ನವದೆಹಲಿ: ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಗೆ ಹಾಕಿರುವ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೋಲು ಕಂಡ ಹಿನ್ನೆಲೆಯಲ್ಲಿ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗುವಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿರುವುದು ವರದಿಯಾಗಿದೆ.
ಅ.24ರಂದು ನಡೆದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದರು.
ಅ.31ರಂದು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋತಿರುವುದಕ್ಕೆ ನಾಯಕ ವಿರಾಟ್ ಕೊಹ್ಲಿ ಅವರನ್ನು ಗುರಿಯಾಗಿಸಿಕೊಂಡು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳಕಾರಿಯಾದ ಪೋಸ್ಟ್‌ಗಳನ್ನು ಮಾಡುವ ಮೂಲಕ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಮಹಿಳಾ ಆಯೋಗ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್, ಕೈಗೊಂಡ ಕ್ರಮ, ಆರೋಪಿಗಳ ವಿವರವನ್ನು ನ.8ರ ಒಳಗೆ ನೀಡುವಂತೆ ಮಹಿಳಾ ಆಯೋಗವು ದೆಹಲಿಯ ಸಹಾಯಕ ಕಮಿಷನರ್ ಅವರಿಗೆ ಸೂಚಿಸಿದೆ.