ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತಕ್ಕೆ ಮಣಿದ ಕ್ಯಾಪಿಟಲ್ಸ್‌: ರನ್‌ ಹೊಳೆ ಹರಿಸಿದ ಶ್ರೇಯಸ್‌ ಬಳಗ

Published 3 ಏಪ್ರಿಲ್ 2024, 18:15 IST
Last Updated 3 ಏಪ್ರಿಲ್ 2024, 18:15 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿಯೇ ಎರಡನೇ ಸರ್ವಾಧಿಕ ಮೊತ್ತವನ್ನು ದಾಖಲಿಸಿದ ಕೋಲ್ಕತ್ತ ನೈಟ್‌ ರೈಸರ್ಸ್‌ ತಂಡವು ಬುಧವಾರ 106 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು. 

ಕೋಲ್ಕತ್ತ ತಂಡದ ಆರಂಭ ಆಟಗಾರ ಸುನಿಲ್ ನಾರಾಯಣ್ (85, 39ಎ) ಅವರು ಸ್ಪೋಟಕ ಇನಿಂಗ್ಸ್‌ ಆಡಿದ ಮೇಲೆ, 18ರ ಹರೆಯದ ರಘುವಂಶಿ ಮಿಂಚಿನ ಅರ್ಧ ಶತಕ ಹೊಡೆದರು. ಕೊನೆಯಲ್ಲಿ ಆಂಡ್ರೆ ರಸೆಲ್ ಮತ್ತು ರಿಂಕು ಸಿಂಗ್ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಶ್ರೇಯಸ್‌ ಅಯ್ಯರ್‌ ಬಳಗ 7 ವಿಕೆಟ್‌ಗೆ 272 ರನ್‌ಗಳ ಭಾರಿ ಮೊತ್ತ ಕಲೆಹಾಕಿತು.

ಈ ಕಠಿಣ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೋಲ್ಕತ್ತ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. 33 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೇವಿಡ್‌ ವಾರ್ಡರ್‌ (18), ಪ್ರಥ್ವಿ ಶಾ (10), ಮಿಚೆಲ್‌ ಮಾರ್ಷ್‌ (0) ಮತ್ತು ಅಭಿಷೇಕ್‌ ಪೊರೆಲ್‌ ಬೇಗನೇ ನಿರ್ಗಮಿಸಿದರು.

ನಂತರದಲ್ಲಿ ನಾಯಕ ರಿಷಭ್‌ ಪಂತ್‌ 55; 25ಎ, 4x4, 6x5) ಮತ್ತು ಟಿಸ್ಟನ್‌ ಸ್ಟಬ್ಸ್‌ (54; 32ಎ, 4x4, 6x4) ಐದನೇ ವಿಕೆಟ್‌ಗೆ 93 ರನ್‌ ಸೇರಿಸಿ ಕೊಂಚ ಪ್ರತಿರೋಧ ತೋರಿದರು. ತಂಡವು 17.2 ಓವರ್‌ಗಳಲ್ಲಿ 166 ರನ್‌ಗೆ ಕುಸಿಯಿತು. ವೈಭವ್‌ ಅರೋರಾ ಮತ್ತು ವರುಣ್‌ ಚಕ್ರವರ್ತಿ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು. ಎರಡು ವಿಕೆಟ್‌ ಮಿಚೆಲ್‌ ಸ್ಟಾರ್ಕ್‌ ಪಾಲಾದವು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ಕೋಲ್ಕತ್ತಕ್ಕೆ ಫಿಲ್‌ ಸಾಲ್ಟ್‌ ಮತ್ತು ಸುನಿಲ್ ಮೊದಲ ವಿಕೆಟ್‌ ಜತೆಯಾಟದಲ್ಲಿ 27 ಎಸೆತಗಳಲ್ಲಿ 60 ರನ್ ಸೇರಿಸಿ ಮಿಂಚಿನ ಆರಂಭ ಒದಗಿಸಿದರು.

ಸುನಿಲ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಡೆಲ್ಲಿ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ ಏಳು ಸಿಕ್ಸರ್‌, ಏಳು ಬೌಂಡರಿಗಳಿದ್ದವು. 53 ರನ್‌ ಗಳಿಸಿದ್ದಾಗ ನೀಡಿದ್ದ ಜೀವದಾನಕ್ಕೆ ಡೆಲ್ಲಿ ಕೈಸುಟ್ಟುಕೊಳ್ಳಬೇಕಾಯಿತು. ಇದು ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಆಟಗಾರನ ಅತ್ಯಧಿಕ ಮೊತ್ತ.

