ದ್ರಾವಿಡ್‌ಗೆ ಹಿತಾಸಕ್ತಿ ಸಂಘರ್ಷದ ಸಂಕಷ್ಟ

ಮಂಗಳವಾರ, ಜೂಲೈ 16, 2019
25 °C
ಇಂಡಿಯಾ ಸಿಮೆಂಟ್ಸ್‌ನಲ್ಲಿ ಉದ್ಯೋಗಿಯಾಗಿರುವ ಕರ್ನಾಟಕದ ಹಿರಿಯ ಕ್ರಿಕೆಟಿಗ

ದ್ರಾವಿಡ್‌ಗೆ ಹಿತಾಸಕ್ತಿ ಸಂಘರ್ಷದ ಸಂಕಷ್ಟ

Published:
Updated:
Prajavani

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಕರ್ನಾಟಕದ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ.

ದ್ರಾವಿಡ್‌, ಜುಲೈ ಒಂದರಂದು ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿರುವುದರಿಂದ ಅವರು ಪದಗ್ರಹಣದಿಂದ ದೂರ ಉಳಿದಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿಯಮದ ಅನುಸಾರ ಮಂಡಳಿಯಲ್ಲಿ ಕಾರ್ಯನಿರ್ವಹಿಸುವವರು ಒಂದಕ್ಕಿಂತ ಹೆಚ್ಚು ಲಾಭದಾಯಕ ಹುದ್ದೆಗಳನ್ನು ಹೊಂದಿರುವಂತಿಲ್ಲ.

ದ್ರಾವಿಡ್‌, ಇಂಡಿಯಾ ಸಿಮೆಂಟ್ಸ್‌ನ ಉದ್ಯೋಗಿಯಾಗಿದ್ದಾರೆ, ಎನ್‌ಸಿಎ ಮುಖ್ಯಸ್ಥರಾಗಿಯೂ ಅಧಿಕಾರ ವಹಿಸಿಕೊಂಡರೆ ಹಿತಾಸಕ್ತಿ ಸಂಘರ್ಷ ಉಲ್ಲಂಘಿಸಿದಂತಾಗುತ್ತದೆ. ಈ ಕುರಿತು ವಿಚಾರಣೆ ನಡೆಸಬೇಕು ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಸದಸ್ಯ ಸಂಜೀವ್‌ ಗುಪ್ತಾ, ಜೂನ್‌ 30ರಂದು ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಮತ್ತು ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ದೂರು ನೀಡಿದ್ದಾರೆ. ಇದರ ವಿಚಾರಣೆ ಬಾಕಿ ಇದೆ.

ಗುಪ್ತಾ ಅವರು ಈ ಹಿಂದೆ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರ ವಿರುದ್ಧವೂ ದೂರು ನೀಡಿದ್ದರು.

‘ದ್ರಾವಿಡ್‌, ಇಂಡಿಯಾ ಸಿಮೆಂಟ್ಸ್‌ನಲ್ಲಿ ಹೊಂದಿರುವ ಹುದ್ದೆಗೆ ರಾಜೀನಾಮೆ ನೀಡಲಿದ್ದು, ಶೀಘ್ರವೇ ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಎನ್‌ಸಿಎ ಮುಖ್ಯಸ್ಥರಾಗಿ ದ್ರಾವಿಡ್‌ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ಉದಯೋನ್ಮುಖ ಕ್ರಿಕೆಟಿಗರಿಗೆ ತರಬೇತಿ, ರಾಷ್ಟ್ರೀಯ ಆಟಗಾರರ ಪುನಶ್ಚೇತನ, ಪ್ರತಿಭಾ ಶೋಧ, ಗಾಯಾಳು ಕ್ರಿಕೆಟಿಗರ ಚಿಕಿತ್ಸಾ ಘಟಕದ ನಿರ್ವಹಣೆ, ಎನ್‌ಸಿಎ ಮತ್ತು ವಲಯವಾರು ಅಕಾಡೆಮಿಗಳಿಗೆ ಕೋಚ್‌ಗಳನ್ನು ನೇಮಿಸುವ ಹೊಣೆಗಳನ್ನು ನಿಭಾಯಿಸಲಿದ್ದಾರೆ.

ರಾಹುಲ್ ಸದ್ಯ ಭಾರತ ಎ ಮತ್ತು 19 ವರ್ಷದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಆಗಿದ್ದಾರೆ‌. ಜೂನಿಯರ್ ತಂಡಗಳ ಕೋಚ್ ಹುದ್ದೆಗಿಂತಲೂ ಎನ್‌ಸಿಎ ಹೊಣೆ ದೊಡ್ಡದು. ಆದ್ದರಿಂದ ಅವರು ತಂಡಗಳೊಂದಿಗೆ ಪ್ರವಾಸ ಕೈಗೊಳ್ಳುವುದಿಲ್ಲ. ಪರಾಸ್‌ ಮಾಂಬ್ರೆ ಮತ್ತು ಅಭಯ್‌ ಶರ್ಮಾ ಅವರು ಜೂನಿಯರ್‌ ತಂಡದ ನೆರವು ಸಿಬ್ಬಂದಿಗಳಾಗಿದ್ದಾರೆ.

ದ್ರಾವಿಡ್‌, 2007ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ನೇತೃತ್ವದ ತಂಡವು ಹೋದ ವರ್ಷ 19 ವರ್ಷದೊಳಗಿನವರ ವಿಶ್ವಕಪ್‌ ಜಯಿಸಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !