ಮಂಗಳವಾರ, ಆಗಸ್ಟ್ 16, 2022
21 °C

PV Web Exclusive| 'ಸರ್ ರವೀಂದ್ರ ಜಡೇಜ’ ಶ್ರೇಷ್ಠ ‘ಆಲ್‌ರೌಂಡರ್‌‘ ಆಗಿದ್ದು...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

2009ರ ಆ ಸಂಜೆ. ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಿಂತಿದ್ದ ಆ ಹುಡುಗನ ಮೊಗದಲ್ಲಿ ಹಿಂಜರಿಕೆಯ ಭಾವ ಇತ್ತು.

ಅವತ್ತು ಅಲ್ಲಿ ಮುಕ್ತಾಯವಾಗಿದ್ದ ಕರ್ನಾಟಕ ತಂಡದ ಎದುರಿನ ರಣಜಿ ಕ್ವಾರ್ಟರ್‌ ಫೈನಲ್‌ನಲ್ಲಿ ಜಯಿಸಿದ್ದ ಸೌರಾಷ್ಟ್ರ ತಂಡದ ಆಟಗಾರ ಆ ಹುಡುಗ. ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಸಂತಸದಲ್ಲಿದ್ದ ರವೀಂದ್ರ ಜಡೇಜ. ’ಇಂಗ್ಲಿಷ್‌ ಬೇಡ, ಹಿಂದಿಯಲ್ಲಿ ಪ್ರಶ್ನೆ ಕೇಳಿ ಪ್ಲೀಸ್‘ ಎಂದು ಮೆಲ್ಲಗೆ ಪತ್ರಕರ್ತರಿಗೆ ಹೇಳಿದ್ದರು. ಅವರೊಂದಿಗೆ ಚೇತೇಶ್ವರ್ ಪೂಜಾರ ಕೂಡ ಇದ್ದರು. ಇಬ್ಬರೂ ಭಾರತ ತಂಡವನ್ನು ಸೇರಿಕೊಳ್ಳಲು ಸಿದ್ಧರಾಗಿದ್ದರು. 

ಆ ದಿನಕ್ಕೆ ಈಗ 11 ವರ್ಷಗಳು ಕಳೆದು ಹೋಗಿವೆ.  ಆಗಿನ ರವೀಂದ್ರ ಜಡೇಜ, ಹತ್ತಾರು ವೈಫಲ್ಯಗಳು, ಸಫಲತೆಗಳೊಂದಿಗೆ ಬೆಳೆದು ನಿಂತಿದ್ದಾರೆ. ದೇಶ, ವಿದೇಶದ ಪಿಚ್‌ಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಭಾರತ ತಂಡಕ್ಕೆ ಹತ್ತಾರು ಗೆಲುವಿನ ಕಾಣಿಕೆಗಳನ್ನೂ ನೀಡಿದ್ದಾರೆ. ವಿಶ್ವದ ಅಗ್ರ ಆಲ್‌ರೌಂಡರ್‌ಗಳಲ್ಲಿ ಜಡೇಜ ಕೂಡ ಇದ್ದಾರೆ. ಚೆನ್ನಾಗಿ ಇಂಗ್ಲಿಷ್‌ ಕೂಡ ಮಾತನಾಡಿ, ಟೀಕಾಕಾರರಿಗೆ ಉತ್ತರಿಸುವುದನ್ನೂ ಕಲಿತಿದ್ದಾರೆ!

ಈ ಸಾಧನೆಗಳು ಅವರಿಗೆ ಸುಲಭವಾಗಿ ಒಲಿದಿದ್ದಲ್ಲ. ಹಲವು ಅಡೆತಡೆಗಳು, ಟೀಕೆಗಳನ್ನು ಎದುರಿಸುತ್ತಲೇ ಬೆಳೆದವರು ಜಡೇಜ.

’ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ. ಆಮೇಲೆ ನಿಮ್ಮ ಬಗ್ಗೆ ಹಾಸ್ಯ ಮಾಡುತ್ತಾರೆ. ಆಗ ನೀವು ಹಿಂದೆ ಸರಿಯದಿದ್ದರೆ, ನಿಮ್ಮೊಂದಿಗೆ ಹೋರಾಟಕ್ಕೆ ಇಳಿಯುತ್ತಾರೆ. ಆಗ ಜಯ ನಿಮ್ಮದೇ‘ ಎಂದು ಮಹಾತ್ಮಾ ಗಾಂಧೀಜಿ ಹೇಳುತ್ತಿದ್ದ ಮಾತುಗಳೇ ಜಡೇಜಗೆ ಸ್ಫೂರ್ತಿಯಾದವು.


ವಿಕೆಟ್‌ ಕಿತ್ತ ಸಂಭ್ರಮದಲ್ಲಿ ರವೀಂದ್ರ ಜಡೇಜ 

ಜೂನಿಯರ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದರೂ ಎಡಗೈ ಸ್ಪಿನ್ನರ್ ಎಂಬ ಕಾರಣಕ್ಕೆ ಆಯ್ಕೆಗಾರರ ಗಮನ ಸೆಳೆಯಲಿಲ್ಲ. ರಣಜಿಯಲ್ಲಿ ಎಡಗೈ ಸ್ಪಿನ್ ನಲ್ಲಿ ಮಿಂಚಿದಾಗಲೂ ನಿರ್ಲಕ್ಷಿಸಲಾಯಿತು. ಆಗ ತಮ್ಮ ಬ್ಯಾಟಿಂಗ್‌ಗೆ ಸಾಣೆ ಹಿಡಿದ ಜಡೇಜ ರಣಜಿಯಲ್ಲಿ ಮಿಂಚಿದರು.  ಗಗನ್ ಖೋಡಾ, ಪೂಜಾರ ಅವರೊಂದಿಗೆ ತಂಡಕ್ಕೆ ಬ್ಯಾಟಿಂಗ್ ಬೆನ್ನೆಲುಬಾದರು. ಇದೆಲ್ಲದರ ಫಲವಾಗಿ 2009ರಲ್ಲಿ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತು.

ಆದರೆ, ಅವರ ಹಾದಿ ಆಗಲೂ ಸುಗಮವಾಗಿರಲಿಲ್ಲ. ಶ್ರೀಲಂಕಾ ಎದುರಿನ ಪದಾರ್ಪಣೆಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಆದರೂ ಮುಂದಿನ ಪಂದ್ಯಗಳಲ್ಲಿ ಅಸ್ಥಿರ ಆಟವು ಮುಳುವಾಯಿತು. ಟಿ20 ವಿಶ್ವಕಪ್  ವೈಫಲ್ಯಕ್ಕೆ ಟೀಕೆ ಎದುರಿಸಬೇಕಾಯಿತು. ಅವರನ್ನು ’ಸರ್‌ ಜಡೇಜ‘ ಎಂದು ವ್ಯಂಗ್ಯ ಮಾಡಲಾಯಿತು. ತಲೆಗೆ ಹಚ್ಚಿಕೊಳ್ಳದ ಜಡೇಜ 2011–12ರಲ್ಲಿ ರಣಜಿ ಕ್ರಿಕೆಟ್‌ನಲ್ಲಿ ತ್ರಿಶತಕಗಳ ದಾಖಲೆ ಮಾಡಿದರು. ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಯ ’ಕಣ್ಮಣಿ‘ಯೇ ಆಗಿ ಹೋದರು. ಹಂತ ಹಂತವಾಗಿ ಬೆಳೆದ ಜಡೇಜ, ಐಸಿಸಿ ರ‍್ಯಾಂಕಿಂಗ್‌ನ ಆಲ್‌ರೌಂಡರ್‌ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿಯೂ ಕೆಲಕಾಲ ಇದ್ದರು.

ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಪುಟ್ಟ ರನ್‌ ಅಪ್‌ನಲ್ಲಿ ಬಂದು ಬೌಲಿಂಗ್ ಮಾಡುವ ಜಡೇಜ, ಕಡಿಮೆ ಅವಧಿಯಲ್ಲಿ ಹೆಚ್ಚು ಓವರ್‌ ಹಾಕುವ ಕಲೆ ರೂಢಿಸಿಕೊಂಡಿದ್ದಾರೆ. 

’ರಾಜೀಂದರ್ ಗೋಯಲ್ ಮತ್ತು ಜಡೇಜ ಒಂದೇ ತಂಡದಲ್ಲಿ ಆಡಿದ್ದರೆ ಟೆಸ್ಟ್ ಪಂದ್ಯದ ಚಹಾ ವೇಳೆಗೆ 90 ಓವರ್‌ಗಳು ಮುಗಿದು ಬಿಡುತ್ತಿದ್ದವೆನೋ‘ ಎಂದು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಷನ್‌ ಸಿಂಗ್ ಬೇಡಿ ಹೇಳಿದ್ದರು. 

ಆದರೂ ಕೂಡ ಸಂಜಯ್ ಮಾಂಜ್ರೇಕರ್ ಅವರಂತಹ ಹಿರಿಯ ಕ್ರಿಕೆಟ್ ವೀಕ್ಷಕ ವಿವರಣೆಗಾರರಿಂದ ಟೀಕೆಗೊಳಗಾಗುವುದು ಜಡೇಜಗೆ ತಪ್ಪಿಲ್ಲ. ತಮ್ಮ ಆಟದ ಮೂಲಕವೇ ಅವರಿಗೂ ಉತ್ತರಿಸಿದ್ದಾರೆ. ಮಾಂಜ್ರೇಕರ್ ಹೇಳಿದ್ದ, ’ಜಡೇಜ ಅವರಂತಹ ಚೂರು–ಪಾರು ಕ್ರಿಕೆಟಿಗ‘ ಎಂಬ ವ್ಯಂಗ್ಯಕ್ಕೆ ಜಡೇಜ ಭರ್ಜರಿ ಎದಿರೇಟು ನೀಡಿದ್ದರು.

‘ನಿಮಗಿಂತಲೂ ಹೆಚ್ಚು ಪಂದ್ಯಗಳಲ್ಲಿ ಆಡಿದ್ದೇನೆ. ಈಗಲೂ ಆಟ ಮುಂದುವರಿಸಿದ್ದೇನೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಗೌರವ ಕೊಡುವುದನ್ನು ಕಲಿಯಿರಿ. ನಿಮ್ಮ ಶಬ್ಧಬೇಧಿಯಿಂದ ಬೇಸತ್ತು ಹೋಗಿದ್ದೇನೆ‘ ಎಂದು ಜಡೇಜ ಮಾಡಿದ್ದ ಟ್ವೀಟ್‌ ಬಹಳ ಸುದ್ದಿ ಮಾಡಿತ್ತು.

ಇದೀಗ ಜಡೇಜ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರ ಅಬ್ಬರದ ಬ್ಯಾಟಿಂಗ್ ಮರೆಯಲು ಸಾಧ್ಯವೇ ಇಲ್ಲ. ಅವರು ಅವರ ವೃತ್ತಿ ಜೀವನದ 50ನೇ ಚುಟುಕು ಪಂದ್ಯವಾಗಿತ್ತು. ಆದರೆ ಆ ಪಂದ್ಯದಲ್ಲಿ ಅವರ  ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಕಾರಣ ಕಂಕಷನ್‌ ನಿಯಮದ ಪ್ರಕಾರ ವಿಶ್ರಾಂತಿ ಪಡೆದಿದ್ದಾರೆ. ಎರಡು ಟಿ20 ಪಂದ್ಯಗಳಲ್ಲಿಆಡಿಲ್ಲ.  ಮುಂದಿನ ವಾರ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ. ಅವರು 49 ಟೆಸ್ಟ್‌ಗಳನ್ನು ಆಡಿದ್ದಾರೆ. ಒಂದು ಶತಕ, 14 ಅರ್ಧಶತಕಗಳಿರುವ 1869 ರನ್‌ ಗಳಿಸಿದ್ದಾರೆ. 213 ವಿಕೆಟ್‌ಗಳು ಅವರ ಖಾತೆಯಲ್ಲಿವೆ. ಡಿಸೆಂಬರ್ 6ರಂದು 32ನೇ ವಸಂತಕ್ಕೆ ಕಾಲಿಟ್ಟ ಜಡೇಜ, ಫೀಲ್ಡಿಂಗ್‌ನಲ್ಲಿಯೂ ಚಿರತೆಯಂತೆ ಚುರುಕಾದವರು. ಅವರ ಅದ್ಭುತ ಕ್ಯಾಚ್‌ಗಳು ದಾಖಲೆಯ ಪುಟ ಸೇರಿವೆ.

ಒಂದರ್ಥದಲ್ಲಿ ಪಕ್ಕಾ ಆಲ್‌ರೌಂಡರ್ ಆಗಿರುವ ಜಡೇಜ, ಅಪ್ಪಟ ಗ್ರಾಮೀಣ ಪ್ರತಿಭೆ. ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ನವಗಾಂವ್ ಖೇಡಾ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದವರು ರವೀಂದ್ರ. ಅಪ್ಪ ಅನಿರುದ್ಧ ಸಿಂಗ್ ಅವರು ಖಾಸಗಿ ಕಂಪೆನಿಯೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಮಗ ಸೇನಾಧಿಕಾರಿಯಾಗಬೇಕೆಂಬ ಆಸೆ ಅವರಿಗಿತ್ತು. ಆದರೆ ಮಗ ಖ್ಯಾತ ಕ್ರಿಕೆಟಿಗನಾದ ಸಂತೋಷ ಅವರ ಕುಟುಂಬಕ್ಕೆ ಇದೆ.

ಕುದುರೆ ಸವಾರಿ, ಕತ್ತಿ ವರಸೆಯಲ್ಲಿಯೂ ಜಡೇಜ ಎತ್ತಿದ ಕೈ. ಧೋನಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ವಾಹನಗಳನ್ನು ಸಂಗ್ರಹಿಸಿದ್ದಾರೆ. ಅದೇ ರೀತಿ ಜಡೇಜ, ಹತ್ತಾರು ಕುದುರೆಗಳನ್ನು ಸಾಕಿಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಮತ್ತೆ ಕಣಕ್ಕೆ ಮರಳಿ ಸಾಧನೆಯ ಓಟ ಮುಂದುವರಿಸುವ ಛಲದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು