ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳೆಯ’ ಪೋಷಾಕು; ನೆಟ್ಟಿಗರ ಕುಟುಕು

Last Updated 30 ನವೆಂಬರ್ 2020, 9:22 IST
ಅಕ್ಷರ ಗಾತ್ರ

ಶುಕ್ರವಾರ ಆರಂಭಗೊಂಡಿರುವ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ‘ಹೊಸ’ ಪೋಷಾಕು ಅನಾವರಣಗೊಂಡಿತು. ‘ರೆಟ್ರೊ ಬ್ಲೂ‘ ಬಣ್ಣದಲ್ಲಿ ಅದ್ದಿರುವ ಈ ಪೋಷಾಕು ವಾಸ್ತವದಲ್ಲಿ ಹೊಸ ವಿನ್ಯಾಸವಲ್ಲ. ಕಪಿಲ್‌ ದೇವ್‌, ರವಿಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್‌, ಸಚಿನ್ ತೆಂಡುಲ್ಕರ್‌, ಕಿರಣ್ ಮೋರೆ, ಜಾವಗಲ್‌ ಶ್ರೀನಾಥ್‌ ಮುಂತಾದವರ ಕಾಲದಲ್ಲಿ ಧರಿಸುತ್ತಿದ್ದುದು ಇದೇ ಮಾದರಿಯ ಪೋಷಾಕು.

1992ರ ವಿಶ್ವಕಪ್‌ನಲ್ಲಿ ಭಾರತದ ಆಟಗಾರರು ಇದೇ ರೀತಿಯ ಜೆರ್ಸಿ ಧರಿಸಿ ಕಣಕ್ಕೆ ಇಳಿದಿದ್ದರು. ಆದರೆ ಆಗ ಬಟ್ಟೆಯ ಮೇಲೆ ಇಷ್ಟೊಂದು ಜಾಹೀರಾತು ಇರಲಿಲ್ಲ. ಭಾರತದ ಹೆಸರು ಎದ್ದು ಕಾಣುತ್ತಿತ್ತು. ಹೊಸ ಪೋಷಾಕಿನ ತುಂಬ ಜಾಹೀರಾತು, ಎಡಭಾಗದಲ್ಲಿ ಬಿಸಿಸಿಐ ಲಾಂಛನ ಹಾಗೂ ಕೆಳಭಾಗದಲ್ಲಿ ದೇಶದ ಹೆಸರು ಇದೆ. ಎರಡು ದಿನಗಳ ಹಿಂದೆ ಈ ಪೋಷಾಕು ತೊಟ್ಟ ಚಿತ್ರದೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಟ್ವೀಟ್ ಮಾಡಿದ್ದೇ ತಡ, ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನದ ಕಿಡಿಯೊಂದಿಗೆ ಟ್ರೋಲ್ ಮಾಡಿದ್ದಾರೆ. ಜೆರ್ಸಿಯನ್ನು ಜಾಹೀರಾತು ಫಲಕ ಎಂದೇ ನೆಟ್ಟಿಗರು ‘ಬಣ್ಣಿಸಿ’ದ್ದಾರೆ.

ಅನೇಕರು ಟಿ ಶರ್ಟ್ ಮೇಲಿರುವ ಜಾಹೀರಾತು ಕಂಪನಿಗಳ ಹೆಸರನ್ನು ಉಲ್ಲೇಖಿಸಿ ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲ, ‘..’ ಮತ್ತು ಆಸ್ಟ್ರೇಲಿಯಾ ಸರಣಿ ಎಂದು ಟೀಕಿಸಿದ್ದಾರೆ. ’ಜೆರ್ಸಿಯಲ್ಲಿ ಭಾರತದ 130 ಕೋಟಿ ಜನರ ಭಾವನೆಗಳು ಇವೆ. ಹೀಗಾಗಿ ಅಲ್ಲಿ ದೇಶದ ಹೆಸರು ಎದ್ದು ಕಾಣಬೇಕೇ ಹೊರತು ಜಾಹೀರಾತುಗಳಲ್ಲ’ ಎಂದು ಒಬ್ಬರು ಹೇಳಿದ್ದರೆ, ’ಕಾಲರ್‌ನಲ್ಲಿ ಸ್ವಲ್ಪ ಜಾಗ ಖಾಲಿ ಇದೆಯಲ್ಲ, ಬಹುಶ: ಯಾವುದೋ ಜಾಹೀರಾತು ಹಾಕುವುದು ಬಾಕಿ ಇರಬೇಕು ಅಲ್ಲವೇ’ ಎಂದು ಮತ್ತೊಬ್ಬರು ಕೋಪದಿಂದ ನುಡಿದಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿರುವ ಬಹುಮಹಡಿ ಕಟ್ಟಡದ ತುಂಬ ಜಾಹೀರಾತು ಫಲಕಗಳು ತುಂಬಿರುವುದರಿಂದ ಕಟ್ಟಡದ ಹೆಸರು ಹುಡುಕುತ್ತಿರುವ ಯುವಕನ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ನೆಟ್ಟಿಗರೊಬ್ಬರು ಇದು ಭಾರತದ ಜೆರ್ಸಿಯ ಕಥೆ ಎಂದು ಟೀಕಿಸಿದ್ದಾರೆ. ಭಾರತ ತಂಡದ ಈ ವರೆಗಿನ ಜೆರ್ಸಿಗಳಲ್ಲೇ ಅತ್ಯಂತ ಕಳಪೆ ಇದು. ನಮ್ಮ ದೇಶದ ಆಟಗಾರರ ಜೆರ್ಸಿ ನೋಡುವಾಗಲೇ ಅಭಿಮಾನ ಮೂಡುವಂತೆ ಇರಬೇಕು. ಆದರೆ ಇದನ್ನು ನೋಡಿದರೆ ಜಾಹೀರಾತು ಫಲಕ ನೋಡಿದಂತಾಗುತ್ತದೆ ಎಂದು ಮತ್ತೊಬ್ಬರು ದೂರಿದ್ದಾರೆ. ಎರಡು ದಶಕಗಳ ಹಿಂದಿನ ಪೋಷಾಕಿನಂತೆ ಕಾಣುತ್ತಿದೆ. ದೇಶದ ಹೆಸರನ್ನು ಕಡೆಗಣಿಸಿದ್ದು ಸರಿಯಲ್ಲ ಎಂಬುದು ಇನ್ನೊಬ್ಬರ ಅಭಿಪ್ರಾಯ.

ಕೈಹಿಡಿಯದ ಅದೃಷ್ಟ?
ಅದೃಷ್ಟದ ಮೇಲೆ ನಂಬಿಕೆ ಇರುವವರು ಈ ಜೆರ್ಸಿ ಭಾರತದ ಪಾಲಿಗೆ ಅಷ್ಟು ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಇಂಥ ವಿನ್ಯಾಸದ ಜೆರ್ಸಿ ತೊಟ್ಟು ಅಂಗಣಕ್ಕೆ ಇಳಿದ ಹೆಚ್ಚಿನ ಸಂದರ್ಭದಲ್ಲಿ ಭಾರತ ತಂಡ ಸೋಲನ್ನೇ ಕಂಡಿದೆ ಎಂಬುದು ಈ ಅಭಿಪ್ರಾಯ ವ್ಯಕ್ತಪಡಿಸುವವರ ಅನಿಸಿಕೆ. ಈ ಮಾತಿಗೆ ಪೂರಕ ಎಂಬಂತೆ 1992ರ ವಿಶ್ವಕಪ್‌ ಟೂರ್ನಿ ಫಲಿತಾಂಶವೂ ಇದೆ. ಆ ಟೂರ್ನಿಯಲ್ಲಿ ಭಾಗವಹಿಸಿದ್ದ ಒಂಬತ್ತು ತಂಡಗಳ ಪೈಕಿ ಭಾರತ ಏಳನೇ ಸ್ಥಾನ ಪಡೆದಿತ್ತು. ಎಂಟು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಮಾತ್ರ ಮೊಹಮ್ಮದ್ ಅಜರುದ್ದೀನ್ ಬಳಗ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT