ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪದಾರ್ಪಣೆ ’ಸ್ಪೆಷಲಿಸ್ಟ್‌‘ ದೇವದತ್ತ ಪಡಿಕ್ಕಲ್

Last Updated 22 ಸೆಪ್ಟೆಂಬರ್ 2020, 5:55 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಒಂದು ದೇಶಿ ಋತು..2193 ರನ್‌ಗಳು ಮತ್ತು ಮುಂದುವರಿದ ಹಸಿವು..!

ಬೆಂಗಳೂರಿನ ದೇವದತ್ತ ಪಡಿಕ್ಕಲ್ ಕ್ರಿಕೆಟ್‌ ಪ್ರತಿಭೆಯ ಪರಿಚಯವಾಗಲು ಈ ಒಂದು ಸಾಲು ಸಾಕು. ಹೋದ ವರ್ಷ ಈ ಹುಡುಗನನ್ನು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡಿದಾಗ ಕೆಲವು ಮಾಜಿ ಕ್ರಿಕೆಟಿಗರು ಗೊಣಗಿದ್ದರು. ಅನುಭವಿಗಳನ್ನು ಬಿಟ್ಟು ಮೀಸೆ ಚಿಗುರದ ಈ ಹುಡುಗನಿಗೆ ಈಗಲೇ ಏಕೆ ಅವಕಾಶ ಕೊಡಬೇಕಿತ್ತು? ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು.

ಮಿತಭಾಷಿ ದೇವದತ್ತ ತಮ್ಮ ಬ್ಯಾಟ್‌ ಮೂಲಕವೇ ಉತ್ತರಿಸಿದ್ದರು. ವಿಜಯ್ ಹಜಾರೆ ಏಕದಿನ ಟೂರ್ನಿ, ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ರನ್‌ಗಳ ಹೊಳೆ ಹರಿಸಿದ ಎಡಗೈ ಬ್ಯಾಟ್ಸ್‌ಮನ್ ತಾವು ’ದೂರ ಓಟದ ಕುದುರೆ‘ ಎಂಬ ಸಂದೇಶ ರವಾನಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿಯೂ ತಮ್ಮ ’ಬೀಸಾಟ‘ ಆರಂಭಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸುವ ತಮ್ಮ ವಿಶೇಷ ಹವ್ಯಾಸವನ್ನೂ ಮುಂದುವರಿಸಿದ್ದಾರೆ.

2019ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಜಾರ್ಖಂಡ್ ವಿರುದ್ಧದ ತಮ್ಮ ಚೊಚ್ಚಲ ಪಂದ್ಯ ಆಡಿದ್ದ ದೇವದತ್ತ 58 ರನ್‌ ಬಾರಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿಯೂ ಉತ್ತರಾಖಂಡದ ವಿರುದ್ಧ 33 ಎಸೆತಗಳಲ್ಲಿ 53 ರನ್‌ ಗಳಿಸಿದ್ದರು. ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರದ ವಿರುದ್ಧ ಪದಾರ್ಪಣೆ ಮಾಡಿದ ದೇವದತ್ತ ಎರಡನೇ ಇನಿಂಗ್ಸ್‌ನಲ್ಲಿ 77 ರನ್‌ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 7 ರನ್‌ಗೆ ಔಟಾಗಿದ್ದರೂ. ಎರಡನೇ ಇನಿಂಗ್ಸ್‌ನ ಅವರ ಬ್ಯಾಟಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅವರು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನವೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದರು. ಆದರೆ ಆ ವರ್ಷ ಅವರಿಗೆ ಕಣಕ್ಕಿಳಿಯುವ ಅವಕಾಶ ಲಭಿಸಿರಲಿಲ್ಲ. ಅವರು ದೇಶಿ ಋತುವಿನಲ್ಲಿ ಮಾಡಿದ ಸಾಧನೆಯು ನಾಯಕ ವಿರಾಟ್ ಕೊಹ್ಲಿ ಕಣ್ಮನ ಸೆಳೆಯಿತು. ಅದಕ್ಕಾಗಿಯೇ ದುಬೈನಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಾಗ ಅದನ್ನು ವ್ಯರ್ಥ ಮಾಡಿಕೊಳ್ಳಲಿಲ್ಲ ದೇವದತ್ತ. ಅದೂ ಆರಂಭಿಕ ಆಟಗಾರನಾಗಿ ಆ್ಯರನ್ ಫಿಂಚ್ ಜೊತೆಗೆ ಕ್ರೀಸ್‌ಗೆ ಬಂದ 20ರ ಹರೆಯದ ಹುಡುಗನ ಪಾದಚಲನೆ, ದೇಹದ ಹಾವಭಾವಗಳಲ್ಲಿ ಆತ್ಮವಿಶ್ವಾಸವಿತ್ತು. ಸನ್‌ರೈಸರ್ಸ್ ತಂಡದ ಅನುಭವಿ ಬೌಲರ್‌ಗಳ ಮುಂದೆ ನಿಧಾನವಾಗಿ ಕುದುರಿಕೊಂಡ ದೇವದತ್ತ ಏಕಾಗ್ರತೆಯು ಮೇಲುಗೈ ಸಾಧಿಸಿತು. ಅವರು ಬೌಂಡರಿ ಗಳಿಸಲು ಪ್ರಯೋಗಿಸಿದ ಕೆಲವು ಹೊಡೆತಗಳು ಮಾಜಿ ಆಟಗಾರ ಗೌತಮ್ ಗಂಭೀರ್ ಅವರ ಆಟವನ್ನು ನೆನಪಿಸಿದ್ದು ಸುಳ್ಳಲ್ಲ.

’ನಾನು ಒಂಬತ್ತು ವರ್ಷದವನಿದ್ದಾಗ ಟೈಂ ಪಾಸ್‌ಗಾಗಿ ಕ್ರಿಕೆಟ್ ಆಡ್ತಿದ್ದೆ. ಅಷ್ಟೇನೂ ಸೀರಿಯಸ್ ಇರಲಿಲ್ಲ. ಆದರೆ ಅದೊಮ್ಮೆ ಟಿವಿಯಲ್ಲಿ ಗೌತಮ್ ಗಂಭೀರ್ ಅವರ ಆಟ ನೋಡಿದ್ದೆ. ಅವರ ತರಹವೇ ಆಡಬೇಕೆಂಬ ಆಸೆ ಮೊಳೆಯಿತು. ಅಲ್ಲಿಂದ ಗಂಭೀರವಾಗಿ ಕ್ರಿಕೆಟ್ ಕಲಿತೆ‘ ಎಂದು ಎರಡು ವರ್ಷಗಳ ಹಿಂದೆ ಭಾರತದ 19 ವರ್ಷದೊಳಗಿನವರ ತಂಡವು ಏಷ್ಯಾ ಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇವದತ್ತ ಹೇಳಿದ್ದರು.

ಮೂಲತಃ ಕೇರಳದ ದೇವದತ್ತ ಅವರನ್ನು ಬಾಲ್ಯದಲ್ಲಿಯೇ ಕ್ರಿಕೆಟ್‌ ಕಲಿಯಲು ಬೆಂಗಳೂರಿಗೆ ಕರೆ ತಂದ ಅವರ ಕುಟುಂಬ ಇಲ್ಲಿಯೇ ನೆಲೆಸಿತು.

’ನನ್ನ ತಂದೆ ಮತ್ತು ಅಂಕಲ್ ಇಬ್ಬರೂ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಕ್ರಿಕೆಟ್‌ ಆಡಿದವರು. ಚಿಕ್ಕಪ್ಪ ಕೇರಳ ರಾಜ್ಯ ತಂಡದಲ್ಲಿ ಆಡಿದ್ದರು. ನಾನು ಬೆಂಗಳೂರಿನಲ್ಲಿ ಜವಾನ್ಸ್‌ ಕ್ಲಬ್‌ನಲ್ಲಿ ತರಬೇತಿ ಪಡೆದೆ. 14 ವರ್ಷದೊಳಗಿನವರ ಕರ್ನಾಟಕ ತಂಡಕ್ಕೆ ಆಯ್ಕೆಯಾದ ನಂತರ ಗಂಭೀರವಾಗಿ ಕಲಿಯಲಾರಂಭಿಸಿದೆ‘ ಎಂದು ದೇವದತ್ತ ಹೇಳುತ್ತಾರೆ.

ಅವರು ಕರ್ನಾಟಕ ತಂಡಕ್ಕೆ ಕಾಲಿಟ್ಟಾಗ ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಅಭಿಮನ್ಯು ಮಿಥುನ್, ಭಾರತ ಎ ತಂಡದ ಕೃಷ್ಣಪ್ಪ ಗೌತಮ್ ಅವರೊಂದಿಗೆ ಡ್ರೆಸ್ಸಿಂಗ್ರೂಮ್ ಹಂಚಿಕೊಳ್ಳುವ ಅವಕಾಶ ದೊರೆಯಿತು. ಅವರ ಅನುಭವದಿಂದಲೂ ಒಂದಿಷ್ಟು ಪಾಠಗಳನ್ನು ಕಲಿಯಲು ಇದು ದಾರಿಯಾಯಿತು.

’ಕರ್ನಾಟಕ ರಾಜ್ಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವಕಾಶ ಸಿಗುವುದನ್ನು ಕಾಯುತ್ತಿರುವ ಹುಡುಗರ ದೊಡ್ಡ ಸಾಲು ಇದೆ. ಅವಕಾಶ ಸಿಕ್ಕಾಗ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಬಿಡುತ್ತಾರೆ. ಅಂತದರಲ್ಲಿ ನಾನು ಒಂಚೂರು ನಿರ್ಲಕ್ಷ್ಯ ಮಾಡುವಂತಿಲ್ಲ. ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರಿಂದ ನನಗೆ ಲಭಿಸಿರುವ ಸಲಹೆ ಗಳಿಂದಾಗಿ ಆಟದಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಅವರೊಂದಿಗೆ ಕ್ರೀಸ್‌ನಲ್ಲಿರುವಾಗ ದೊಡ್ಡ ಮೊತ್ತದ ಜೊತೆಯಾಟಗಳನ್ನು ರೂಪಿಸುವ ಪಾಠ ಕಲಿಸಿದ್ದಾರೆ. ಪಂದ್ಯದ ಯಾವ ಹಂತದಲ್ಲಿ ನನ್ನಿಂದ ಏನು ನಿರೀಕ್ಷೆ ಇರುತ್ತದೆ ಎಂಬುದರ ಅರಿವು ಮೂಡಿಸಿದ್ದಾರೆ‘ ಎಂದು ಈ ಹಿಂದೆ ಹೇಳಿದ್ದರು ದೇವದತ್ತ.

ಸೋಮವಾರ ದುಬೈ ಅಂಗಳದಲ್ಲಿ ಫಿಂಚ್ ಜೊತೆಗೆ ಮೊದಲ ವಿಕೆಟ್‌ಗೆ 90 ರನ್‌ ಕಲೆಹಾಕಲು ಅವರಿಗೆ ಕರ್ನಾಟಕ ತಂಡದಲ್ಲಿ ಕಲಿತ ಪಾಠವೇ ನೆರವಾಗಿದ್ದು ಸುಳ್ಳಲ್ಲ. ಅವರ ಪ್ರತಿಭೆ ಮತ್ತು ಅನುಭವಗಳು ಬೆಂಗಳೂರಿನ ತಂಡಕ್ಕೇ ಉಪಯೋಗವಾಗುತ್ತಿರುವುದು ಸಮಾಧಾನದ ವಿಷಯ. ಅಲ್ಲದೇ ಬಹಳ ವರ್ಷಗಳ ನಂತರ ಆರ್‌ಸಿಬಿಯಲ್ಲಿ ಕರ್ನಾಟಕದ ಹುಡುಗನೊಬ್ಬ ಆಡುವುದನ್ನು ನೋಡುವ ಸಂತಸ ಕ್ರಿಕೆಟ್ ಅಭಿಮಾನಿಗಳಿಗೆ ಲಭಿಸಿದೆ. ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರು ಇರುವ ತಂಡದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುವಲ್ಲಿ ದೇವದತ್ತ ಯಶಸ್ವಿಯಾದರೆ ರಾಷ್ಟ್ರೀಯ ತಂಡದ ಅವಕಾಶಕ್ಕೆ ಮತ್ತಷ್ಟು ಸಮೀಪವಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT