ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಬಾಥಂ, ಈಗ ಬೆನ್‌ ಸ್ಟೋಕ್ಸ್‌....

Last Updated 1 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರ ಅದ್ಭುತ ಶತಕದಿಂದ ಮೂರನೇ ಆ್ಯಷಸ್‌ ಟೆಸ್ಟ್‌ ಅನ್ನು ಇಂಗ್ಲೆಂಡ್‌ ತಂಡ ನಂಬಲಸಾಧ್ಯ ರೀತಿ ಗೆದ್ದಾಗ ಕ್ರಿಕೆಟ್‌ ಪ್ರಿಯರಿಗೆ ತಕ್ಷಣ ನೆನಪಾಗಿದ್ದು ಇಯಾನ್‌ ಬಾಥಂ ಅವರ ಹೆಸರು. 1980ರ ದಶಕದ ಆರಂಭದಲ್ಲಿ, ವಿಶ್ವಶ್ರೇಷ್ಠ ಆಲ್‌ರೌಂಡರ್‌ ಆಗಿದ್ದ ಬಾಥಂ ಕೂಡ ಆ್ಯಷಸ್‌ ಸರಣಿಯಲ್ಲಿ ಇಂಥದ್ದೇ ಅಮೋಘ ಪ್ರದರ್ಶನ ನೀಡಿ ಇಂಗ್ಲೆಂಡ್‌ ತಂಡವನ್ನು ಪವಾಡಸದೃಶ ರೀತಿಯಲ್ಲಿ ಗೆಲ್ಲಿಸಿದ್ದರು.

ಜುಲೈ ಎರಡನೇ ವಾರ ನಾಟಕೀಯ ಅಂತ್ಯಕಂಡಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ತಾಂತ್ರಿಕ ಗೆಲುವು ಪಡೆದಾಗ ಸ್ಟೋಕ್ಸ್‌ ವಿಶ್ವದ ಗಮನ ಸೆಳೆದಿದ್ದರು. ಒಂದೂವರೆ ತಿಂಗಳ ಅಂತರದಲ್ಲಿ ಅವರು ದೀರ್ಘ ಮಾದರಿಯಲ್ಲೂ ತಂಡದ ಅವಿಸ್ಮರಣೀಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಜೇಯ 135 ರನ್‌ ಹೊಡೆಯುವ ಮೊದಲು ಅವರು 24 ಓವರುಗಳನ್ನು ಮಾಡಿ ಕಾಂಗರೂಗಳ ಮೂರು ವಿಕೆಟ್‌ಗಳನ್ನು ಪಡೆದಿದ್ದರು ಎಂಬುದನ್ನು ಮರೆಯುವಂತಿಲ್ಲ.ಸ್ಟೋಕ್ಸ್‌ ಎರಡನೇ ಇನಿಂಗ್ಸ್‌ನಲ್ಲಿ ಕ್ರೀಸ್‌ಗೆ ಇಳಿಯುವಾಗ ಇಂಗ್ಲೆಂಡ್‌ ಸೋಲಿನ ಪ್ರಪಾತದತ್ತ ಮುಖಮಾಡಿತ್ತು. ಕೊನೆಯವರಾಗಿ ಜಾಕ್‌ ಲೀಚ್‌ ಆಡಲು ಬಂದಾಗ ಇಂಗ್ಲೆಂಡ್‌ಗೆ 73 ರನ್‌ ಬೇಕಿತ್ತು. ಆಗಲೂ ಆಸ್ಟ್ರೇಲಿಯಾ ಆಸೆ ಕೈಬಿಟ್ಟಿರಲಿಲ್ಲ.

ಬಾಥಂ ಅವರ ಆಗಿನ ಸಾಧನೆ ಕಡಿಮೆಯೇನೂ ಆಗಿರಲಿಲ್ಲ. ಈಗಿನಂತೆ 1981ರ ಆ್ಯಷಸ್‌ ಸರಣಿಯ ಮೂರನೇ ಟೆಸ್ಟ್ ಕೂಡ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದಿತ್ತು. ಆ ಪಂದ್ಯ ಪ್ರಸಿದ್ಧವಾಗಿದ್ದು ‘ಇಯಾನ್‌ ಬಾಥಂ ಟೆಸ್ಟ್’ ಎಂದೇ.

ಹಿನ್ನಡೆಯಿಂದ ಹೀರೊ ಪಟ್ಟಕ್ಕೆ

ವಿಶೇಷವೆಂದರೆ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ನಾಯಕರಾಗಿದ್ದ ಬಾಥಂ ದಯನೀಯವಾಗಿ ವಿಫಲರಾಗಿದ್ದ ಪರಿಣಾಮ ನಾಯಕತ್ವ ಕಳೆದುಕೊಂಡಿದ್ದರು. ಮೊದಲ ಟೆಸ್ಟ್‌ ಸೋತರೆ, ಎರಡನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ‘ಪೇರ್‌’ (ಸೊನ್ನೆ) ಗಳಿಸಿದ್ದ ಅಪಖ್ಯಾತಿ. ‌ಬ್ಯಾಟ್ಸ್‌ಮನ್‌ ಮೈಕ್‌ ಬ್ರೇರ್ಲಿ ಅವರಿಗೆ ನಾಯಕತ್ವ ಮರಳಿತು. ನಂತರದ್ದು ಇತಿಹಾಸ. ವಿಫಲರಾಗಿದ್ದ ಬಾಥಂ ಬ್ಯಾಟ್‌–ಚೆಂಡಿನಿಂದ ಪ್ರಚಂಡ ಪ್ರದರ್ಶನ ನೀಡಿ ಹೀರೊ ಆದರು. ಬ್ರೇರ್ಲಿಗೆ ಅದೃಷ್ಟದ ನಾಯಕನೆಂಬ ಪಟ್ಟವೂ ಒದಗಿತು. ಅವರ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡ ಸ್ವದೇಶದಲ್ಲಿ ಆಡಿದ 19 ಟೆಸ್ಟ್‌ಗಳಲ್ಲಿ ಅಜೇಯ ಸಾಧನೆ ಮೆರೆಯಿತು!

ಆ ಸರಣಿಯ ಮೂರನೇ ಟೆಸ್ಟ್‌ನ (16 ರಿಂದ 21 ಜುಲೈ, 1981) ಮೊದಲ ಮೂರು ದಿನಗಳ ಆಟದಲ್ಲಿ ಮೇಲುಗೈ ಆಸ್ಟ್ರೇಲಿಯಾದ್ದೇ ಆಗಿತ್ತು. ಬಾಥಂ 95 ರನ್‌ಗಳಿಗೆ ಆರು ವಿಕೆಟ್‌ ಪಡೆದರೂ, ಆಸ್ಟ್ರೇಲಿಯಾ 401 ರನ್‌ಗಳ (9 ವಿಕೆಟ್‌ಗೆ ಡಿಕ್ಲೇರ್ಡ್‌) ದೊಡ್ಡ ಮೊತ್ತವನ್ನೇ ಪೇರಿಸಿತು. ಜಾನ್ ಡೈಸನ್‌ ಶತಕ, ಕಿಮ್‌ ಹ್ಯೂಸ್‌ 89 ರನ್‌ ಕೊಡುಗೆ ಈ ಮೊತ್ತಕ್ಕೆ ಕಾರಣವಾಗಿತ್ತು. ಉತ್ತರವಾಗಿ ಇಂಗ್ಲೆಂಡ್‌ 174ಕ್ಕೆ ಕುಸಿದು ಫಾಲೊಆನ್‌ಗೆ ಒಳಗಾಯಿತು. (ಮೊನ್ನೆಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 67ಕ್ಕೆ ಕುಸಿದಿತ್ತು!). ಆ ಇನಿಂಗ್ಸ್‌ನಲ್ಲಿ ಬಾಥಂ ಅತ್ಯಧಿಕ 50 ರನ್‌ ಗಳಿಸಿದ್ದರು. ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್‌ ಮೂರನೇ ದಿನದ ಕೊನೆಗೆ ಆರು ರನ್ನಿಗೆ ಒಂದು ವಿಕೆಟ್‌ ಕಳೆದುಕೊಂಡು ಸೋಲಿನತ್ತ ಸಾಗಿದಂತೆ ಕಂಡಿತ್ತು.

ಆಗಿನ ಕಾಲದಲ್ಲಿ ನಾಲ್ಕನೇ ದಿನದಾಟಕ್ಕೆ ಹಿಂದಿನ ದಿನ ವಿಶ್ರಾಂತಿ ದಿನವಾಗಿರುತಿತ್ತು. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್‌ ಮತ್ತೆ ಕುಸಿದು 135 ರನ್‌ಗಳಾಗುಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತ್ತು. ಬಾಥಂ ಅವರ ಜೊತೆಗೂಡಿದ ಬೌಲರ್‌ ಗ್ರಹಾಂ ಡಿಲ್ಲಿ (56) ಎಂಟನೇ ವಿಕೆಟ್‌ಗೆ 117 ರನ್ ಸೇರಿಸಿದರು. ಬಾಥಂ ಶತಕ ಬಾರಿಸಿದರಲ್ಲದೇ 148 ಎಸೆತಗಳಲ್ಲಿ 149 ರನ್‌ ಬಾರಿಸಿ ಅಜೇಯರಾಗುಳಿದರು.

ಇಂಗ್ಲೆಂಡ್‌ಗೆ ದೊರೆತ ಮುನ್ನಡೆ ಬರೇ 129 ರನ್‌ಗಳದ್ದು. ಆದರೆ ವೇಗಿ ಬಾಬ್‌ ವಿಲಿಸ್‌ 43 ರನ್‌ಗಳಿಗೆ ಎಂಟು ವಿಕೆಟ್‌ ಪಡೆದು ಬಾಥಂ ಅವರ ಅಮೋಘ ಆಟ ವ್ಯರ್ಥವಾಗಲು ಬಿಡಲಿಲ್ಲ! 18 ರನ್‌ಗಳಿಂದ ಗೆದ್ದ ಇಂಗ್ಲೆಂಡ್‌ ಸರಣಿಯನ್ನು 1–1 ಸಮ ಮಾಡಿಕೊಂಡಿತು. ಬಾಥಂ ಸಾಹಸ ಆ ಟೆಸ್ಟ್‌ಗಷ್ಟೇ ಸೀಮಿತವಾಗಲಿಲ್ಲ. ನಾಲ್ಕು ಮತ್ತು ಐದನೇ ಟೆಸ್ಟ್‌ ಗೆದ್ದ ಇಂಗ್ಲೆಂಡ್‌ 2–1 ರಿಂದ ಸರಣಿ ಗೆದ್ದುಕೊಂಡಿತು.

ಫಾಲೊ ಆನ್‌ಗೆ ಒಳಗಾದ ತಂಡ ನಂತರ ಪಂದ್ಯವನ್ನೇ ಗೆದ್ದ ನಿದರ್ಶನ ಎರಡನೇ ಬಾರಿ ಆಗಿತ್ತು. 1894ರಲ್ಲಿ ಮೊದಲ ಸಲ ಇಂಗ್ಲೆಂಡ್ ಹೀಗೆ ಜಯಗಳಿಸಿತ್ತು. ಆಗಲೂ ಆಸ್ಟ್ರೇಲಿಯಾ ಸೋಲನುಭವಿಸಿತ್ತು.

ಅವಿಸ್ಮರಣೀಯ ಟೆಸ್ಟ್‌ಗಳಲ್ಲಿ ನಷ್ಟ ಅನುಭವಿಸಿದ ತಂಡವೆಂದರೆ ನೆನಪಾಗುವುದೇ ಆಸ್ಟ್ರೇಲಿಯಾ. ಎದುರಾಳಿಯ ಮೇಲೆ ಫಾಲೊಆನ್‌ ಹೇರಿದ ನಂತರ ಸೋತ ಮೂರನೇ ಸಂದರ್ಭದಲ್ಲೂ ಅವಮಾನ ಎದುರಾಗಿದ್ದು ಆಸ್ಟ್ರೇಲಿಯಾಕ್ಕೆ. 2001ರ ಸರಣಿಯಲ್ಲಿ ಎರಡನೇ ಟೆಸ್ಟ್‌ನಲ್ಲಿ (ಕೋಲ್ಕತ್ತ) ಭಾರತ ಫಾಲೊಆನ್‌ಗೆ ಒಳಗಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿ ಕೊನೆಯವರಾಗಿ ನಿರ್ಗಮಿಸಿದ್ದ ಲಕ್ಷ್ಮಣ್‌, ಎರಡನೇ ಇನಿಂಗ್ಸ್‌ನಲ್ಲಿ ಹೊಡೆದ 281 ರನ್‌ಗಳ ಅಮೋಘ ಇನಿಂಗ್ಸ್‌ನಿಂದ ಆ ಟೆಸ್ಟ್‌ ‘ಲಕ್ಷ್ಮಣ್ಸ್‌ ಟೆಸ್ಟ್‌’ ಎಂದು ಹೆಸರಾಯಿತು. ಅದೇ ಟೆಸ್ಟ್‌ನಲ್ಲಿ ಭಾರತದ ಹರಭಜನ್‌ ಸಿಂಗ್‌ ಟೆಸ್ಟ್‌ನಲ್ಲಿ ಭಾರತದ ಮೊದಲ ಹ್ಯಾಟ್ರಿಕ್‌ ಗಳಿಸಿದ್ದರು!

ಬಾಥಂ ಮತ್ತು ಸ್ಟೋಕ್ಸ್‌ ಆಟದಲ್ಲಿ ಯಾರದ್ದು ಹೆಚ್ಚು ಮೌಲ್ಯಯುತವಾದುದು ಎಂಬುದನ್ನು ಹೇಳುವುದು ಕಷ್ಟ. ಆದರೆ ಸ್ಟೋಕ್ಸ್‌ ಆಟಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ 1981ರ ಸರಣಿಯಲ್ಲಿ ನಾಯಕರಾಗಿದ್ದ ಬ್ರೇರ್ಲಿ.

1981ರ 3ನೇ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರುಗಳು: ಆಸ್ಟ್ರೇಲಿಯಾ: 9 ವಿಕೆಟ್‌ಗೆ 401 ಡಿಕ್ಲೇರ್ಡ್‌ ಮತ್ತು 111 (ಡೈಸನ್‌ 34, ಬಾಬ್‌ ವಿಲ್ಲೀಸ್‌ 43ಕ್ಕೆ8); ಇಂಗ್ಲೆಂಡ್‌: 174 ಮತ್ತು 356 (ಬಾಥಂ ಔಟಾಗದೇ 149).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT