ಬುಧವಾರ, ಫೆಬ್ರವರಿ 26, 2020
19 °C

ಲಾರಾಗೆ ವಿಶ್ವದಾಖಲೆಗಳೇ ಮಾನಸಿಕ ಒತ್ತಡ ಹೆಚ್ಚಿಸಿದ್ದವೇ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ನಾನು ಶ್ರೇಷ್ಠ ಫಾರ್ಮ್‌ನಲ್ಲಿದ್ದಾಗ ಸಾಧಿಸಿದ ಎರಡು ವಿಶ್ವದಾಖಲೆಗಳೇ ನಾನು ಫಾರ್ಮ್‌ ಕಳೆದುಕೊಂಡಾಗ ಮಾನಸಿಕ ಒತ್ತಡಕ್ಕೆ ಕಾರಣವಾದವು ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕಥೆ ಬ್ರಯನ್ ಲಾರಾ ಹೇಳಿದ್ದಾರೆ.

ಕ್ರಿಕೆಟಿಗ ಮಾನಸಿಕ ಒತ್ತಡದ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಲ್ಲ ಕಾಲಘಟ್ಟದಲ್ಲಿಯೂ  ಆಟಗಾರರ ಮೇಲೆ ಮಾನಸಿಕ ಒತ್ತಡಗಳು ಇದ್ದವು. ಈಗಿನ ಪೈಪೋಟಿಯೇ ಬೇರೆ, ಆಗಿನ ಚಿತ್ರಣವೇ ಬೇರೆ’ ಎಂದರು.

ಅವರು ಇಲ್ಲಿ ನಡೆದ ಹ್ಯಾಟಿಟೇಟ್ ಫಾರ್ ಹ್ಯೂಮ್ಯಾನಿಟಿ ಇಂಡಿಯಾ ಚಾಪ್ಟರ್ ಗಾಲ್ಫ್ ಟೂರ್ನಿಯ ಎರಡನೇ  ಆವೃತ್ತಿ ಉದ್ಘಾಟಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘1989 ರಿಂದ 1995ರವರೆಗೆ ನನ್ನ ವೃತ್ತಿಯ ಆರಂಭದಲ್ಲಿ ಏರುಗತಿಯ ಫಾರ್ಮ್‌ನಲ್ಲಿದ್ದೆ. ಆದರೆ 1995–98ರವರೆಗೆ ನನ್ನ ಫಾರ್ಮ್‌ ಇಳಿಮುಖ ಕಂಡಿತು. ಆದ್ದರಿಂದ ಆ ಅವಧಿಯ ಆಟವನ್ನು ಬಹಳ ಜನ ನೆನಪಿಟ್ಟಿರಲಿಕ್ಕಿಲ್ಲ.  ಆದರೆ 1994ರಲ್ಲಿ ನಾನು ಮಾಡಿದ ಟೆಸ್ಟ್‌ ಕ್ರಿಕೆಟ್‌ನ ವಿಶ್ವದಾಖಲೆ (375) ಮಾಡಿದ್ದೆ. ಅಲ್ಲದೇ ಕೆಲವು ವಿಶ್ವದಾಖಲೆಗಳನ್ನು ಸಾಧಿಸಿದ್ದೆ. ಆದರೆ, ಇಡೀ ವೆಸ್ಟ್ ಇಂಡೀಸ್ ತಂಡದ ಪ್ರದರ್ಶನವು ಕುಸಿತ ಕಾಣುತ್ತಿದ್ದ ಅವಧಿಯಲ್ಲಿ ನಾನೂ ಕೂಡ ಇದ್ದೆ’ ಎಂದರು.

ಅವರು 2004ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ಇಂಗ್ಲೆಂಡ್ ಎದುರು ನಡೆದಿದ್ದ ಟೆಸ್ಟ್‌ನಲ್ಲಿ ಅಜೇಯ 400 ರನ್ ಗಳಿಸಿ ವಿಶ್ವದಾಖಲೆ ಬರೆದರು. ಆ ದಾಖಲೆಯನ್ನೂ ಇದುವರೆಗೆ ಯಾರೂ ಮುರಿದಿಲ್ಲ.

‘ಆಡುವ ದಿನಗಳಲ್ಲಿ ಅನುಭವಿಸಿದ ಒತ್ತಡಕ್ಕೆ ಎಷ್ಟೋ ಅಲ ನಾನೊಬ್ಬನೇ ಕೋಣೆಯಲ್ಲಿ ಹತಾಶನಾಗಿ ಕುಳಿತಿರುತ್ತಿದ್ದೆ.  ಇದು ಎಲ್ಲ ಕ್ರೀಡೆಗಳಲ್ಲಿಯೂ ಸಹಜ. ಏರಿಳಿತಗಳು ಇದ್ದೇ ಇರುತ್ತವೆ. ನನ್ನನ್ನೊಂದಿಗೆ ನಾನೇ ಹೋರಾಟ ಮಾಡುತ್ತಿದ್ದೆ, ಸ್ವಸಮಾಧಾನ, ಸ್ವಯಂ ನಿಂದನೆ ಎಲ್ಲವೂ ಆಗುತ್ತಿದ್ದವು. ಮನದೊಳಗೆ ಲೆಕ್ಕವಿಲದಷ್ಟು ಆಲೋಚನೆಗಳ ತಾಕಲಾಟಗಳು ನಡೆಯುತ್ತಿದ್ದವು. ಹತಾಶ ಮನೋಭಾವದಿಂದ ಹೊರಬರಲು ಏನು ಸಾಧ್ಯವೋ ಎಲ್ಲವನ್ನೂ ಮಾಡುತ್ತಿದ್ದೆ. ಕೊನೆಗೂ ಸಫಲನಾದೆ’ ಎಂದು ಲಾರಾ ತಮ್ಮ ಅನುಭವ ಬಿಚ್ಚಿಟ್ಟರು.

ಈಚೆಗೆ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಾವು ಮಾನಸಿಕ ಒತ್ತಡ ಅನುಭವಿಸುತ್ತಿದ್ದು ಅದರಿಂದ ಚೇತರಿಸಿಕೊಳ್ಳಲು ಕೆಲಕಾಲ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದರು. 

ಈ ಕುರಿತು ಮಾತನಾಡಿದ ಲಾರಾ, ‘1970, 80ರ ದಶಕಗಳಲ್ಲಿ ಆಟದ ಮೇಲಿನ ಪ್ರೀತಿಗಾಗಿ ಆಡುತ್ತಿದ್ದೆವು. ಆದರೆ ಇಂದು ಕ್ರಿಕೆಟ್ ಹೆಚ್ಚಾಗಿದೆ. ಫ್ರ್ಯಾಂಚೈಸ್ ಕ್ರಿಕೆಟ್‌ನಿಂದ ವರ್ಷವಿಡೀ ಕ್ರಿಕೆಟಿಗರು ಮೈದಾನದಲ್ಲಿರುತ್ತಾರೆ. ಸಹಜವಾಗಿಯೇ ಇದು ಒತ್ತಡ ಹೆಚ್ಚಿಸಿದೆ. ಕೆಲವೊಮ್ಮೆ ಅತಿಯಾದ ಕೆಲಸವು ಹೊರೆಯಾಗಿಬಿಡುತ್ತದೆ. ಆದ್ದರಿಂದ ಈ ಕುರಿತು ಪರಿಹಾರ ಹುಡುಕಲು ಎಲ್ಲರೂ ಕೈಜೋಡಿಸುವ ತುರ್ತು ಇಂದು ಇದೆ’ ಎಂದರು.

ವೆಸ್ಟ್ ಇಂಡೀಸ್ ತಂಡದ ಕುರಿತು ಮಾತನಾಡಿದ ಅವರು, ‘ಕಿರನ್ ಪೊಲಾರ್ಡ್‌ ಒಬ್ಬ ಉತ್ತಮ ಆಟಗಾರ. ವಿಶ್ದದಾದ್ಯಂತ ಗೌರವ ಗಳಿಸಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ದರಿಂದ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿಯ ಅಗತ್ಯವಿದೆ. ಪೊಲಾರ್ಡ್‌ಗೆ  ಆ ಅರ್ಹತೆ ಮತ್ತು ಅನುಭವ ಇದೆ. ಅವರು ಸೂಕ್ತ ಆಯ್ಕೆಯಾಗಿದ್ದಾರೆ. ಅವರಿಂದ ತಂಡವು ಮತ್ತೆ ಯಶಸ್ಸಿನ ಉತ್ತುಂಗಕ್ಕೆ ತಲುಪುವ ವಿಶ್ವಾಸವಿದೆ’ ಎಂದರು.

‘ವಿಂಡೀಸ್ ತಂಡವು ಚುಟುಕು ಕ್ರಿಕೆಟ್‌ನಲ್ಲಿ ಎರಡು ವಿಶ್ವ ಚಾಂಪಿಯನ್ ಆಗಿದೆ. ಈ ಮಾದರಿಯಲ್ಲಿ ಬೇರೆ ತಂಡಗಳು ವಿಂಡೀಸ್‌ಗೆ ಭಯ ಪಡುತ್ತವೆ. ಈ ಸರಣಿಯಲ್ಲಿಯೂ ವಿಂಡೀಸ್ ಚೆನ್ನಾಗಿ ಅಡಲಿದೆ’ ಎಂದರು. 

ವೆಸ್ಟ್ ಇಂಡೀಸ್ ತಂಡವು ಭಾರತದ ಎದುರು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಶುಕ್ರವಾರ ಮೊದಲ ಪಂದ್ಯವು ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು