ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತ ತಂಡ, ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯನ್ನು 2–1 ರಲ್ಲಿ ಗೆದ್ದುಕೊಂಡಿತು.
ಟೆಸ್ಟ್ ಕ್ರಿಕೆಟ್‌ನ ‘ಸಾಮ್ರಾಟ’ನನ್ನು ನಿರ್ಧರಿಸುವ ವಿಶ್ವ ಟೆಸ್ಟ್ ಚಾಂಪಿ ಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ಗೂ ರೋಹಿತ್ ಶರ್ಮ ಬಳಗ ಅರ್ಹತೆ ಪಡೆದುಕೊಂಡಿದೆ.
ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನಿರೀಕ್ಷೆಯಂತೆಯೇ ಸೋಮವಾರ ಡ್ರಾದಲ್ಲಿ ಅಂತ್ಯಕಂಡಿತು. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿದ್ದಾಗ ಉಭಯ ತಂಡಗಳು ಪಂದ್ಯಕ್ಕ ತೆರೆ ಎಳೆಯಲು ನಿರ್ಧರಿಸಿದವು. ಸ್ಟೀವ್ ಸ್ಮಿತ್ ಬಳಗ ಈ ವೇಳೆ 84 ರನ್‌ಗಳ ಮುನ್ನಡೆ ಸಾಧಿಸಿತ್ತು.
ನಾಗ್ಪುರ ಮತ್ತು ನವದೆಹಲಿಯಲ್ಲಿ ನಡೆದಿದ್ದ ಮೊದಲ ಎರಡು ಪಂದ್ಯಗಳನ್ನು ಭಾರತ ಜಯಿಸಿದ್ದರೆ, ಇಂದೋರ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯವನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿತ್ತು.
ಅಹಮದಾಬಾದ್ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಮುನ್ನವೇ ಭಾರತ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಖಚಿತವಾಗಿತ್ತು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗೆದ್ದದ್ದು, ಭಾರತದ ಫೈನಲ್ ಹಾದಿಯನ್ನು ಸುಗಮಗೊಳಿಸಿತು.
ಸತತ ನಾಲ್ಕನೇ ಗೆಲುವು: ಭಾರತ ತಂಡವು ಬಾರ್ಡರ್–ಗಾವಸ್ಕರ್ ಟ್ರೋಫಿಯನ್ನು ಸತತ ನಾಲ್ಕನೇ ಬಾರಿ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2017 (ಹೋಂ), 2018–19 (ಅವೇ) ಮತ್ತು 2020–21ರಲ್ಲಿ (ಅವೇ) ನಡೆದಿದ್ದ ಸರಣಿಗಳನ್ನು ಗೆದ್ದುಕೊಂಡಿತ್ತು. 2023ರ ಸರಣಿ ಸೇರಿದಂತೆ ಎಲ್ಲ ಸರಣಿಗಳನ್ನೂ 2–1 ಅಂತರದಲ್ಲಿ ಗೆದ್ದದ್ದು ವಿಶೇಷ.
ಶತಕ ವಂಚಿತ ಹೆಡ್: ವಿಕೆಟ್ ನಷ್ಟವಿಲ್ಲದೆ 3 ರನ್‌ಗಳಿಂದ ಸೋಮವಾರ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ, ಮ್ಯಾಥ್ಯೂ ಕುನೇಮನ್ (6) ಅವರನ್ನು ಬೇಗನೇ ಕಳೆದುಕೊಂಡಿತು. ಅಶ್ವಿನ್ ಬೌಲಿಂಗ್‌ನಲ್ಲಿ ಅವರು ಎಲ್‌ಬಿ ಬಲೆಗೆ ಬಿದ್ದರು.
ಮೊದಲ ಅವಧಿಯಲ್ಲಿ ಬೇಗನೇ 2–3 ವಿಕೆಟ್ ಪಡೆದು ಎದುರಾಳಿಗಳ ಮೇಲೆ ಒತ್ತಡ ಹೇರುವುದು ಭಾರತದ ಲೆಕ್ಕಾಚಾರ ಆಗಿತ್ತು. ಆದರೆ ಇಲ್ಲಿನ ಪಿಚ್, ಬೌಲರ್‌ಗಳಿಗೆ ಅಲ್ಪವೂ ನೆರವು ನೀಡದ್ದು ರೋಹಿತ್ ಬಳಗಕ್ಕೆ ಹಿನ್ನಡೆ ಉಂಟುಮಾಡಿತು.
India 🇮🇳 🤝🏻 Australia 🇦🇺
— BCCI (@BCCI) March 13, 2023
The final Test ends in a draw as #TeamIndia win the Border-Gavaskar series 2-1 🏆#INDvAUS pic.twitter.com/dwwuLhQ1UT
ಟ್ರಾವಿಸ್ ಹೆಡ್ (90 ರನ್, 163 ಎ, 10 ಬೌಂ, 2 ಸಿ.) ಮತ್ತು ಮಾರ್ನಸ್ ಲಾಬುಷೇನ್ (ಔಟಾಗದೆ 63) ಎರಡನೇ ವಿಕೆಟ್‌ಗೆ 139 ರನ್ ಸೇರಿಸಿ ಆತಿಥೇಯ ಬೌಲರ್‌ಗಳನ್ನು ಕಾಡಿದರು. ಶತಕಕ್ಕೆ 10 ರನ್‌ಗಳು ಬೇಕಿದ್ದಾಗ ಹೆಡ್ ಅವರು ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ಟೆಸ್ಟ್‌ನಲ್ಲಿ ಅಕ್ಷರ್‌ಗೆ ಇದು 50ನೇ ವಿಕೆಟ್ ಆಗಿತ್ತು. 12ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರು.
ಲಾಬುಷೇನ್ ಮತ್ತು ಸ್ಟೀವ್ ಸ್ಮಿತ್ (ಔಟಾಗದೆ 10) ಇನ್ನಷ್ಟು ವಿಕೆಟ್ ಬೀಳದಂತೆ ನೋಡಿಕೊಂಡರು. ಎಚ್ಚರಿಕೆಯಿಂದ ಆಡಿದ ಲಾಬುಷೇನ್ 213 ಎಸೆತಗಳನ್ನು ಎದುರಿಸಿದರು. ದಿನದ ಅಂತಿಮ ಅವಧಿಯ ಆಟದಲ್ಲಿ ಕೆಲವೇ ಓವರ್‌ಗಳ ಬಳಿಕ ಪಂದ್ಯಕ್ಕೆ ತೆರೆಬಿತ್ತು.
ಅಶ್ವಿನ್, ಜಡೇಜ ‘ಸರಣಿ ಶ್ರೇಷ್ಠ’
ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ‘ಸರಣಿ ಶ್ರೇಷ್ಠ’ ಪ್ರಶಸ್ತಿಯನ್ನು ಹಂಚಿಕೊಂಡರು. ಆಫ್‌ಸ್ಪಿನ್ನರ್ ಅಶ್ವಿನ್ ಒಟ್ಟು 25 ವಿಕೆಟ್‌ಗಳನ್ನು ಪಡೆದರಲ್ಲದೆ, 86 ರನ್ ಗಳಿಸಿದ್ದಾರೆ. ಎಡಗೈ ಸ್ಪಿನ್ನರ್ ಜಡೇಜ 22 ವಿಕೆಟ್‌ಗಳ ಜತೆಗೆ ಒಂದು ಅರ್ಧಶತಕ ಒಳಗೊಂಡಂತೆ 135 ರನ್ ಕಲೆಹಾಕಿದ್ದಾರೆ.
ಅಕ್ಷರ್ ಎರಡನೇ ಗರಿಷ್ಠ ಸ್ಕೋರರ್: ಸರಣಿಯಲ್ಲಿ ಒಟ್ಟು 264 ರನ್ ಗಳಿಸಿದ ಅಕ್ಷರ್ ಪಟೇಲ್ ಅವರು ವಿರಾಟ್ ಕೊಹ್ಲಿ (297 ರನ್) ಬಳಿಕ ಭಾರತದ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಫೈನಲ್‌ನಲ್ಲಿ ಮತ್ತೆ ಸೆಣಸು
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ. ಫೈನಲ್ ಪಂದ್ಯ ಲಂಡನ್‌ನ ಓವಲ್ ಮೈದಾನದಲ್ಲಿ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಎದುರಾಗಲಿವೆ. ಭಾರತ ತಂಡ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 2021ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಪರಾಭವಗೊಂಡಿತ್ತು.
#TeamIndia have qualified for the ICC World Test Championship Final for the second time in a row.
— BCCI (@BCCI) March 13, 2023
See you at The Oval 🙌🙌 pic.twitter.com/aMuHh28kGK
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.