‌ರಘುವಂಶಿ ಅವರು ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ. ಇಲ್ಲಿ ತಮಗೆ ದೊರೆತ ಅವಕಾಶ ಸಮರ್ಥವಾಗಿ ಬಳಸಿಕೊಂಡು 27 ಎಸೆತಗಳಲ್ಲಿ 54 ರನ್ ಚಚ್ಚಿದರು. ಸುನಿಲ್ ಮತ್ತು ರಘುವಂಶಿ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 48 ಎಸೆತಗಳಲ್ಲಿ 104 ರನ್‌ಗಳು ಹರಿದುಬಂದವು.

ಆಂಡ್ರೆ ರಸೆಲ್ (41, 19 ಎಸೆತ) ಮತ್ತು ‘ಫಿನಿಷರ್‌’ ರಿಂಕು ಸಿಂಗ್ (26, 8 ಎಸೆತ) ಅವರು ಕೊನೆಯಲ್ಲಿ ಮೊತ್ತವನ್ನು ಹಿಗ್ಗಿಸಿ ದಾಖಲೆಯತ್ತ ಒಯ್ದರು. ನಾಕಿಯಾ ಅವರು ಮಾಡಿದ 19ನೇ ಓವರ್‌ನಲ್ಲಿ ರಿಂಕು ಸಿಂಗ್‌ 24 ರನ್ ಚಚ್ಚಿದರು.‌

ಕೋಲ್ಕತ್ತ ಬ್ಯಾಟರ್‌ಗಳು ಒಟ್ಟು 18 ಸಿಕ್ಸರ್‌ಗಳು ಮತ್ತು 22 ಬೌಂಡರಿಗಳನ್ನು ಬಾರಿಸಿ, ಡೆಲ್ಲಿ ಬೌಲರ್‌ಗಳಿಗೆ ದುಃಸ್ವಪ್ನವಾದರು. ಖಲೀಲ್‌ ಅಹ್ಮದ್ ಮೊದಲ ಓವರ್‌ನಲ್ಲೇ ಡೀಪ್‌ ಪಾಯಿಂಟ್‌ಗೆ ಬೌಂಡರಿ ಬಾರಿಸುವ ಮೂಲಕ ಸುನಿಲ್ ನಾರಾಯಣ್ ರನ್‌ ಹೊಳೆಗೆ ಚಾಲನೆ ನೀಡಿದ್ದರು. ಇಶಾಂತ್ ಅವರ ಎರಡನೇ ಓವರ್‌ನಲ್ಲಿ ಮೂರು ಸಿಕ್ಸರ್‌ ಸಹಿತ 26 ರನ್‌ ಹೊಡೆದು ಅಪಾಯದ ಸಂಕೇತ ರವಾನಿಸಿದರು.

ವಾರ್ನರ್ ಅವರಿಂದ ಜೀವದಾನ ಪಡೆದಿದ್ದ ಸಾಲ್ಟ್ ಅದರ ಲಾಭ ಪಡೆಯಲಿಲ್ಲ. ಅವರ ನಿರ್ಗಮನದ ನಂತರ ಕ್ರೀಸಿಗೆ ಬಂದ ರಘುವಂಶಿ ಕೂಡ ತಾವೆದುರಿಸಿದ ಐಪಿಎಲ್‌ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಪವರ್‌ ಪ್ಲೇ ಅವಧಿಯಲ್ಲೇ 88 ರನ್‌ಗಳು ಹರಿದುಬಂದವು. ಡೆಲ್ಲಿ ಬೌಲಿಂಗ್ ಕೂಡ ಎರ್ರಾಬರ್ರಿಯಾಗಿತ್ತು. 15 ವೈಡ್‌ಗಳಿದ್ದವು. ಸಾಕಷ್ಟು ಫುಲ್ಟಾಸ್‌ಗಳನ್ನು ಮಾಡಿ ಎದುರಾಳಿ ಬ್ಯಾಟರ್‌ಗಳಿಗೆ ಹೊಡೆಯಲು ಅವಕಾಶ ಕೊಟ್ಟರು.

ಅನುಭವಿ ಇಶಾಂತ್‌ ಕೊನೆಯ ಓವರ್ ಬಿಗುವಾಗಿ ಮಾಡಿ 8 ರನ್‌ ನೀಡಿ 2 ವಿಕೆಟ್‌ ಕೂಡ ಪಡೆದರು. ಹೀಗಾಗಿ ಕಳೆದ ತಿಂಗಳ ಕೊನೆಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ (ಮುಂಬೈ ವಿರುದ್ಧ) ದಾಖಲೆ ಮೊತ್ತ (277) ಅಬಾಧಿತವಾಗಿ ಉಳಿಯಿತು.

ಈ ಗೆಲುವಿನೊಂದಿಗೆ ಕೋಲ್ಕತ್ತ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರೆ, ಡೆಲ್ಲಿ ತಂಡವು 9ನೇ ಸ್ಥಾನಕ್ಕೆ ಕುಸಿಯಿತು.

Nethravathi M.
Nethravathi M.

ಸ್ಕೋರ್ ಕಾರ್ಡ್

ಕೋಲ್ಕತ್ತ ನೈಟ್‌ ರೈಡರ್ಸ್‌: 7ಕ್ಕೆ 272 (20 ಓವರುಗಳಲ್ಲಿ)

ಸಾಲ್ಟ್‌ ಸಿ ಸ್ಟಬ್ಸ್‌ ಬಿ ನಾಕಿಯಾ 18 (12ಎ, 4x4)

ನಾರಾಯಣ್ ಸಿ ಪಂತ್ ಬಿ ಮಾರ್ಷ್‌ 85 (39, 4x7, 6x7)

ರಘುವಂಶಿ ಸಿ ಶರ್ಮಾ ಬಿ ನಾಕಿಯಾ 54 (27ಎ, 4x5, 6x3)

ರಸೆಲ್‌ ಬಿ ಇಶಾಂತ್‌ 41 (19ಎ, 4x4, 6x3)

ಅಯ್ಯರ್ ಸಿ ಸ್ಟಬ್ಸ್‌ ಬಿ ಖಲೀಲ್‌ 18 (11, 6x2)

ರಿಂಕು ಸಿಂಗ್ ಸಿ ವಾರ್ನರ್ ಬಿ ನಾಕಿಯಾ 26 (8ಎ, 4x1, 6x3)

ವೆಂಕಟೇಶ್ ಔಟಾಗದ 5 (2ಎ, 4x1)

ರಮಣದೀಪ್ ಸಿ ಪೃಥ್ವಿ ಬಿ ಇಶಾಂತ್ 2 (2ಎ)

ಮಿಚೆಲ್‌ ಸ್ಟಾರ್ಕ್ ಔಟಾಗದೇ 1 (1ಎ)

ಇತರೆ: 22 (ಬೈ 4, ಲೆಗ್‌ಬೈ 2, ನೋಬಾಲ್‌ 1, ವೈಡ್‌ 15)

ವಿಕೆಟ್ ಪತನ: 1–60 (ಫಿಲ್‌ ಸಾಲ್ಟ್‌, 4.3), 2–164 (ಸುನಿಲ್ ನಾರಾಯಣ್, 12.3), 3–176 (ಅಂಗ್‌ಕ್ರಿಶ್ ರಘುವಂಶಿ, 13.2), 4–232 (ಶ್ರೇಯಸ್‌ ಅಯ್ಯರ್‌, 17.2), 5–264 (ರಿಂಕು ಸಿಂಗ್‌, 18.6), 6–264 (ರಸೆಲ್‌, 19.1), 7–266 (ರಮಣದೀಪ್, 19.3)

ಬೌಲಿಂಗ್‌: ಖಲೀಲ್ ಅಹ್ಮದ್ 4–0–43–1; ಇಶಾಂತ್‌ ಶರ್ಮಾ 3–0–43–2; ಆ್ಯನ್ರಿಚ್ ನಾಕಿಯಾ 4–0–59–3; ರಾಸಿಕ್ ಸಲಾಂ 3–0–47–0; ಸುಮಿತ್‌ ಕುಮಾರ್‌ 2–0–19–0; ಅಕ್ಷರ್ ಪಟೇಲ್‌ 1–0–18–0, ಮಿಚೆಲ್‌ ಮಾರ್ಷ್‌ 3–0–37–1.

ಡೆಲ್ಲಿ ಕ್ಯಾಪಿಟಲ್ಸ್‌ 166 (17.2 ಓವರ್‌ಗಳಲ್ಲಿ)

ವಾರ್ನರ್‌ ಬಿ ಸ್ಟಾರ್ಕ್ 18 (13ಎ, 4x2, 6x1)

ಪ್ರಥ್ವಿ ಸಿ ವರುಣ್‌ ಬಿ ಅರೋರಾ 10 (7ಎ, 4x2)

ಮಿಚೆಲ್‌ ಸಿ ರಮಣ್‌ದೀಪ್‌ ಬಿ ಸ್ಟಾರ್ಕ್‌ 0 (2ಎ)

ಅಭಿಷೇಕ್‌ ಸಿ ನಾರಾಯಣ್ ಬಿ ಅರೋರಾ 0 (5ಎ)

ರಿಷಭ್‌ ಸಿ ಶ್ರೇಯಸ್‌ ಬಿ ವರುಣ್‌ 55 (25ಎ, 4x4, 6x5)

ಟ್ರಿಸ್ಟನ್ ಸಿ ಸ್ಟಾರ್ಕ್‌ ಬಿ ವರುಣ್‌ 54 (32ಎ, 4x4, 6x4)

ಅಕ್ಷರ್‌ ಸಿ ಸಬ್‌ (ಪಾಂಡೆ) ಬಿ ವರುಣ್‌ 0 (1ಎ)

ಸುಮಿತ್‌ ಸಿ ಸಬ್‌ (ಎಂ.ಕೆ. ಪಾಂಡೆ) ನಿ ನಾರಾಯಣ್‌ 7 (6ಎ, 6x1)

ರಾಸಿಕ್‌ ಸಿ ಸಾಲ್ಟ್‌ ಬಿ ಅರೋರಾ 1 (5ಎ)

ಆ್ಯನ್ರಿಚ್ ಸಿ ಶ್ರೇಯಸ್‌ ಬಿ ರಸೆಲ್‌ 4 (6ಎ)

ಇಶಾಂತ್‌ ಶರ್ಮಾ ಔಟಾಗದೆ 1 (3ಎ)

ಇತರೆ: 16 (ಬೈ 4, ಲೆಗ್‌ಬೈ 6, ನೋಬಾಲ್‌ 1, ವೈಡ್‌ 5)

ವಿಕೆಟ್ ಪತನ: 1-21 (ಪೃಥ್ವಿ ಶಾ; 1.5), 2-26 (ಮಿಚೆಲ್ ಮಾರ್ಷ್; 2.5), 3-27 (ಅಭಿಷೇಕ್ ಪೊರೆಲ್; 3.6), 4-33 (ಡೇವಿಡ್ ವಾರ್ನರ್; 4.3), 5-126 (ರಿಷಭ್ ಪಂತ್; 12.2), 6-126 (ಅಕ್ಷರ್ ಪಟೇಲ್; 12.3), 7-159 (ಟ್ರಿಸ್ಟನ್ ಸ್ಟಬ್ಸ್; 14.5), 8-159 (ಸುಮಿತ್ ಕುಮಾರ್, 15.1), 9-161 (ರಾಸಿಕ್‌ ಸಲಾಂ, 16.1), 10-166 (ಆ್ಯನ್ರಿಚ್ ನಾಕಿಯಾ, 17.2)

ಬೌಲಿಂಗ್‌: ಮಿಚೆಲ್ ಸ್ಟಾರ್ಕ್ 3–0–25–2, ವೈಭವ್ ಅರೋರಾ 4–0–27–3, ಆಂಡ್ರೆ ರಸೆಲ್ 1.2–0–14–1, ಸುನಿಲ್‌ 4–0–29–1, ವರುಣ್‌ ಚಕ್ರವರ್ತಿ 4–0–33–3, ವೆಂಕಟೇಶ್‌ ಅಯ್ಯರ್‌ 1–0–28–0

ಪಂದ್ಯದ ಆಟಗಾರ: ಸುನಿಲ್‌ ನಾರಾಯಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT