ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಕ್ರ್ ಜಮಾನ್ ಹೋರಾಟ ವ್ಯರ್ಥ: ಪಾಕಿಸ್ತಾನಕ್ಕೆ ಸೋಲು

ಶತಕ ವಂಚಿತ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ; ಕ್ವಿಂಟನ್, ಡುಸೆನ್, ಮಿಲ್ಲರ್ ಉತ್ತಮ ಆಟ
Last Updated 4 ಏಪ್ರಿಲ್ 2021, 20:14 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಆರಂಭಿಕ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ (193; 155 ಎಸೆತ, 18 ಬೌಂಡರಿ, 10 ಸಿಕ್ಸರ್‌) ಕೊನೆಯ ವರೆಗೂ ನಡೆಸಿದ ಹೋರಾಟಕ್ಕೆ ಫಲ ಸಿಗಲಿಲ್ಲ. ಭಾನುವಾರ ರಾತ್ರಿ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 17 ರನ್‌ಗಳಿಂದ ಸೋತಿತು.

342 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 38ನೇ ಓವರ್ ಮುಕ್ತಾಯಗೊಂಡಾಗ ಏಳು ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಹೀಗಾಗಿ ಸುಲಭವಾಗಿ ಸೋಲೊಪ್ಪಿಕೊಳ್ಳುತ್ತದೆ ಎಂದೆನಿಸಿತ್ತು. ಆದರೆ ಆರಂಭದಿಂದೇ ಭರ್ಜರಿ ಬ್ಯಾಟಿಂಗ್ ಮಾಡಿದ ಫಕ್ರ್ ಜಮಾನ್ ಬಾಲಂಗೋಚಿಗಳ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸುವ ಭರವಸೆ ಮೂಡಿಸಿದರು. ದ್ವಿಶತಕದತ್ತ ಹೆಜ್ಜೆ ಹಾಕಿದ್ದ ಅವರು ಕೊನೆಯ ಓವರ್‌ನಲ್ಲಿ ಔಟಾಗುವುದರೊಂದಿಗೆ ತಂಡದ ಆಸೆ ಕಮರಿತು.

ಪಾಕಿಸ್ತಾನ ಏಳು ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಫಕ್ರ್ ಜಮಾನ್ ಮತ್ತು ಬಾಬರ್ ಆಜಂ 63 ರನ್‌ಗಳ ಜೊತೆಯಾಟ ಆಡಿದರು. ಆದರೆ 15 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ (80; 86 ಎಸೆತ, 10 ಬೌಂಡರಿ, 1 ಸಿಕ್ಸರ್), ನಾಯಕ ತೆಂಬಾ ಬವುಮಾ (92; 102 ಎ, 9 ಬೌಂ), ರಸಿ ವ್ಯಾನ್ ಡೆರ್ ಡುಸೆನ್ (60; 37 ಎ, 6 ಬೌಂ, 4 ಸಿ) ಮತ್ತು ಡೇವಿಡ್ ಮಿಲ್ಲರ್ (ಔಟಾಗದೆ 50; 27 ಎ, 3 ಬೌಂ, 3ಸಿ) ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತಮ ಮೊತ್ತ ಗಳಿಸಲು ನೆರವಾದರು.

ಮೊದಲ ವಿಕೆಟ್‌ಗೆ ಕ್ವಿಂಟನ್ ಮತ್ತು ಏಡನ್ ಮರ್ಕರಮ್ 55 ರನ್ ಸೇರಿಸಿದ್ದರು. ಮರ್ಕರಮ್ ಔಟಾದ ನಂತರ ಬಂದ ತೆಂಬಾ 114 ರನ್‌ಗಳ ಜೊತೆಯಾಟವಾಡಿದರು. ಡುಸೆನ್ ಮತ್ತು ಡೇವಿಡ್ ಮಿಲ್ಲರ್ ಜೊತೆಯೂ ಉತ್ತಮ ಮೊತ್ತ ಕಲೆ ಹಾಕಿದರು. ನಾಯಕನಾಗಿ ಎರಡನೇ ಪಂದ್ಯ ಆಡಿದ ಅವರು ಶತಕದತ್ತ ಹೆಜ್ಜೆ ಹಾಕಿದ್ದ ವೇಳೆ ಹ್ಯಾರಿಸ್ ರವೂಫ್‌ ಎಸೆತದಲ್ಲಿ ಬಾಬರ್ ಆಜಂಗೆ ಕ್ಯಾಚ್‌ ನೀಡಿ ಮರಳಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 6ಕ್ಕೆ 341 (ಕ್ವಿಂಟನ್ ಡಿ ಕಾಕ್ 80, ಏಡನ್ ಮರ್ಕರಮ್ 39, ತೆಂಬಾ ಬವುಮಾ 92, ರಸಿ ವ್ಯಾನ್ ಡೆರ್ ಡುಸೆನ್ 60, ಡೇವಿಡ್ ಮಿಲ್ಲರ್ ಔಟಾಗದೆ 50; ಶಾಹಿನ್ ಶಾ ಅಫ್ರಿದಿ 75ಕ್ಕೆ1, ಮೊಹಮ್ಮದ್ ಹಸ್ನೈನ್ 74ಕ್ಕೆ1, ಫಹೀಂ ಅಶ್ರಫ್ 62ಕ್ಕೆ1, ಹ್ಯಾರಿಸ್ ರವೂಫ್ 54ಕ್ಕೆ3); ಪಾಕಿಸ್ತಾನ: 50 ಓವರ್‌ಗಳಲ್ಲಿ 9ಕ್ಕೆ 324 (ಫಕ್ರ್‌ ಜಮಾನ್ 193, ಬಾಬರ್ ಆಜಂ 31, ಆಸಿಫ್ ಅಲಿ 19; ಕಗಿಸೊ ರಬಾಡ 43ಕ್ಕೆ 1, ಲುಂಗಿ ಗಿಡಿ 66ಕ್ಕೆ1, ಆ್ಯಂಡಿಲೆ ಪಿಶುವಾಯೊ 67ಕ್ಕೆ2, ಆ್ಯನ್ರಿಚ್ ನಾಕಿಯಾ 63ಕ್ಕೆ3). ಫಲಿತಾಂಶ: ದಕ್ಷಿಣ ಆಫ್ರಿಕಾಗೆ 17ರನ್‌ಗಳ ಜಯ; ಸರಣಿ 1–1ರಲ್ಲಿ ಸಮಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT