ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ–ಧರ್ಮದ ಹೊರತಾಗಿ ಭಾರತ ತಂಡ ಆಟಗಾರರ ಮೇಲೆ ಅಪಾರ ವಿಶ್ವಾಸ ಹೊಂದಿದೆ: ಅಖ್ತರ್

Last Updated 1 ಜನವರಿ 2021, 9:02 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಬದ್ಧ ಎದುರಾಳಿ ಎನ್ನಲಾಗುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಅವರು ಟೀಂ ಇಂಡಿಯಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಭಾರತ ತಂಡದಲ್ಲಿ ಜಾತಿ, ಧರ್ಮದ ವಿಚಾರಗಳನ್ನು ಮೀರಿ ಆಟಗಾರರನ್ನು ಬೆಂಬಲಿಸಲಾಗುತ್ತದೆ ಎಂದು ಹೊಗಳಿದ್ದಾರೆ.

ಭಾರತ ತಂಡವು ಸದ್ಯ ತಲಾ ಮೂರು ಏಕದಿನ, ಟಿ20 ಹಾಗೂ 4 ಪಂದ್ಯಗಳ ಟೆಸ್ಟ್‌ ಸರಣಿ ಸಲುವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2–1ರಿಂದ ಮತ್ತು ಟಿ20 ಸರಣಿಯನ್ನು ಭಾರತ 1-2 ಅಂತರದಿಂದ ಗೆದ್ದುಕೊಂಡಿದೆ. ಸದ್ಯ 2 ಟೆಸ್ಟ್‌ ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಜಯ ಸಾಧಿಸಿವೆ.ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಪುಟಿದೆದ್ದು ಜಯ ಸಾಧಿಸಿದೆ. ಹೀಗಾಗಿ ಟೆಸ್ಟ್‌ ತಂಡದ ನಾಯಕತ್ವ, ಡ್ರೆಸ್ಸಿಂಗ್‌ ರೂಂ ವಾತಾವರಣದ ಬಗ್ಗೆ ಅಖ್ತರ್ ‌ ಮಾತನಾಡಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಇಶಾಂತ್‌ ಶರ್ಮಾ, ಮೊಹಮದ್‌ ಶಮಿ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಅಜಿಂಕ್ಯ ರಹಾನೆ ಅವರು ಎರಡನೇ ಟೆಸ್ಟ್‌ ಪಂದ್ಯದಲ್ಲಿತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಯುವ ಆಟಗಾರ ಮೊಹಮದ್ ಸಿರಾಜ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶ ನೀಡಲಾಗಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್‌, ‘ತಂಡಗಳನ್ನು ಮೈದಾನದಲ್ಲಿ ಕಟ್ಟಲಾಗದು. ತಂಡಗಳು ಡ್ರೆಸ್ಸಿಂಗ್ ರೂಂನಲ್ಲಿ ರೂಪುಗೊಳ್ಳುತ್ತವೆ. ಕೇವಲ 36 ರನ್‌ಗಳಿಗೆ(ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ) ಆಲೌಟ್‌ ಆದ ಬಳಿಕ ನಿಮ್ಮನ್ನು ನೀವು ಪುಟಿದೇಳುವಂತೆ ನೋಡಿಕೊಳ್ಳಬೇಕಾದರೆ ಡ್ರೆಸ್ಸಿಂಗ್‌ ರೂಂ ಪಾತ್ರ ಮಹತ್ವದ್ದಾಗಿರುತ್ತದೆ’ ಎಂದು ಹೇಳಿದ್ದಾರೆ.

‘ಪಂದ್ಯದಲ್ಲಿ ಬ್ಯಾಟ್‌ ಮತ್ತು ಚೆಂಡಿನ ಹೋರಾಟ ಇರಲಿಲ್ಲ. ಭಾರತ ಪರ ವಿರಾಟ್‌ ಕೊಹ್ಲಿ, ಇಶಾಂತ್‌, ಶಮಿ ಇರಲಿಲ್ಲ. ಹೀಗಾಗಿ ಇದು ಅರ್ಧ ತಂಡವಾಗಿತ್ತು. ಕೊಹ್ಲಿಯೇ ಒಂದು ತಂಡವಾಗಿರುತ್ತಿದ್ದರು. ಆದಾಗ್ಯೂ ರಹಾನೆ ಬ್ಯಾಟ್‌ ಮೂಲಕ ಹೋರಾಟ ನಡೆಸಿದರು’

‘ರಹಾನೆ ಅವರ ಬ್ಯಾಟಿಂಗ್‌, ಪ್ರದರ್ಶನದ ಜೊತೆಗೆ ನಾಯಕತ್ವವೂ ಅತ್ಯುತ್ತಮವಾಗಿತ್ತು. ಬೌಲಿಂಗ್‌ನಲ್ಲಿ ಮಾಡಿದ ಬದಲಾವಣೆಗಳು, ಬೂಮ್ರಾ, ಸಿರಾಜ್‌ ಅವರನ್ನು ಬಳಸಿಕೊಂಡ ರೀತಿ ಉತ್ತಮವಾಗಿತ್ತು. ತಂದೆಯನ್ನು ಕಳೆದುಕೊಂಡ ಬಳಿಕ ಕಣಕ್ಕಿಳಿಯುವುದು ಆತನಿಗೆ (ಸಿರಾಜ್‌ಗೆ) ಕಠಿಣವಾಗಿತ್ತು. ಸಿರಾಜ್‌ಗೆ ಸಹ ಆಟಗಾರರು ಮತ್ತು ತಂಡದಿಂದ ಸಾಕಷ್ಟು ಬೆಂಬಲ ಲಭಿಸಿದೆ. ಇದು ಭಾರತ ತಂಡವು ಜಾತಿ, ಜನಾಂಗ, ಧರ್ಮದ ಹೊರತಾಗಿಯೂ ತನ್ನ ಆಟಗಾರರ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಇದು ಸಿರಾಜ್‌ ತಂದೆಯ ಪಾಲಿಗೆ ಅತ್ಯುತ್ತಮ ಕ್ಷಣವಾಗಬಹುದಿತ್ತು. ದುರದೃಷ್ಟವಶಾತ್‌ ಇದನ್ನು ನೋಡಲು ಅವರು ಇಲ್ಲ. ಇದು ಡ್ರೆಸ್ಸಿಂಗ್‌ ರೂಂನಲ್ಲಿ ಆಟಗಾರರಿಗೆ ಸಿಗುವ ಬೆಂಬಲವನ್ನು ತೋರಿಸುತ್ತದೆ’

‘ಡ್ರೆಸ್ಸಿಂಗ್ ರೂಂ ವಾತಾವರಣವನ್ನು ನೋಡಿದರೆ, ಭಾರತ ಈ ಸರಣಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ ಎಂದು ಹೇಳಬಲ್ಲೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT