ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ಪಾಂಡ್ಯ – ನತಾಶಾ ಸ್ಟಾನ್ಕೊವಿಕ್ ಬೇರೆಯಾದರೇ? ನೆಟ್ಟಿಗರ ನೂರೆಂಟು ಚರ್ಚೆ

Published 25 ಮೇ 2024, 9:34 IST
Last Updated 25 ಮೇ 2024, 9:34 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಸದ್ಯ ಸಂಕಷ್ಟದ ಸಮಯ ಎದುರಿಸುತ್ತಿದ್ದಾರೆ. ಐಪಿಎಲ್‌ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕಾಗಿ ನಾಯಕರಾದ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಅವರ ವೈಯಕ್ತಿಕ ಬದುಕಿನಲ್ಲೂ ಅವರಿಗೆ ಹೊಸ ಸವಾಲು ಎದುರಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಹಾರ್ದಿಕ್ ಅವರು ತಮ್ಮ ಗೆಳತಿ ಸರ್ಬಿಯಾದ ನಟಿ ನತಾಶಾ ಸ್ಟಾನ್ಕೊವಿಕ್ ಅವರನ್ನು ನಾಲ್ಕು ವರ್ಷಗಳ ಹಿಂದೆ ವರಿಸಿದ್ದರು. ಆದರೆ ಈ ದಂಪತಿ ಈಗ ಪ್ರತ್ಯೇಕವಾಗುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.

ನತಾಶಾ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ನತಾಶಾ ಸ್ಟಾನ್ಕೊವಿಕ್‌ ಪಾಂಡ್ಯ ಎಂಬ ಹೆಸರಿನಲ್ಲಿ ‘ಪಾಂಡ್ಯ’ ಹೆಸರನ್ನು ಕೈಬಿಟ್ಟಿರುವುದೇ ಈ ಊಹಾಪೋಹಕ್ಕೆ ಕಾರಣ. ಇಷ್ಟು ಮಾತ್ರವಲ್ಲ, ಇತರ ಕ್ರಿಕೆಟರ್‌ಗಳ ಪತ್ನಿಯರಂತೆ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ತಂಡದ ಯಾವುದೇ ಪಂದ್ಯದಲ್ಲೂ ನತಾಶಾ ಮೈದಾನದ ಗ್ಯಾಲರಿಯಲ್ಲಿ ಕಂಡುಬರಲಿಲ್ಲ ಎಂಬುದು ಮತ್ತೊಂದು ಕಾರಣ.

ಪಾಂಡ್ಯ ಮತ್ತು ನತಾಶಾ ಅವರು ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ತಾಲತಾಣಗಳ ತಮ್ಮ ಖಾತೆಗಳಿಂದ ಪರಸ್ಪರರ ಪರವಾಗಿ ಯಾವುದೇ ಪೋಸ್ಟ್ ಹಾಕದಿರುವುದೂ ಈ ಎಲ್ಲಾ ಅನುಮಾನಗಳನ್ನು ಪುಷ್ಟೀಕರಿಸುವಂತಿದೆ. ನತಾಶಾ ಅವರ ಜನ್ಮದಿನವಾದ ಮಾರ್ಚ್ 4ರಂದು ಶುಭಾಶಯ ಕೋರಿ ಹಾರ್ದಿಕ್ ಯಾವುದೇ ಪೋಸ್ಟ್‌ ಮಾಡಿಲ್ಲ. ವಿಚ್ಛೇಧನದ ಭಾಗವಾಗಿ ನತಾಶಾಗೆ ತಮ್ಮ ಆಸ್ತಿಯ ಶೇ 70ರಷ್ಟು ಜೀವನಾಂಶವನ್ನು ಪಾಂಡ್ಯ ನೀಡುತ್ತಿದ್ದಾರೆ ಎಂಬ ಮಾತುಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಹಾರ್ದಿಕ್ ಮತ್ತು ನತಾಶಾ ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. 

2020ರ ಮೇನಲ್ಲಿ ಹಾರ್ದಿಕ್ ಮತ್ತು ನತಾಶಾ ಅವರು ತಮ್ಮ ಮನೆಯಲ್ಲೇ ಸರಳ ವಿವಾಹದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಪುತ್ರ ಅಗಸ್ತ್ಯ ಪಾಂಡ್ಯ ಇದ್ದಾನೆ. 2023ರಲ್ಲಿ ಈ ದಂಪತಿ ಉದಯಪುರದಲ್ಲಿ ಹಿಂದು ಮತ್ತು ಕ್ರೈಸ್ತ ಧರ್ಮದ ಆಚರಣೆಯಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು.

ಐಪಿಎಲ್‌ನಲ್ಲಿ ಸೋಲು, ವೈಯಕ್ತಿಕ ಜೀವನದೊಂದಿಗೆ ಪಾಂಡ್ಯ ಅವರ ಸೋದರ ಸಂಬಂಧಿಯೊಬ್ಬರು ವ್ಯವಹಾರದಲ್ಲಿ ₹4.3 ಕೋಟಿ ವಂಚಿಸಿರುವ ಪ್ರಕರಣವೂ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT