ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕ್ರಿಕೆಟ್, ನಮಗಿಂತ ಮುಂದಿದೆ ಎಂದ ಪಾಕ್ ಮಾಜಿ ನಾಯಕ ಕೊಟ್ಟ ಕಾರಣವೇನು?

Last Updated 7 ಫೆಬ್ರುವರಿ 2020, 7:52 IST
ಅಕ್ಷರ ಗಾತ್ರ

ನವದೆಹಲಿ:ಪಾಕಿಸ್ತಾನದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮುಸ್ತಾಕ್‌ ಮೊಹಮದ್‌, ಭಾರತ ಕ್ರಿಕೆಟ್‌ ವ್ಯವಸ್ಥೆ, ಯಶಸ್ಸು ಮತ್ತು ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತವು ಕ್ರಿಕೆಟ್‌ ರಾಷ್ಟ್ರವಾಗಿ ಬೆಳೆಯುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನೆಲೆಸಿರುವ 76 ವಯಸ್ಸಿನ ಮುಸ್ತಾಕ್‌, ‘ಭಾರತದಲ್ಲಿ ಕ್ರಿಕೆಟ್‌, ಪಾಕಿಸ್ತಾನ ಮತ್ತು ಇತರ ದೇಶಗಳಿಗಿಂತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಅದು ಸಾಧ್ಯವಾಗುತ್ತಿರುವುದು, ಅವರು ತಮ್ಮ ಕ್ರಿಕೆಟ್‌ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವುದರಿಂದ ಅಲ್ಲ. ಬದಲಾಗಿ ದೇಶಿ ಮತ್ತು ಅಂತರರಾಷ್ಟ್ರೀಯ ಆಟಗಾರರಿಗೆ ಉತ್ತಮ ವೇತನ ನೀಡುತ್ತಿರುವುದು ಮತ್ತು ಆ ಮೂಲಕ ಬಲಿಷ್ಠ ಆಟಗಾರರನ್ನು ಸೃಷ್ಟಿಸುತ್ತಿರುವುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಐ‍ಪಿಎಲ್‌ ಹೊರತಾಗಿ ವಿಶ್ವದಾದ್ಯಂತ ನಡೆಯುವ ಯಾವುದೇ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ಅವಕಾಶ ನೀಡದಿರುವುದೂ ಭಾರತ ಕ್ರಿಕೆಟ್‌ ಯಶಸ್ಸಿಗೆ ಮುಖ್ಯ ಕಾರಣ. ಬೇರೆ ಲೀಗ್‌ಗಳಲ್ಲಿ ಆಡುವ ಅವಕಾಶನೀಡುವ ಬದಲಾಗಿ, ಸಾಕಷ್ಟು ವೇತನ ನೀಡುವುದರಿಂದಆಟಗಾರರು ಈ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸದೆ ತಂಡದ ಬಗ್ಗೆಯೇ ಹೆಚ್ಚು ಗಮನಹರಿಸುತ್ತಾರೆ. ಇದರಿಂದ ಭಾರತ ಕ್ರಿಕೆಟ್‌ಗೆ ಸಾಕಷ್ಟು ಲಾಭವಾಗಿದೆ’ ಎಂದೂ ಹೇಳಿದ್ದಾರೆ.

‘ಭಾರತ ತವರಿನಲ್ಲಿ ಆಡುವ ಪಂದ್ಯಗಳ ಸಂಖ್ಯೆಯನ್ನು ಗಮನಿಸಿದರೆ ಅವರು ಉತ್ತುಂಗದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಮಾತ್ರವಲ್ಲದೆ, ಅವರು ವಿದೇಶದ ಪ್ರವಾಸಗಳಲ್ಲಿಯೂ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಹಾಗೆ ನೋಡಿದರೆ, ನಮ್ಮ ತಂಡ (ಪಾಕಿಸ್ತಾನ) ನಿರಂತರವಾಗಿ ಟೆಸ್ಟ್‌ ಸರಣಿಗಳನ್ನು ಆಡುವುದೇ ಕಷ್ಟವಾಗಿದೆ’ ಎಂದಿದ್ದಾರೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಅವರ ಪ್ರದರ್ಶನದ ಬಗ್ಗೆಯೂ ಮಾತನಾಡಿರುವ ಪಾಕ್‌ ಮಾಜಿ ನಾಯಕ, ‘ಉತ್ತಮ ಆಟಗಾರರ ಬಳಗವನ್ನೇ ಹೊಂದಿರುವ ನಾಯಕ ಕೊಹ್ಲಿ ನಿಜವಾಗಿಯೂ ಅದೃಷ್ಟವಂತ. ಅದರ ಹೊರತಾಗಿಯೂ ಕೊಹ್ಲಿ ಚತುರ ನಾಯಕನಾಗಿ ಉಳಿದುಕೊಂಡಿದ್ದಾರೆ. ಭಾರತದ ಆಟಗಾರರು ದಿನದಿಂದ ದಿನಕ್ಕೆ ತಾಂತ್ರಿಕವಾಗಿಯೂ ಸಾಕಷ್ಟು ಜ್ಞಾನ ಗಳಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

ಪಾಕಿಸ್ತಾನದ ಯುವ ಆಟಗಾರ ಬಾಬರ್‌ ಅಜಂ ಅವರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿರುವ ಅವರು,‘ನಿಗದಿತ ಓವರ್‌ಗಳ ಮಾದರಿಯಲ್ಲಿ ಕೊಹ್ಲಿ ಅತ್ಯುತ್ತಮ ಮತ್ತು ಅನುಭವಿ ಆಟಗಾರ. ಅದೇ ರೀತಿ ಬಾಬರ್ ಕೂಡ ಶ್ರೇಷ್ಠ ಬ್ಯಾಟ್ಸ್‌ಮನ್‌. ಆದರೆ, ಈ ವರ್ಷ ಬಾಬರ್‌ಗೆ ಹೆಚ್ಚು ಟೆಸ್ಟ್‌ ಸರಣಿಗಳು ಇಲ್ಲ’ ಎಂದಿದ್ದಾರೆ.

1976ರಲ್ಲಿ ನಾಯಕನಾಗಿದ್ದ ಮುಸ್ತಾಕ್‌, ಪಾಕಿಸ್ತಾನ ಕ್ರಿಕೆಟ್‌ನ ದಿಕ್ಕು ಬದಲಿಸಿದ್ದರು. ತಂಡದಲ್ಲಿ ಆತ್ಮ ವಿಶ್ವಾಸ ಮತ್ತು ಜಯದ ಮನೋಭಾವವನ್ನು ಬೆಳೆಸಿದ ಖ್ಯಾತಿ ಅವರದು.1978-79ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್‌ ಸರಣಿ ಸೋಲಿನ ಬಳಿಕ ಹಿರಿಯ ಆಟಗಾರರುಮುಸ್ತಾಕ್‌ ನಾಯಕತ್ವವನ್ನು ವಿರೋಧಿಸಿದ್ದರು. ಹೀಗಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

1959ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಪ್ರಮುಖ ಆಲ್ರೌಂಡರ್ ಆಗಿದ್ದರು. ಒಟ್ಟು 57 ಟೆಸ್ಟ್‌ ಮತ್ತು 502 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.ಬಳಿಕ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.ಅವರ ಮಾರ್ಗದರ್ಶನದಲ್ಲಿ ಪಾಕ್‌ ತಂಡ ಆಸ್ಟ್ರೇಲಿಯಾದಲ್ಲಿ ಮೊದಲ ಸಲತ್ರಿಕೋನ ಏಕದಿನ ಸರಣಿ ಗೆದ್ದಿತ್ತು ಮತ್ತು 1999ರವಿಶ್ವಕಪ್‌ ಟೂರ್ನಿಯಲ್ಲಿ ಪೈನಲ್‌ಗೇರಿತ್ತು.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ19 ವರ್ಷದೊಳಗಿನವರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋಲು ಕಂಡ ಬಳಿಕ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ವಿರುದ್ಧ ವಾಗ್ದಾಳಿ ನಡೆಸಿದ್ದರು.

ನಮ್ಮ ಮಾಜಿ ಆಟಗಾರರನ್ನು ತಂಡದ ತರಬೇತಿಗೆ ನೇಮಿಸಿಕೊಳ್ಳಲು ಚೌಕಾಸಿ ಮಾಡುವ ಪಿಸಿಬಿ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ ಕಲಿಯುವುದು ಸಾಕಷ್ಟಿದೆ ಎಂದು ಕಿಡಿ ಕಾರಿದ್ದರು.ಮುಂದುವರಿದು, ಕ್ರಿಕೆಟ್‌ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಿದ್ದ ಪಾಕಿಸ್ತಾನದ ಮಾಜಿ ಆಟಗಾರರೆಲ್ಲ ಯುಟ್ಯೂಬ್‌ ಚಾನಲ್‌ ನಡೆಸುತ್ತಿದ್ದಾರೆ ಎಂದುಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT