ಮಂಗಳವಾರ, ಫೆಬ್ರವರಿ 25, 2020
19 °C
ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಹಿಟ್‌ಮ್ಯಾನ್‌ ಸಾಧನೆ

ವೇಗವಾಗಿ 7000 ರನ್ | ದಿಗ್ಗಜರ ದಾಖಲೆ ಮುರಿದ ರೋಹಿತ್ ಸಾಧನೆಗೆ ಧೋನಿ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7 ಸಾವಿರ ರನ್‌ ಪೂರೈಸಿದ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿದರು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಸರಣಿಯ ಎರಡನೇ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದರು.

ಹಿಟ್‌ಮ್ಯಾನ್‌ ರೋಹಿತ್‌ ಈ ಸಾಧನೆ ಮಾಡಲು 137 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ. ಈ ದಾಖಲೆ ಈ ಹಿಂದೆ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಹೆಸರಲ್ಲಿತ್ತು. ಅವರು 147 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಆರಂಭಿಕನಾಗಿ ಆಡಿದ 160ನೇ ಇನಿಂಗ್ಸ್‌ನಲ್ಲಿ 7 ಸಾವಿರದ ಗಡಿ ದಾಟಿದ್ದರು.

ಮಾತ್ರವಲ್ಲದೆ ಸಚಿನ್‌, ಸೌರವ್‌ ಗಂಗೂಲಿ, ವೀರೇಂದ್ರ ಸೆಹ್ವಾಗ್‌ ಬಳಿಕ ಆರಂಭಿಕನಾಗಿ 7 ಸಾವಿರ ರನ್‌ ಪೂರೈಸಿದ ಭಾರತದ ನಾಲ್ಕನೇ ಆಟಗಾರ ಎಂಬ ಶ್ರೇಯವೂ ರೋಹಿತ್‌ ಅವರದ್ದಾಯಿತು.

ಮೊದಲ ಪಂದ್ಯದಲ್ಲಿ ಕೇವಲ 10 ರನ್‌ ಗಳಿಸಿ ಔಟಾಗಿದ್ದ ರೋಹಿತ್‌ ಈ ಪಂದ್ಯದಲ್ಲಿ 42 ರನ್‌ ಕಲೆಹಾಕಿದರು. ಇನ್ನು ನಾಲ್ಕು ರನ್‌ ಗಳಿಸಿದ್ದರೆ 9000 ಸಾವಿರ ರನ್‌ ಪೂರೈಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಅವಕಾಶ ಅವರಿಗಿತ್ತು.

ಒಟ್ಟಾರೆ 223 ಪಂದ್ಯಗಳ 216 ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿರುವ ರೋಹಿತ್‌, 8996 ರನ್‌ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ, 28 ಶತಕ ಮತ್ತು 43 ಅರ್ಧಶತಕಗಳಿವೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಅವರನ್ನು 2013ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಆರಂಭಿಕರನ್ನಾಗಿ ಆಡಿಸಿದ್ದರು. ಅದಾದ ಬಳಿಕ ಹಿಟ್‌ಮ್ಯಾನ್‌ ಯಶಸ್ಸಿನ ಅಲೆಯಲ್ಲಿ ತೇಲಿದರು.

ರೋಹಿತ್ ಇನಿಂಗ್ಸ್ ಆರಂಭಿಸಲು ಧೋನಿ ಕಾರಣ
ಧೋನಿಯ ಈ ನಿರ್ಧಾರದ ಬಗ್ಗೆ ಮಾತನಾಡಿದ್ದ ರೋಹಿತ್‌, ‘ಆರಂಭಿಕನಾಗಿ ಆಡುವ ನಿರ್ಧಾರವು ನನ್ನ ಏಕದಿನ ಕ್ರಿಕೆಟ್‌ ಬದುಕಿನ ಗತಿಯನ್ನೇ ಬದಲಿಸಿತು ಎಂದು ನಂಬಿದ್ದೇನೆ. ಆ ನಿರ್ಧಾರ ಕೈಗೊಂಡವರು ಧೋನಿ. ಅದಾದ ಬಳಿಕ ನಾನು ಉತ್ತಮ ಬ್ಯಾಟ್ಸ್‌ಮನ್‌ ಆಗಿ ಬದಲಾದೆ. ನಿಜ ಹೇಳಬೇಕೆಂದರೆ ನನ್ನ ಆಟವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಪರಿಸ್ಥಿತಿಗನುಗುಣವಾಗಿ ಆಡಲು ಇದರಿಂದ ಸಾಧ್ಯವಾಯಿತು’ ಎಂದು ಹೇಳಿಕೊಂಡಿದ್ದರು.

‘ನನ್ನ ಬಳಿಗೆ ಬಂದ ಧೋನಿ, ನೀನು ಇನಿಂಗ್ಸ್‌ ಆರಂಭಿಸಬೇಕೆಂದು ಬಯಸಿದ್ದೇನೆ. ನೀನು ಉತ್ತಮವಾಗಿ ಆಡಬಲ್ಲೆ ಎಂಬ ವಿಶ್ವಾಸವಿದೆ. ಪುಲ್‌ ಶಾಟ್‌ ಮತ್ತು ಕಟ್‌ ಶಾಟ್‌ಗಳನ್ನು ಉತ್ತಮವಾಗಿ ಆಡಬಲ್ಲೆ. ಹಾಗಾಗಿ ಆರಂಭಿಕನಾಗಿ ಯಶಸ್ವಿಯಾಗಬಲ್ಲ ಎಲ್ಲ ಅರ್ಹತೆಯೂ ನಿನಗಿದೆ ಎಂದು ಹೇಳಿದ್ದರು’ ಎಂದು ಧೋನಿ ತಮ್ಮನ್ನು ಆರಂಭಿಕನಾಗಿ ಆಯ್ಕೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದರು.

ಗುರಿಯತ್ತ ಮುನ್ನುಗ್ಗಿದ ಆಸ್ಟ್ರೇಲಿಯಾ
ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ, ಆರಂಭಿಕ ಶಿಖರ್‌ ಧವನ್‌, ನಾಯಕ ವಿರಾಟ್‌ ಕೊಹ್ಲಿ ಹಾಗೂ ರಾಹುಲ್‌ ಸಿಡಿಸಿದ ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 340 ರನ್‌ ಕಲೆಹಾಕಿದೆ.

341ರನ್‌ಗಳ ಬೃಹತ್‌ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 33 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 186 ರನ್‌ ಗಳಿಸಿದೆ. ಮೊದಲ ಪಂದ್ಯದಲ್ಲಿ ಹತ್ತು ವಿಕೆಟ್‌ ಗೆಲುವು ತಂದುಕೊಂಡಿದ್ದ ಡೇವಿಡ್‌ ವಾರ್ನರ್‌ (15) ಹಾಗೂ ನಾಯಕ ಆ್ಯರನ್‌ ಫಿಂಚ್ (33) ಹಾಗೂ ಮಾರ್ನಸ್‌ ಲಾಬುಶೇನ್‌ (46)  ಔಟಾಗಿದ್ದಾರೆ.

ಆದರೆ ಮೂರನೇ ವಿಕೆಟ್‌ಗೆ ಮುರಿಯದ 85 ರನ್‌ ಜೊತೆಯಾಟವಾಡಿರುವ ಅನುಭವಿ ಸ್ಟೀವ್‌ ಸ್ಮಿತ್ ಮತ್ತು ಅಲೆಕ್ಸ್‌ ಕ್ಯಾರಿ (4) ಕ್ರೀಸ್‌ನಲ್ಲಿದ್ದಾರೆ. ಸ್ಮಿತ್‌ 84 ಎಸೆತಗಳಲ್ಲಿ 78 ರನ್‌ ಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು