ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗೂ ಮುನ್ನ ಮ್ಯಾಕ್ಸ್‌ವೆಲ್ ತಂಡ ಸೇರಿಕೊಳ್ಳಲಿದ್ದಾರೆ: ಆರ್‌ಸಿಬಿ ನಿರ್ದೇಶಕ

Last Updated 16 ನವೆಂಬರ್ 2022, 11:28 IST
ಅಕ್ಷರ ಗಾತ್ರ

ಬೆಂಗಳೂರು: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ (ಐಪಿಎಲ್‌) ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ತಂಡದ ನಿರ್ದೇಶಕ ಮೈಕ್‌ ಹೆಸ್ಸನ್‌ ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ‘ಮ್ಯಾಕ್ಸ್‌ವೆಲ್‌ ಅವರು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಅವರು ಮುಂಬರುವ (2023) ಐಪಿಎಲ್‌ಗೆ ಮುಂಚಿತವಾಗಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೆಸ್ಸನ್ ಹೇಳಿದ್ದಾರೆ.

ಶನಿವಾರ ಮೆಲ್ಬರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿ ವೇಳೆ ಮ್ಯಾಕ್ಸ್‌ವೆಲ್ ಅವರ ಕಾಲು ಮುರಿದಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಡಿ.23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಿನಿ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ನೀಡಲು ಮಂಗಳವಾರ ಕೊನೆಯ ದಿನವಾಗಿತ್ತು.

ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಫ್ರಾಂಚೈಸ್‌, ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.

ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಫಾಫ್‌ ಡುಪ್ಲೆಸಿ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (ಆರ್‌ಸಿಬಿ) ನಿರೀಕ್ಷೆಯಂತೆಯೇ ತನ್ನಲ್ಲಿ ಉಳಿಸಿಕೊಂಡಿದೆ.

ವಿದೇಶಿ ಆಟಗಾರರಲ್ಲಿ ಮ್ಯಾಕ್ಸ್‌ವೆಲ್‌ ಮತ್ತು ಡುಪ್ಲೆಸಿ ಅಲ್ಲದೆ ಶ್ರೀಲಂಕಾದ ಆಲ್‌ರೌಂಡರ್‌ ವಣಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜೆಲ್‌ವುಡ್‌, ನ್ಯೂಜಿಲೆಂಡ್‌ನ ವಿಕೆಟ್‌ಕೀಪರ್‌ ಬ್ಯಾಟರ್‌ ಫಿನ್‌ ಅಲೆನ್‌ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್ ಡೇವಿಡ್‌ ವಿಲಿ ಅವರನ್ನೂ ಉಳಿಸಿಕೊಂಡಿದೆ.

ಭಾರತದ ಆಟಗಾರರಾದ ದಿನೇಶ್‌ ಕಾರ್ತಿಕ್‌, ಮೊಹಮ್ಮದ್‌ ಸಿರಾಜ್‌ ಮತ್ತು ಹರ್ಷಲ್‌ ಪಟೇಲ್‌ ಅವರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಕರ್ನಾಟಕದ ಇಬ್ಬರು ಆಟಗಾರರಾದ ಲವನೀತ್ ಸಿಸೋಡಿಯಾ ಮತ್ತು ಅನೀಶ್ವರ್‌ ಗೌತಮ್‌ ಸೇರಿದಂತೆ ಐವರು ಆಟಗಾರರನ್ನು ಆರ್‌ಸಿಬಿ ಕೈಬಿಟ್ಟಿದೆ.

ಮಿನಿ ಹರಾಜಿನಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಲು ಆರ್‌ಸಿಬಿ ₹ 8.75 ಕೋಟಿ ಖರ್ಚು ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT