ಗುರುವಾರ , ಜೂನ್ 24, 2021
27 °C

ಭಾರತ–ಪಾಕಿಸ್ತಾನ ಸಂಬಂಧ ಹಾಳಾಗಲು ಮೋದಿಯೇ ಕಾರಣ: ಶಾಹಿದ್ ಅಫ್ರಿದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಾಹೋರ್‌: ಭಾರತ ಜೊತೆಗಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿರುವ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ಅದು ಸಾದ್ಯವೇ ಇಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಭಯ ರಾಷ್ಟ್ರಗಳ ಸಂಬಂಧವೂ ಹಾಳಾಗಿದೆ ಎಂದು ಆರೋಪಿಸಿದ್ದಾರೆ.

ಕ್ರಿಕೆಟ್‌ ಪಾಕಿಸ್ತಾನ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅಫ್ರಿದಿ, ‘ಮೋದಿ ಅಧಿಕಾರದಲ್ಲಿ ಇರುವವರೆಗೂ, ಭಾರತದಿಂದ ಯಾವುದೇ ಪ್ರತಿಕ್ರಿಯೆ (ಕ್ರಿಕೆಟ್‌ಗೆ ಸಂಬಂಧಿಸಿದಂತೆ) ಬರಬಹುದು ಎಂದು ನನಗನಿಸದು. ಮೋದಿಯ ಚಿಂತನೆ ಏನು ಎಂಬುದನ್ನು ಭಾರತೀಯರೂ ಸೇರಿದಂತೆ ನಾವೂ ಅರ್ಥಮಾಡಿಕೊಂಡಿದ್ದೇವೆ. ಅವರ (ಮೋದಿ) ಆಲೋಚನೆಯು ನಕಾರಾತ್ಮಕತೆಯತ್ತ ಸಾಗಿದೆ’ ಎಂದು ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಾಳಾಗಿದ್ದೇ ಈ ವ್ಯಕ್ತಿಯಿಂದ. ಅದನ್ನು ನಾವ್ಯಾರೂ ಬಯಸಿರಲಿಲ್ಲ. ಗಡಿಯಲ್ಲಿರುವ ಜನರು ಪರಸ್ಪರ ಎರಡೂ ದೇಶಕ್ಕೆ ಪ್ರಯಾಣಿಸಲು ಇಚ್ಛಿಸುತ್ತಾರೆ. ಆದರೆ, ಮೋದಿ ಏನನ್ನು ಬಯಸಿದ್ದಾರೆ, ಅವರ ಅಜೆಂಡಾ ಏನು ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

ಆದಾಗ್ಯೂ ಭಾರತದಲ್ಲಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಫ್ರಿದಿ, ಯುವ ಪ್ರತಿಭೆಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ. ‘ನನ್ನ ಪ್ರಕಾರ ಐಪಿಎಲ್ ಭಾರತ ಕ್ರಿಕೆಟ್‌ನ್ನು ಆವರಿಸಿದೆ. ಐಪಿಎಲ್‌ನಲ್ಲಿ ಆಡುವ ಯುವ ಪ್ರತಿಭೆಗಳು ಅಂತರರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ಸಾಕಷ್ಟು ಕಲಿಯಲಿದ್ದಾರೆ’ ಎಂದಿದ್ದಾರೆ.

ಮುಂದುವರಿದು, ‘ಐಪಿಎಲ್‌ನಂತೆಯೇ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕೂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನಾವು ಸಾಕಷ್ಟು ಯುವ ಪ್ರತಿಭೆಗಳನ್ನು ಕಂಡಿದ್ದೇವೆ. ತುಂಬಿದ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಆಟಗಾರರೊಂದಿಗೆ ಆಡುವಾಗ, ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅವರು ಕಲಿಯಲಿದ್ದಾರೆ’ ಎಂದೂ ಹೇಳಿದ್ದಾರೆ.

2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ಪ್ರಕರಣದ ನಡೆದ ನಂತರ ಭಾರತವು ಪಾಕ್‌ ಜೊತೆ ದ್ವಿಪಕ್ಷೀಯ ಸರಣಿಗೆ ಒಪ್ಪಿಗೆ ನಿರಾಕರಿಸಿದೆ. ಎರಡು ತಂಡಗಳು ಕೊನೆಯ ಸಲ ಟೆಸ್ಟ್‌ ಸರಣಿಯಲ್ಲಿ ಆಡಿದ್ದು 2008ರಲ್ಲಿ. 2013ರಿಂದ ಈಚೆಗೆ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲೂ ಒಟ್ಟಿಗೆ ಆಡಿಲ್ಲ.

2013ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ, ಮಿಶ್ಬಾ ಉಲ್‌ಹಕ್‌ ನೇತೃತ್ವದಲ್ಲಿ 3 ಏಕದಿನ ಮತ್ತು ಮೊಹಮದ್‌ ಹಫೀಜ್‌ ನೇತೃತ್ವದಲ್ಲಿ 2 ಟಿ20 ಪಂದ್ಯಗಳನ್ನು ಆಡಿತ್ತು. ಭಾರತವು 2006ರಲ್ಲಿ ರಾಹುಲ್‌ ದ್ರಾವಿಡ್‌ ನೇತೃತ್ವದಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದೇ ಕೊನೆ.

ಇದನ್ನೂ ಓದಿ: ಭಾರತ–ಪಾಕ್ ಕಬಡ್ಡಿ ಆಡಬಹುದು ಎಂದಾದಮೇಲೆ, ಕ್ರಿಕೆಟ್‌ ಏಕೆ ಸಾಧ್ಯವಿಲ್ಲ: ಅಖ್ತರ್

ಈ ಹಿಂದೆ ದ್ವಿಪಕ್ಷೀಯ ಸರಣಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಮತ್ತು ಪಾಕ್‌ ಮಾಜಿ ವೇಗಿ ಶೋಯಬ್‌ ಅಖ್ತರ್‌, ಎರಡೂ ದೇಶಗಳು ಈ ಬಗ್ಗೆ ಆಲೋಚಿಸಬೇಕು ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು