ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಪರ್ 8: ಬಿಡುವಿಲ್ಲದ ವೇಳಾಪಟ್ಟಿ; ಭಾರತದ ಸಿದ್ಧತೆ ಬಗ್ಗೆ ರೋಹಿತ್ ಹೇಳಿದ್ದೇನು?

Published 18 ಜೂನ್ 2024, 7:27 IST
Last Updated 18 ಜೂನ್ 2024, 7:27 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಸವಾಲನ್ನು ಎದುರಿಸಲು ಸಂಪೂರ್ಣ ಸಜ್ಜಾಗಿರುವುದಾಗಿ ಟೀಮ್ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ಹೇಳಿದ್ದಾರೆ.

'ಎ' ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಗೆದ್ದು ಟೀಮ್ ಇಂಡಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಿತು. ಐರ್ಲೆಂಡ್, ಪಾಕಿಸ್ತಾನ ಹಾಗೂ ಅಮೆರಿಕ ವಿರುದ್ಧ ಗೆಲುವು ಸಾಧಿಸಿತ್ತು.

ಭಾರತದ 'ಎ' ಗುಂಪಿನ ಪಂದ್ಯಗಳು ಅಮೆರಿಕದಲ್ಲಿ ಆಯೋಜನೆಯಾಗಿದ್ದರೆ ಸೂಪರ್ ಎಂಟರ ವೇಳಾಪಟ್ಟಿಯು ಕೆರೆಬಿಯನ್‌ನಲ್ಲಿ ನಿಗದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರೋಹಿತ್, 'ಪ್ರತಿಯೊಬ್ಬ ಆಟಗಾರನಲ್ಲೂ ತಂಡಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲವಿದೆ. ಪ್ರತಿಯೊಬ್ಬರು ತಮ್ಮ ಆಟದಿಂದ ಬದಲಾವಣೆ ತರಲು ಬಯಸುತ್ತಿದ್ದಾರೆ. ನಿಸ್ಸಂಶವಾಗಿಯೂ ನಮ್ಮ ಕೌಶಲ್ಯದ ಅಭ್ಯಾಸವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ಹೇಳಿದ್ದಾರೆ.

'ಮೂರು-ನಾಲ್ಕು ದಿನಗಳಲ್ಲೇ ಮೊದಲೆರಡು ಪಂದ್ಯಗಳನ್ನು ಆಡಬೇಕಿದೆ. ಹಾಗಾಗಿ ಬಿಡುವಿಲ್ಲದ ಕ್ರಿಕೆಟ್ ಆಡಬೇಕಿದೆ. ಆದರೆ ಇಂತಹ ಪರಿಸ್ಥಿತಿಗೆ ನಾವು ಹೊಂದಿಕೊಂಡಿದ್ದೇವೆ. ತುಂಬಾ ಪ್ರಯಾಣ ಬೆಳೆಸಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಇದೊಂದು ಸಬೂಬು ಆಗಿರುವುದಿಲ್ಲ' ಎಂದು ಹೇಳಿದ್ದಾರೆ.

'ನಮ್ಮ ಕೌಶಲ್ಯದ ಹಾಗೂ ಒಂದು ತಂಡವಾಗಿ ಏನು ಮಾಡಬೇಕು ಎಂಬುದರ ಮೇಲೆ ಹೆಚ್ಚಿನ ಗಮನ ಹರಿಸಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಅಭ್ಯಾಸದ ಅವಧಿಯು ಮಹತ್ವದೆನಿಸಿದೆ. ಇದರ ಗರಿಷ್ಠ ಪ್ರಯೋಜನ ಪಡೆಯಬೇಕಿದೆ' ಎಂದು ಹೇಳಿದ್ದಾರೆ.

'ನಾವು ಇಲ್ಲಿ (ಕೆರೆಬಿಯನ್) ತುಂಬಾ ಕ್ರಿಕೆಟ್ ಆಡಿದ್ದೇವೆ. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಹೇಗೆ ಆಡಬೇಕೆಂದು ಎಂಬುದನ್ನು ಮನಗಂಡಿದ್ದೇವೆ. ಎಲ್ಲರೂ ಕಾತರದಿಂದ ಎದುರು ನೋಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಸೂಪರ್ 8: ಭಾರತದ ವೇಳಾಪಟ್ಟಿ...

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳು ಅಂತ್ಯಗೊಂಡಿದ್ದು, ಸೂಪರ್ ಎಂಟರ ಹಂತಕ್ಕೆ ವೇದಿಕೆ ಸಜ್ಜುಗೊಂಡಿದೆ. ಸೂಪರ್ ಎಂಟರ ವಿಭಾಗದಲ್ಲಿ ತಲಾ ನಾಲ್ಕು ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನ ಅಗ್ರಸ್ಥಾನಿಯಾಗಿ ತೇರ್ಗಡೆ ಹೊಂದಿರುವ ಭಾರತ ತಂಡವು, ಸೂಪರ್ ಎಂಟರಲ್ಲಿ ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿದೆ.

ರೋಹಿತ್ ಶರ್ಮಾ ಬಳಗವು ಇದೇ ಗುಂಪಿನಲ್ಲಿರುವ ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸೆಣಸಲಿವೆ. ಈ ಪಂದ್ಯಗಳು ಅನುಕ್ರಮವಾಗಿ ಜೂನ್ 20, ಜೂನ್ 22 ಹಾಗೂ ಜೂನ್ 24ರಂದು ನಿಗದಿಯಾಗಿವೆ. ಎರಡನೇ ಗುಂಪಿನಲ್ಲಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಅಮೆರಿಕ ತಂಡಗಳಿವೆ.

ಸೂಪರ್ 8: ಭಾರತದ ವೇಳಾಪಟ್ಟಿ ಇಂತಿದೆ:

  • ಜೂನ್ 20: ಅಫ್ಗಾನಿಸ್ತಾನ ವಿರುದ್ಧ, ಬಾರ್ಬಡಾಸ್

  • ಜೂನ್ 22: ಬಾಂಗ್ಲಾದೇಶ ವಿರುದ್ಧ, ಆ್ಯಂಟಿಗುವಾ

  • ಜೂನ್ 24: ಆಸ್ಟ್ರೇಲಿಯಾ ವಿರುದ್ಧ, ಸೈಂಟ್ ಲೂಸಿಯಾ

ಸೂಪರ್ 8ರ ಹಂತಕ್ಕೆ ಪ್ರವೇಶಿಸಿದ ತಂಡಗಳು:

ಮೊದಲ ಗುಂಪು: ಭಾರತ, ಆಸ್ಟ್ರೇಲಿಯಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ.

ಎರಡನೇ ಗುಂಪು: ವೆಸ್ಟ್ ‌ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT