ಬುಧವಾರ, ಜುಲೈ 28, 2021
21 °C

ನಿವೃತ್ತ ಕ್ರಿಕೆಟಿಗರ ಸಂಕಷ್ಟ ಪರಿಹಾರಕ್ಕೆ ಐಸಿಎ ಕೋರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಮಗೆ ಇನ್ನಷ್ಟು ಕಾಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತಕ್ಷಣವೇ ಮುಂದಾಗಬೇಕು ಎಂದು ಭಾರತ ಕ್ರಿಕೆಟಿಗರ ಸಂಘ (ಐಸಿಎ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಸೋಮವಾರ ಕೋರಿದೆ.

ಹಿಂದಿನ 10 ತಿಂಗಳ ಅವಧಿಯಲ್ಲಿ ಏನೇನೂ ಕೆಲಸ ಆಗಲಿಲ್ಲ ಎಂದು ದೂರಿರುವ ಸಂಘದ ಅಧ್ಯಕ್ಷ ಅಶೋಕ್ ಮಲ್ಹೋತ್ರ ಅನೇಕ ಕಾಲದಿಂದ ಈಡೇರದೇ ಉಳಿದಿರುವ ಬೇಡಿಕೆಗಳ ಮೇಲೆ ಕಣ್ಣು ಹಾಯಿಸಬೇಕು ಎಂದು ಆಗ್ರಹಿಸಿದ್ದಾರೆ. 

ಸಂಘದಲ್ಲಿ ಚರ್ಚಿಸದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವ ಮಲ್ಹೋತ್ರ ಮಾಜಿ ಆಟಗಾರರ ಬೇಡಿಕೆಗಳ ಬಗ್ಗೆಯೂ ನೇರವಾಗಿ ಬಿಸಿಸಿಐ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದ ಐಸಿಎ ನಿರ್ದೇಶಕರು ದೂರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಲ್ಹೋತ್ರ ಅವರು ಬೇಡಿಕೆಗಳನ್ನು ಈಡೇರಿಸಲು ಬಿಸಿಸಿಐ ಪದೇ ಪದೇ ಹಿಂದೇಟು ಹಾಕುತ್ತಿದೆ ಎಂದು ದೂರಿದ್ದಾರೆ.

25ಕ್ಕಿಂತಲೂ ಕಡಿಮೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಮಾಜಿ ಆಟಗಾರರಿಗೆ ಮತ್ತು ಮಾಜಿ ಕ್ರಿಕೆಟಿಗರ ವಿಧವೆಯರಿಗೆ ಪಿಂಚಿನ ಸೌಲಭ್ಯ, ಆರೋಗ್ಯ ವಿಮೆಯನ್ನು ₹ ಐದು ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸುವುದು, ಮನೋಜ್ ಪ್ರಭಾಕರ್ ಅವರಿಗೆ ಸಹಾಯಾರ್ಥ ನಿಧಿಯಡಿ ಹಣಕಾಸಿನ ನೆರವು ನೀಡುವುದು ಇತ್ಯಾದಿ ಐಸಿಎ ಬೇಡಿಕೆಗಳಲ್ಲಿ ಪ್ರಮುಖವಾಗಿವೆ. ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ 2005ರಲ್ಲಿ ನಿಷೇಧಕ್ಕೆ ಒಳಗಾಗಿದ್ದ ಮನೋಜ್ ಪ್ರಭಾಕರ್ ಅವರ ‘ಶಿಕ್ಷೆ’ಯ ಅವಧಿ ಈಚೆಗೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಹಾಯಧನ ಒದಗಿಸಲು ಕೋರಲಾಗಿದೆ.

ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೇರಿ 10 ತಿಂಗಳು ಕಳೆದಿವೆ. ಆದರೆ ಮಾಜಿ ಆಟಗಾರರಿಗೆ ಸಂಬಂಧಿಸಿ ಈ ವರೆಗೆ ಯಾವ ನಿರ್ಧಾರವೂ ಆಗಲಿಲ್ಲ. ಮಾಜಿ ಕ್ರಿಕೆಟಿಗರು, ವಿಶೇಷವಾಗಿ 70 ವರ್ಷ ದಾಟಿದವರಿಗೆ ಇನ್ನಷ್ಟು ಕಾಲ ಕಾಯಲು ಸಾಧ್ಯವಿಲ್ಲ ಎಂದು ಮಲ್ಹೋತ್ರ ಹೇಳಿದರು.

‘ಬಿಸಿಸಿಐ ಅಪೆಕ್ಸ್ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಶಾಂತಾ ರಂಗಸ್ವಾಮಿ ಮತ್ತು ಅನ್ಶುಮನ್ ಗಾಯಕವಾಡ್ ಇದ್ದಾರೆ. ಅವರು ಐಸಿಎ ಸದಸ್ಯರ ಕಷ್ಟಕ್ಕೆ ಸ್ಪಂದಿಸುವರು ಎಂಬ ವಿಶ್ವಾಸವಿತ್ತು. ಆದರೆ ಅಪೆಕ್ಸ್ ಸಮಿತಿಯ ನಾಲ್ಕು ಸಭೆಗಳು ನಡೆದಿದ್ದು ಇಲ್ಲಿಯ ವರೆಗೆ ಪೂರಕವಾಗಿ ಏನೂ ನಡೆದಿಲ್ಲ‘ ಎಂದು ಅವರು ದೂರಿದರು.

ಐಸಿಎ ಸದಸ್ಯರಿಗೆ ಈಚೆಗೆ ವಿಡಿಯೊ ಒಂದನ್ನು ಕಳುಹಿಸಿದ್ದ ಮಲ್ಹೋತ್ರ ದೇಶಿ ಕ್ರಿಕೆಟ್‌ ಬಗ್ಗೆ ತಮಗೆ ಕಾಳಜಿ ಇಲ್ಲವೆಂದೂ ಬಿಹಾರ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟದ ಬಗ್ಗೆ ಚರ್ಚಿಸಲು ಇಷ್ಟವಿಲ್ಲ ಎಂದೂ ಹೇಳಿ ವಿವಾದ ಸೃಷ್ಟಿಸಿದ್ದರು. 

’ನಾನು ಸ್ಪಷ್ಟವಾಗಿ ಹೇಳುತ್ತೇನೆ. ಮಾಜಿ ಕ್ರಿಕೆಟಿಗರ ಕ್ಷೇಮಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದೇ ಐಸಿಎಯ ಮುಖ್ಯ ಧ್ಯೇಯ. ಐಸಿಎ ಅಧ್ಯಕ್ಷ ಆಗಿರುವುದರಿಂದ ನಾನು ಸಜಜವಾಗಿಯೇ ಆ ಬಗ್ಗೆ ಹೆಚ್ಚು ಯೋಚಿಸುತ್ತೇನೆ. ಕೊರೊನಾ ಹಾವಳಿಯಿಂದ ತೊಂದರೆಗೊಳಗಾದ ಮಾಜಿ ಆಟಗಾರರ ನೆರವಿಗಾಗಿ ಹಣ ಸಂಗ್ರಹ ಮಾಡಿದ್ದಲ್ಲದೆ ಕಳೆದ 10 ತಿಂಗಳಲ್ಲಿ ಬೇರೆ ಒಳ್ಳೆಯ ಕಾರ್ಯಗಳನ್ನೇನಾದರೂ ನಾವು ಮಾಡಿದ್ದೇವಾ? ಇಲ್ಲ. ಈ ಹಿನ್ನೆಲೆಯಲ್ಲಿ ಮನದಾಳದಿಂದ ಸಹಜವಾಗಿ ಬಂದ ಮಾತನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದೇನೆ‘ ಎಂದು ಮಲ್ಹೋತ್ರ ಹೇಳಿದರು.

ಸುಪ್ರಿಂ ಕೋರ್ಟ್ ನೇಮಕ ಮಾಡಿದ ಲೋಧಾ ಸಮಿತಿಯ ಶಿಫಾರಸಿನಂತೆ ಸ್ಥಾಪನೆಯಾದ ಭಾರತದ ಮೊತ್ತಮೊದಲ ಆಟಗಾರರ ಸಂಘ ಐಸಿಎ. ಕಾರ್ಯಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಸಂಘಕ್ಕೆ ಬಿಸಿಸಿಐ ಈ ವರ್ಷದ ಆರಂಭದಲ್ಲಿ ₹ ಎರಡು ಕೋಟಿ ಮೊತ್ತವನ್ನು ನೀಡಿದೆ. ಆದರೆ ಸಂಘ ಭವಿಷ್ಯದಲ್ಲಿ ತನ್ನದೇ ಕಾಲಮೇಲೆ ನಿಂತುಕೊಕೊಂಡು ಕಾರ್ಯಕ್ರಮಗಳನ್ನು ಜಾರಿಗೆ ತರುವ ಅನಿವಾರ್ಯ ಸ್ಥಿತಿ ಒದಗಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು