ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ashes Test: ಇಂಗ್ಲೆಂಡ್‌ಗೆ ಸಮಬಲ ಸಾಧಿಸುವ ಗುರಿ

ಸ್ಟೋಕ್ಸ್‌ಗೆ ಆ್ಯಂಡರ್ಸನ್‌ ಮೇಲೆ ವಿಶ್ವಾಸ
Published 26 ಜುಲೈ 2023, 16:03 IST
Last Updated 26 ಜುಲೈ 2023, 16:03 IST
ಅಕ್ಷರ ಗಾತ್ರ

ಲಂಡನ್‌: ಆ್ಯಷಸ್‌ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್‌ ಗುರುವಾರ ‘ದಿ ಓವಲ್’ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರು ತಂಡದ ‘ಹಿರಿಯಣ್ಣ’ ಜೇಮ್ಸ್ ಆ್ಯಂಡರ್ಸನ್‌ ಮೇಲೆ ಭರವಸೆಯಿಟ್ಟಿದ್ದಾರೆ. ‘ಅವರು ಈ ಆಟ ಕಂಡ ಶ್ರೇಷ್ಠ ವೇಗದ ಬೌಲರ್‌’ ಎಂದು ಬಣ್ಣಿಸಿದ್ದಾರೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ಕಳೆದ ವಾರ ನಡೆದ ನಾಲ್ಕನೇ ಟೆಸ್ಟ್‌ ಮಳೆಯಿಂದಾಗಿ ಡ್ರಾ ಆಗಿದ್ದು, ಆಸ್ಟ್ರೇಲಿಯಾ ಈಗಾಗಲೇ ಆ್ಯಷಸ್‌ ಟ್ರೋಫಿ ಉಳಿಸಿಕೊಂಡಿದೆ. ಆದರೆ ಈ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯನ್ನು 2–2 ಸಮಬಲ ಮಾಡಿಕೊಳ್ಳುವ ಇರಾದೆಯಲ್ಲಿ ಇಂಗ್ಲೆಂಡ್‌ ಇದೆ. ನಾಲ್ಕನೇ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲು ಇಂಗ್ಲೆಂಡ್ ನಿರ್ಧರಿಸಿದೆ. ಆ ಪಂದ್ಯದಲ್ಲಿ ಮಳೆಯಿಂದ ಇಂಗ್ಲೆಂಡ್‌ ಗೆಲುವಿನ ಕನಸು ಕರಗಿಹೋಗಿತ್ತು.

ಭಾನುವಾರ 41ನೇ ವಸಂತಕ್ಕೆ ಕಾಲಿಡಲಿರುವ ಆ್ಯಂಡರ್ಸನ್‌, ಈ ಸರಣಿಯಲ್ಲಿ ಬರೇ ನಾಲ್ಕು ವಿಕೆಟ್ ಮಾತ್ರ ಪಡೆದಿದ್ದಾರೆ. ಅದೂ 76.75ರ ಸರಾಸರಿಯಲ್ಲಿ. ಸದ್ಯೋಭವಿಷ್ಯದಲ್ಲಿ ನಿವೃತ್ತಿಯಾಗುವ ಯೋಚನೆ ತಮಗೆ ಇಲ್ಲ ಎಂದು ಅವರು ಇತ್ತೀಚೆಗೆ ಪತ್ರಿಕೆಯೊಂದರ ಅಂಕಣದಲ್ಲಿ ಬರೆದಿದ್ದಾರೆ. ಎರಡು ದಶಕಗಳ ದೀರ್ಘ ವೃತ್ತಿ ಜೀವನದಲ್ಲಿ 689 ವಿಕೆಟ್‌ ಗಳಿಸಿದ್ದಾರೆ. ಅತ್ಯಧಿಕ ವಿಕೆಟ್ ಪಡೆದಿರುವ ವೇಗದ ಬೌಲರ್ ಆಗಿದ್ದಾರೆ.

ಸ್ಟೋಕ್ಸ್‌ ಅವರು, ಆ್ಯಂಡರ್ಸನ್ ಅವರ ದೀರ್ಘಕಾಲದ ಸಹ ಬೌಲರ್ ಸ್ಟುವರ್ಟ್ ಬ್ರಾಡ್‌ ಬಗ್ಗೆಯೂ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. 37 ವರ್ಷದ ಬ್ರಾಡ್‌, ಆ್ಯಷಸ್‌ ಸರಣಿಯಲ್ಲಿ 18 ವಿಕೆಟ್‌ಗಳೊಡನೆ ಯಶಸ್ವಿ ಬೌಲರ್‌ ಆಗಿದ್ದಾರೆ.

ಈ ಮಧ್ಯೆ, ಆ್ಯಷಸ್‌ ಉಳಿಸಿಕೊಂಡರೂ, ಅಂತಿಮ ಟೆಸ್ಟ್‌ ಗೆದ್ದು, ಇಂಗ್ಲೆಂಡ್ ನೆಲದಲ್ಲಿ 2001ರ ನಂತರ ಸರಣಿ ಗೆಲ್ಲಬೇಕೆಂಬ ಮಹದಾಸೆಯಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್ ಇದ್ದಾರೆ.

ಸದ್ಯ ನಿವೃತ್ತಿ ಇಲ್ಲ:

ಆ್ಯಷಸ್‌ ಸರಣಿಯ ನಂತರ ತಾವು ಮತ್ತು ಸ್ಟೀವ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬಹುದೆಂಬ ಮಾತುಗಳನ್ನು ಆಸ್ಟ್ರೇಲಿಯಾದ ಆರಂಭ ಆಟಗಾರ ಡೇವಿಡ್‌ ವಾರ್ನರ್‌ ತಳ್ಳಿಹಾಕಿದ್ದಾರೆ.

ವಾರ್ನರ್‌ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಸಿಡ್ನಿಯಲ್ಲಿ ಆಡಲು ಬಯಸಿದ್ದಾರೆ. ‘ನನ್ನ ನಿವೃತ್ತಿ ಕುರಿತ ಮಾತುಗಳನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT