ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟಿಗರ ಕನಸಿನ ತಾಣ ಅನಾವರಣ: ಬೆಂಗಳೂರು ಕ್ರೀಡಾ ಪರಂಪರೆಗೆ ಮತ್ತೊಂದು ಗರಿ

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಇನ್ನು ಬಿಸಿಸಿಐ ಜೇಷ್ಠತಾ ಕೇಂದ್ರ
Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ.. ಈ ಮೂರು ಪದಗಳು ಕ್ರಿಕೆಟಿಗರ ಪಾಲಿಗೆ ಭರವಸೆಯ ಆಶಾಕಿರಣಗಳಿದ್ದಂತೆ, ತಮ್ಮ ಕನಸುಗಳು ಕಮರದಂತೆ ಪೋಷಿಸುವ ಮಂತ್ರಾಕ್ಷರಗಳೇ ಸರಿ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದೆರಡು ದಶಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮಡಿಲಲ್ಲಿ ಆರೈಕೆ, ತರಬೇತಿ ಮತ್ತು ಪುನಶ್ಚೇತನಕ್ಕೊಳಗಾದ ಆಟಗಾರರು ದಿಗ್ಗಜರಾಗಿ ಬೆಳೆದ ಕತೆಗಳು ಹಲವಾರಿವೆ. ತೀರಾ ಇತ್ತೀಚೆಗೆ ವಿಕೆಟ್‌ಕೀಪರ್ ರಿಷಭ್ ಪಂತ್ ಅವರ ಉದಾಹರಣೆ ಚಾರಿತ್ರಿಕವೇ ಸರಿ. ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪಂತ್ ಪುನಶ್ಚೇತನಕ್ಕಾಗಿ ಸುಮಾರು ಒಂದು ವರ್ಷ ಎನ್‌ಸಿಎನಲ್ಲಿದ್ದರು. ಸಂಪೂರ್ಣ ಫಿಟ್ ಆಗಿ ಐಪಿಎಲ್, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಮಿಂಚಿದರು. ಅಷ್ಠೇ ಅಲ್ಲ. ಈಚೆಗೆ ಚೆನ್ನೈನಲ್ಲಿ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಶತಕ ಸಿಡಿಸಿದರು.  ವೇಗದ ಜಸ್‌ಪ್ರೀತ್ ಬೂಮ್ರಾ. ಬ್ಯಾಟರ್ ಕೆ.ಎಲ್. ರಾಹುಲ್ ಸೇರಿದಂತೆ ಇನ್ನೂ ಹಲವರು ತಮ್ಮ ಗಾಯ ಶಮನಗೊಳಿಸಿಕೊಂಡು ಕಣಕ್ಕೆ ಮರಳಿದವರಿದ್ದಾರೆ.  

ಅಂತಹ ಎನ್‌ಸಿಎಗೂ ಒಂದು ಕನಸಿತ್ತು. ಸ್ವಂತ, ಸುಸಜ್ಜಿತ ಮತ್ತು ಸಮಗ್ರ ಸೌಲಭ್ಯಗಳನ್ನು ಒಳಗೊಂಡ ಸೂರು ಇರಬೇಕೆಂಬ ಕನಸು ಅದು. ಈಗ ಅದು ಕೈಗೂಡಿದೆ.  ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಭವ್ಯವಾದ ಶ್ರೇಷ್ಠತಾ ಕೇಂದ್ರ ತಲೆ ಎತ್ತಿದೆ. ಅಂದಹಾಗೆ ಎನ್‌ಸಿಎ ಇನ್ನು ಮುಂದೆ ಬಿಸಿಸಿಐ ಶ್ರೇಷ್ಠತಾ ಕೇಂದ್ರವೆಂದು ಕರೆಸಿಕೊಳ್ಳಲಿದೆ. ಶನಿವಾರ ನಡೆದ ಸರಳ ಸಮಾರಂಭದಲ್ಲಿ ಈ ಮರುನಾಮಕರಣ ಮಾಡಿ ಹಾಗೂ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು. 

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವ ಲೋಹದ ಹಕ್ಕಿಗಳನ್ನು ಈ ಕೇಂದ್ರದ ಅಂಗಳದಲ್ಲಿ ನಿಂತು ನೋಡಬಹುದು. ಅದೇ ರೀತಿ ಕ್ರಿಕೆಟ್‌ ಆಟದಲ್ಲಿ ಆಗಸದೆತ್ತರಕ್ಕೆ ಸಾಧಿಸುವ ಕನಸು ಕಾಣಬಹುದು. ಅದಕ್ಕಾಗಿ ಇಲ್ಲಿಗೆ ಬರುವ ಹಿರಿ–ಕಿರಿಯ ಆಟಗಾರರಿಗೆ ಇಲ್ಲಿ ಭರಪೂರ ಸೌಲಭ್ಯಗಳು ಇವೆ. 

ದೊಡ್ಡ ಪ್ರವೇಶ ದ್ವಾರವನ್ನು ದಾಟಿ ಮುಖ್ಯ ಕಟ್ಟಡ ಪ್ರವೇಶಿಸುತ್ತಿದ್ದಂತೆಯೇ ಹಾಲ್‌ ಆಫ್‌ ಫೇಮ್ ಇದೆ. ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಗೆ ದಾಟಿ ಇನ್ನೊಂದು ದ್ವಾರದ ಹೊಸ್ತಿಲು ದಾಟಿದರೆ ಹಸಿರುಟ್ಟು ಕಂಗೊಳಿಸುತ್ತಿರುವ ಕ್ರಿಕೆಟ್ ಮೈದಾನ ಕಣ್ಮನ ಸೆಳೆಯುತ್ತದೆ. 85 ಯಾರ್ಡ್ ಬೌಂಡರಿ ಇರುವ ವಿಶ್ವದರ್ಜೆ ಕ್ರೀಡಾಂಗಣ ಇದು. ಮುಂಬೈ ಕೆಂಪು ಮಣ್ಣಿನಿಂದ ಸಿದ್ಧಗೊಳಿಸಿರುವ 13 ಪಿಚ್‌ಗಳು ಇಲ್ಲಿವೆ. ಹೊನಲು ಬೆಳಕಿನ ಕಂಬಗಳು, ಸೌಥ್ ಪೆವಿಲಿಯನ್ ಮತ್ತು ಪಂದ್ಯಗಳ ನೇರಪ್ರಸಾರ ಸೌಲಭ್ಯ ಕೇಂದ್ರ ಕೂಡ ಇಲ್ಲಿದೆ. 

ಇಲ್ಲಿಂದ ಎಡಗಡೆಗೆ ಸಾಗಿದರೆ ಬಿ ಮೈದಾನ ಸೆಳೆಯುತ್ತದೆ. 75 ಯಾರ್ಡ್ ಬೌಂಡರಿ ಇರುವ ಇದರಲ್ಲಿ ಮಂಡ್ಯದ ಕಪ್ಪುಮಣ್ಣು ಬಳಸಿ ಮಾಡಲಾಗಿರುವ 11 ಪಿಚ್‌ಗಳಿವೆ. ಪಕ್ಕದಲ್ಲಿರುವ  ಮೂರನೇ ಮೈದಾನ (ಸಿ)ದಲ್ಲಿ ಒಡಿಶಾದ ಕಲಾಹಾಂಡಿಯಿಂದ ತರಿಸಿರುವ ಕಪ್ಪುಮಣ್ಣಿನಿಂದ ಸಿದ್ಧವಾದ 9 ಪಿಚ್‌ಗಳಿವೆ. ಈ ಮೂರು ಮೈದಾನಗಳಲ್ಲಿ ಮಳೆ ನೀರು ತ್ವರಿತವಾಗಿ ಹರಿದುಹೋಗಲು ಸಬ್‌ಸರ್ಫೇಸ್ ವ್ಯವಸ್ಥೆ ಮಾಡಲಾಗಿದೆ. 

ನೆಟ್ಸ್‌ಗಾಗಿ 45 ಪಿಚ್

ಮೈದಾನಗಳಾಚೆ ನೆಟ್ಸ್‌ ಅಭ್ಯಾಸಕ್ಕಾಗಿ 45 ಪಿಚ್‌ಗಳು ಇವೆ. ಜೊತೆಗೆ ಹೊನಲು ಬೆಳಕಿನ ವ್ಯವಸ್ಥೆ ಇದೆ. ಓಟದ ಅಭ್ಯಾಸಕ್ಕಾಗಿ ಟ್ರ್ಯಾಕ್ ಮತ್ತು ಫೀಲ್ಡಿಂಗ್ ಅಭ್ಯಾಸದ ಸೌಕರ್ಯಗಳು ಇವೆ. ಕ್ಯಾಮೆರಾಗಳ ಮೂಲಕ ಆಟಗಾರರ ಸಾಮರ್ಥ್ಯ ವಿಶ್ಲೇಷಿಸುವ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ.  

16 ಸಾವಿರ ಚದರಡಿ ಜಾಗದಲ್ಲಿ ನಿರ್ಮಿಸಿರುವ ದೊಡ್ಡ ಕಟ್ಟಡದಲ್ಲಿ ಸ್ಲೀಪಿಂಗ್‌ ಪಾಡ್‌ಗಳಿರುವ  ಜಿಮ್ನಾಷಿಯಂ, ಅಥ್ಲೆಟಿಕ್ಸ್ ಟ್ರ್ಯಾಕ್, ಫಿಸಿಯೊಥೆರಪಿ ಕೇಂದ್ರ, ಕ್ರೀಡಾ ವಿಜ್ಞಾನ ಮತ್ತು ಔಷಧಿ ಪ್ರಯೋಗಾಲಯ, ಝಕುಜಿ, ಸೌನಾ ಮತ್ತು ಹಬೆಸ್ನಾನ, ಐಸ್‌ ಬಾತ್, 25 ಮೀಟರ್ಸ್ ಈಜುಕೊಳಗಳು ಇವೆ. ಇದಲ್ಲದೇ ಭವ್ಯವಾದ ಭೋಜನಶಾಲೆ, ಆಡಳಿತ ಕಚೇರಿಗಳು, ಸಭಾಭವನ, ತಂಗುವ ಕೋಣೆಗಳು ಕೂಡ ಇವೆ. 

ಅಂತಿಮ ಹಂತದ ಕೆಲವು ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು 2025ರ ಜನವರಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ. 

ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಜಿಮ್ನಾಷಿಯಂ  
ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಜಿಮ್ನಾಷಿಯಂ  
ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿರುವ ಈಜುಕೊಳ
ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿರುವ ಈಜುಕೊಳ

ವಿಶ್ವದರ್ಜೆಯ ಶ್ರೇಷ್ಠ ಕೇಂದ್ರ: ಲಕ್ಷ್ಮಣ್ ಹೆಮ್ಮೆ

‘ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಸಂಬಂಧಿಸಿದಂತೆ ವಿಶ್ವದ ಬೇರೆಬೇರೆ ಅಕಾಡೆಮಿಗಳನ್ನು ನಾನು ನೋಡಿರುವೆ. ಅಲ್ಲಿಯೆ ಉನ್ನತ ಸೌಲಭ್ಯಗಳನ್ನು ನೋಡಿದ್ದೇನೆ. ಇದೀಗ ನಮ್ಮಲ್ಲಿಯೂ ವಿಶ್ವದರ್ಜೆಯ ಶ್ರೇಷ್ಠತಾ ಕೇಂದ್ರವು ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ಪ್ರಸಕ್ತ ಪೀಳಿಗೆಯ ಕ್ರಿಕೆಟಿಗರಿಗೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳು ಸಿಗುತ್ತಿವೆ’ ಎಂದು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹೇಳಿದರು.  ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ಬಿಸಿಸಿಐ ಶ್ರೇಷ್ಠತಾ ಕೇಂದ್ರವನ್ನು ಪ್ರದರ್ಶಿಸಿದ ನಂತರ ಲಕ್ಷ್ಮಣ್ ಮಾತನಾಡಿದರು. 

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯದರ್ಶಿ ಜಯ್ ಶಾ ಮತ್ತಿತರ ಪದಾಧಿಕಾರಿಗಳು ಈ ಕೇಂದ್ರವನ್ನು  ಔಪಚಾರಿಕವಾಗಿ ಉದ್ಘಾಟಿಸಿದ್ದರು.  ‘ಬಿಸಿಸಿಐ ಮಹತ್ವಾಕಾಂಕ್ಷೆಯ ಯೋಜನೆ ಇದು. 2022ರಲ್ಲಿ ಅಡಿಗಲ್ಲು ಹಾಕಲಾಗಿತ್ತು. 15 ತಿಂಗಳುಗಳಲ್ಲಿ ನಿರ್ಮಿಸಲು ಗುರಿ ನೀಡಲಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ದೊಡ್ಡ ಕಾರ್ಯ ಕೈಗೂಡುವುದೇ ಎಂಬ ಆತಂಕ ಆಗ ನನಗಿತ್ತು. ಆದರೆ ಇಷ್ಠೇ ಅವಧಿಯಲ್ಲಿ ಎಲ್ಲವೂ ಸಿದ್ಧವಾಗಿದೆ. ಬಿಸಿಸಿಐ ಸೇರಿದಂತೆ ಎಲ್ಲ ವಿಭಾಗಗಳ ತಂಡಗಳೂ ಅದ್ಭುತವಾಗಿ ಕಾರ್ಯನಿರ್ವಹಿಸಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬೆಂಗಳೂರಿನ ಕ್ರಿಕೆಟ್‌ ಪರಂಪರೆಗೆ ಇದು ಹೊಸ ಗರಿ ಮೂಡಿಸಿದೆ. ಇಲ್ಲಿಯ ಹವಾಗುಣವು ಕ್ರಿಕೆಟ್ ಕಲಿಕೆ ಮತ್ತು ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿದೆ. ಜೂನಿಯರ್ ಮತ್ತು ಸೀನಿಯರ್ ಆಟಗಾರರಿಗೆ ವಿಶ್ವದರ್ಜೆಯ ತರಬೇತಿ ನೀಡಲು ಸೂಕ್ತವಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT