿಂಗ್ ಮಾಡುತ್ತಿದ್ದೆ. ನನ್ನೆದುರಿಗೆ ಗ್ಯಾರಿ ಸೋಬರ್ಸ್, ಸುನಿಲ್ ಗಾವಸ್ಕರ್, ರೋಹನ್ ಕನ್ಹಾಯ್  ಅವರಂತಹ ಶ್ರೇಷ್ಠರಿದ್ದರೂ ಅಷ್ಟೇ. ಅವರು ನನ್ನ ಪಾಲಿಗೆ ಬ್ಯಾಟರ್ ಮಾತ್ರ. ಕ್ರಿಕೆಟ್‌ ಎಷ್ಟೇ ಬ್ಯಾಟ್ಸ್‌ಮನ್ ಗೇಮ್ ಆಗಿದ್ದರೂ ಬೌಲರ್ ಎಸೆತ ಹಾಕದೇ ಪಂದ್ಯ ಆರಂಭವಾಗದು. ಈ ಅಂಶವೇ ನನ್ನ ಗಟ್ಟಿ ಮನೋಭಾವಕ್ಕೆ ಕಾರಣ. ಗಾವಸ್ಕರ್ ಅವರು ದೈಹಿಕವಾಗಿ ಹೆಚ್ಚು ಎತ್ತರವಿಲ್ಲ. ಆದ್ದರಿಂದ ಅವರು ಕ್ರೀಸ್‌ನಿಂದ ಮುಂದೆ ಬಂದು ಆಡಬೇಕು ಎಲ್ಲವೇ ಸ್ಟ್ರೇಚ್‌ ಮಾಡಿ ಆಡುವಂತಹ ಎಸೆತ ಪ್ರಯೋಗಿಸಿದೆ. ಸ್ವಲ್ಪ ಡ್ರಿಫ್ಟ್ ಆದ ಚೆಂಡು ಸ್ಟಂಪ್‌ಗಳತ್ತ ನುಗ್ಗಿತು. ಗಾವಸ್ಕರ್ ಬೀಟ್ ಆದರು. ಅದೊಂದು ಕೌಶಲ’ ಎಂದರು. 

‘ಆ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ಅಜಿತ್ ವಾಡೇಕರ್ ಅವರ ರನ್‌ಔಟ್ ಆಗಿದ್ದು ಪ್ರಮುಖ ತಿರುವು. ದೀರ್ಘ ಮಾದರಿಯ ಪಂದ್ಯದಲ್ಲಿ ಊಟ ಮತ್ತು ಚಹಾ ವಿರಾಮಗಳ ನಡುವಿನ ಅವಧಿಯು ಮುಖ್ಯವಾಗಿರುತ್ತದೆ.  ಆ ಅವಧಿಯಲ್ಲಿಯೇ ಗಾವಸ್ಕರ್ ಔಟಾದರೂ ಇನಿಂಗ್ಸ್‌ಗೆ ಬಲ ತುಂಬಲು ವಾಡೇಕರ್ ಪ್ರಯತ್ನಿಸಿದ್ದರು. ಚೆನ್ನಾಗಿಯೂ ಆಡುತ್ತಿದ್ದರು. ಆದರೆ ಸುಧಾಕರ್ ರಾವ್ ಅವರ ಥ್ರೋನಿಂದಾಗಿ ರನ್‌ಔಟ್ ಆಗಿದ್ದು ಪ್ರಮುಖ ಘಟ್ಟವಾಯಿತು’ ಎಂದು ಪ್ರಸನ್ನ ಹೇಳಿದರು.  

‘ನಮ್ಮ ಕಾಲದಲ್ಲಿ ತಂಡಕ್ಕೆ ನೆರವು ಸಿಬ್ಬಂದಿ ಇರುತ್ತಿರಲಿಲ್ಲ. ಫಿಟ್‌ನೆಸ್ ತರಬೇತಿಗಳೂ ಇರಲಿಲ್ಲ. ಮನಸ್ಸೇ ಫಿಟ್‌ನೆಸ್‌ ನಿರ್ಣಯಿಸುತ್ತಿತ್ತು. ಕ್ರಿಕೆಟ್ ಆಡುವ ಆಸಕ್ತಿ, ಪಂದ್ಯ ಆಡುವ ಸಾಮರ್ಥ್ಯವಿದೆಯೆಂಬ ದೃಢ ಮನಸ್ಥಿತಿಯೇ ಮುಖ್ಯವಾಗುತ್ತಿತ್ತು. ನಮ್ಮಲ್ಲಿ ಟೀಮ್ ಮೀಟಿಂಗ್ ಕೂಡ ಇರಲಿಲ್ಲ. ನಾಯಕನಾಗಿ ನಾನು ಯಶಸ್ಸು ಮತ್ತು ವೈಫಲ್ಯ ಎರಡರ ಹೊಣೆಯನ್ನು ಹೊರಲು ಸಿದ್ಧವಾಗುತ್ತಿದ್ದೆ. ತಂಡದಲ್ಲಿರುವವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಣೆ ಒಪ್ಪಿಸುತ್ತಿದ್ದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು’ ಎಂದರು. 

ಅಪ್ರತಿಮ ಕಿರ್ಮಾನಿ; ಶ್ರೇಷ್ಠ ಜಿಆರ್‌ವಿ: ‘ಸೈಯದ್  ಕಿರ್ಮಾನಿ ಭಾರತ ಕಂಡ ಸರ್ವಶ್ರೇಷ್ಠ ವಿಕೆಟ್‌ಕೀಪರ್. ಯಾಕೆಂದರೆ ಅವರು ಚಂದ್ರಾ (ಬಿ.ಎಸ್‌. ಚಂದ್ರಶೇಖರ್) ಅವರಂತಹ ದಿಗ್ಗಜ ಲೆಗ್‌ಸ್ಪಿನ್ನರ್‌ ಅವರ ಎಸೆತಗಳಿಗೆ ಕೀಪಿಂಗ್ ಮಾಡಿದ್ದಾರೆ. ಚಂದ್ರಾ ಅವರ ಎಸೆತಗಳ ಚಲನೆಯನ್ನು ಅಂದಾಜಿಸುವುದು ಅಷ್ಟು ಸುಲಭವಾಗಿರುತ್ತಿರಲಿಲ್ಲ. ಒಂದೊಂದು ಬಾರಿ ಚಂದ್ರ ಅವರಿಗೇ ತಮ್ಮ ಎಸೆತದ ತಿರುವಿನ ಅಂದಾಜು ಸಿಗುತ್ತಿರಲಿಲ್ಲ. ಆದರೆ ಬ್ಯಾಟರ್‌ಗಿಂತಲೂ ಮೊದಲೇ ಆ ಎಸೆತಗಳನ್ನು ಅಂದಾಜಿಸಿ ಕ್ಯಾಚ್ ಮಾಡುವ ಚಾಕಚಕ್ಯತೆ ಕಿರ್ಮಾನಿ ಅವರದ್ದಾಗಿತ್ತು. ಬ್ಯಾಟಿಂಗ್ ಕೂಡ ಚೆನ್ನಾಗಿತ್ತು’ ಎಂದು ಪ್ರಸನ್ನ ಶ್ಲಾಘಿಸಿದರು. 

‘ಜಿ.ಆರ್. ವಿಶ್ವನಾಥ್ ಅವರು ಶ್ರೇಷ್ಠ ಬ್ಯಾಟರ್ ಮತ್ತು ಜಂಟಲ್‌ಮ್ಯಾನ್. ನಾನು ಬೌಲಿಂಗ್ ಮಾಡಲು ಕಠಿಣ ಸವಾಲೆನಿಸಬಹುದಾಗಿದ್ದ ಬ್ಯಾಟರ್ ಅವರು. ಅದೃಷ್ಟವಶಾತ್ ನಾನು ಮತ್ತು ಅವರು ಒಂದೇ ತಂಡದಲ್ಲಿದ್ದ ಕಾರಣ ಬೌಲಿಂಗ್ ಮಾಡಲಿಲ್ಲ’ ಎಂದರು. 

‘ಟಿ20 ಮಾದರಿ ಪ್ರೇಕ್ಷಕರ ಗೇಮ್’

‘ಟ್ವೆಂಟಿ–20 ಮಾದರಿಯು ಮೂಲತಃ ಕ್ರಿಕೆಟ್ ಅಲ್ಲ. ಅದು ಪ್ರೇಕ್ಷಕರ ಮನರಂಜನೆಯ ಆಟ. ಬೌಂಡರಿ ಸಿಕ್ಸರ್‌ಗಳ ಭರಾಟೆಯು ನೋಡುಗರ ಮನಕ್ಕೆ ಮುದ ನೀಡುತ್ತದೆ. ಸಿಕ್ಸರ್ ಬೌಂಡರಿಗಳಿಲ್ಲದ ಟಿ20 ಪಂದ್ಯಕ್ಕೆ ಪ್ರೇಕ್ಷಕರು ಬರುತ್ತಾರೆಂದು ನನಗನಿಸುವುದಿಲ್ಲ. ಆದ್ದರಿಂದ ಈ ಮಾದರಿಯಲ್ಲಿ ಸ್ಪಿನ್ನರ್‌ಗಳು ಬೌಲಿಂಗ್ ಮಾಡುವುದು ಕಷ್ಟ’ ಎಂದು ಪ್ರಸನ್ನ ಹೇಳಿದರು. 

‘ಸ್ಪಿನ್‌ ಬೌಲಿಂಗ್ ಅನ್ನು ಯಾರೂ ಯಾರಿಗೂ ಕಲಿಸಲಾಗದು. ಅದು ವಿಭಿನ್ನ ಕಲೆ. ಟಿ20 ಮಾದರಿಯಲ್ಲಿ ಬೌಲರ್‌ಗೆ ಕೇವಲ ನಾಲ್ಕು ಓವರ್‌ ಮಾಡಲು ಸಾಧ್ಯ. ಅದರಲ್ಲಿ ಸ್ಪಿನ್ನರ್ ಏನು ಮಾಡಲು ಸಾಧ್ಯ? ಚೆನ್ನಾಗಿ ಬೌಲಿಂಗ್ ಮಾಡದಿದ್ದರೆ ಮುಂದಿನ ಪಂದ್ಯದಲ್ಲಿ ಸ್ಥಾನ ಸಿಗಲ್ಲ. ಆದ್ದರಿಂದ ಸ್ಪಿನ್ನರ್ ವಿಕೆಟ್‌ ಪಡೆಯುವುದಕ್ಕಿಂತ ರನ್‌ ನಿಯಂತ್ರಣಕ್ಕೆ ಹೆಚ್ಚು ಪ್ರಯತ್ನಿಸುತ್ತಾರೆ. ಬ್ಯಾಟರ್‌ ಮಾಡುವ ಲೋಪದಿಂದ ವಿಕೆಟ್‌ಗಳು ಲಭಿಸುವುದೇ ಹೆಚ್ಚು. ಲೆಗ್‌ಸ್ಪಿನ್ನರ್‌ಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಾರೆ‘ ಎಂದರು. ‘ಇವತ್ತು ನಮ್ಮ ತಂಡವಿದ್ದಿದ್ದರೆ ಐಪಿಎಲ್‌ನಲ್ಲಿಯೂ ಉತ್ತಮವಾಗಿ ಆಡುತ್ತಿದ್ದೇವೆ. ಆ ಸಾಮರ್ಥ್ಯ ನಮಗಿತ್ತು. ಚುಟುಕು ಮಾದರಿಯಲ್ಲಿ ಯಶಸ್ಸಿಯಾಗುತ್ತಿದ್ದೆವು’ ಎಂದು ಪ್ರಸನ್ನ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

**

’ಕಪಿಲ್‌ಗೆ ಸಿಕ್ಕ ಶ್ರೇಯ ಶ್ರೀನಾಥ್‌ಗಿಲ್ಲ‘

ಭಾರತದಲ್ಲಿ ವೇಗದ ಬೌಲರ್‌ಗಳು ಬೆಳೆಯಲು ಕನ್ನಡಿಗ ಜಾವಗಲ್ ಶ್ರೀನಾಥ್ ಅವರೇ ಪ್ರಮುಖ ಪ್ರೇರಣೆ. ಆದರೆ ಕಪಿಲ್‌ ದೇವ್ ಅವರಿಗೆ ಸಿಕ್ಕಷ್ಟು ಶ್ರೇಯ ಶ್ರೀನಾಥ್‌ಗೆ ಸಿಗಲಿಲ್ಲ. ಭಾರತದ ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್‌ ಬಗ್ಗೆ ಇದ್ದ ಮಿಥ್ಯೆಗಳನ್ನು ತೊಡೆದುಹಾಕಿ ಸಾಮರ್ಥ್ಯ ಮೆರೆದವರು ಶ್ರೀನಾಥ್.  ವೇಗದ ಬೌಲರ್‌ಗಳು ಪ್ರವರ್ಧಮಾನಕ್ಕೆ ಬರಲು ಅವರು ಕಾರಣರಾದರು. 

–ಶಾರದಾ ಉಗ್ರಾ ಕ್ರೀಡಾ ಪತ್ರಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT