ಶುಕ್ರವಾರ, ಅಕ್ಟೋಬರ್ 23, 2020
24 °C

‘ಸ್ಯಾಮ್ಸನ್ ಭಾರತ ಕ್ರಿಕೆಟ್‌ನ ಮತ್ತೊಬ್ಬ ಧೋನಿ’ ಎಂದ ತರೂರ್‌ಗೆ ಗಂಭೀರ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಆಡುತ್ತಿರುವ ಕೇರಳ ಪ್ರತಿಭೆ ಸಂಜು ಸ್ಯಾಮ್ಸನ್‌ ಐಪಿಎಲ್‌–2020 ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿಯೂ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ತಮ್ಮ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದ ಅವರನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಸಿದ್ದಾರೆ. ಇದನ್ನು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್‌ ಗಂಭೀರ್ ಟೀಕಿಸಿದ್ದಾರೆ.

ಸ್ಯಾಮ್ಸನ್‌ ಬ್ಯಾಟಿಂಗ್‌ ಬಗ್ಗೆ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿರುವ ಶಶಿ ತರೂರ್‌, ‘ರಾಜಸ್ಥಾನಕ್ಕೆ ದೊರೆತ ಗೆಲುವು ಸಂಪೂರ್ಣ ನಂಬಲಾಗದಂತಹದ್ದು! ನಾನು ಸಂಜು ಸ್ಯಾಮ್ಸನ್‌ರನ್ನು ಒಂದು ದಶಕದಿಂದಲೂ ಬಲ್ಲೆ. ಆತ 14 ವರ್ಷದವನಿದ್ದಾಗ ‘ನೀನು ಮುಂದೊಂದು ದಿನ ಎಂಎಸ್‌ ಧೋನಿಯಂತಾಗುವೆ’ ಎಂದು ಹೇಳಿದ್ದೆ. ಆ ದಿನವೇ ಇದು. ಈ ಐಪಿಎಲ್‌ನಲ್ಲಿ ಎರಡು ಅದ್ಭುತ ಇನಿಂಗ್ಸ್‌ಗಳನ್ನು ಆಡಿದ ನಂತರ ವಿಶ್ವದರ್ಜೆಯ ಆಟಗಾರ ಬಂದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್, ‘ಸಂಜು ಸ್ಯಾಮ್ಸನ್ ಯಾರೊಬ್ಬರ ರೀತಿಯೂ ಇರಬೇಕಾಗಿಲ್ಲ. ಅವರು ಭಾರತೀಯ ಕ್ರಿಕೆಟ್‌ನ ‘ದಿ’ ಸಂಜು ಸ್ಯಾಮ್ಸನ್ ಆಗಿರುತ್ತಾರೆ’ ಎಂದು ಹೇಳಿದ್ದಾರೆ.

ರಾಯಲ್ಸ್‌‌ ಮೊದಲ ಪಂದ್ಯದಲ್ಲಿ ಚೆನ್ನೈ ಸೂ‍ಪರ್ ಕಿಂಗ್ಸ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಸೆಣಸಾಟ ನಡೆಸಿತ್ತು. ಚೆನ್ನೈ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಯಲ್ಸ್‌, ಸಂಜು ಸ್ಯಾಮ್ಸನ್ (74)‌ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 216 ರನ್‌ ಕಲೆಹಾಕಿತ್ತು. ಈ ಪಂದ್ಯದಲ್ಲಿ ಚೆನ್ನೈ 200 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್, ಮಯಂಕ್‌ ಅಗರವಾಲ್‌ ಶತಕ ಮತ್ತು ಕೆಎಲ್‌ ರಾಹುಲ್ ಅರ್ಧಶತಕದ ನೆರವಿನಿಂದ ರಾಯಲ್ಸ್‌ಗೆ‌ 224 ರನ್‌ಗಳ ಬೃಹತ್‌ ಗುರಿ ನೀಡಿತ್ತು. ಈ ಮೊತ್ತದೆದುರು ದಿಟ್ಟ ಆಟವಾಡಿದ್ದ ರಾಯಲ್ಸ್‌ ಬ್ಯಾಟ್ಸ್‌ಮನ್‌ಗಳು ಇನ್ನೂ 3 ಎಸೆತಗಳನ್ನು ಬಾಕಿ ಇರುವಂತೆಯೇ ಗುರಿ ಮುಟ್ಟಿದ್ದರು.

ಈ ಪಂದ್ಯದಲ್ಲಿ ಸ್ಯಾಮ್ಸನ್‌ ಕೇವಲ 42 ಎಸೆತಗಳಲ್ಲಿ 85 ರನ್‌ ಬಾರಿಸಿದ್ದರೆ, ನಾಯಕ ಸ್ಟೀವ್‌ ಸ್ಮಿತ್‌ (50) ಹಾಗೂ ಆಲ್ರೌಂಡರ್ ರಾಹುಲ್‌ ತೆವಾಟಿಯಾ (53) ಬಿರುಸಿನ ಅರ್ಧಶತಕಗಳನ್ನು ಹೊಡೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು