ಸಿಡ್ನಿ: ಭಾರತದಲ್ಲಿ 2017ರ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆದ ನಂತರ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ತಂಡವು ಅಂತಿಮ ಟೆಸ್ಟ್ ಪಂದ್ಯದಲ್ಲಿ ಹೆಚ್ಚು ಒತ್ತಡವಿಲ್ಲದೇ ಕಣಕ್ಕಿಳಿಯುತ್ತಿದೆ. ಮೆಲ್ಬರ್ನ್ನಲ್ಲಿ ಅಮೋಘ ಜಯಸಾಧಿಸಿ 2–1 ಮುನ್ನಡೆ ಸಾಧಿಸಿರುವ ಆತಿಥೇಯರು ಈಗ ಡ್ರಾ ಮಾಡಿಕೊಂಡರೂ ಟ್ರೋಫಿ ಮರಳಿ ಪಡೆಯಲಿದ್ದಾರೆ.

ಈ ಹಿಂದಿನ ನಾಲ್ಕು ಸರಣಿಗಳಲ್ಲಿ ಗೆಲ್ಲಲೇಬೇಕಾದ ಒತ್ತಡದೊಡನೆ ಕೊನೆಯ ಟೆಸ್ಟ್ ಪಂದ್ಯ ಆಡಲು ಇಳಿಯುತ್ತಿದ್ದ ಆಸ್ಟ್ರೇಲಿಯಾ ಪ್ರತಿ ಬಾರಿ ಹಿನ್ನಡೆ ಕಾಣುತಿತ್ತು. ಆದರೆ ಇತ್ತೀಚಿನ ಉತ್ತಮ ಪ್ರದರ್ಶನಗಳಿಂದ ತಂಡ ಉತ್ಸಾಹದಲ್ಲಿದ್ದು ನಾಲ್ಕು ಸರಣಿಗಳ ನಂತರ ಮೊದಲ ಬಾರಿ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ.

ಪರ್ತ್ನ ಮೊದಲ ಟೆಸ್ಟ್ ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವೇ ಮೇಲುಗೈ ಸಾಧಿಸಿದೆ. ಆಡಿಲೇಡ್ನಲ್ಲಿ ಭರ್ಜರಿ ಗೆಲುವು, ನಂತರ ಮಳೆಯಿಂದ ಮೊಟಕುಗೊಂಡ ಬ್ರಿಸ್ಬೇನ್ ಟೆಸ್ಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಕಮಿನ್ಸ್ ಪಡೆ ಮೆಲ್ಬರ್ನ್ನಲ್ಲಿ ಹೋರಾಟದ ಜಯ ಸಾಧಿಸಿ ಸರಣಿ ಮುನ್ನಡೆ ಗಳಿಸಿದೆ. ಈಗ ಸಿಡ್ನಿಯಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಅಮೋಘವಾಗಿ ಮುಗಿಸುವ ತರಾತುರಿಯಲ್ಲಿದೆ.

ಮಳೆಯ ಭೀತಿ: ಆದರೆ ಭಾರತ ತಂಡಕ್ಕೆ ಇದು ಅಳಿವು–ಉಳಿವಿನ ಪ್ರಶ್ನೆಯಾಗಿದೆ. ಟ್ರೋಫಿ ತಮ್ಮಲ್ಲೇ ಉಳಿಸಿಕೊಳ್ಳಬೇಕಾದರೆ ಗೆಲುವು ಅನಿವಾರ್ಯ. ಆದರೆ ಮುಂದಿರುವ ಸವಾಲು ಕಠಿಣವಾಗಿದೆ. ಪಂದ್ಯದ ನಾಲ್ಕು ಮತ್ತು ಐದನೇ ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂಥ ಪರಿಸ್ಥಿತಿಯಲ್ಲಿ ಡ್ರಾ ಆಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಸೋತಲ್ಲಿ ಅದು ಮಹತ್ವದ ಬದಲಾವಣೆಗೆ ದಾರಿಯಾಗಬಲ್ಲದು. ಕಾಡುತ್ತಿರುವ ವಿವಾದಗಳು ಮತ್ತು ಹೆಚ್ಚುತ್ತಿರುವ ಒತ್ತಡಗಳ ನಡುವೆ ತಂಡದ ಗುರಿ ಇರುವುದು ಸೂಕ್ತ ಸಂಯೋಜನೆ ರೂಪಿಸುವುದರ ಕಡೆ.

ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ದಿನೇದಿನೇ ಬಲವಾಗುತ್ತಿದೆ. ಮೆಲ್ಬರ್ನ್ನಲ್ಲಿ ತಂಡ ಸೋತ ನಂತರ ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಇದರ ನಡುವೆ ಒಬ್ಬ ಹಿರಿಯ ಆಟಗಾರ ತಂಡ ಮುನ್ನಡೆಸುವ ಬಗ್ಗೆ ಬಯಕೆ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಯೂ ಹರಿದಾಡಿದೆ.

ಡ್ರೆಸಿಂಗ್ ರೂಮ್ನೊಳಗೆ ಏನು ನಡೆದಿದೆ ಎಂಬುದು ಖಾಸಗಿಯಾಗಿ ಉಳಿಯಬೇಕು ಎಂದು ಗಂಭೀರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ. ಆಟಗಾರನಾಗಿ ಹಲವು ವರ್ಷ ಭಾರತ ಕ್ರಿಕೆಟ್ನ ಆಳ–ಅಗಲ ಬಲ್ಲ ಗಂಭೀರ್ ಅವರಿಗೆ ಇಂಥ ವದಂತಿಗಳು ಎಲ್ಲಿಂದ ಉಗಮವಾಗುತ್ತವೆ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ತಂಡವು ಆಟದ ಕಡೆಗಷ್ಟೇ ಗಮನಹರಿಸುವಂತೆ ಮಾಡುವುದು ಅವರ ಮುಂದಿರುವ ಸವಾಲು. ಇದರ ಜೊತೆ ಕೆಲವು ಆಟಗಾರ ವೈಯಕ್ತಿಕ ಭವಿಷ್ಯವೂ ಈ ಪಂದ್ಯದಲ್ಲಿ ಅಡಗಿದೆ.

ಅತಿ ಹೆಚ್ಚು ಒತ್ತಡ ಎದುರಿಸುತ್ತಿರುವ ಇಬ್ಬರು– ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಲಯಕ್ಕೆ ಪರದಾಡುತ್ತಿರುವ ಈ ಅನುಭವಿ ಆಟಗಾರರ ಬ್ಯಾಟ್ ದೀರ್ಘ ಕಾಲದಿಂದ ಮೌನವಾಗಿದೆ. ಈ ಇಬ್ಬರ ಉಪಸ್ಥಿತಿಯು ತಂಡದ ಸಂಯೋಜನೆಯನ್ನು ಕ್ಲಿಷ್ಟಕರಗೊಳಿಸುತ್ತಿದೆ. ಆಸ್ಟ್ರೇಲಿಯಾ ಕ್ರೀಡಾಂಗಣಗಳಲ್ಲೇ ಸ್ಪಿನ್ನರ್ಗಳಿಗೆ ಸ್ನೇಹಿಯಾಗಿರುವ ಸಿಡ್ನಿಯಲ್ಲಿ ವಾಷಿಂಗ್ಟನ್ ಸುಂದರ್ ಅವರಿಗೆ ಜಾಗ ಮಾಡಿಕೊಡಬೇಕಾದರೆ ಪ್ರತಿಭಾನ್ವಿತ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಮತ್ತೆ ಕೈಬಿಡಬೇಕಾಗಲಿದೆ.

ರೋಹಿತ್ ಶರ್ಮಾ ಆಡುವ 11ರಲ್ಲಿ ಇರುತ್ತಾರೆಯೇ ಎಂಬ ಪ್ರಶ್ನೆಗೆ ಗಂಭೀರ್ ನೇರ ಉತ್ತರ ನೀಡಲಿಲ್ಲ. ನೆಟ್ಸ್ನಲ್ಲಿ ಭಾರತದ ನಾಯಕ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು. ಆದರೆ ಪತ್ರಿಕಾಗೋಷ್ಠಿಯಲ್ಲಿ ಅವರು ಗಂಭೀರ್ ಜೊತೆ ಇರಲಿಲ್ಲ. ಸ್ಲಿಪ್ ಕ್ಯಾಚ್ ಪ್ರಾಕ್ಟೀಸ್ ವೇಳೆಯೂ ಕಾಣಲಿಲ್ಲ. ಆದರೆ ಆ ವೇಳೆ ಗಿಲ್ ಕಂಡುಬಂದರು.

ಆಕಾಶ್ ದೀಪ್ ಬೆನ್ನುನೋವಿಗೆ ಒಳಗಾಗಿರುವ ಕಾರಣ ಅವರನ್ನು ಕೈಬಿಡುವ ಸೂಚನೆ ನೀಡಿದರು. ಮೊದಲ ಎರಡು ಟೆಸ್ಟ್ಗಳಲ್ಲಿ ಆಡಿದ್ದ ವೇಗಿ ಹರ್ಷಿತ್ ರಾಣಾ ಸಾಧಾರಣ ಯಶಸ್ಸು ಗಳಿಸಿದ್ದರು. ಹೀಗಾಗಿ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಈ ಬಾರಿ ಅವಕಾಶ ಪಡೆದರೂ ಅಚ್ಚರಿಯಿಲ್ಲ.

ಆಸ್ಟ್ರೇಲಿಯಾಕ್ಕೆ ಸಿಡ್ನಿ ಟೆಸ್ಟ್, ಬಾರ್ಡರ್–ಗಾವಸ್ಕರ್ ಟ್ರೋಫಿ ಮರಳಿ ಪಡೆಯಲು ಇರುವ ತಾಣವಷ್ಟೇ ಅಲ್ಲ. ಇತ್ತೀಚಿನ ಸರಣಿಗಳ ಅಂತಿಮ ಪಂದ್ಯಗಳಲ್ಲಿ ತಮ್ಮನ್ನು ‘ಕಾಡಿಸುತ್ತಿದ್ದ’ ಎದುರಾಳಿಯಿಂದ ಉಂಟಾದ ಹತಾಶೆಯನ್ನು ಕೊನೆಗೊಳಿಸುವ ಅವಕಾಶ ಸಹ. ಒತ್ತಡದ ಸನ್ನಿವೇಶದಲ್ಲೂ ಉತ್ತಮವಾಗಿ ಆಡುವ ಸಾಮರ್ಥ್ಯ ತಂಡದಲ್ಲಿ ಹುರುಪು ತುಂಬಿದೆ. ಸರಣಿ ಗೆಲ್ಲಲು ‘ಡ್ರಾ’ ಸಾಕೆನಿಸಿದರೂ ತಂಡ ಗೆಲುವಿಗೆ ಯತ್ನಿಸಿ ಸರಣಿಯನ್ನು ಪ್ರಾಬಲ್ಯದೊಡನೆ ಮುಗಿಸುವ ಸನ್ನಾಹದಲ್ಲಿದೆ.

ಪಂದ್ಯ ನಡೆಯಲು ಮಳೆ ಅವಕಾಶ ಕಲ್ಪಿಸಿದರೆ, ಮತ್ತೊಮ್ಮೆ ಇತ್ತಂಡಗಳ ನಡುವೆ ಉತ್ತಮ ಹೋರಾಟ ಕಾಣಬಹುದು.

ರೋಹಿತ್ ಆಡುವರೇ– ಖಚಿತಪಡಿಸದ ಗಂಭೀರ್

ಈ ಬಾರಿ ಸ್ವತಃ ನಾಯಕ ರೋಹಿತ್ ಶರ್ಮಾ ಅವರ ಕುತೂಹಲದ ಕೇಂದ್ರಬಿಂದು ಆಗಿದ್ದಾರೆ. ಅವರ ಫಾರ್ಮ್, ನಾಯಕತ್ವ ಮತ್ತು ಹನ್ನೊಂದರಲ್ಲಿ ಸ್ಥಾನ ಪಡೆಯುವ ಬಗ್ಗೆ ಕುತೂಹಲ ಮೂಡಿದೆ.

ಗೌತಮ್ ಗಂಭೀರ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಯಿತು. ‘ರೋಹಿತ್ ಶರ್ಮಾ ಎಲ್ಲಿ? ರೋಹಿತ್ ಚೆನ್ನಾಗಿ ದ್ದಾರೆಯೇ?’. ಇದಕ್ಕೆ ಗಂಭೀರ್ ಅವರ ಉತ್ತರ– ‘ಪ್ರತಿ ಪಂದ್ಯದ ಮೊದಲು ನಾಯಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಬೇಕೆಂಬ ಸಂಪ್ರದಾಯವೇನೂ ಇಲ್ಲ.’

‘ನಾಳೆ ಒಮ್ಮೆ ಪಿಚ್ ನೋಡುತ್ತೇವೆ. ಮತ್ತೆ 11ರ ತಂಡ ಪ್ರಕಟಿಸುತ್ತೇವೆ’ ಎಂದರು.

ರೋಹಿತ್ ಅವರು ಅಂತಿಮ ಟೆಸ್ಟ್ ಆಡುವರೇ ಎಂದು ಕೆದಕಿ ಕೇಳಿದರೂ ಗಂಭೀರ್ ಖಚಿತ ಉತ್ತರ ನೀಡಲಿಲ್ಲ. ಹಿಂದೆ ಆಡಿದ ಮಾತನ್ನೇ ಪುನರುಚ್ಚರಿಸಿದರು.

ವಾರ್ಮಪ್ ವೇಳೆ ನಾಯಕ ಕಾಣಿಸಿಕೊಂಡರೂ, ಸ್ಲಿಪ್ ಕ್ಯಾಚಿಂಗ್ ವೇಳೆ ಕಾಣಲಿಲ್ಲ. ನೆಟ್ಸ್ನಲ್ಲಿ ಅಭ್ಯಾಸ ಶುರು ಮಾಡಿದಾಗ ಅವರು ಇರಲಿಲ್ಲ. ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಕೊನೆಗೂ ರೋಹಿತ್ ನೆಟ್ಸ್ಗೆ ಬಂದರು. ಆದರೆ ಅವರು ಥ್ರೋಡೌನ್ಗಳನ್ನು ಎದುರಿಸಿದರು. ನಂತರ ಉಪನಾಯಕ ಬೂಮ್ರಾ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಜೊತೆ ಹಿಂತಿರುಗಿದರು. ಹೀಗಾಗಿ ರೋಹಿತ್ ಶರ್ಮಾ ಆಡುವರೇ ಎಂಬ ಕೌತುಕ ಉಳಿಯಿತು.

ತಂಡಗಳು ಇಂತಿವೆ...

ಆಸ್ಟ್ರೇಲಿಯಾ (11): ಪ್ಯಾಟ್ ಕಮಿನ್ಸ್ (ನಾಯಕ), ಟ್ರಾವಿಸ್ ಹೆಡ್ (ಉಪನಾಯಕ), ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್ಸ್ಟಸ್, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಬ್ಯೂ ವೆಬ್ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಥಾನ್ ಲಯನ್, ಸ್ಕಾಟ್ ಬೋಲ್ಯಾಂಡ್.

ಭಾರತ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬೂಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ವಾಷ್ಟಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಶುಭಮನ್ ಗಿಲ್, ದೇವದತ್ತ ಪಡಿಕ್ಕಲ್, ಧ್ರುವ ಜುರೇಲ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ, ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್ ಮತ್ತು ತನುಷ್ ಕೋಟ್ಯಾನ್.

ಪಂದ್ಯ ಆರಂಭ: ಬೆಳಿಗ್ಗೆ 5.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.