ಕೊಲಂಬೊ: ಭಾರತ ತಂಡ ಬುಧವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, 27 ವರ್ಷಗಳಲ್ಲಿ ಮೊದಲ ಬಾರಿ ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿದೆ. ಬ್ಯಾಟರ್‌ಗಳ ಮೇಲೆ, ವಿಶೇಷವಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಹೊಣೆಯಿದೆ.
ಚೆಂಡಿಗೆ ತಿರುವು ನೀಡುತ್ತಿರುವ ಪಿಚ್‌ನಲ್ಲಿ ಆತಿಥೇಯರ ಸ್ಪಿನ್ ದಾಳಿಯನ್ನು ನಿಭಾಯಿಸುವುದು ಭಾರತದ ಬ್ಯಾಟರ್‌ಗಳಿಗೆ ಸವಾಲಾಗುತ್ತಿದೆ. ಸದಾ ಗೆಲುವನ್ನೇ ಧೇನಿಸುವ ನೂತನ ಕೋಚ್ ಗೌತಮ್ ಗಂಭೀರ್ ಅವರಂತೂ ಬಯಸಿರುವ ಆರಂಭ ಇದಲ್ಲ. ರಾಷ್ಟ್ರೀಯ ತಂಡದ ಕೋಚ್ ಆದ ಮೇಲೆ ಇದು ಅವರಿಗೆ ಮೊದಲ ಸರಣಿ.
1997ರಲ್ಲಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ಕೈಲಿ, ಭಾರತ ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯನ್ನು 0–3 ರಿಂದ ಸೋತಿತ್ತು. ಆಗ ಸಚಿನ್ ತೆಂಡೂಲ್ಕರ್ ನಾಯಕರಾಗಿದ್ದರು. ನಂತರ ತವರು ಮತ್ತು ಹೊರಗೆ ಭಾರತ 11 ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದು ಒಂದನ್ನೂ ಸೋತಿಲ್ಲ.
ಮೊದಲ ಪಂದ್ಯ ಟೈ ಆಗಿರುವ ಕಾರಣ ಭಾರತ ಈಗ ಸರಣಿ ಗೆಲ್ಲುವ ಸ್ಥಿತಿಯಲ್ಲಿಲ್ಲ. ಆದರೆ 1–1ರಲ್ಲಿ ಸರಣಿ ಸಮಬಲ ಮಾಡುವ ಅವಕಾಶವಂತೂ ಇದೆ.
ತಂಡದ ಈ ಪರಿಸ್ಥಿತಿಗೆ ಬ್ಯಾಟರ್‌ಗಳ ವೈಫಲ್ಯ ಕಾರಣ. ಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್ ಸ್ನೇಹಿ ಆಗಿದ್ದು ಆತಿಥೇಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಕೊಹ್ಲಿ 2 ಪಂದ್ಯಗಳಿಂದ 38 ರನ್ ಗಳಿಸಿದ್ದಾರೆ. ಆದರೆ ಈ ಮೊತ್ತಕ್ಕಿಂತ ಹೆಚ್ಚಾಗಿ ಅವರು ವಿಕೆಟ್ ಒಪ್ಪಿಸುತ್ತಿರುವ ರೀತಿ ಚಿಂತೆಗೆ ಕಾರಣವಾಗಿದೆ. ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರೂ, ಲಂಕೆಯ ಬೌಲರ್‌ಗಳು ಕೊಹ್ಲಿ ಅವರನ್ನು ಅಂಕೆಯಲ್ಲಿಟ್ಟುಕೊಂಡಿದ್ದಾರೆ.
ಸ್ಪಿನ್ ದಾಳಿಯನ್ನು ವಿಶ್ವಾಸದಿಂದ ಆಡುವ ಶಿವಂ ದುಬೆ ಕೂಡ ಸಪ್ಪೆಯೆನಿಸಿದ್ದಾರೆ. ವಂಡರ್ಸೆ ಲೆಗ್‌ಬ್ರೇಕ್ ದಾಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಕಥೆ ವಿಭಿನ್ನವಾಗಿಲ್ಲ. ಆರಂಭ ಆಟಗಾರ ರೋಹಿತ್ ಮಾತ್ರ ಎಂದಿನ ವಿಶ್ವಾಸದಿಂದ ಆಡುತ್ತಿದ್ದಾರೆ.
ದುಬೆ ಸ್ಥಾನದಲ್ಲಿ ಸ್ಪಿನ್ನರ್ ಪಾತ್ರ ನಿರ್ವಹಿಸಬಲ್ಲ ರಿಯಾನ್ ಪರಾಗ್ ಅವಕಾಶ ಪಡೆಯಬಹುದು. ಪರಾಗ್ ವೇಗವಾಗಿ ರನ್‌ಗಳಿಸಬಲ್ಲರು.
ಇನ್ನು ಭಾರತದ ಬೌಲರ್‌ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಲಂಕಾದ ಕೆಳ ಮಧ್ಯಮ ಕ್ರಮಾಂಕವನ್ನು ಬೇಗ ಕಟ್ಟಿಹಾಕಲು ವಿಫಲರಾಗುತ್ತಿದ್ದಾರೆ. ಅವರ ಉಪಯುಕ್ತ ರನ್‌ಗಳು ತಂಡದ ಪಾಲಿಗೆ ನಿರ್ಣಾಯಕವಾಗುತ್ತಿವೆ.
ಪಂದ್ಯ ಆರಂಭ: ಮಧ್ಯಾಹ್ನ 2.30.
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
ಲಂಕಾದ ಲಯದಲ್ಲಿರುವ ಆಟಗಾರ ಪಥುಮ್ ನಿಸಾಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.