ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS 2nd T20I: ಭಾರತ ವಿರುದ್ಧ ಟಾಸ್ ಗೆದ್ದ ಆಸೀಸ್, ಬೌಲಿಂಗ್ ಆಯ್ಕೆ

Published 26 ನವೆಂಬರ್ 2023, 13:37 IST
Last Updated 26 ನವೆಂಬರ್ 2023, 13:37 IST
ಅಕ್ಷರ ಗಾತ್ರ

ತಿರುವನಂತಪುರ: ಇಲ್ಲಿ ನಡೆಯುತ್ತಿರುವ ಎರಡನೇ ಟಿ–20 ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ಭಾರತ ತಂಡದ ಯುವ ಬೌಲರ್‌ಗಳು ಇಂದಿನ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ.

ಭಾರತ ತಂಡ, ವಿಶಾಖಪಟ್ಟಣದಲ್ಲಿ ಕೊನೆಯ ಎಸೆತದವರೆಗೆ ಹೋಗಿದ್ದ ಮೊದಲ ಪಂದ್ಯವನ್ನು ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ. ಆದರೆ ವೇಗದ ಬೌಲರ್ ಮುಕೇಶ್ ಕುಮಾರ್ ಅವರನ್ನು ಉಳಿದು ಇತರ ಬೌಲರ್‌ಗಳು ಆಸ್ಟ್ರೇಲಿಯಾ ಬ್ಯಾಟರ್‌ಗಳ ರನ್‌ ವೇಗಕ್ಕೆ ಕಡಿವಾಣ ಹಾಕಲು ಅಸಮರ್ಥರಾಗಿದ್ದುದು ಕಂಡುಬಂದಿತ್ತು. ಇಲ್ಲಿನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನ ಪಿಚ್‌ ಮತ್ತು ಪರಿಸ್ಥಿತಿ ತೀರಾ ಭಿನ್ನವಾಗೇನು ಇಲ್ಲ. ಹೀಗಾಗಿ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಬೇಕಾಗಿದೆ.

ಆರಂಭಿಕ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ವಿಶ್ವಕಪ್‌ ತಂಡದಲ್ಲಿದ್ದ ಪ್ರಸಿದ್ಧಕೃಷ್ಣ ಅವರು ಪ್ರತಿ ಓವರಿಗೆ ಕ್ರಮವಾಗಿ 10.25 ಮತ್ತು 12.50 ರನ್‌ ತೆತ್ತು ದುಬಾರಿಯಾಗಿದ್ದರು. ಸಾಲದ್ದಕ್ಕೆ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಓವರೊಂದಕ್ಕೆ 13.50 ರನ್ ನೀಡಿದ್ದು ನಿರಾಸೆ ಮೂಡಿಸಿದ್ದರು.

ಚುಟುಕು ಕ್ರಿಕೆಟ್‌ನಲ್ಲಿ ಬೌಲರ್‌ಗಳ ದಂಡನೆ ಸಾಮಾನ್ಯವಾದರೂ, ಈ ಮೂವರು ಪರಿಣಾಮಕಾರಿಯಾಗಿರಲಿಲ್ಲ ಮಾತ್ರವಲ್ಲ, ಪಿಚ್‌ನಲ್ಲಿ ಬೇಕಿದ್ದ ವೈವಿದ್ಯತೆ ಪ್ರದರ್ಶಿಸಲಿಲ್ಲ. ಮುಕೇಶ್‌ ಅವರು ಯಾರ್ಕರ್‌, ಬೌನ್ಸರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದರು. ಉಳಿದವರು ಜೋಶ್ ಇಂಗ್ಲಿಸ್‌ ಅವರಿಂದ ದಂಡನೆಗೆ ಒಳಗಾದರು.

ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಅಂಥ ಕೊರಗು ಕಂಡಿರಲಿಲ್ಲ. ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ರಿಂಕು ಸಿಂಗ್ ಅವರು ಆಸ್ಟ್ರೇಲಿಯಾ ಬೌಲರ್‌ಗಳ ಎದುರು ಉತ್ತಮ ಪ್ರದರ್ಶನ ನೀಡಿದರು. ನಾಯಕ ಸೂರ್ಯ ಗರಿಷ್ಠ ರನ್ ಗಳಿಸಿ ಹೊಣೆಗಾರಿಕೆ ಪ್ರದರ್ಶಿಸಿದ್ದರು. ಪ್ರವಾಸಿ ತಂಡದಲ್ಲಿ ವಿಶ್ವಕಪ್‌ ನಲ್ಲಿ ಆಡಿದ್ದ ಬೌಲರ್‌ಗಳು ಇರಲಿಲ್ಲ ನಿಜ, ಆದರೆ ತಂಡದ ಬೌಲಿಂಗ್ ಮಟ್ಟ ದುರ್ಬಲ ವೇನೂ ಇರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರಿಂದ ಹೆಚ್ಚಿನ ಕೊಡುಗೆ ಬರಬೇಕಾಗಿದೆ.

ಆಸ್ಟ್ರೇಲಿಯಾಕ್ಕೆ ಮೊದಲ ಪಂದ್ಯದಲ್ಲಿ ಸಕಾರಾತ್ಮಕ ಅಂಶವೊಂದಿದೆ. ಟಿ20 ವಿಶ್ವಕಪ್‌ ಮುಂದಿನ ವರ್ಷ ಇರುವಂತೆ, ವಿಕೆಟ್‌ ಕೀಪರ್ ಜೋಸ್ ಇಂಗ್ಲಿಸ್ ಆರಂಭ ಆಟಗಾರನಾಗಿ ಮಿಂಚಿನ ಶತಕ ಹೊಡೆದಿದ್ದು. ಆ ಪ್ರಯೋಗ ಫಲ ನೀಡಿದೆ. ಬಡ್ತಿ ಪಡೆದ ಸ್ಟೀವನ್ ಸ್ಮಿತ್ ಸಾಧಾರಣ ಪ್ರದರ್ಶನ ನೀಡಿದ್ದಾರೆ.

ಬೌಲರ್‌ಗಳ ಪೈಕಿ ಜೇಸನ್ ಬೆಹ್ರೆನ್‌ಡಾರ್ಫ್ ಬಿಟ್ಟರೆ ಉಳಿದವರು ಸೂರ್ಯ ಬಳಗವನ್ನು ಅಷ್ಟಾಗಿ ಕಾಡಲಿಲ್ಲ. ಇಂದಿನ ಪಂದ್ಯದಲ್ಲಿ ತನ್ವೀರ್ ಸಂಘಾ ಸ್ಥಾನದಲ್ಲಿ ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ ಆಡುತ್ತಿದ್ದಾರೆ.

ತಂಡಗಳು ಇಂತಿವೆ:

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಮುಕೇಶ್ ಕುಮಾರ್.

ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ (ನಾಯಕ), ಸ್ಟೀವ್‌ ಸ್ಮಿತ್, ಮ್ಯಾಟ್‌ ಶಾರ್ಟ್‌, ಜೋಶ್ ಇಂಗ್ಲಿಸ್, ಮಾರ್ಕಸ್‌ ಸ್ಟೋಯಿನಿಸ್, ಟಿಮ್ ಡೇವಿಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸೀನ್ ಅಬೋಟ್, ನಥಾನ್ ಎಲ್ಲಿಸ್, ಆ್ಯಡಂ ಜಂಪಾ, ತನ್ವೀರ್ ಸಂಘಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT