ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಗಾಯದ ದಿನಗಳನ್ನು ನೆನೆದ ಪಾಂಡ್ಯ

Published 17 ಮಾರ್ಚ್ 2024, 12:32 IST
Last Updated 17 ಮಾರ್ಚ್ 2024, 12:32 IST
ಅಕ್ಷರ ಗಾತ್ರ

ಮುಂಬೈ: ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಗ ಐಪಿಎಲ್‌ನಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಅವರು ಮುನ್ನಡೆಸಲಿದ್ಧಾರೆ. 

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅವರ ಮುಂಗಾಲಿಗೆ  ಗಾಯವಾಗಿತ್ತು. ನಂತರ ಅವರು ಟೂರ್ನಿಯಿಂದ ಹೊರನಡೆದಿದ್ದರು. ಶಸ್ತ್ರಚಿಕಿತ್ಸೆ ಆರೈಕೆಗಳ ನಂತರ ಈಗ ಫಿಟ್ ಆಗಿದ್ದಾರೆ. 

‘ಬಹಳಷ್ಟು ನೋವು ಅನುಭವಿಸಿದೆ. ಮುಂಗಾಲಿಗೇ ಮೂರು ಚುಚ್ಚುಮದ್ದುಗಳನ್ನು ನೀಡಲಾಗುತ್ತಿತ್ತು. ಬಾವು ಇದ್ದ ಕಾರಣ ಗಾಯದಿಂದ ರಕ್ತವನ್ನು ಹೊರತೆಗೆದರು. ಆದರೆ ಯಾವುದೇ ಕಾರಣಕ್ಕೂ ನಾನು ಸೋಲು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಶೇ 1ರಷ್ಟು ಚೇತರಿಕೆ ಕಂಡಿದ್ದರೂ ವಿಶ್ವಕಪ್ ಟೂರ್ನಿಯಲ್ಲಿ ಆಟ ಮುಂದುವರಿಸಲು ಉತ್ಸುಕನಾಗಿದ್ದೆ. ತಂಡಕ್ಕಾಗಿ ಆಡುವ ಹಂಬಲ ಅದಮ್ಯವಾಗಿತ್ತು’ ಎಂದು ಪಾಂಡ್ಯ ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಹೇಳಿದ್ಧಾರೆ.

‘ಎಷ್ಟೇ ಪ್ರಯತ್ನಪಟ್ಟರೂ ಮೂರು ತಿಂಗಳವರೆಗೆ ಗಾಯವು ಕಾಡಿತು. ವಿಶ್ವಕಪ್‌ನಲ್ಲಿ ಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ.  ಅದರ ನಿರಾಶೆಯ ಗಾಯವು ನನ್ನ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಏಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸುಮಾರು ಒಂದು ವರ್ಷ ಪರಿಶ್ರಮಪಟ್ಟಿದ್ದೆ’ ಎಂದರು. 

ಸನ್‌ರೈಸರ್ಸ್‌ಗೆ ಹೆಡ್:

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರು ಐಪಿಎಲ್‌ನಲ್ಲಿ ಆಡಲು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ. 

30 ವರ್ಷದ ಹೆಡ್ ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಜಯಿಸಲು ಕಾರಣರಾಗಿದ್ದರು.  ಹೆಡ್ ಅವರು ಕಳೆದ ಆರು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. 

‘ಇಲ್ಲಿಗೆ ಬಂದಿಳಿದಿರುವುದಕ್ಕೆ ಅಪಾರ ಸಂತಸವಾಗುತ್ತಿದೆ. ಟೂರ್ನಿಯಲ್ಲಿ ಉತ್ತಮವಾಗಿ ಆಡುವ ವಿಶ್ವಾಸವಿದೆ. ನಮ್ಮ ತಂಡವು ಚೆನ್ನಾಗಿದೆ. ಒಂದಿಷ್ಟು ರನ್‌ಗಳನ್ನು ಕಾಣಿಕೆಯಾಗಿ ನೀಡುವ ವಿಶ್ವಾಸವಿದೆ’ ಎಂದು ಹೆಡ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. 

ಸನ್‌ರೈಸರ್ಸ್ ತಂಡವು 2016ರರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿತ್ತು. ಈ ವರ್ಷ ಆಸ್ಟ್ರೇಲಿಯಾದವರೇ ಆದ ಪ್ಯಾಟ್ ಕಮಿನ್ಸ್ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT