ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಕ್ರ್ ಜಮಾನ್ ‘ನಕಲಿ’ ರನೌಟ್‌: ಡಿ ಕಾಕ್ ಬಚಾವ್‌

Last Updated 5 ಏಪ್ರಿಲ್ 2021, 14:48 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಫಕ್ರ್ ಜಮಾನ್ ಅವರನ್ನು ‘ನಕಲಿ ರನ್ ಔಟ್‌’ ಬಲೆಯಲ್ಲಿ ಬೀಳಿಸಿದ್ದರು ಎಂಬ ಆರೋಪದಿಂದ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟರ್ ಡಿ ಕಾಕ್ ಮುಕ್ತರಾಗಿದ್ದಾರೆ. ರನ್ ಔಟ್ ಮಾಡುವಾಗ ಡಿ ಕಾಕ್ ನಿಯಮ ಮೀರಲಿಲ್ಲ ಎಂಬ ಅಭಿಪ್ರಾಯ ಪಂದ್ಯದ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ಭಾನುವಾರ ರಾತ್ರಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 342 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಜಯದ ಹಾದಿಯಲ್ಲಿದ್ದಾಗ ಫಕ್ರ್ ಜಮಾನ್ ಔಟಾಗಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಿದ್ದ ಅವರು 193 ರನ್ ಗಳಿಸಿದ್ದ ಸಂದರ್ಭದಲ್ಲಿ ಏಡನ್ ಮರ್ಕರಮ್ ಅವರ ನೇರ ಎಸೆತಕ್ಕೆ ರನ್ ಔಟ್ ಆಗಿದ್ದರು. ಆಗ ತಂಡದ ಗೆಲುವಿಗೆ 30 ರನ್‌ಗಳು ಬೇಕಾಗಿದ್ದವು. ಪಂದ್ಯದಲ್ಲಿ ಪಾಕಿಸ್ತಾನ 17 ರನ್‌ಗಳ ಸೋಲನುಭವಿಸಿತ್ತು.

ಜಮಾನ್ ಅವರ ರನ್ ಔಟ್ ಪಂದ್ಯದ ನಂತರ ವಿವಾದ ಸೃಷ್ಟಿಸಿತ್ತು. ಚೆಂಡನ್ನು ನಾನ್‌ ಸ್ಟ್ರೈಕರ್ ತುದಿಯತ್ತ ಎಸೆಯುವಂತೆ ಮರ್ಕರಮ್ ಅವರಿಗೆ ಡಿ ಕಾಕ್ ಸೂಚಿಸಿದ್ದರು. ಹೀಗಾಗಿ ಜಮಾನ್ ಕ್ರೀಸ್‌ನತ್ತ ನಿಧಾನವಾಗಿ ಓಡಿದ್ದರು. ಇದುವೇ ರನ್ಔಟ್‌ಗೆ ಕಾರಣ ಎಂದು ಹೇಳಲಾಗಿತ್ತು.

ನಾನ್ ಸ್ಟ್ರೈಕರ್ ತುದಿಯತ್ತ ಚೆಂಡು ಎಸೆಯುತ್ತಾರೆ ಎಂದುಕೊಂಡಿದ್ದ ಜಮಾನ್ ಅತ್ತ ಓಡುತ್ತಿದ್ದ ಹ್ಯಾರಿಸ್ ರವೂಫ್ ತಲುಪಿದ್ದಾರೆಯೋ ಇಲ್ಲವೋ ಎಂದು ನೋಡುತ್ತ ಓಡಿದ್ದರು. ಹೀಗಾಗಿ ಬ್ಯಾಟ್ ಊರಲು ತಡ ಮಾಡಿದ್ದರು. ಆದರೆ ಅಷ್ಟರಲ್ಲಿ ಮರ್ಕರಮ್ ಚೆಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದಿದ್ದರು. ಡಿಕಾಕ್ ಅವರು ಬೇಲ್ಸ್ ಎಗರಿಸಿದ್ದರು. ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ ಜಮಾನ್ ನಂತರ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು.

ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಡಿಕಾಕ್ ಮೇಲೆ ಆರೋಪಗಳ ಮಳೆ ಸುರಿಸಲಾಗಿತ್ತು. ನಕಲಿ ಫೀಲ್ಡಿಂಗ್ ಮೂಲಕ ಜಮಾನ್ ಅವರನ್ನು ಔಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ರನ್‌ ಔಟ್‌ಗೆ ಸಂಬಂಧಿಸಿ ಜಮಾನ್ ಯಾರ ಮೇಲೆಯೂ ಆರೋಪ ಹೊರಿಸಿರಲಿಲ್ಲ. ‌

‘ಹ್ಯಾರಿಸ್ ರವೂಫ್ ಔಟಾಗುತ್ತಾರೆಯೋ ಎಂಬ ಆತಂಕದಿಂದ ಅವರತ್ತಲೇ ನೋಡುತ್ತಿದ್ದೆ. ಹೀಗಾಗಿ ಕ್ರೀಸ್ ಮೇಲೆ ಬ್ಯಾಟ್ ಊರಲು ತಡಮಾಡಿದೆ. ಅದು ನನ್ನದೇ ತಪ್ಪು’ ಎಂದು ಪಂದ್ಯದ ನಂತರ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT